ಇಬ್ಬರು ವಿದೇಶಿ ಮಹಿಳೆಯರ ಅಪಹರಣ, ಗ್ಯಾಂಗ್ ರೇಪ್; ಪಾಕ್‌ ಉಪ ಪ್ರಧಾನಿ ಸಂಬಂಧಿ ಸೇರಿ ನಾಲ್ವರ ಬಂಧನ
x

ಇಬ್ಬರು ವಿದೇಶಿ ಮಹಿಳೆಯರ ಅಪಹರಣ, ಗ್ಯಾಂಗ್ ರೇಪ್; ಪಾಕ್‌ ಉಪ ಪ್ರಧಾನಿ ಸಂಬಂಧಿ ಸೇರಿ ನಾಲ್ವರ ಬಂಧನ

ಪಾಕಿಸ್ತಾನದ ಲಾಹೋರ್‌ನಲ್ಲಿ ನೆದರ್‌ಲ್ಯಾಂಡ್‌ ಹಾಗೂ ವೆನೆಜುವೆಲಾ ಮಹಿಳೆಯರನ್ನು ಅಪಹರಿಸಿ ಗ್ಯಾಂಗ್ ರೇಪ್ ಮಾಡಲಾಗಿದೆ. ಪಾಕ್ ಉಪಪ್ರಧಾನಿ ಇಶಾಕ್ ದಾರ್ ಸಂಬಂಧಿ ರಜಾ ದಾರ್ ಸೇರಿ ನಾಲ್ವರನ್ನು ಬಂಧಿಸಲಾಗಿದೆ.


ಪಾಕಿಸ್ತಾನದ ಲಾಹೋರ್‌ನಲ್ಲಿ ಇಬ್ಬರು ವಿದೇಶಿ ಮಹಿಳೆಯರನ್ನು ಅಪಹರಿಸಿ, ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಅತ್ಯಂತ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಹೈಪ್ರೊಫೈಲ್ ಪ್ರಕರಣದಲ್ಲಿ ಪಾಕಿಸ್ತಾನದ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್ ಅವರ ಹತ್ತಿರದ ಸಂಬಂಧಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಲಾಹೋರ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮುಹಮ್ಮದ್ ರಜಾ ದಾರ್, ಹಸನ್ ರಜಾ, ಸಿಕಂದರ್ ಖಾನ್ ಮತ್ತು ಸಾಜಿದ್ ಅಲಿ ಎಂದು ಗುರುತಿಸಲಾಗಿದ್ದು, ಲಾಹೋರ್ ನ್ಯಾಯಾಲಯವು ಇವರನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಉಪಪ್ರಧಾನಿ ಇಶಾಕ್ ದಾರ್ ಸಂಬಂಧಿಯೇ ಮುಖ್ಯ ಆರೋಪಿ

ಬಂಧಿತರ ಪೈಕಿ ಮುಖ್ಯ ಆರೋಪಿಯಾಗಿರುವ ಮುಹಮ್ಮದ್ ರಜಾ ದಾರ್, ಪಾಕಿಸ್ತಾನದ ಉಪಪ್ರಧಾನಿ ಇಶಾಕ್ ದಾರ್ ಅವರ ಹತ್ತಿರದ ಸಂಬಂಧಿಯಾಗಿದ್ದಾನೆ. "ಇದು ಅತ್ಯಂತ ಸೂಕ್ಷ್ಮವಾದ ಪ್ರಕರಣವಾಗಿದೆ. ದೇಶದ ಉಪಪ್ರಧಾನಿ ಅವರ ಸಂಬಂಧಿಯೇ ಇದರಲ್ಲಿ ಭಾಗಿಯಾಗಿರುವುದರಿಂದ ಪೊಲೀಸರು ಎಲ್ಲಾ ಆಯಾಮಗಳಿಂದಲೂ ತೀವ್ರ ತನಿಖೆ ನಡೆಸುತ್ತಿದ್ದಾರೆ," ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಂಗಾಪುರದಲ್ಲಿ ಪರಿಚಯ, ಕ್ರಿಪ್ಟೋಕರೆನ್ಸಿ ಬಿಸಿನೆಸ್ ಲಿಂಕ್

ಸಂತ್ರಸ್ತ ಮಹಿಳೆಯರಲ್ಲಿ ಒಬ್ಬರು ನೆದರ್ಲ್ಯಾಂಡ್ಸ್ ಮತ್ತು ಮತ್ತೊಬ್ಬರು ವೆನೆಜುವೆಲಾ ದೇಶದ ಪ್ರಜೆಗಳಾಗಿದ್ದಾರೆ. ಇವರಿಬ್ಬರಿಗೂ ಮುಖ್ಯ ಆರೋಪಿ ರಜಾ ದಾರ್ ಅಕ್ಟೋಬರ್ 2025 ರಲ್ಲಿ ಸಿಂಗಾಪುರದಲ್ಲಿ ಪರಿಚಯವಾಗಿದ್ದನು. ಈ ಇಬ್ಬರು ಮಹಿಳೆಯರು ಮತ್ತು ರಜಾ ದಾರ್ ಬಿಟ್‌ಕಾಯಿನ್ ಅಥವಾ ಕ್ರಿಪ್ಟೋಕರೆನ್ಸಿ ಉದ್ಯಮದಲ್ಲಿ ಪಾಲುದಾರರಾಗಿದ್ದರು ಎನ್ನಲಾಗಿದೆ.

ಉದ್ಯಮದ ನಿಮಿತ್ತ ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ರಜಾ ದಾರ್ ಇವರಿಗೆ ಆಹ್ವಾನ ನೀಡಿದ್ದಲ್ಲದೆ, ಬಿಸಿನೆಸ್ ವೀಸಾವನ್ನೂ ವ್ಯವಸ್ಥೆ ಮಾಡಿದ್ದನು. ಅದರಂತೆ ಜೂನ್ 29 ರಂದು ಈ ಇಬ್ಬರು ವಿದೇಶಿ ಮಹಿಳೆಯರು ಲಾಹೋರ್‌ಗೆ ಬಂದು ಇಳಿದಿದ್ದರು.

ವಿಮಾನ ನಿಲ್ದಾಣದಿಂದಲೇ ಕಿಡ್ನ್ಯಾಪ್

ಮಹಿಳೆಯರು ನೀಡಿದ ದೂರಿನ ಪ್ರಕಾರ, ಅವರು ಲಾಹೋರ್‌ಗೆ ಬಂದಿಳಿಯುತ್ತಿದ್ದಂತೆ ರಜಾ ದಾರ್ ಮತ್ತು ಆತನ ಗ್ಯಾಂಗ್ ಅವರನ್ನು ಅಪಹರಿಸಿ ನಿರ್ಜನ ಪ್ರದೇಶದ ಮನೆಯೊಂದಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಐವರು ನರಾಧಮರು ಮಹಿಳೆಯರ ಮೇಲೆ ಭೀಕರವಾಗಿ ಗ್ಯಾಂಗ್ ರೇಪ್ ಎಸಗಿದ್ದಾರೆ. ಅಷ್ಟೇ ಅಲ್ಲದೆ, ಇವರನ್ನು ಬಿಡುಗಡೆ ಮಾಡಲು ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಈ ನಡುವೆ, ಸಂತ್ರಸ್ತ ಮಹಿಳೆಯೊಬ್ಬರು ಹೇಗೋ ತಮಗಾದ ಅನ್ಯಾಯದ ಬಗ್ಗೆ ಸ್ಪೇನ್‌ನಲ್ಲಿರುವ ತನ್ನ ತಂದೆಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆಕೆಯ ತಂದೆ ಸ್ಪೇನ್‌ನಿಂದಲೇ ಪಾಕಿಸ್ತಾನ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಅಲರ್ಟ್ ಆದ ಲಾಹೋರ್ ಪೊಲೀಸರು ತಕ್ಷಣವೇ ದಾಳಿ ನಡೆಸಿ ವಿದೇಶಿ ಮಹಿಳೆಯರನ್ನು ರಕ್ಷಿಸಿದ್ದಾರೆ.

ಐದನೇ ಆರೋಪಿಗಾಗಿ ತೀವ್ರ ಹುಡುಕಾಟ

ಲಾಹೋರ್ ಪೊಲೀಸರು ಐದು ಮಂದಿ ಆರೋಪಿಗಳ ವಿರುದ್ಧ ಪಾಕಿಸ್ತಾನ ದಂಡ ಸಂಹಿತೆಯ ಅಪಹರಣ (365A) ಮತ್ತು ಗ್ಯಾಂಗ್ ರೇಪ್ (375A) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರುಪಡಿಸಿದಾಗ ಮಹಿಳೆಯರು ರಜಾ ದಾರ್‌ನನ್ನು ಮುಖ್ಯ ಆರೋಪಿ ಎಂದು ಗುರುತಿಸಿದ್ದಾರೆ. ಪ್ರಸ್ತುತ ತಲೆಮರೆಸಿಕೊಂಡಿರುವ ಐದನೇ ಆರೋಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Read More
Next Story