
ಪಶ್ಚಿಮ ಕೊಲಂಬಿಯಾದಲ್ಲಿ ಸಂಭವಿಸಿದ 7.4 ತೀವ್ರತೆಯ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 132ಕ್ಕೆ ಏರಿಕೆಯಾಗಿದ್ದು, 570ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; 132 ಮಂದಿ ಸಾವು, 570ಕ್ಕೂ ಹೆಚ್ಚು ಗಾಯ
ಕೊಲಂಬಿಯಾದ ಭೂವೈಜ್ಞಾನಿಕ ಸೇವೆಯ ಪ್ರಕಾರ, ಸ್ಥಳೀಯ ಕಾಲಮಾನ ಸೋಮವಾರ ಬೆಳಗ್ಗೆ 7.34ಕ್ಕೆ ಭೂಕಂಪ ಸಂಭವಿಸಿದೆ. ಚೋಕೋ ಪ್ರಾಂತ್ಯದ ಸ್ಯಾನ್ ಜೋಸ್ ಡೆಲ್ ಪಾಲ್ಮಾರ್ ಸಮೀಪ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ.
ಕೊಲಂಬಿಯಾದ ಪಶ್ಚಿಮ ಭಾಗದಲ್ಲಿ ಸೋಮವಾರ ಸಂಭವಿಸಿದ 7.4 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 132ಕ್ಕೆ ಏರಿಕೆಯಾಗಿದೆ. 570ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ. ಪರಿಣಾಮ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿವೆ.
ಕೊಲಂಬಿಯಾ ಸರ್ಕಾರದ ಇತ್ತೀಚಿನ ಮಾಹಿತಿ ಪ್ರಕಾರ, ಭೂಕಂಪದಿಂದ ಸುಮಾರು 1,575 ಮನೆಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ. ಮೂಲಸೌಕರ್ಯಕ್ಕೂ ಭಾರೀ ಹಾನಿಯಾಗಿದ್ದು, ಆರು ವಿಮಾನ ನಿಲ್ದಾಣಗಳು ಹಾನಿಗೊಳಗಾಗಿವೆ. ಹೀಗಾಗಿ ಅಲ್ಲಿನ ವಾಣಿಜ್ಯ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
96 ಕಿ.ಮೀ ಆಳದಲ್ಲಿ ಭೂಕಂಪನ
ಕೊಲಂಬಿಯಾದ ಭೂವೈಜ್ಞಾನಿಕ ಸೇವೆಯ ಪ್ರಕಾರ, ಸ್ಥಳೀಯ ಕಾಲಮಾನ ಸೋಮವಾರ ಬೆಳಗ್ಗೆ 7.34ಕ್ಕೆ ಭೂಕಂಪ ಸಂಭವಿಸಿದೆ. ಚೋಕೋ ಪ್ರಾಂತ್ಯದ ಸ್ಯಾನ್ ಜೋಸ್ ಡೆಲ್ ಪಾಲ್ಮಾರ್ ಸಮೀಪ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದ್ದು, ಭೂಮಿಯ 96 ಕಿ.ಮೀ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪದ ತೀವ್ರತೆಯಿಂದ ಕೊಲಂಬಿಯಾದ ಹಲವು ಪ್ರದೇಶಗಳ ಜತೆಗೆ ನೆರೆಯ ಈಕ್ವೆಡಾರ್‌ನಲ್ಲೂ ಪರಿಣಾಮ ಉಂಟಾಗಿದೆ. ಹಾನಿಗೊಳಗಾದ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಸರ್ಕಾರ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಸ್ಥಳೀಯ ಮೇಯರ್‌ಗಳು ಹಾಗೂ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ.
ರಾಷ್ಟ್ರೀಯ ವಿಪತ್ತು ಘೋಷಿಸಿದ ಕೊಲಂಬಿಯಾ
ಭೂಕಂಪದಿಂದ ಉಂಟಾದ ಭಾರೀ ಹಾನಿಯನ್ನು ಎದುರಿಸಲು ಕೊಲಂಬಿಯಾ ಸರ್ಕಾರ ರಾಷ್ಟ್ರೀಯ ವಿಪತ್ತು ಪರಿಸ್ಥಿತಿಯನ್ನು ಘೋಷಿಸಿದೆ. ತುರ್ತು ಪರಿಹಾರ, ರಕ್ಷಣಾ ಕಾರ್ಯಾಚರಣೆ ಹಾಗೂ ಹಾನಿಯ ಮೌಲ್ಯಮಾಪನಕ್ಕೆ ಆದ್ಯತೆ ನೀಡಲಾಗಿದೆ. ಬಾಧಿತ ಪ್ರದೇಶಗಳಲ್ಲಿ ಸಿಲುಕಿರುವವರನ್ನು ಪತ್ತೆಹಚ್ಚಲು ರಕ್ಷಣಾ ಸಿಬ್ಬಂದಿ ಅವಶೇಷಗಳ ನಡುವೆ ಶೋಧ ನಡೆಸುತ್ತಿದ್ದಾರೆ. ತುರ್ತು ಅಗತ್ಯವಿರುವ ಪ್ರದೇಶಗಳನ್ನು ಗುರುತಿಸಿ ಪರಿಹಾರ ಕಾರ್ಯಗಳನ್ನು ವೇಗಗೊಳಿಸಲಾಗುತ್ತಿದೆ.
ಕೊಲಂಬಿಯಾಗೆ ವಿಶ್ವ ನಾಯಕರ ಸಾಂತ್ವನ
ಭೂಕಂಪ ದುರಂತದ ಹಿನ್ನೆಲೆಯಲ್ಲಿ ವಿಶ್ವದ ಹಲವು ರಾಷ್ಟ್ರಗಳ ನಾಯಕರು ಕೊಲಂಬಿಯಾ ಜನತೆಗೆ ಸಾಂತ್ವನ ಹಾಗೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಭೂಕಂಪದಿಂದ ಮೃತಪಟ್ಟವರ ಕುಟುಂಬಗಳು, ಗಾಯಾಳುಗಳು ಮತ್ತು ರಕ್ಷಣಾ ಕಾರ್ಯಕರ್ತರೊಂದಿಗೆ ಫ್ರಾನ್ಸ್ ನಿಂತಿದೆ ಎಂದು ಹೇಳಿದ್ದಾರೆ. ಈ ಸಂಕಷ್ಟದ ಸಂದರ್ಭದಲ್ಲಿ ಕೊಲಂಬಿಯಾ ಫ್ರಾನ್ಸ್‌ನ ಸ್ನೇಹ ಮತ್ತು ಬೆಂಬಲವನ್ನು ನಂಬಬಹುದು ಎಂದು ಅವರು ತಿಳಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ಸಂತಾಪ ಸೂಚಿಸಿದ್ದು, ಅವಶೇಷಗಳಡಿ ಜನರು ಸಿಲುಕಿರುವ ವರದಿಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ದುರಂತದಿಂದ ಸಂತ್ರಸ್ತರಾದವರಿಗೆ ವಿಶ್ವದ ಎಲ್ಲರೂ ಸಾಧ್ಯವಾದಷ್ಟು ನೆರವು ನೀಡಬೇಕು ಎಂದು ಕರೆ ನೀಡಿದ್ದಾರೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಕೂಡ ಕೊಲಂಬಿಯಾ ಜನತೆ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವವರಿಗೆ ಇಟಲಿಯ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.
47 ರಕ್ಷಣಾ ಸಿಬ್ಬಂದಿ, ವಿಶೇಷ ಶ್ವಾನಗಳೊಂದಿಗೆ ನೆರವಿಗೆ ಈಕ್ವೆಡಾರ್
ನೆರೆಯ ಈಕ್ವೆಡಾರ್ ಕೂಡ ಕೊಲಂಬಿಯಾಗೆ ನೆರವು ನೀಡಲು ಮುಂದಾಗಿದೆ. ಈಕ್ವೆಡಾರ್ ಅಧ್ಯಕ್ಷ ಡೇನಿಯಲ್ ನೊಬೊವಾ ಅಜಿನ್ ಅವರು 47 ರಕ್ಷಣಾ ಸಿಬ್ಬಂದಿ, ವಿಶೇಷ ತರಬೇತಿ ಪಡೆದ ಶ್ವಾನಗಳು ಹಾಗೂ ಅಗತ್ಯ ಉಪಕರಣಗಳನ್ನು ಒಳಗೊಂಡ USAR ತಂಡವನ್ನು ಕಳುಹಿಸಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಈ ತಂಡವು ಏಳು ದಿನಗಳವರೆಗೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಕೊಲಂಬಿಯಾ ಸರ್ಕಾರ ಅಗತ್ಯವಿದೆ ಎಂದು ತಿಳಿಸಿದ ಕೂಡಲೇ ತಂಡವನ್ನು ನಿಯೋಜಿಸಲು ಸಿದ್ಧವಿದೆ ಎಂದು ಅವರು ಹೇಳಿದ್ದಾರೆ.
ಅಮೆರಿಕದಿಂದ 15.5 ಮಿಲಿಯನ್ ಡಾಲರ್ ನೆರವು
ಅಮೆರಿಕ ಕೂಡ ಕೊಲಂಬಿಯಾಗೆ ತುರ್ತು ನೆರವು ಘೋಷಿಸಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಟ್ರಂಪ್ ಆಡಳಿತವು ಭೂಕಂಪದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಕೊಲಂಬಿಯಾ ಸರ್ಕಾರಕ್ಕೆ ಅಗತ್ಯ ನೆರವು ನೀಡಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ. ತುರ್ತು ಆಶ್ರಯ, ಆಹಾರ, ರಕ್ಷಣೆ ಹಾಗೂ ಭೂಕಂಪದಿಂದ ಉಂಟಾದ ಹಾನಿಯ ಮೌಲ್ಯಮಾಪನಕ್ಕಾಗಿ ಅಮೆರಿಕ 15.5 ಮಿಲಿಯನ್ ಡಾಲರ್ ಹಣವನ್ನು ಮೀಸಲಿಟ್ಟಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.

