
Iran Arms Deal | ಇರಾನ್ ಪರ ಅಕ್ರಮ ಶಸ್ತ್ರಾಸ್ತ್ರ ಡೀಲ್: ಅಮೆರಿಕದಲ್ಲಿ ಇರಾನಿನ ಮಹಿಳಾ ಉದ್ಯಮಿ ಅರೆಸ್ಟ್!
ಅಮೆರಿಕದ ಗ್ರೀನ್ ಕಾರ್ಡ್ ಹೊಂದಿರುವ ಇರಾನ್ ಉದ್ಯಮಿ ಶಮೀಮ್ ಮಾಫಿ, ಇರಾನ್‌ನಿಂದ ಸುಡಾನ್‌ಗೆ ಅಕ್ರಮವಾಗಿ 580 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳನ್ನು ಪೂರೈಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ.
ಇರಾನ್ ಪರವಾಗಿ ಅಕ್ರಮ ಶಸ್ತ್ರಾಸ್ತ್ರ ವ್ಯವಹಾರಗಳನ್ನು ನಡೆಸುತ್ತಿದ್ದ ಆರೋಪದ ಮೇಲೆ 44 ವರ್ಷದ ಇರಾನ್ ಮೂಲದ ಮಹಿಳಾ ಉದ್ಯಮಿಯನ್ನು ಶನಿವಾರ ರಾತ್ರಿ ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಅಮೆರಿಕದ ಗ್ರೀನ್ ಕಾರ್ಡ್ ಹೊಂದಿರುವ ಶಮೀಮ್ ಮಾಫಿ ಬಂಧಿತ ಮಹಿಳೆಯಾಗಿದ್ದು, ಈಕೆ ಇರಾನ್‌ನಿಂದ ಸುಡಾನ್‌ಗೆ ಡ್ರೋನ್‌ಗಳು ಮತ್ತು ಬಾಂಬ್‌ಗಳನ್ನು ಪೂರೈಸುವಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದಳು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬಂಧನದ ಹಿನ್ನೆಲೆ ಮತ್ತು ಆರೋಪಗಳು
ಅಮೆರಿಕದ ಸಹಾಯಕ ಅಟಾರ್ನಿ ಬಿಲ್ ಎಸ್ಸೈಲಿ ಅವರ ಪ್ರಕಾರ, ಶಮೀಮ್ ಮಾಫಿ ವಿರುದ್ಧ ಇರಾನ್ ತಯಾರಿಸಿದ ಡ್ರೋನ್‌ಗಳು, ಬಾಂಬ್‌ಗಳು, ಬಾಂಬ್ ಫ್ಯೂಸ್‌ಗಳು ಮತ್ತು ಲಕ್ಷಾಂತರ ಸುತ್ತಿನ ಮದ್ದುಗುಂಡುಗಳನ್ನು ಸುಡಾನ್‌ಗೆ ಮಾರಾಟ ಮಾಡಲು ದಲ್ಲಾಳಿ ಕೆಲಸ ಮಾಡಿದ ಆರೋಪ ಹೊರಿಸಲಾಗಿದೆ.
ಈ ಕುರಿತು ಎಕ್ಸ್ (X) ಪೋಸ್ಟ್ ಮಾಡಿರುವ ಎಸ್ಸೈಲಿ, "ಒಂದು ವೇಳೆ ಈಕೆ ಮೇಲಿನ ಆರೋಪ ಸಾಬೀತಾದರೆ, ಆಕೆಗೆ ಫೆಡರಲ್ ಜೈಲಿನಲ್ಲಿ ಗರಿಷ್ಠ 20 ವರ್ಷಗಳ ಶಿಕ್ಷೆಯಾಗುವ ಸಾಧ್ಯತೆಯಿದೆ. ಮಾಫಿ ಇರಾನ್ ಪ್ರಜೆಯಾಗಿದ್ದು, 2016 ರಲ್ಲಿ ಅಮೆರಿಕದ ಶಾಶ್ವತ ನಿವಾಸಿಯಾಗಿದ್ದರು," ಎಂದು ತಿಳಿಸಿದ್ದಾರೆ.
ಶತಕೋಟಿ ರೂಪಾಯಿಯ ವ್ಯವಹಾರ!
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ವುಡ್‌ಲ್ಯಾಂಡ್ ಹಿಲ್ಸ್ ನಿವಾಸಿಯಾಗಿರುವ ಶಮೀಮ್ ಮಾಫಿ ಇರಾನ್‌ನ ಗುಪ್ತಚರ ಮತ್ತು ಭದ್ರತಾ ಸಚಿವಾಲಯದೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಅಮೆರಿಕದಲ್ಲಿ ವ್ಯವಹಾರ ನಡೆಸಲು ಅವರಿಂದಲೇ ಹಣ ಹಾಗೂ ಅಗತ್ಯ ಸೂಚನೆಗಳನ್ನು ಪಡೆಯುತ್ತಿದ್ದರು ಎಂದು ಪ್ರಾಸಿಕ್ಯೂಟರ್‌ಗಳು ಗಂಭೀರ ಆರೋಪ ಮಾಡಿದ್ದಾರೆ. ಈಕೆ ತನ್ನ ಅಕ್ರಮ ಶಸ್ತ್ರಾಸ್ತ್ರ ವ್ಯವಹಾರಗಳನ್ನು ಸುಲಭಗೊಳಿಸಲು ಓಮನ್‌ನಲ್ಲಿ ನೋಂದಾಯಿಸಲಾದ 'ಅಟ್ಲಾಸ್ ಇಂಟರ್ನ್ಯಾಷನಲ್ ಬಿಸಿನೆಸ್' ಎಂಬ ಸಂಸ್ಥೆಯನ್ನು ಬಳಸಿಕೊಳ್ಳುತ್ತಿದ್ದಳು ಎನ್ನಲಾಗಿದೆ.
ಈ ಮಾರಾಟದ ಒಪ್ಪಂದಗಳ ಭಾಗವಾಗಿ, ಇರಾನ್ ರಕ್ಷಣಾ ಸಚಿವಾಲಯವು ತಯಾರಿಸಿದ 'ಮೊಹಾಜರ್-6' ಸಶಸ್ತ್ರ ಡ್ರೋನ್‌ಗಳನ್ನು ಸುಡಾನ್‌ಗೆ ಪೂರೈಸಲು ಈಕೆ ಸುಮಾರು 70 ಮಿಲಿಯನ್ ಡಾಲರ್ ಅಂದರೆ ಅಂದಾಜು 580 ಕೋಟಿ ರೂಪಾಯಿ ಮೊತ್ತದ ಬೃಹತ್ ಒಪ್ಪಂದವನ್ನು ಮಾಡಿಕೊಂಡಿದ್ದಳು ಎಂಬ ಅಂಶ ಬೆಳಕಿಗೆ ಬಂದಿದೆ.
ಐಷಾರಾಮಿ ಜೀವನ ಮತ್ತು ಸೋಷಿಯಲ್ ಮೀಡಿಯಾ
2013ರಲ್ಲಿ ಇರಾನ್ ತೊರೆದಿದ್ದ ಮಾಫಿ, ಅಮೆರಿಕದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅವರು ತಮ್ಮ ಅಂತರಾಷ್ಟ್ರೀಯ ಪ್ರವಾಸಗಳು ಮತ್ತು ಬೆಲೆಬಾಳುವ ಮರ್ಸಿಡಿಸ್ ಬೆಂಝ್ ಕಾರುಗಳೊಂದಿಗೆ ಇರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ, ಈ ಐಷಾರಾಮಿ ಜೀವನದ ಹಿಂದೆ ಅಕ್ರಮ ಶಸ್ತ್ರಾಸ್ತ್ರ ವ್ಯವಹಾರದ ನೆರಳಿತ್ತು ಎಂಬುದು ಈಗ ಬೆಳಕಿಗೆ ಬಂದಿದೆ. ಪ್ರಸ್ತುತ ಸುಡಾನ್‌ನಲ್ಲಿ ನಾಗರಿಕ ಯುದ್ಧ ನಡೆಯುತ್ತಿದ್ದು, ಇಂತಹ ಸಮಯದಲ್ಲಿ ಇರಾನ್ ನಿರ್ಮಿತ ಮದ್ದುಗುಂಡುಗಳನ್ನು ಪೂರೈಸಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಆತಂಕ ಮೂಡಿಸಿದೆ. ಅಧಿಕಾರಿಗಳು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

