ಅಮೆರಿಕದಲ್ಲಿ ಉದ್ಯೋಗ ಸಿಗದೆ ಆಂಧ್ರದ ಯುವಕ ಆತ್ಮಹತ್ಯೆ: ಮೃತದೇಹ ತರಲು ಗೆಳೆಯರಿಂದ ಹಣ ಸಂಗ್ರಹ
x
ಆತ್ಮಹತ್ಯೆಗೆ ಶರಣಾದ ಇರಗಾನಬೋಯಿನ ಚಂದು

ಅಮೆರಿಕದಲ್ಲಿ ಉದ್ಯೋಗ ಸಿಗದೆ ಆಂಧ್ರದ ಯುವಕ ಆತ್ಮಹತ್ಯೆ: ಮೃತದೇಹ ತರಲು ಗೆಳೆಯರಿಂದ ಹಣ ಸಂಗ್ರಹ

ಅಮೆರಿಕದ ಚಿಕಾಗೋದಲ್ಲಿ ಉದ್ಯೋಗದ ಒತ್ತಡ ಹಾಗೂ ಆರ್ಥಿಕ ಸಂಕಷ್ಟದಿಂದಾಗಿ ಆಂಧ್ರದ ಕುರ್ನೂಲ್ ಮೂಲದ ಇರಗಾನಬೋಯಿನ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಅಮೆರಿಕದಲ್ಲಿ ಉದ್ಯೋಗದ ಹುಡುಕಾಟದಲ್ಲಿದ್ದ ಆಂಧ್ರಪ್ರದೇಶದ ಕುರ್ನೂಲ್ ಮೂಲದ 26 ವರ್ಷದ ಯುವಕ ಇರಗಾನಬೋಯಿನ ಚಂದು, ಆರ್ಥಿಕ ಒತ್ತಡ ಮತ್ತು ನಿರುದ್ಯೋಗದ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯಾರು ಈ ಚಂದು?

ಚಂದು ಅವರು ಹೈದರಾಬಾದ್‌ನ ಸಿಎಂಆರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಮುಗಿಸಿದ್ದರು. ನಂತರ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾಕ್ಕೆ ತೆರಳಿ ಚಿಕಾಗೋದ ಡೆಪಾಲ್ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗಷ್ಟೇ ಮಾಸ್ಟರ್ಸ್ ಪದವಿ ಪೂರ್ಣಗೊಳಿಸಿದ್ದರು. ಕಳೆದ ವರ್ಷ ಅವರು 'ಡೆಲ್' (Dell) ಕಂಪನಿಯಲ್ಲಿ ಡೆವಲಪರ್ ಆಗಿ ಕೆಲಸ ಮಾಡಿದ್ದರು. ಆದರೆ ಕಳೆದ ಕೆಲವು ವಾರಗಳಿಂದ ಹೊಸ ಕೆಲಸಕ್ಕಾಗಿ ತೀವ್ರವಾಗಿ ಪ್ರಯತ್ನಿಸುತ್ತಿದ್ದರು.

ಕುಟುಂಬಕ್ಕೆ ಆಸರೆಯಾಗುವ ಕನಸು ಭಗ್ನ

ಚಂದು ಅವರ ತಂದೆ ಕುರ್ನೂಲ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರಿ ತಂದೆಗೆ ಆಸರೆಯಾಗಬೇಕು, ಕುಟುಂಬದ ಸಾಲ ತೀರಿಸಬೇಕು ಎಂಬ ದೊಡ್ಡ ಕನಸನ್ನು ಅವರು ಹೊಂದಿದ್ದರು. ಆದರೆ ಕೆಲಸ ಸಿಗದ ಕಾರಣ ತಾನು ತಂದೆಗೆ ಹೊರೆಯಾಗುತ್ತಿದ್ದೇನೆ ಎಂಬ ಆತಂಕ ಅವರನ್ನು ಕಾಡುತ್ತಿತ್ತು ಎಂದು ವರದಿಗಳು ತಿಳಿಸಿವೆ.

ಸ್ನೇಹಿತರಿಂದ ಹಣ ಸಂಗ್ರಹ

ಚಂದು ಅವರ ಮೃತದೇಹವನ್ನು ಭಾರತಕ್ಕೆ ತರಲು ಅವರ ಸ್ನೇಹಿತ ರಾಜೇಶ್ ಗುರ್ರಂ ಅವರು ಆನ್‌ಲೈನ್ ಮೂಲಕ 1,20,000 ಡಾಲರ್‌ (ಅಂದಾಜು 1 ಕೋಟಿ ರೂ.) ಹಣ ಸಂಗ್ರಹಿಸುವ ಅಭಿಯಾನ ಆರಂಭಿಸಿದ್ದಾರೆ. ಮೃತದೇಹವನ್ನು ಅಮೆರಿಕಾದಿಂದ ಭಾರತಕ್ಕೆ ರವಾನಿಸಲು ಸುಮಾರು 25,000 ಡಾಲರ್‌ (ಅಂದಾಜು 20 ಲಕ್ಷ ರೂ.) ಖರ್ಚಾಗುತ್ತದೆ. ಉಳಿದ ಮೊತ್ತವನ್ನು ಚಂದು ಅವರ ಪೋಷಕರಿಗೆ ಅವರ ಶಿಕ್ಷಣಕ್ಕಾಗಿ ಮಾಡಿದ ಸಾಲವನ್ನು ತೀರಿಸಲು ನೀಡಲಾಗುವುದು ಎಂದು ಸ್ನೇಹಿತರು ತಿಳಿಸಿದ್ದಾರೆ. ಚಂದು ಅವರನ್ನು ಅವರ ಸ್ನೇಹಿತರು "ಅತ್ಯಂತ ಉದಾರ ಮತ್ತು ಬೆಂಬಲ ನೀಡುವ ಗುಣದ ವ್ಯಕ್ತಿ" ಎಂದು ನೆನಪಿಸಿಕೊಂಡಿದ್ದಾರೆ.

ಸರ್ಕಾರದ ಸ್ಪಂದನೆ

ಈ ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡ ಬೆನ್ನಲ್ಲೇ ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಅವರು ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಮೃತದೇಹವನ್ನು ಶೀಘ್ರವಾಗಿ ಮತ್ತು ಯಾವುದೇ ತೊಂದರೆಯಿಲ್ಲದೆ ಭಾರತಕ್ಕೆ ತರಲು ಸಹಾಯ ಮಾಡುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೆ ವಿನಂತಿಸಿದ್ದಾರೆ. ಸಚಿವ ನಾಯ್ಡು ಅವರು ಈ ಪ್ರಕ್ರಿಯೆಯನ್ನು ವೇಗಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ನಡೆಸುತ್ತಿರುವುದಾಗಿ ಭರವಸೆ ನೀಡಿದ್ದಾರೆ.

Read More
Next Story