ಅಮೆಜಾನ್ ಕಂಪನಿಯು ತನ್ನ ಕಾರ್ಪೊರೇಟ್ ವಲಯದಲ್ಲಿ ಸಾವಿರಾರು ಉದ್ಯೋಗಗಳನ್ನು ಕಡಿತಗೊಳಿಸಲು ಸಿದ್ಧತೆ ನಡೆಸಿದೆ. ಮುಂದಿನ ವಾರದಿಂದಲೇ ಲೇ-ಆಫ್ ಪ್ರಕ್ರಿಯೆ ಆರಂಭವಾಗಲಿದೆ.
ಅಮೆಜಾನ್ ಕಂಪನಿಯು ತನ್ನ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವ ನಿರಂತರ ಪ್ರಯತ್ನದ ಭಾಗವಾಗಿ, ಮುಂದಿನ ವಾರದಿಂದಲೇ ಸಾವಿರಾರು ಕಾರ್ಪೊರೇಟ್ ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಈಗಾಗಲೇ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸುಮಾರು 14,000 ಹುದ್ದೆಗಳನ್ನು ಕಡಿತಗೊಳಿಸಿದ್ದ ಕಂಪನಿಯು, ಆಡಳಿತಾತ್ಮಕ ಹಂತಗಳನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶದಿಂದ 2026ರಲ್ಲಿ ಹೆಚ್ಚಿನ ಕಡಿತಗಳು ನಡೆಯಬಹುದು ಎಂದು ಈ ಹಿಂದೆಯೇ ಎಚ್ಚರಿಸಿತ್ತು.
ಪ್ರಸ್ತುತ ನಡೆಯಲಿರುವ ಈ ಉದ್ಯೋಗ ಕಡಿತವು ಅಮೆಜಾನ್‌ನ ಜಾಗತಿಕ ಕಾರ್ಪೊರೇಟ್ ವಲಯದ ಮೇಲೆ ನೇರ ಪರಿಣಾಮ ಬೀರಲಿದ್ದು, ಮ್ಯಾನೇಜರ್‌ಗಳಿಗೆ ಈ ಪ್ರಕ್ರಿಯೆಯನ್ನು ಹಂತ ಹಂತವಾಗಿ ಜಾರಿಗೊಳಿಸಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
3.5 ಲಕ್ಷ ಉದ್ಯೋಗಿಗಳ ವಜಾ?
ವಿಶ್ವಾದ್ಯಂತ ಸುಮಾರು 15.7 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಅಮೆಜಾನ್‌ನಲ್ಲಿ, ಹೆಚ್ಚಿನವರು ಗೋದಾಮುಗಳಲ್ಲಿ ಕೆಲಸ ಮಾಡುತ್ತಾರೆ. ಆದರೆ ಈ ಬಾರಿ ಕಂಪನಿಯು ತನ್ನ 3.5 ಲಕ್ಷ ಕಾರ್ಪೊರೇಟ್ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿದೆ. ಈಗಾಗಲೇ ಐರೋಪ್ಯ ರಾಷ್ಟ್ರವಾದ ಲಕ್ಸೆಂಬರ್ಗ್‌ನಲ್ಲಿ ತನ್ನ ಶೇ. 8.5 ರಷ್ಟು ಉದ್ಯೋಗಿಗಳನ್ನು ಕೈಬಿಟ್ಟಿರುವ ಕಂಪನಿಯು, ಕಳೆದ ಎರಡು ದಶಕಗಳಲ್ಲಿ ಅಲ್ಲಿನ ಅತಿದೊಡ್ಡ ಲೇ-ಆಫ್ ಪ್ರಕ್ರಿಯೆಗೆ ಸಾಕ್ಷಿಯಾಗಿದೆ. ಅಮೆರಿಕದ ವಾಷಿಂಗ್ಟನ್ ರಾಜ್ಯದ ಹೊಸ ನಿಯಮದಂತೆ (WARN Act), ಉದ್ಯೋಗಿಗಳನ್ನು ವಜಾಗೊಳಿಸುವ 90 ದಿನಗಳ ಮೊದಲು ಅಧಿಕಾರಿಗಳಿಗೆ ಮಾಹಿತಿ ನೀಡಬೇಕಿರುವ ಕಾರಣ, ಕಂಪನಿಯು ಈಗಾಗಲೇ ಈ ಕುರಿತು ಸರ್ಕಾರದ ಗಮನಕ್ಕೆ ತಂದಿದೆ.
ಕಂಪನಿಯ ಈ ಕಠಿಣ ನಿರ್ಧಾರದ ಹಿಂದೆ ಬೆಳೆಯುತ್ತಿರುವ ತಂತ್ರಜ್ಞಾನದ ಪ್ರಭಾವವೂ ದೊಡ್ಡದಿದೆ. ಸಿಇಒ ಆಂಡಿ ಜಸ್ಸಿ ಅವರು 2021 ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ವೆಚ್ಚ ಕಡಿತಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ 'ಜನರೇಟಿವ್ ಎಐ' (Generative AI) ತಂತ್ರಜ್ಞಾನದ ಬಳಕೆಯಿಂದಾಗಿ ಮುಂಬರುವ ವರ್ಷಗಳಲ್ಲಿ ಕಾರ್ಪೊರೇಟ್ ಕೆಲಸಗಳಿಗೆ ಹೆಚ್ಚಿನ ಮಾನವ ಸಂಪನ್ಮೂಲದ ಅವಶ್ಯಕತೆ ಇರುವುದಿಲ್ಲ ಎಂದು ಅವರು ಈ ಹಿಂದೆಯೇ ಸುಳಿವು ನೀಡಿದ್ದರು. ಈ ತಾಂತ್ರಿಕ ಬದಲಾವಣೆ ಮತ್ತು ಆರ್ಥಿಕ ಸುಧಾರಣೆಗಳ ಹಿನ್ನೆಲೆಯಲ್ಲಿ ಅಮೆಜಾನ್ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಾ ಸಾಗುತ್ತಿದೆ.


