ಇರಾನ್ ಮೇಲೆ ಅಮೆರಿಕ ಮತ್ತೆ ದಾಳಿ; ಹೋರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ
x

ಇರಾನ್ ಮೇಲೆ ಅಮೆರಿಕ ಮತ್ತೆ ದಾಳಿ; ಹೋರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ

ಅಮೆರಿಕದ ಕ್ಷಿಪಣಿ ದಾಳಿಯ ಚೂರುಗಳು ದಕ್ಷಿಣ ಇರಾನ್‌ನ ಸಿರಿಕ್ ಪ್ರದೇಶದ ಮನೆಯೊಂದಕ್ಕೆ ಅಪ್ಪಳಿಸಿದ್ದು, ಅಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಘಟನೆಯಲ್ಲಿ ಮಗು ಸೇರಿದಂತೆ ಕನಿಷ್ಠ ನಾಲ್ವರು ಮೃತಪಟ್ಟಿದ್ದು, ಸುಮಾರು 50 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.


Click the Play button to hear this message in audio format

ಇರಾನ್ ಮೇಲೆ ಅಮೆರಿಕದ ಸೇನಾ ದಾಳಿ ಮುಂದುವರಿದಿದ್ದು, ರಾತ್ರಿಯಿಡೀ ಹಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಅಮೆರಿಕದ ಪಡೆಗಳು ಬಾಂಬ್ ದಾಳಿ ನಡೆಸಿವೆ. ಹೋರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇತ್ತೀಚೆಗೆ ನಡೆಸಲು ಯತ್ನಿಸಿದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ.

ಅಮೆರಿಕದ ಕ್ಷಿಪಣಿ ದಾಳಿಯ ಚೂರುಗಳು ದಕ್ಷಿಣ ಇರಾನ್‌ನ ಸಿರಿಕ್ ಪ್ರದೇಶದ ಮನೆಯೊಂದಕ್ಕೆ ಅಪ್ಪಳಿಸಿದ್ದು, ಅಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಘಟನೆಯಲ್ಲಿ ಮಗುವೊಂದೂ ಸೇರಿದಂತೆ ಕನಿಷ್ಠ ನಾಲ್ವರು ಮೃತಪಟ್ಟಿದ್ದು, ಸುಮಾರು 50 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಕಠಿಣ ಪ್ರತಿದಾಳಿ ನಡೆಸಿದೆ. ಬಹ್ರೇನ್, ಕುವೈತ್ ಮತ್ತು ಜೋರ್ಡಾನ್‌ನಲ್ಲಿರುವ ಅಮೆರಿಕದ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇರಾನ್‌ನ ಸ್ಥಳೀಯ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕಕ್ಕೆ ‘ಮರೆಯಲಾಗದ ಪಾಠ’ ಎಂದ ಇರಾನ್

ನೇರ ಅಮೆರಿಕದ ಬಾಂಬ್ ದಾಳಿ ಮತ್ತೆ ಆರಂಭವಾದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ, ಅಮೆರಿಕಕ್ಕೆ ಇರಾನ್ ಸೇನೆ ‘ಮರೆಯಲಾಗದ ಪಾಠಗಳನ್ನು’ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ವಕ್ತಾರ ಹೊಸೈನ್ ಮೊಹೆಬಿ ಕೂಡ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ವಾಷಿಂಗ್ಟನ್ ತನ್ನ ಹೊಸ ದಾಳಿಗಳ ಬಗ್ಗೆ ‘ಪಶ್ಚಾತ್ತಾಪ ಪಡಲಿದೆ’ ಎಂದು ಎಚ್ಚರಿಸಿದ್ದಾರೆ. ದಾಳಿಕೋರರಿಗೆ ‘ಕಠಿಣ ಶಿಕ್ಷೆ’ ಕಾದಿದೆ ಎಂದು ಅವರು ಹೇಳಿದ್ದಾರೆ.

ಮತ್ತೆ ಆರಂಭವಾದ ಅಮೆರಿಕದ ದಾಳಿ

ಈ ಸಂಘರ್ಷದ ಇತ್ತೀಚಿನ ಸುತ್ತು ಭಾನುವಾರ ಅಮೆರಿಕ ಇರಾನ್‌ನ ಕೆಲವು ಗುರಿಗಳ ಮೇಲೆ ದಾಳಿ ನಡೆಸುವುದರೊಂದಿಗೆ ಆರಂಭವಾಯಿತು. ಹಲವು ವಾರಗಳ ಬಳಿಕ ಅಮೆರಿಕ ನಡೆಸಿದ ಮೊದಲ ದೃಢಪಟ್ಟ ದಾಳಿ ಇದಾಗಿತ್ತು.

ಇದಾದ ಬಳಿಕ ಇರಾನ್ ಪಡೆಗಳು ಜೋರ್ಡಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಅಮೆರಿಕದ ಪಡೆಗಳನ್ನು ಗುರಿಯಾಗಿಸಿಕೊಂಡವು. ಇದೇ ವೇಳೆ, ಎರಡು ತೈಲ ಸಾಗಣೆ ಹಡಗುಗಳಿಗೂ ದಾಳಿ ನಡೆದಿದ್ದು, ಈ ದಾಳಿಗಳ ಹೊಣೆಯನ್ನು ಯಾವುದೇ ದೇಶ ಅಥವಾ ಸಂಘಟನೆ ಅಧಿಕೃತವಾಗಿ ಹೊತ್ತುಕೊಂಡಿಲ್ಲ.

ಮಂಗಳವಾರವೂ ಅಮೆರಿಕ ಮತ್ತಷ್ಟು ದಾಳಿಗಳನ್ನು ನಡೆಸಿತು. ಇರಾನ್‌ನ ಸರ್ಕಾರಿ ದೂರದರ್ಶನದ ವರದಿ ಪ್ರಕಾರ, ಹೋರ್ಮುಜ್ ಜಲಸಂಧಿಯ ಸಮೀಪದ ದಕ್ಷಿಣ ಭಾಗಗಳಲ್ಲಿ ಹಾಗೂ ಗಲ್ಫ್‌ನಲ್ಲಿರುವ ದ್ವೀಪವೊಂದರಲ್ಲಿ ಸ್ಫೋಟಗಳ ಸದ್ದು ಕೇಳಿಬಂದಿದೆ. ದಕ್ಷಿಣ ಪ್ರಾಂತ್ಯದ ಕೆರ್ಮಾನ್‌ನಲ್ಲಿರುವ ವಿಮಾನ ನಿಲ್ದಾಣವನ್ನೂ ಅಮೆರಿಕದ ಪಡೆಗಳು ಗುರಿಯಾಗಿಸಿಕೊಂಡಿವೆ ಎಂದು ವರದಿಯಾಗಿದೆ.

ಸಿರಿಕ್‌ನ ಕುಹೆಸ್ತಕ್ ನಗರದಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದ ಮನೆಯೊಂದರ ಮೇಲೆ ದಾಳಿ ನಡೆದಿರುವುದರ ಜೊತೆಗೆ, ಚಬಹಾರ್ ಮತ್ತು ಕೊನಾರಕ್ ಜಿಲ್ಲೆಗಳ ವ್ಯಾಪ್ತಿಯಲ್ಲಿನ ಪ್ರದೇಶಗಳಿಗೂ ನಾಲ್ಕು ಕ್ಷಿಪಣಿಗಳು ಅಪ್ಪಳಿಸಿವೆ ಎಂದು ಇರಾನ್‌ನ ಅಧಿಕೃತ IRNA ಸುದ್ದಿಸಂಸ್ಥೆ ವರದಿ ಮಾಡಿದೆ. ಆದರೆ ಈ ದಾಳಿಗಳಿಂದ ಉಂಟಾದ ಹಾನಿಯ ಕುರಿತು ಯಾವುದೇ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ.

ನಾಗರಿಕರನ್ನು ಗುರಿಯಾಗಿಸಿಲ್ಲ ಎಂದ ಅಮೆರಿಕ

ನಾಗರಿಕರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಅಮೆರಿಕ ದಾಳಿ ನಡೆಸಿದೆ ಎಂಬ ವರದಿಗಳನ್ನು ಅಮೆರಿಕದ ಸೇನೆ ತಳ್ಳಿಹಾಕಿದೆ. ಇತ್ತೀಚಿನ ದಾಳಿಗಳಿಂದ ನಾಗರಿಕರು ಮೃತಪಟ್ಟಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಲಭ್ಯವಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ CENTCOM ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್, ಅಮೆರಿಕದ ಸೇನೆ ಎಂದಿಗೂ ನಾಗರಿಕರನ್ನು ಗುರಿಯಾಗಿಸುವುದಿಲ್ಲ ಎಂದು ಹೇಳಿದ್ದಾರೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ಗೆ ವಿರುದ್ಧವಾಗಿ ಈ ಹೇಳಿಕೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ಅಮೆರಿಕದ ನೆಲೆಗಳ ಮೇಲೆ ಇರಾನ್ ಪ್ರತಿದಾಳಿ

ಅಮೆರಿಕದ ದಾಳಿಗೆ ಪ್ರತಿಯಾಗಿ ಜೋರ್ಡಾನ್‌ನಲ್ಲಿರುವ ಕ್ಯಾಂಪ್ ಟಿಟಿನ್‌ನಲ್ಲಿನ ಅಮೆರಿಕದ ಮೆರೈನ್ ಕಾರ್ಪ್ಸ್ ನೆಲೆಯ ಮೇಲೆ ತೀವ್ರ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್‌ನ IRGC ತಿಳಿಸಿದೆ ಎಂದು ಇರಾನ್‌ನ ತಸ್ನಿಮ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಆದರೆ ಜೋರ್ಡಾನ್ ಸೇನೆ ಇರಾನ್‌ನಿಂದ ಉಡಾಯಿಸಲಾದ ಕನಿಷ್ಠ 10 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆದಿರುವುದಾಗಿ ತಿಳಿಸಿದೆ. ಗಲ್ಫ್ ಆಫ್ ಅಕಾಬಾ ಸಮೀಪ, ಇಸ್ರೇಲ್ ಮತ್ತು ಸೌದಿ ಅರೇಬಿಯಾ ಗಡಿಗಳಿಗೆ ಹತ್ತಿರದಲ್ಲಿರುವ ಅಮೆರಿಕದ ತರಬೇತಿ ಶಿಬಿರಕ್ಕೆ ಯಾವುದೇ ಕ್ಷಿಪಣಿ ಅಪ್ಪಳಿಸಿರುವುದು ಅಥವಾ ಅಲ್ಲಿ ಯಾರಿಗಾದರೂ ಗಾಯವಾಗಿರುವುದನ್ನು ಜೋರ್ಡಾನ್ ಸೇನೆ ದೃಢಪಡಿಸಿಲ್ಲ. ಮತ್ತೂ ಮೂರು ಕ್ಷಿಪಣಿಗಳು ಜನವಸತಿ ಇಲ್ಲದ ಪ್ರದೇಶಗಳಲ್ಲಿ ಬಿದ್ದಿವೆ ಎಂದು ತಿಳಿಸಿದೆ.

ಕುವೈತ್ ಮತ್ತು ಬಹ್ರೇನ್‌ನಲ್ಲಿಯೂ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಬಹ್ರೇನ್‌ನ ಆಂತರಿಕ ಸಚಿವಾಲಯ ಸಂಭವನೀಯ ಅಪಾಯದ ಕುರಿತು ಎಚ್ಚರಿಕೆ ನೀಡಿದ್ದು, ನಾಗರಿಕರು ಮತ್ತು ನಿವಾಸಿಗಳು ಶಾಂತವಾಗಿರುವಂತೆ ಹಾಗೂ ಸಮೀಪದ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದೆ. ಸಾರ್ವಜನಿಕರು ಅಧಿಕೃತ ಮೂಲಗಳ ಮೂಲಕವೇ ಮಾಹಿತಿ ಪಡೆಯಬೇಕು ಎಂದು ಸಚಿವಾಲಯ ಎಕ್ಸ್‌ನಲ್ಲಿ ಮನವಿ ಮಾಡಿದೆ.

‘ಅಮೆರಿಕ ಪಶ್ಚಾತ್ತಾಪ ಪಡುವವರೆಗೆ ದಾಳಿ ಮುಂದುವರಿಯಲಿದೆ’

ಅಮೆರಿಕದ ಪಡೆಗಳ ವಿರುದ್ಧದ ದಾಳಿಗಳು ಮುಂದುವರಿಯಲಿವೆ ಎಂದು ಇರಾನ್ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಇರಾನ್‌ನ ಖಾತಮ್ ಅಲ್-ಅನ್ಬಿಯಾ ಕೇಂದ್ರ ಕಚೇರಿಯ ವಕ್ತಾರ ಕರ್ನಲ್ ಇಬ್ರಾಹಿಂ ಝೋಲ್ಫಘಾರಿ, ಅಮೆರಿಕದ ಪ್ರಾದೇಶಿಕ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿರುವುದಾಗಿ ಹೇಳಿದ್ದಾರೆ. ಈ ದಾಳಿಗಳಿಂದ ಮೂಲಸೌಕರ್ಯ, ಸೌಲಭ್ಯಗಳು, ಶಸ್ತ್ರಾಸ್ತ್ರಗಳು ಮತ್ತು ಸೇನಾ ಉಪಕರಣಗಳಿಗೆ ಭಾರಿ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಅಮೆರಿಕದ ವಿರುದ್ಧದ ಈ ಕಾರ್ಯಾಚರಣೆಗಳು ‘ಅವರು ತಮ್ಮ ಕೃತ್ಯಗಳ ಬಗ್ಗೆ ಪಶ್ಚಾತ್ತಾಪ ಪಡುವವರೆಗೆ’ ಮುಂದುವರಿಯಲಿವೆ ಎಂದು ಝೋಲ್ಫಘಾರಿ ಹೇಳಿದ್ದಾರೆ

Read More
Next Story