9/11 ದಾಳಿಗೆ 25 ವರ್ಷ: ಭಯೋತ್ಪಾದನೆ ವಿರುದ್ಧ ಜಾಗತಿಕ ಹೋರಾಟಕ್ಕೆ ಯುಎನ್​ಎಸ್​ಸಿ ಕರೆ
x

ಭಯೋತ್ಪಾದನೆಯನ್ನು ಯಾವುದೇ ಧರ್ಮ, ರಾಷ್ಟ್ರೀಯತೆ, ನಾಗರಿಕತೆ ಅಥವಾ ನಿರ್ದಿಷ್ಟ ಸಮುದಾಯದೊಂದಿಗೆ ಗುರುತಿಸಬಾರದು ಎಂದು UNSC ಒತ್ತಿಹೇಳಿದೆ.

9/11 ದಾಳಿಗೆ 25 ವರ್ಷ: ಭಯೋತ್ಪಾದನೆ ವಿರುದ್ಧ ಜಾಗತಿಕ ಹೋರಾಟಕ್ಕೆ ಯುಎನ್​ಎಸ್​ಸಿ ಕರೆ

ಸಭೆಯಲ್ಲಿ ಪಾಕಿಸ್ತಾನದ ರಾಯಭಾರಿ ಅಸಿಮ್ ಇಫ್ತಿಖಾರ್ ಅಹ್ಮದ್ ಕೂಡ ಮಾತನಾಡಿ, ಅಫ್ಘಾನಿಸ್ತಾನದಿಂದ ಉಂಟಾಗುತ್ತಿರುವ ಭಯೋತ್ಪಾದನೆ ತಮ್ಮ ದೇಶಕ್ಕೆ ದೊಡ್ಡ ಆತಂಕವಾಗಿದೆ ಎಂದು ಹೇಳಿದರು.


Click the Play button to hear this message in audio format

ಅಮೆರಿಕದ ನ್ಯೂಯಾರ್ಕ್‌ನ ವರ್ಲ್ಡ್ ಟ್ರೇಡ್ ಸೆಂಟರ್‌ನ ಅವಳಿ ಗೋಪುರಗಳ ಮೇಲೆ ಅಲ್‌ಖೈದಾ ಉಗ್ರರು ನಡೆಸಿದ 9/11 ಭಯೋತ್ಪಾದಕ ದಾಳಿಗೆ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ವಿಶೇಷ ಸಭೆ ನಡೆಸಿತು. 2001ರ ಸೆಪ್ಟೆಂಬರ್‌ 11ರಂದು ಅಪಹರಿಸಲಾದ ವಿಮಾನಗಳನ್ನು ಅವಳಿ ಗೋಪುರಗಳಿಗೆ ಅಪ್ಪಳಿಸಿ ನಡೆಸಿದ ದಾಳಿಯಲ್ಲಿ ಭಾರಿ ಪ್ರಮಾಣದ ಸಾವು–ನೋವು ಸಂಭವಿಸಿತ್ತು.

ದಾಳಿಯ 25ನೇ ವರ್ಷಾಚರಣೆಯ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟವನ್ನು ಮುಂದುವರಿಸುವ ಅಗತ್ಯದ ಕುರಿತು ಸದಸ್ಯ ರಾಷ್ಟ್ರಗಳು ಚರ್ಚಿಸಿದವು.

‘ಬಿನ್ ಲಾಡೆನ್‌ಗಾಗಿ ಬೇಟೆಯಾಡಿದೆವು’

ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ಮೈಕ್‌ ವಾಲ್ಟ್ಜ್‌, 9/11 ದಾಳಿಯ ಪ್ರಮುಖ ಸಂಚುಕೋರ ಹಾಗೂ ಅಲ್‌ಖೈದಾ ನಾಯಕ ಒಸಾಮಾ ಬಿನ್‌ ಲಾಡೆನ್‌ ವಿರುದ್ಧ ಅಮೆರಿಕ ಕೈಗೊಂಡ ಕಾರ್ಯಾಚರಣೆಯನ್ನು ಉಲ್ಲೇಖಿಸಿದರು.

“ಒಟ್ಟಾಗಿ ನಾವು ಬಿನ್‌ ಲಾಡೆನ್‌ಗಾಗಿ ಬೇಟೆಯಾಡಿದೆವು” ಎಂದು ಅವರು ಹೇಳಿದರು. ಪಾಕಿಸ್ತಾನದ ಅಬ್ಬೊಟ್ಟಾಬಾದ್‌ನಲ್ಲಿ ಅಡಗಿದ್ದ ಬಿನ್‌ ಲಾಡೆನ್‌ನನ್ನು 2011ರ ಮೇ ತಿಂಗಳಲ್ಲಿ ಅಮೆರಿಕದ ನೌಕಾಪಡೆಯ ಸೀಲ್‌ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿತ್ತು.

ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆಯ ಖಲೀಫತ್‌ ಅನ್ನು ಮೈತ್ರಿಕೂಟ ನಾಶಪಡಿಸಿದೆ. ಅಬು ಬಕರ್‌ ಅಲ್‌–ಬಗ್ದಾದಿ ಮತ್ತು ಅಲ್‌–ಜವಾಹಿರಿ ಸೇರಿದಂತೆ ಪ್ರಮುಖ ಉಗ್ರ ನಾಯಕರನ್ನು ಹತ್ಯೆ ಮಾಡಲಾಗಿದೆ ಎಂದು ವಾಲ್ಟ್ಜ್‌ ಹೇಳಿದರು. ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟದಲ್ಲಿ ಹಲವು ದೇಶಗಳು ಭಾರಿ ಬೆಲೆ ತೆತ್ತಿವೆ ಎಂದೂ ಅವರು ಸ್ಮರಿಸಿದರು.

9/11 ದಾಳಿಯನ್ನು ತೀವ್ರವಾಗಿ ಖಂಡಿಸಿದ UNSC

ನ್ಯೂಯಾರ್ಕ್‌, ವರ್ಜೀನಿಯಾದ ಆರ್ಲಿಂಗ್ಟನ್‌ ಮತ್ತು ಪೆನ್ಸಿಲ್ವೇನಿಯಾದಲ್ಲಿ ನಡೆದ 9/11 ಭಯೋತ್ಪಾದಕ ದಾಳಿಯನ್ನು ಭದ್ರತಾ ಮಂಡಳಿ ತೀವ್ರವಾಗಿ ಖಂಡಿಸಿತು.

ಕಳೆದ ಐದು ವರ್ಷಗಳಲ್ಲಿ ಭಯೋತ್ಪಾದನೆ ಕುರಿತು ಯುಎನ್‌ಎಸ್‌ಸಿ ಅಂಗೀಕರಿಸಿದ ಮೊದಲ ಅಧ್ಯಕ್ಷೀಯ ಹೇಳಿಕೆ ಇದಾಗಿದೆ ಎಂದು ತಿಳಿಸಲಾಗಿದೆ. ಯಾವುದೇ ಉದ್ದೇಶ, ಸ್ಥಳ ಅಥವಾ ಸಂಘಟನೆಯ ಹೆಸರಿನಲ್ಲಿ ಭಯೋತ್ಪಾದನೆಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿತು.

ಧರ್ಮ, ರಾಷ್ಟ್ರೀಯತೆಯೊಂದಿಗೆ ಭಯೋತ್ಪಾದನೆ ಬೆಸೆಯಬಾರದು

ಭಯೋತ್ಪಾದನೆಯನ್ನು ಯಾವುದೇ ಧರ್ಮ, ರಾಷ್ಟ್ರೀಯತೆ, ನಾಗರಿಕತೆ ಅಥವಾ ನಿರ್ದಿಷ್ಟ ಸಮುದಾಯದೊಂದಿಗೆ ಗುರುತಿಸಬಾರದು ಎಂದು ಯುಎನ್‌ಎಸ್‌ಸಿ ಒತ್ತಿಹೇಳಿತು.

ಅಂತರರಾಷ್ಟ್ರೀಯ ಭಯೋತ್ಪಾದನೆ ವಿಶ್ವಸಂಸ್ಥೆಯ ಘೋಷಣೆಯ ಉದ್ದೇಶಗಳು ಮತ್ತು ತತ್ವಗಳಿಗೆ ವಿರುದ್ಧವಾಗಿದೆ ಎಂದು ಮಂಡಳಿ ಹೇಳಿತು. ಭಯೋತ್ಪಾದನೆಯ ಎಲ್ಲ ರೂಪಗಳ ವಿರುದ್ಧ ಅಂತರರಾಷ್ಟ್ರೀಯ ಸಮುದಾಯ ಒಗ್ಗಟ್ಟಿನಿಂದ ಹೋರಾಡುವ ಅಗತ್ಯವಿದೆ ಎಂದು ತಿಳಿಸಿತು.

ಅಫ್ಘಾನಿಸ್ತಾನದಿಂದ ಭಯೋತ್ಪಾದನೆ ಆತಂಕ: ಪಾಕಿಸ್ತಾನ

ಸಭೆಯಲ್ಲಿ ಪಾಕಿಸ್ತಾನದ ರಾಯಭಾರಿ ಅಸಿಮ್‌ ಇಫ್ತಿಖಾರ್‌ ಅಹ್ಮದ್‌ ಕೂಡ ಮಾತನಾಡಿದರು. ಅಫ್ಘಾನಿಸ್ತಾನದಿಂದ ಹರಡುತ್ತಿರುವ ಭಯೋತ್ಪಾದನೆ ಪಾಕಿಸ್ತಾನಕ್ಕೆ ದೊಡ್ಡ ಆತಂಕವಾಗಿದೆ ಎಂದು ಅವರು ಹೇಳಿದರು.

ಕಳೆದ ಮೂರು ವರ್ಷಗಳಲ್ಲಿ ಅಫ್ಘಾನಿಸ್ತಾನದಿಂದ ಉಂಟಾದ ಭಯೋತ್ಪಾದನೆಯಲ್ಲಿ 4,700ಕ್ಕೂ ಹೆಚ್ಚು ಪಾಕಿಸ್ತಾನಿಗಳು ಮೃತಪಟ್ಟಿದ್ದಾರೆ ಎಂದು ಅಹ್ಮದ್‌ ತಿಳಿಸಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಸಹಕಾರದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

Read More
Next Story