
ಬ್ಯಾಂಕಾಕ್ ಪಬ್‌ನಲ್ಲಿ ಭೀಕರ ಅಗ್ನಿ ಅವಘಡ: 27 ಮಂದಿ ಸಾವು
ಬೆಂಕಿ ಅತ್ಯಂತ ವೇಗವಾಗಿ ಮೇಲ್ಛಾವಣಿಯವರೆಗೆ ಹರಡಿತ್ತು ಎಂದು ತಿಳಿಸಿದ್ದಾರೆ. ಬೆಂಕಿಗಿಂತ ದಟ್ಟ ಹೊಗೆಯಿಂದ ಉಸಿರುಗಟ್ಟಿದ ಪರಿಣಾಮವೇ ಹೆಚ್ಚಿನ ಸಾವುಗಳು ಸಂಭವಿಸಿರುವ ಸಾಧ್ಯತೆ ಇದೆ.
ಥೈಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನಲ್ಲಿ ಭಾನುವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 27 ಮಂದಿ ಮೃತಪಟ್ಟಿದ್ದು, 63ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಉತ್ತರ ಬ್ಯಾಂಕಾಕ್‌ನ ನಾ ಲಾಡ್‌ಫ್ರಾವೋ ಪ್ರದೇಶದಲ್ಲಿರುವ ಪಬ್‌ನಲ್ಲಿ ಈ ದುರಂತ ಸಂಭವಿಸಿದ್ದು, ಗಾಯಾಳುಗಳಲ್ಲಿ 22 ಮಂದಿಯ ಸ್ಥಿತಿ ಗಂಭೀರವಾಗಿದೆ.
ಮಧ್ಯರಾತ್ರಿ ಸುಮಾರಿಗೆ ಪಬ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಜ್ವಾಲೆಗಳು ಸಂಪೂರ್ಣ ಕಟ್ಟಡವನ್ನು ಆವರಿಸಿವೆ. ದಟ್ಟ ಹೊಗೆ ಕಟ್ಟಡದೊಳಗೆ ವೇಗವಾಗಿ ಹರಡಿದ ಪರಿಣಾಮ, ಒಳಗಿದ್ದವರು ಹೊರಬರಲು ಹರಸಾಹಸ ಪಟ್ಟಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು 30 ನಿಮಿಷಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
ಬ್ಯಾಂಕಾಕ್ ಗವರ್ನರ್ ಚಾಡ್‌ಚಾರ್ಟ್ ಸಿಟ್ಟಿಪುಂಟ್ ಮಾತನಾಡಿ, ಬೆಂಕಿ ಅತ್ಯಂತ ವೇಗವಾಗಿ ಮೇಲ್ಛಾವಣಿಯವರೆಗೆ ಹರಡಿತ್ತು ಎಂದು ತಿಳಿಸಿದ್ದಾರೆ. ಬೆಂಕಿಗಿಂತ ದಟ್ಟ ಹೊಗೆಯಿಂದ ಉಸಿರುಗಟ್ಟಿದ ಪರಿಣಾಮವೇ ಹೆಚ್ಚಿನ ಸಾವುಗಳು ಸಂಭವಿಸಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದರು.
ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ಹಲವಾರು ಮೃತದೇಹಗಳು ತುರ್ತು ನಿರ್ಗಮನ ದ್ವಾರದ ಸಮೀಪ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ. ತುರ್ತು ನಿರ್ಗಮನ ಮಾರ್ಗದಲ್ಲಿ ಯಾವುದಾದರೂ ಅಡೆತಡೆಗಳಿದ್ದವೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಘಟನೆ ನಡೆದ ವೇಳೆ ಪಬ್‌ನಲ್ಲಿ ಎಷ್ಟು ಮಂದಿ ಇದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದರು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಥೈಲೆಂಡ್ ಪ್ರಧಾನಮಂತ್ರಿ ಅನುಟಿನ್ ಚಾರ್ನ್ವಿರಾಕುಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅವರು ಹೇಳಿದರು.
Terrifying visuals from the Bangkok fire location in Thailand when people were rushing out to save their lives. Thai Prime Minister has confirmed that 27 bodies have been recovered and fire has been brought under control. Many people are injured. pic.twitter.com/2SixPO7MNB
— Aditya Raj Kaul (@AdityaRajKaul) July 12, 2026
ಪಬ್‌ನಲ್ಲಿ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದ ಕಲಾವಿದರೊಬ್ಬರು ವೇದಿಕೆಯ ಸಮೀಪದ ಸರ್ಕ್ಯೂಟ್ ಬ್ರೇಕರ್‌ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ್ದರು. ಕೆಲವೇ ಕ್ಷಣಗಳಲ್ಲಿ ವಿದ್ಯುತ್ ಕಡಿತಗೊಂಡು ಬಳಿಕ ಭಾರೀ ಸ್ಫೋಟದ ಶಬ್ದ ಕೇಳಿಬಂದಿದ್ದು, ತಕ್ಷಣವೇ ದಟ್ಟ ಹೊಗೆ ಪಬ್‌ನೊಳಗೆ ಆವರಿಸಿತ್ತು. ಈ ವೇಳೆ ಅನೇಕರು ದಿಕ್ಕುತೋಚದೆ ಸಿಲುಕಿಕೊಂಡಿದ್ದಾರೆ.
ಶೌಚಾಲಯದ ಬಳಿ ಮೃತದೇಹಗಳು ಪತ್ತೆ
ಹಲವಾರು ಮೃತದೇಹಗಳು ಪಬ್‌ನ ಹಿಂಭಾಗದಲ್ಲಿದ್ದ ಶೌಚಾಲಯಗಳ ಸಮೀಪ ಪತ್ತೆಯಾಗಿವೆ ಎಂದು ಅನುಟಿನ್ ತಿಳಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಪಬ್‌ನ ಪ್ರವೇಶದ್ವಾರವನ್ನು ಜ್ವಾಲೆಗಳು ಆವರಿಸಿರುವುದು ಹಾಗೂ ದಟ್ಟ ಕಪ್ಪು ಹೊಗೆ ಆಕಾಶದತ್ತ ಹರಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಜನರು ಪ್ರಾಣ ಉಳಿಸಿಕೊಳ್ಳಲು ಆತಂಕದಿಂದ ಹೊರಗೆ ಓಡುತ್ತಿರುವ ದೃಶ್ಯಗಳೂ ವಿಡಿಯೊಗಳಲ್ಲಿ ದಾಖಲಾಗಿವೆ.
ಅಗ್ನಿ ಅವಘಡದ ನಂತರ ತೆಗೆದ ಚಿತ್ರಗಳಲ್ಲಿ ಪಬ್‌ನ ಒಳಭಾಗ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಪೀಠೋಪಕರಣಗಳು ಹಾಗೂ ಇತರ ವಸ್ತುಗಳು ನಾಶವಾಗಿರುವುದು ಕಂಡುಬಂದಿದೆ. ಗಾಯಕಿ ಸುಕನ್ಯಾ ವೋಂಗ್ವೋಂಗ್ವೈ ಅವರು ಸಮೀಪದಲ್ಲೇ ಕಾರ್ಯಕ್ರಮ ನೀಡುತ್ತಿದ್ದ ವೇಳೆ ಬೆಂಕಿ ಅವಘಡದ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ್ದಾಗಿ ತಿಳಿಸಿದ್ದಾರೆ. ತಮ್ಮ ಸಂಗೀತ ತಂಡದ ಸದಸ್ಯರಲ್ಲಿ ಒಬ್ಬರು ಮೃತಪಟ್ಟಿದ್ದು, ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮತ್ತೋರ್ವ ಸದಸ್ಯ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
"ಒಳಗಿದ್ದವರ ಪ್ರಕಾರ ಬೆಂಕಿ ಕಾಣಿಸಿಕೊಂಡ ತಕ್ಷಣ ವಿದ್ಯುತ್ ಸಂಪೂರ್ಣ ಕಡಿತಗೊಂಡಿತು. ಎಲ್ಲೆಡೆ ದಟ್ಟ ಹೊಗೆ ಆವರಿಸಿದ್ದರಿಂದ ಯಾರೂ ಯಾರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಹೊರಬರುವ ದಾರಿಯೂ ಕಾಣಿಸಲಿಲ್ಲ," ಎಂದು ಅವರು ಹೇಳಿದರು.
ಈ ಭೀಕರ ದುರಂತದ ಕುರಿತು ಅಧಿಕಾರಿಗಳು ಸಮಗ್ರ ತನಿಖೆ ಆರಂಭಿಸಿದ್ದು, ಬೆಂಕಿಗೆ ನಿಖರ ಕಾರಣವೇನು, ಅಗ್ನಿ ಸುರಕ್ಷತಾ ನಿಯಮಗಳ ಉಲ್ಲಂಘನೆ ನಡೆದಿದೆಯೇ ಎಂಬ ಎಲ್ಲಾ ಆಯಾಮಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

