
ಇರಾನ್ ದಾಳಿಗೆ ತತ್ತರಿಸಿತೇ ಅಮೆರಿಕ? ದೊಡ್ಡಣ್ಣನಿಗೆ ಸಾವಿರಾರು ಕೋಟಿ ರೂ. ಆರ್ಥಿಕ ನಷ್ಟ ಆಗಿದೆಯೇ?
ಇರಾನ್ ವಿರುದ್ಧದ ಈ ಯುದ್ಧವು ಅಮೆರಿಕದ ಆರ್ಥಿಕತೆಯ ಮೇಲೆ ಹಿಂದೆಂದಿಗಿಂತಲೂ ಭಾರಿ ಪರಿಣಾಮ ಬೀರುತ್ತಿದ್ದು, ಯುದ್ಧ ಮುಂದುವರಿದರೆ ಇದು ಅಮೆರಿಕದ ಜಾಗತಿಕ ಪ್ರಾಬಲ್ಯಕ್ಕೇ ದೊಡ್ಡ ಸವಾಲಾಗುವ ಸಾಧ್ಯತೆಯಿದೆ.
ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಗಳು ಇನ್ನಷ್ಟು ದಟ್ಟವಾಗಿವೆ. ಕದನ ವಿರಾಮದ ಹೊರತಾಗಿಯೂ ಶಾಂತಿಯ ಸೂಚನೆಗಳು ಕಾಣಿಸುತ್ತಿಲ್ಲ. ಇರಾನ್ ಹಾಗೂ ಅಮೆರಿಕ ಪಟ್ಟು ಬಿಡುತ್ತಿಲ್ಲ. ಸೋಲೊಪ್ಪಿಕೊಳ್ಳುತ್ತಿಲ್ಲ ಹಾಗೂ ಸಂಧಾನವೂ ಮಾಡಿಕೊಳ್ಳುತ್ತಿಲ್ಲ. ಆದರೆ, ಎರಡೂ ದೇಶಗಳು ಕ್ಷಿಪಣಿಗಳು ಹಾಗೂ ಡ್ರೋನ್ ದಾಳಿಗಳಿಂದ ಸಿಕ್ಕಾಪಟ್ಟೆ ಹಾನಿ ಮಾಡಿಕೊಂಡಿವೆ. ಇರಾನ್ ಏನೋ ನಷ್ಟ ಮಾಡಿಕೊಂಡಿರುವುದು ಹಾಗೂ ಆರ್ಥಿಕತೆಯೇ ಬುಡಮೇಲಾಗಿ ಸಂಕಷ್ಟಕ್ಕೆ ಸಿಲುಕಿರುವುದು ಜಗಜ್ಜಾಹೀರು. ಆದರೆ, ದೊಡ್ಡಣ್ಣ ಎನಿಸಿಕೊಂಡಿರುವ ಹಾಗೂ ಜಾಗತಿಕ ಶಾಂತಿಯ ಹೆಸರಲ್ಲಿ ಕ್ಷಿಪಣಿಗಳನ್ನು ಉಡಾಯಿಸಿ ಅಶಾಂತಿ ಸೃಷ್ಟಿಸುತ್ತಿರುವ ಅಮೆರಿಕವೂ ಈ ಭಾರೀ ದೊಡ್ಡ ಪ್ರಮಾಣದಲ್ಲಿ ನಷ್ಟ ಎದುರಿಸಿದೆ ಎಂಬುದಾಗಿ ವರದಿಯಾಗಿದೆ.
ಇರಾನ್ ಯುದ್ಧ ನಷ್ಟದ ಲೆಕ್ಕದಲ್ಲಿ ಯಾವುದೇ ಅಂಕಿ ಅಂಶಗಳನ್ನು ಬಹಿರಂಗ ಮಾಡಿಲ್ಲವಾದರೂ ಅದಕ್ಕೆ ದೊಡ್ಡ ಪ್ರಮಾಣದ ಹಾನಿಯಾಗಿರುವುದಕ್ಕೆ ಸಮರ ಕಣದ ಚಿತ್ರಗಳೇ ಸಾಕ್ಷಿ. ಆದರೆ, ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಅಮರಿಕ ಮಧ್ಯ ಪ್ರಾಚ್ಯಕ್ಕೆ ಬಂದು ಸಮರ ಸಾರಿ ಭಾರೀ ಪ್ರಮಾಣದಲ್ಲಿ ನಷ್ಟ ಮಾಡಿಕೊಂಡಿರುವುದು ಈಗ ನಿಧಾನವಾಗಿ ಜಗತ್ತಿಗೆ ಗೊತ್ತಾಗುತ್ತಿದೆ. ಅಚ್ಚರಿ ಎಂದರೆ, ಸಾಮಾನ್ಯವಾಗಿ ಪಾರದರ್ಶಕತೆ ಹಾಗೂ ಪ್ರಜಾಪ್ರಭುತ್ವದ ಪಾಲನೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ ಈ ಬಾರಿ ತನಗೆ ಆಗಿರುವ ಹಾನಿಯ ಬಗ್ಗೆ ಸ್ಪಷ್ಟ ಮಾಹಿತಿ ಕೊಡುತ್ತಿಲ್ಲ. ತಡೆಯಲಾರದ ಏಟು ತಿಂದರೂ, ಆರ್ಥಿಕತೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಕಾರಣ ಎಲ್ಲ ನಷ್ಟವನ್ನು ಮರೆಮಾಚಿಕೊಂಡು ಸುಮ್ಮನಾಗಿದೆ.
ಹಾಗಾದರೆ ಇರಾನ್ನಿಂದ ಸುಮಾರು 12 ಸಾವಿರ ಕಿಲೋಮೀಟರ್ ದೂರ ಇರುವ ಅಮೆರಿಕ ಅಷ್ಟೊಂದು ಹಾನಿ ಮಾಡಿಕೊಂದ್ದು ಹೇಗೆ? ಇರಾನ್ ಬೃಹತ್ ಪ್ರಮಾಣದಲ್ಲಿ ಪೆಟ್ಟು ಕೊಟ್ಟಿದ್ದು ಹೇಗೆ ಎಂಬ ಕೌತುಕ ಸಹಜ.
ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಯುದ್ಧ ಸಾರಿದ್ದವು. ಇರಾನ್‌ನ ಸರ್ವೋಚ್ಛ ನಾಯಕ ಅಯಾತೊಲ್ಲಾ ಖಮೇನಿಯನ್ನು ಹತ್ಯೆಗೈಯುವ ಮೂಲಕ ಈ ಯುದ್ಧ ಆರಂಭವಾಗಿತ್ತು. ಇದಕ್ಕೆ ಪ್ರತಿಯಾಗಿ ರೊಚ್ಚಿಗೆದ್ದಿರುವ ಇರಾನ್, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಪ್ರಮುಖ ಸೇನಾ ನೆಲೆಗಳ ಮೇಲೆ ಭೀಕರ ಬಾಂಬ್ ದಾಳಿ ನಡೆಸುತ್ತಿದ್ದು, ಅಮೆರಿಕಕ್ಕೆ ಶತಕೋಟಿ ಡಾಲರ್‌ಗಳಷ್ಟು ನಷ್ಟ ಉಂಟಾಗಿದೆ ಎಂಬುದಾಗಿ ವರದಿಯಾಗಿದೆ.
ಅಮೆರಿಕದ ಸೇನಾ ನೆಲೆಗಳಿಗೆ ಆಗಿರುವ ಹಾನಿ ಎಷ್ಟು?
ಯುದ್ಧ ಆರಂಭವಾದಾಗಿನಿಂದ ಇರಾನ್, ಕೊಲ್ಲಿ ಪ್ರದೇಶದ ಕನಿಷ್ಠ 7 ದೇಶಗಳಲ್ಲಿರುವ ಅಮೆರಿಕದ ಪ್ರಮುಖ ಮಿಲಿಟರಿ ತಾಣಗಳ ಮೇಲೆ ಸರಣಿ ದಾಳಿ ನಡೆಸಿದೆ. ಈ ಮಾರಕ ದಾಳಿಗಳಲ್ಲಿ ಅಮೆರಿಕದ ಶಸ್ತ್ರಾಸ್ತ್ರ ಸಂಗ್ರಹಣಾ ಗೋದಾಮುಗಳು, ಕಾರ್ಯಾಚರಣೆ ನಿರ್ವಹಿಸುವ ಕಮಾಂಡ್ ಕೇಂದ್ರಗಳು, ವಿಮಾನ ಹ್ಯಾಂಗರ್‌ಗಳು ಮತ್ತು ಉಪಗ್ರಹ ಸಂವಹನ ವ್ಯವಸ್ಥೆಗಳು ಧ್ವಂಸವಾಗಿವೆ.
ಮಾರ್ಚ್ 1 ರಂದು ಕುವೈತ್ ಬಳಿ 3 'ಎಫ್-15ಇ' (F-15E) ಯುದ್ಧ ವಿಮಾನಗಳನ್ನು ಮತ್ತು ಮಾರ್ಚ್ 16ರಂದು ಅತ್ಯಾಧುನಿಕ 'ಎಫ್-35' (F-35 Stealth jet) ಜೆಟ್ ಅನ್ನು ಇರಾನ್ ಹೊಡೆದುರುಳಿಸಿದೆ. ಸೌದಿ ಅರೇಬಿಯಾದ ವಾಯುನೆಲೆಯಲ್ಲಿ 5 'ಕೆಸಿ-135' (KC-135) ವಿಮಾನಗಳು ಮತ್ತು ಒಂದು ಡಜನ್‌ಗೂ ಹೆಚ್ಚು 'MQ-9 ರೀಪರ್ ಡ್ರೋನ್'ಗಳನ್ನು ನಾಶಪಡಿಸಲಾಗಿದೆ.
ಕತಾರ್ ಮತ್ತು ಜೋರ್ಡಾನ್‌ನಲ್ಲಿರುವ ಅಮೆರಿಕ ನೆಲೆಗಳ ರಾಡಾರ್ ವ್ಯವಸ್ಥೆಗಳು ಹಾನಿಗೀಡಾಗಿವೆ. ಇರಾನ್, ಗಲ್ಫ್‌ನಲ್ಲಿನ ಅಮೆರಿಕದ ಅತಿದೊಡ್ಡ 'AN/FPS-132' ರಾಡಾರ್ ವ್ಯವಸ್ಥೆಯನ್ನು ಉಡೀಸ್ ಮಾಡಿರುವುದಾಗಿ ಹೇಳಿಕೊಂಡಿದೆ.
ಮಾರ್ಚ್ 12ರಂದು ಅಮೆರಿಕದ 'ಯುಎಸ್‌ಎಸ್ ಜೆರಾಲ್ಡ್ ಆರ್. ಫೋರ್ಡ್' ವಿಮಾನವಾಹಕ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದಕ್ಕೂ ಇರಾನ್ ದಾಳಿಯೇ ಕಾರಣ ಎನ್ನಲಾಗಿದೆ. ಸದ್ಯ ಆ ನೌಕೆ ಗ್ರೀಸ್‌ನಲ್ಲಿ ದುರಸ್ತಿಯಲ್ಲಿದೆ. ಅಚ್ಚರಿಯೆಂದರೆ, ಈ ದಾಳಿಗಳನ್ನು ನಡೆಸಲು ಇರಾನ್ ರಹಸ್ಯವಾಗಿ ಚೀನಾದ ಗೂಢಚಾರ ಉಪಗ್ರಹವನ್ನು ಬಳಸಿಕೊಂಡಿದೆ ಎಂದು ವರದಿಯಾಗಿದೆ.
ಟ್ರಂಪ್ ಆಡಳಿತದಲ್ಲಿ ಮಾಹಿತಿಯ ಕೊರತೆ
ಇರಾನ್ ದಾಳಿಯಿಂದಾಗಿರುವ ಈ ಅಗಾಧ ನಷ್ಟದ ಬಗ್ಗೆ ಅಮೆರಿಕದ ರಕ್ಷಣಾ ಇಲಾಖೆ (ಪೆಂಟಗನ್) ಅಥವಾ ಸೆಂಟ್ರಲ್ ಕಮಾಂಡ್ ಸಂಪೂರ್ಣ ವಿವರಗಳನ್ನು ಬಿಟ್ಟುಕೊಡುತ್ತಿಲ್ಲ. ನಷ್ಟ ಭರಿಸಲು ಪೆಂಟಗನ್ ದಾಖಲೆಯ ಬಜೆಟ್‌ಗೆ ಬೇಡಿಕೆ ಇಡುತ್ತಿದ್ದರೂ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಸ್ಪಷ್ಟನೆ ನೀಡುತ್ತಿಲ್ಲ. "ಹಲವು ವಾರಗಳಿಂದ ಕೇಳುತ್ತಿದ್ದರೂ ನಮಗೆ ಯಾವುದೇ ನಿರ್ದಿಷ್ಟ ಮಾಹಿತಿ ನೀಡುತ್ತಿಲ್ಲ" ಎಂದು ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಸಂಸದರೇ ಅಸಮಾಧಾನ ಹೊರಹಾಕಿದ್ದಾರೆ.
ಅಮೆರಿಕದ ಬೊಕ್ಕಸಕ್ಕೆ ಕನ್ನ: ಖರ್ಚಾಗುತ್ತಿರುವುದೆಷ್ಟು?
ನಂಬಲರ್ಹ ಮೂಲಗಳ ಪ್ರಕಾರ, ಈ ಅಪ್ರಚೋದಿತ ಯುದ್ಧದಿಂದಾಗಿ ಏಪ್ರಿಲ್ 22ರವರೆಗೆ ಅಮೆರಿಕಕ್ಕೆ ಬರೋಬ್ಬರಿ $70 ಬಿಲಿಯನ್ (ಸುಮಾರು 5.84 ಲಕ್ಷ ಕೋಟಿ ರೂಪಾಯಿ) ಖರ್ಚಾಗಿದೆ.
ಇನ್ನೊಂದು ವರದಿಗಳ ಪ್ರಕಾರ, ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕಕ್ಕೆ ಪ್ರತಿದಿನ ಸುಮಾರು $1.2 ಬಿಲಿಯನ್ (ಸುಮಾರು 10,020 ಕೋಟಿ ರೂಪಾಯಿ) ನಷ್ಟವಾಗುತ್ತಿದ್ದು, ಒಂದು ತಿಂಗಳ ಯುದ್ಧಕ್ಕೆ $36 ಬಿಲಿಯನ್ (ಸುಮಾರು 3 ಲಕ್ಷ ಕೋಟಿ ರೂಪಾಯಿ) ನಷ್ಟವಾಗುವ ಅಂದಾಜಿದೆ. ಯುದ್ಧ ಆರಂಭವಾದ ಕೇವಲ ಮೊದಲ 6 ದಿನಗಳಲ್ಲೇ ಪೆಂಟಗನ್ $11.3 ಬಿಲಿಯನ್ (ಸುಮಾರು 94,355 ಕೋಟಿ ರೂಪಾಯಿ) ಖರ್ಚು ಮಾಡಿತ್ತು.
ಟೊಮಾಹಕ್, ಪೇಟ್ರಿಯಾಟ್ ಕ್ಷಿಪಣಿಗಳು, THAAD ವ್ಯವಸ್ಥೆಗಳು ಮತ್ತು ಡ್ರೋನ್‌ಗಳ ಬಳಕೆಗಾಗಿ $20 ರಿಂದ $30 ಬಿಲಿಯನ್ (ಸುಮಾರು 1.67 ಲಕ್ಷ ಕೋಟಿ ರೂ. ನಿಂದ 2.5 ಲಕ್ಷ ಕೋಟಿ ರೂಪಾಯಿ) ವೆಚ್ಚವಾಗಿದೆ. ಹಾನಿಗೊಳಗಾದ ವ್ಯವಸ್ಥೆಗಳನ್ನು ಬದಲಾಯಿಸಲು ಪೆಂಟಗನ್ ಅಮೆರಿಕನ್ ಕಾಂಗ್ರೆಸ್‌ನಿಂದ ಹೆಚ್ಚುವರಿ $200 ಬಿಲಿಯನ್ (ಸುಮಾರು 16.7 ಲಕ್ಷ ಕೋಟಿ ರೂಪಾಯಿ) ಗೆ ಬೇಡಿಕೆ ಇಟ್ಟಿದೆ ಎಂಬ ಮಾಹಿತಿಯೂ ಇದೆ.
ಹೊರ್ಮುಜ್ ಜಲಸಂಧಿ ಬಂದ್ನಿಂದ ಸಮಸ್ಯೆ
ಈ ನೇರ ಯುದ್ಧದ ಜೊತೆಗೆ ಇರಾನ್ ಜಾಗತಿಕ ಆರ್ಥಿಕತೆಗೂ ಪೆಟ್ಟು ನೀಡಲು ಮುಂದಾಗಿದೆ. ಪ್ರಪಂಚದ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ 'ಹೊರ್ಮುಜ್ ಜಲಸಂಧಿ'ಯನ್ನು ಇರಾನ್ ಮುಚ್ಚಿದೆ. ಇದರಿಂದಾಗಿ ಜಾಗತಿಕವಾಗಿ ತೈಲ ಸಾಗಾಟದಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಇಂಧನ ಬೆಲೆಗಳು ಗಗನಕ್ಕೇರಿವೆ. ಕೇವಲ ಇಂಧನ ಬೆಲೆ ಏರಿಕೆಯಿಂದಲೇ ಅಮೆರಿಕದ ಆರ್ಥಿಕತೆಗೆ $5 ರಿಂದ $20 ಬಿಲಿಯನ್‌ವರೆಗೆ (ಸುಮಾರು 41,750 ಕೋಟಿ ರೂ. ನಿಂದ 1.67 ಲಕ್ಷ ಕೋಟಿ ರೂಪಾಯಿ) ಹೊಡೆತ ಬಿದ್ದಿದೆ.
ಒಟ್ಟಾರೆಯಾಗಿ, ಇರಾನ್ ವಿರುದ್ಧದ ಈ ಯುದ್ಧವು ಅಮೆರಿಕದ ಆರ್ಥಿಕತೆಯ ಮೇಲೆ ಹಿಂದೆಂದಿಗಿಂತಲೂ ಭಾರಿ ಪರಿಣಾಮ ಬೀರುತ್ತಿದ್ದು, ಯುದ್ಧ ಮುಂದುವರಿದರೆ ಇದು ಅಮೆರಿಕದ ಜಾಗತಿಕ ಪ್ರಾಬಲ್ಯಕ್ಕೇ ದೊಡ್ಡ ಸವಾಲಾಗುವ ಸಾಧ್ಯತೆಯಿದೆ.

