ಬಿಲ್ ಗೇಟ್ಸ್‌ಗೆ ಮೂವರು ಮಹಿಳೆಯರೊಂದಿಗೆ ಅಫೇರ್‌! ಬ್ಲ್ಯಾಕ್‌ಮೇಲ್‌ಗೆ ಜೆಫ್ರಿ ಎಪ್ಸ್ಟೀನ್ ಯತ್ನ?
x

ಬಿಲ್ ಗೇಟ್ಸ್‌ಗೆ ಮೂವರು ಮಹಿಳೆಯರೊಂದಿಗೆ ಅಫೇರ್‌! ಬ್ಲ್ಯಾಕ್‌ಮೇಲ್‌ಗೆ ಜೆಫ್ರಿ ಎಪ್ಸ್ಟೀನ್ ಯತ್ನ?

ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅಮೆರಿಕ ಸಂಸದೀಯ ಸಮಿತಿ ಮುಂದೆ ತಮಗಿದ್ದ ಮೂವರು ಮಹಿಳೆಯರೊಂದಿಗಿನ ಸಂಬಂಧ ಹಾಗೂ ಜೆಫ್ರಿ ಎಪ್ಸ್ಟೀನ್ ನೀಡುತ್ತಿದ್ದ ಬ್ಲ್ಯಾಕ್‌ಮೇಲ್ ಬೆದರಿಕೆ ಬಗ್ಗೆ ಶಾಕಿಂಗ್ ಸತ್ಯ ಬಿಚ್ಚಿಟ್ಟಿದ್ದಾರೆ.


ಎಪ್ಸ್ಟೀನ್ ಫೈಲ್ಸ್‌ ಹಗರಣಕ್ಕೆ ಸಂಬಂಧಿಸಿದಂತೆ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಹಾಗೂ ಜಗತ್ತಿನ ಖ್ಯಾತ ಕೋಟ್ಯಧಿಪತಿ ಬಿಲ್ ಗೇಟ್ಸ್, ಅಮೆರಿಕದ ಸಂಸದೀಯ ಸಮಿತಿಯ ಮುಂದೆ ಸಾಕ್ಷ್ಯಾಧಾರಗಳನ್ನು ಸಲ್ಲಿಸಿದ್ದಾರೆ. ಅದರಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅತ್ಯಂತ ಆಘಾತಕಾರಿ ಸತ್ಯಗಳನ್ನು ಒಪ್ಪಿಕೊಂಡಿದ್ದಾರೆ. ಲೈಂಗಿಕ ಹಗರಣಗಳ ಆರೋಪಿಯಾಗಿದ್ದ ಜೆಫ್ರಿ ಎಪ್ಸ್ಟೀನ್, ತನ್ನೊಂದಿಗೆ ಮತ್ತೆ ವ್ಯವಹಾರ ಮುಂದುವರಿಸುವಂತೆ ಒತ್ತಡ ಹೇರಲು ತನ್ನ ವೈಯಕ್ತಿಕ ಜೀವನದ ರಹಸ್ಯಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಿದ್ದಾಗಿ ಬಿಲ್ ಗೇಟ್ಸ್ ಬಹಿರಂಗಪಡಿಸಿದ್ದಾರೆ.

ಅಮೆರಿಕದ ಹೌಸ್ ಓವರ್‌ಸೈಟ್ ಕಮಿಟಿಯ ವಿಚಾರಣೆಯ ವೇಳೆ ಬಿಲ್ ಗೇಟ್ಸ್ ಈ ಸಾಕ್ಷ್ಯ ಬಹಿರಂಗ ಪಡಿಸಿದ್ದಾರೆ. ಈ ವೇಳೆ ತಾವು ಮೂವರು ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಗಿ ಒಪ್ಪಿಕೊಂಡಿರುವ ಗೇಟ್ಸ್, ಈ ಪೈಕಿ ಇಬ್ಬರು ಮಹಿಳೆಯರೊಂದಿಗಿನ ಸಂಬಂಧದ ವಿಷಯ ಜೆಫ್ರಿ ಎಪ್ಸ್ಟೀನ್‌ಗೆ ತಿಳಿದಿತ್ತು ಎಂದು ಹೇಳಿದ್ದಾರೆ.

ಮೂವರು ಮಹಿಳೆಯರೊಂದಿಗೆ ಸಂಬಂಧ

ಜೂನ್ 10 ರಂದು ನಡೆದ ವಿಚಾರಣೆಯ ವೇಳೆ ಕಾನೂನು ನಿರೂಪಕರ ಮುಂದೆ ಮಾತನಾಡಿದ ಬಿಲ್ ಗೇಟ್ಸ್, ರಷ್ಯಾದ ಇಬ್ಬರು ಮಹಿಳೆಯರಾದ ಬ್ರಿಡ್ಜ್ ಆಟಗಾರ್ತಿ ಮಿಲಾ ಆಂಟೊನೊವಾ ಮತ್ತು ಪರಮಾಣು ಭೌತವಿಜ್ಞಾನಿ ಕರಿಮಾ ನಿಗ್ಮತುಲಿನಾ ಅವರೊಂದಿಗೆ ತಮಗಿದ್ದ ಸಂಬಂಧದ ಬಗ್ಗೆ ಎಪ್ಸ್ಟೀನ್‌ಗೆ ಮಾಹಿತಿ ಇತ್ತು ಎಂದು ತಿಳಿಸಿದ್ದಾರೆ. ಇದರ ಜೊತೆಗೆ ವೈದ್ಯಕೀಯ ಉದ್ಯಮಿ ಆಲಿಸ್ ಜೇಕಬ್ಸ್ ನೆಸ್ಸೆಲ್ರೋಡ್ ಎಂಬ ಮೂರನೇ ಮಹಿಳೆಯೊಂದಿಗೂ ತಮಗೆ ಸಂಬಂಧವಿತ್ತು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.

"ಈ ಸಂಬಂಧಗಳಿಗೂ ಎಪ್ಸ್ಟೀನ್ ಜೊತೆಗಿನ ನನ್ನ ವ್ಯವಹಾರಗಳಿಗೂ ಯಾವುದೇ ಲಿಂಕ್ ಇರಲಿಲ್ಲ. ಆದರೆ ಇದರಿಂದ ನನ್ನ ಕುಟುಂಬಕ್ಕೆ ತೀವ್ರ ನೋವಾಗಿದೆ" ಎಂದು ಬಿಲ್ ಗೇಟ್ಸ್ ವಿಚಾರಣೆಯ ಪ್ರತಿಲೇಖನದಲ್ಲಿ ಹೇಳಿದ್ದಾರೆ. "ನನ್ನ ಅನೈತಿಕ ಸಂಬಂಧಗಳ ಮಾಹಿತಿಯ ಜೊತೆಗೆ ಹಲವು ಸುಳ್ಳುಗಳನ್ನು ಸೃಷ್ಟಿಸಿ, ನನ್ನನ್ನು ಮತ್ತೆ ತನ್ನೊಂದಿಗೆ ಜೋಡಿಸಿಕೊಳ್ಳುವಂತೆ ಮಾಡಲು ಎಪ್ಸ್ಟೀನ್ ಬ್ಲ್ಯಾಕ್‌ಮೇಲ್ ತಂತ್ರ ಉಪಯೋಗಿಸುತ್ತಿದ್ದ" ಎಂದು ಗೇಟ್ಸ್ ತಿಳಿಸಿದ್ದಾರೆ.

'ಆತ ನನಗೆ ಬ್ಲ್ಯಾಕ್‌ಮೇಲ್ ಮಾಡಲು ಯೋಚಿಸಿದ್ದ'

ಜೆಫ್ರಿ ಎಪ್ಸ್ಟೀನ್ ತನ್ನನ್ನು ಎಂದಿಗೂ ನೇರವಾಗಿ ಬ್ಲ್ಯಾಕ್‌ಮೇಲ್ ಮಾಡಿಲ್ಲ, ಆದರೆ ಆತ ಅದಕ್ಕೆ ಖಂಡಿತವಾಗಿಯೂ ಸ್ಕೆಚ್ ಹಾಕಿದ್ದ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ. "ಆತ ನನಗೆ ನೇರವಾಗಿ ಬೆದರಿಕೆ ಹಾಕದಿದ್ದರೂ, ಆತನ ಇಮೇಲ್‌ಗಳನ್ನು ನೋಡಿದರೆ ಆತ ನನ್ನನ್ನು ಬ್ಲ್ಯಾಕ್‌ಮೇಲ್ ಮಾಡಲು ಗಂಭೀರವಾಗಿ ಯೋಚಿಸಿದ್ದ ಎಂಬುದು ಸ್ಪಷ್ಟವಾಗುತ್ತದೆ" ಎಂದಿದ್ದಾರೆ.

2013 ರಲ್ಲಿ ಎಪ್ಸ್ಟೀನ್ ಬರೆದಿದ್ದ ಇಮೇಲ್ ಡ್ರಾಫ್ಟ್ ಒಂದನ್ನು ಗೇಟ್ಸ್ ಸಮಿತಿಗೆ ತೋರಿಸಿದ್ದಾರೆ. ಅದರಲ್ಲಿ ಬಿಲ್ ಗೇಟ್ಸ್ ಅವರ ವೈಯಕ್ತಿಕ ಜೀವನ ಹಾಗೂ ಅವರ ಮಾಜಿ ಉದ್ಯೋಗಿ ಬೋರಿಸ್ ನಿಕೋಲಿಕ್ ಅವರ ಬಗ್ಗೆ ಪ್ರಸ್ತಾಪಿಸಲಾಗಿತ್ತು. "ಸತ್ಯ ಮತ್ತು ಸುಳ್ಳುಗಳ ಮಿಶ್ರಣವನ್ನು ಬಳಸಿಕೊಂಡು ನನ್ನ ಮೇಲೆ ಒತ್ತಡ ಹೇರಲು ಆತ ಈ ಇಮೇಲ್ ಅನ್ನು ಅಸ್ತ್ರವಾಗಿ ಬಳಸಿಕೊಳ್ಳಲು ನೋಡುತ್ತಿದ್ದ" ಎಂದು ಗೇಟ್ಸ್ ವಿವರಿಸಿದ್ದಾರೆ.

ಎಪ್ಸ್ಟೀನ್‌ನ ಯಾವುದೇ ಅಪರಾಧ ಕೃತ್ಯಗಳಿಗೂ ತಮಗೂ ಸಂಬಂಧವಿಲ್ಲ ಎಂದಿರುವ ಗೇಟ್ಸ್, ಆತನನ್ನು ಭೇಟಿಯಾಗುತ್ತಿದ್ದುದು ತಾನು ಮಾಡಿದ ದೊಡ್ಡ ತಪ್ಪು ಎಂದು ವಿಷಾದಿಸಿದ್ದಾರೆ. ಕೇವಲ ಲೋಕೋಪಕಾರ ಮತ್ತು ದಾನಿಗಳನ್ನು ಸಂಪರ್ಕಿಸುವ ಉದ್ದೇಶದಿಂದ ಮಾತ್ರ ಆತನನ್ನು ಭೇಟಿಯಾಗಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ. "ಆತ ಅಪರಾಧಿ ಎಂದು ನನಗೆ ಗೊತ್ತಿತ್ತು. ಆದರೂ ಒಂದು ಸಣ್ಣ ಭರವಸೆಯ ಮೇಲೆ ಆತನನ್ನು ಸೀಮಿತವಾಗಿ ಭೇಟಿಯಾಗಲು ರಿಸ್ಕ್ ತಗೊಂಡಿದ್ದೆ" ಎಂದು ಗೇಟ್ಸ್ ಹೇಳಿದ್ದಾರೆ.

ಎಸ್‌ಟಿಡಿ (STD) ಆರೋಪ ತಳ್ಳಿಹಾಕಿದ ಗೇಟ್ಸ್

ವಿಚಾರಣೆಯ ವೇಳೆ, ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ಬಿಲ್ ಗೇಟ್ಸ್ ಅವರಿಗೆ ಲೈಂಗಿಕವಾಗಿ ಹರಡುವ ಸೋಂಕಿನ (STD) ಭೀತಿ ಇತ್ತು ಎಂಬ ಉಲ್ಲೇಖದ ಬಗ್ಗೆಯೂ ಸಂಸದರು ಪ್ರಶ್ನಿಸಿದರು. ಈ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಗೇಟ್ಸ್, "ನನಗೆ ಎಂದಿಗೂ ಎಸ್‌ಟಿಡಿ ಇರಲಿಲ್ಲ. ಆ ಸಮಯದಲ್ಲಿ ನನಗೆ ಅಂತಹ ಭೀತಿ ಇತ್ತೇ ಎಂಬುದು ನೆನಪಿಲ್ಲ. ಆದರೆ ನಾನು ಯಾರಿಗೂ ರಹಸ್ಯವಾಗಿ ಔಷಧಿಗಳನ್ನು ಪೂರೈಸಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

ನಾಲ್ಕು ವರ್ಷಗಳ ಅವಧಿಯಲ್ಲಿ ತಾವು ಜೆಫ್ರಿ ಎಪ್ಸ್ಟೀನ್‌ನನ್ನು ಸುಮಾರು 12 ರಿಂದ 14 ಬಾರಿ ಭೇಟಿಯಾಗಿದ್ದು, ಎರಡು ಬಾರಿ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾಗಿ ಗೇಟ್ಸ್ ಮಾಹಿತಿ ನೀಡಿದ್ದಾರೆ. ದಾನಿಗಳನ್ನು ಪರಿಚಯಿಸುವುದಾಗಿ ಎಪ್ಸ್ಟೀನ್ ಭರವಸೆ ನೀಡಿದ್ದರೂ, ಅದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದಿದ್ದಾರೆ.

ಗೇಟ್ಸ್ ಫೌಂಡೇಶನ್‌ನಿಂದ ತನಿಖೆ

ಈ ವಿವಾದದ ಬೆನ್ನಲ್ಲೇ ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ (Gates Foundation) ಮಹತ್ವದ ನಿರ್ಧಾರ ಕೈಗೊಂಡಿದೆ. ಜೆಫ್ರಿ ಎಪ್ಸ್ಟೀನ್ ಜೊತೆಗೆ ಸಂಸ್ಥೆಯ ಸಿಬ್ಬಂದಿ ನಡೆಸಿದ್ದ ಹಳೆಯ ಸಂವಹನಗಳು ಮತ್ತು ಇಮೇಲ್‌ಗಳ ಬಗ್ಗೆ ಬಾಹ್ಯ ತನಿಖೆ (External Review) ನಡೆಸುವುದಾಗಿ ಫೌಂಡೇಶನ್ ಪ್ರಕಟಿಸಿದೆ. ಒಟ್ಟಾರೆಯಾಗಿ, ಬಿಲ್ ಗೇಟ್ಸ್ ಅವರ ಈ ಶಾಕಿಂಗ್ ಒಪ್ಪಿಗೆಗಳು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.

Read More
Next Story