
ಅಮೆಜಾನ್ ಕೂಡ ಲ್ಯಾಂಡಿಂಗ್‌ಗೆ ಯತ್ನಿಸುತ್ತಿದ್ದ ವೇಳೆ ವಿಮಾನದಲ್ಲಿ ಘಟನೆ ಸಂಭವಿಸಿದೆ.
ರನ್ ವೇಯಿಂದ ರಸ್ತೆಗೆ ಜಾರಿ ವಾಹನಗಳಿಗೆ ಡಿಕ್ಕಿ ಹೊಡೆದ ಕಾರ್ಗೋ ವಿಮಾನ: ಐವರು ಬಲಿ
ಡಿಕ್ಕಿ ಹೊಡೆದ ರಭಸಕ್ಕೆ ವಿಮಾನದ ಪೈಲಟ್ ಮತ್ತು ಸಹ ಪೈಲಟ್ ಕಾಕ್‌ಪಿಟ್‌ನಲ್ಲಿ ಸಿಲುಕಿಕೊಂಡಿದ್ದರು. ಇನ್ನು ಕೆಲವು ಮಂದಿ ವಾಹನಗಳಲ್ಲೂ ಸಿಲುಕಿಕೊಂಡಿದ್ದರು ಎನ್ನಲಾಗಿದೆ.
ಅಮೆರಿಕದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದೆ. ಲ್ಯಾಂಡಿಂಗ್ ವೇಳೆ ಅಮೆಜಾನ್ ಕಾರ್ಗೋ ವಿಮಾನ ರನ್‌ವೇಯಿಂದ ಜಾರಿ ಪಕ್ಕದ ರಸ್ತೆಯಲ್ಲಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ವಿಮಾನದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರೈಮ್ ಏರ್ ಫ್ಲೈಟ್ 7598 ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದ ಬೋಯಿಂಗ್ 767 ವಿಮಾನವು ಪ್ಯೂರ್ಟೊ ರಿಕೋದ ಸ್ಯಾನ್ ಜುವಾನ್‌ನಿಂದ ಮಿಯಾಮಿಗೆ ಬರುತ್ತಿತ್ತು. ಸ್ಥಳೀಯ ಕಾಲಮಾನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಲ್ಯಾಂಡಿಂಗ್ ವೇಳೆ ವಿಮಾನ ರನ್‌ವೇಯನ್ನು ದಾಟಿ ಪಕ್ಕದ ರಸ್ತೆಗೆ ನುಗ್ಗಿದೆ. ಈ ವೇಳೆ ಅಲ್ಲಿ ನಿಲುಗಡೆ ಮಾಡಲಾಗಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ವಿಮಾನ ವಾಹನಗಳಿಗೆ ಅಪ್ಪಳಿಸಿದ ತಕ್ಷಣ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಿಂದ ದಟ್ಟ ಹೊಗೆ ಆವರಿಸಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ವಾಹನಗಳಲ್ಲಿದ್ದವರಿಗೂ ಅಪಾಯ
ಅಪಘಾತದ ವೇಳೆ ವಿಮಾನದ ಪೈಲಟ್ ಮತ್ತು ಸಹ ಪೈಲಟ್ ಕಾಕ್‌ಪಿಟ್‌ನಲ್ಲಿ ಸಿಲುಕಿಕೊಂಡಿದ್ದರು. ಇನ್ನು ಕೆಲವು ಮಂದಿ ವಾಹನಗಳಲ್ಲೂ ಸಿಲುಕಿಕೊಂಡಿದ್ದರು. ವಾಹನದ ಕೆಳಗೆ ಸಿಲುಕಿದ್ದ ವ್ಯಕ್ತಿಯೊಬ್ಬರನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ.
ಮಿಯಾಮಿ-ಡೇಡ್ ಕೌಂಟಿ ಅಗ್ನಿಶಾಮಕ ಮುಖ್ಯಸ್ಥ ರೇ ಜದಾಲ್ಲಾ ಪ್ರಕಾರ, ವಿಮಾನವು ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಕೆಲವರು ಮೃತಪಟ್ಟಿದ್ದಾರೆ. ಐವರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ಮೂವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ
ಅಪಘಾತದ ಬಳಿಕ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಲ್ಲಾ ರನ್‌ವೇಗಳು ಮತ್ತು ಟ್ಯಾಕ್ಸಿವೇಗಳನ್ನು ಮುಚ್ಚಲಾಯಿತು. ಸುಮಾರು 60 ಅಗ್ನಿಶಾಮಕ ವಾಹನಗಳು ಹಾಗೂ 200ರ ಸಮೀಪದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಅಗ್ನಿಶಾಮಕ ಕಾರ್ಯಾಚರಣೆ ನಡೆಸಿದರು.
ಅಪಘಾತದಿಂದ ವಿಮಾನಗಳ ಸಂಚಾರಕ್ಕೂ ತಾತ್ಕಾಲಿಕವಾಗಿ ಅಡ್ಡಿಯಾಯಿತು. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ತಮ್ಮ ಏರ್‌ಲೈನ್‌ಗಳಿಂದ ವಿಮಾನದ ಸ್ಥಿತಿಯನ್ನು ಪರಿಶೀಲಿಸುವಂತೆ ಸೂಚಿಸಲಾಯಿತು.
ಅಪಘಾತದ ಕಾರಣ ಪತ್ತೆಗೆ ತನಿಖೆ
ವಿಮಾನ ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಮತ್ತು ನ್ಯಾಷನಲ್ ಟ್ರಾನ್ಸ್‌ಪೋರ್ಟೇಶನ್ ಸೇಫ್ಟಿ ಬೋರ್ಡ್ (NTSB) ತನಿಖೆ ಆರಂಭಿಸಿವೆ. ಎನ್‌ಟಿಎಸ್‌ಬಿ ತನಿಖಾ ತಂಡವನ್ನು ಸ್ಥಳಕ್ಕೆ ಕಳುಹಿಸಿದೆ.

