ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆ ವಿಧಿವಿಧಾನ ಆರಂಭ: ಕಣ್ಣೀರಿಟ್ಟ ಇರಾನ್ ನಾಯಕರು
x

ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆ ವಿಧಿವಿಧಾನ ಆರಂಭ: ಕಣ್ಣೀರಿಟ್ಟ ಇರಾನ್ ನಾಯಕರು

ಇರಾನ್‌ನ ಮಾಜಿ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿಗೆ ಟೆಹ್ರಾನ್‌ನಲ್ಲಿ ಭಾವಪೂರ್ಣ ಅಂತಿಮ ನಮನ ಸಲ್ಲಿಸಲಾಯಿತು. ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ಹಾಗೂ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಕಣ್ಣೀರಿಟ್ಟರು.


Click the Play button to hear this message in audio format

ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿಗೆ ಬಲಿಯಾಗಿದ್ದ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಭವ್ಯ ಸರ್ಕಾರಿ ಅಂತ್ಯಕ್ರಿಯೆಯ ವಿಧಿವಿಧಾನಗಳು ರಾಜಧಾನಿ ಟೆಹ್ರಾನ್‌ನಲ್ಲಿ ಶುಕ್ರವಾರದಿಂದ ಆರಂಭವಾಗಿವೆ. ಅಂತಿಮ ಕ್ರಿಯಾವಿಧಿ ವಿಧಾನದ ವೇಳೆ ವೇಳೆ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಗಾಲಿಬಾಫ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ತಮ್ಮ ನೆಚ್ಚಿನ ನಾಯಕನನ್ನು ನೆನೆದು ಸಾರ್ವಜನಿಕವಾಗಿ ಕಣ್ಣೀರು ಹಾಕಿದ್ದಾರೆ.

ಈ ಅಂತಿಮ ನಮನ ಕಾರ್ಯಕ್ರಮವು ಖಮೇನಿ ನಿಧನದ ಬಳಿಕ ಇರಾನ್‌ನಲ್ಲಿ ನಡೆದ ಅತಿ ದೊಡ್ಡ ಜಾಗತಿಕ ಗಣ್ಯರ ಸಮ್ಮಿಲನಕ್ಕೆ ಸಾಕ್ಷಿಯಾಗಿದೆ. ಬಹುದಿನಗಳ ಕಾಲ ನಡೆಯಲಿರುವ ಈ ಅಂತಿಮಯಾತ್ರೆಯಲ್ಲಿ ಬರೋಬ್ಬರಿ 1.5 ರಿಂದ 2 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಇರಾನ್ ಅಧಿಕಾರಿಗಳು ಅಂದಾಜಿಸಿದ್ದಾರೆ.

ಶನಿವಾರ ಬೆಳಿಗ್ಗೆ 6 ರಿಂದ ಸಾರ್ವಜನಿಕರಿಗೆ ಮುಕ್ತ ಅವಕಾಶ

ಭದ್ರತೆಯ ಕುರಿತು ಮಾಹಿತಿ ನೀಡಿರುವ ತೆಹ್ರಾನ್ ಗವರ್ನರ್ ಮೊಹಮ್ಮದ್ ಸಾದೆಗ್ ಮೊತಮದಿಯನ್, "ಹುತಾತ್ಮ ನಾಯಕನ ಅಂತಿಮ ವಿದಾಯ ಸಮಾರಂಭಕ್ಕೆ ಅತ್ಯುನ್ನತ ಮಟ್ಟದ ರಕ್ಷಣೆ ಮತ್ತು ಸುರಕ್ಷತೆಯನ್ನು ಒದಗಿಸಲಾಗಿದೆ. ಶನಿವಾರ ಬೆಳಿಗ್ಗೆ ಸರಿಯಾಗಿ 6 ಗಂಟೆಗೆ ಟೆಹ್ರಾನ್ ಪ್ರಾರ್ಥನಾ ಮೈದಾನದ ಬಾಗಿಲುಗಳು ಸಾರ್ವಜನಿಕರಿಗಾಗಿ ತೆರೆಯಲಿವೆ" ಎಂದು ತಿಳಿಸಿದ್ದಾರೆ. ಮತ್ತೊಂದೆಡೆ, ಈ ಕ್ರಾಂತಿಕಾರಿ ನಾಯಕನ ಗೌರವಾರ್ಥವಾಗಿ ಇರಾಕ್ ರಾಜಧಾನಿ ಬಾಗ್ದಾದ್ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಅಲ್ಲಿನ ಗವರ್ನರ್ ಆದೇಶಿಸಿದ್ದಾರೆ.

ಭಾರತದ ಪರವಾಗಿ ಗಣ್ಯರ ಭೇಟಿ; ರಷ್ಯಾದಿಂದ ಮೆಡ್ವೆಡೆವ್ ಭಾಗಿ!

ಭಾರತ ಸರ್ಕಾರದ ಅಧಿಕೃತ ಪ್ರತಿನಿಧಿಗಳಾಗಿ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ (MoS) ಪವಿತ್ರ ಮಾರ್ಗರಿಟಾ ಮತ್ತು ಬಿಹಾರ ಗವರ್ನರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅಟಾ ಹಸ್ನೈನ್ ಅವರು ಶುಕ್ರವಾರದ ಅಂತ್ಯಕ್ರಿಯೆಯ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇದರೊಂದಿಗೆ ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿಯು 'X' ನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದು, ಪಿಡಿಪಿ (PDP) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಸೇರಿದಂತೆ ಭಾರತದ ಪ್ರಮುಖ ರಾಜಕೀಯ ನಾಯಕರು ಟೆಹ್ರಾನ್‌ನಲ್ಲಿ ಅಲಿ ಖಮೇನಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿರುವುದನ್ನು ಖಚಿತಪಡಿಸಿದೆ. ಇತ್ತ ರಷ್ಯಾದ ಭದ್ರತಾ ಮಂಡಳಿಯ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಕೂಡ ರಷ್ಯಾ ಪರವಾಗಿ ಪಾಲ್ಗೊಂಡಿದ್ದಾರೆ.

ಜಗತ್ತಿನ 100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗಿ

ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೇಯ್ ನೀಡಿರುವ ಮಾಹಿತಿ ಪ್ರಕಾರ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಸೇರಿದಂತೆ ಇರಾನ್‌ನ ಉನ್ನತ ನಾಯಕತ್ವದ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಜಗತ್ತಿನ ಸುಮಾರು 100 ದೇಶಗಳ ಗಣ್ಯರು ಮತ್ತು ಪ್ರತಿನಿಧಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ.

ಇರಾಕ್ ಅಧ್ಯಕ್ಷ ನಿಜಾರ್ ಅಮೇದಿ, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್, ಅರ್ಮೇನಿಯಾ ಪ್ರಧಾನಿ ನಿಕೋಲ್ ಪಾಶಿಯನ್, ತಜಕಿಸ್ತಾನ ಅಧ್ಯಕ್ಷ ಎಮೋಮಾಲಿ ರಹಮಾನ್, ಟರ್ಕಿ ಉಪಾಧ್ಯಕ್ಷ ಚೆವ್ಡೆಟ್ ಯಿಲ್ಮಾಜ್ ಮತ್ತು ಸೌದಿ ಅರೇಬಿಯಾದ ಉಪ ವಿದೇಶಾಂಗ ಸಚಿವ ವಲೀದ್ ಅಲ್ ಖೆರೇಜಿ ಸೇರಿದಂತೆ 12 ದೇಶಗಳ ಸಂಸತ್ತಿನ ಸ್ಪೀಕರ್‌ಗಳು ಉಪಸ್ಥಿತರಿದ್ದಾರೆ.

ಯುರೋಪ್ ದೇಶಗಳಿಗೆ ನಿಷೇಧ

ಪೂರ್ವ ಯುರೋಪಿನ ದೇಶಗಳ ನಿಯೋಗಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ. ಆದರೆ, ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್‌ನ ಮಿಲಿಟರಿ ದಾಳಿಗೆ ಅಧಿಕೃತವಾಗಿ ಬೆಂಬಲ ನೀಡಿದ್ದ ಕೆಲವು ಯುರೋಪಿಯನ್ ರಾಷ್ಟ್ರಗಳಿಗೆ ಇರಾನ್ ಆಹ್ವಾನ ನೀಡಿಲ್ಲ ಎಂದು ಬಘೇಯ್ ಸ್ಪಷ್ಟಪಡಿಸಿದ್ದಾರೆ.

ಜುಲೈ 9 ರವರೆಗೆ ನಡೆಯಲಿದೆ ಅಂತ್ಯಕ್ರಿಯೆ ಪ್ರಕ್ರಿಯೆ

ಸದ್ಯ ತೆಹ್ರಾನ್‌ನ ಗ್ರಾಂಡ್ ಮೊಸಲ್ಲಾದಲ್ಲಿ ಇರಿಸಲಾಗಿರುವ ಪಾರ್ಥಿವ ಶರೀರದ ಅಂತಿಮ ದರ್ಶನ ವಾರಾಂತ್ಯದವರೆಗೆ ಮುಂದುವರಿಯಲಿದೆ. ಸೋಮವಾರ ತೆಹ್ರಾನ್‌ನಲ್ಲಿ ಬೃಹತ್ ಶೋಕಯಾತ್ರೆ ನಡೆಯಲಿದೆ. ಇದಾದ ಬಳಿಕ ಪವಿತ್ರ ನಗರಗಳಾದ ಕೊಮ್, ಇರಾಕ್‌ನ ಬಾಗ್ದಾದ್, ಕರ್ಬಲಾ ಮತ್ತು ನಜಾಫ್‌ ನಗರಗಳಿಗೂ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುವುದು. ಅಂತಿಮವಾಗಿ ಜುಲೈ 9 ರಂದು ಮಶ್ಹಾದ್‌ನಲ್ಲಿ ದಫನ್ ಪ್ರಕ್ರಿಯೆ ನೆರವೇರಲಿದೆ.

Read More
Next Story