ಅಲಿ ಖಮೇನಿ ಹತ್ಯೆಯಾಗಿ 7 ವಾರ ಕಳೆದರೂ ಅಂತ್ಯಕ್ರಿಯೆ ನಡೆದಿಲ್ಲ; ಕಾರಣವೇನು?
x
ಇರಾನ್ ಸುಪ್ರಿಂ ಲೀಡರ್ ಆಯತೊಲ್ಲಾ ಖಮೇನಿ ( ಸಂಗ್ರಹ ಚಿತ್ರ)

ಅಲಿ ಖಮೇನಿ ಹತ್ಯೆಯಾಗಿ 7 ವಾರ ಕಳೆದರೂ ಅಂತ್ಯಕ್ರಿಯೆ ನಡೆದಿಲ್ಲ; ಕಾರಣವೇನು?

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ 86 ವರ್ಷದ ಅಲಿ ಖಮೇನಿ ಹತ್ಯೆಗೀಡಾಗಿದ್ದರು. ಅಲ್ಲಿಂದ ಅವರ ಕಳೇಬರವನ್ನು ಕಾಪಾಡಿಕೊಂಡು ಬರಲಾಗುತ್ತಿದೆ.


Click the Play button to hear this message in audio format

ಇರಾನ್‌ನ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿ ಏಳು ವಾರಗಳೇ ಕಳೆದಿದ್ದರೂ, ಈವರೆಗೂ ಅವರ ಅಂತ್ಯಕ್ರಿಯೆ ನಡೆದಿಲ್ಲ. ಇದು ಈಗ ಜಾಗತಿಕವಾಗಿ ದೊಡ್ಡ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.

ಇಸ್ಲಾಮಿಕ್ ಸಂಪ್ರದಾಯದಂತೆ ಮೃತದೇಹವನ್ನು 24 ಗಂಟೆಯೊಳಗೆ ಮಣ್ಣು ಮಾಡಬೇಕಿದ್ದರೂ, ಇರಾನ್ ಸರ್ಕಾರವು ಭದ್ರತಾ ಆತಂಕಗಳು, ಯುದ್ಧದ ಪರಿಸ್ಥಿತಿ ಮತ್ತು ಆಂತರಿಕ ದಂಗೆಯ ಭೀತಿಯಿಂದಾಗಿ ಸರ್ಕಾರಿ ಗೌರವಗಳೊಂದಿಗೆ ನಡೆಯಬೇಕಿದ್ದ ಅಂತ್ಯಕ್ರಿಯೆಯನ್ನು ಮುಂದೂಡುತ್ತಲೇ ಬರುತ್ತಿದೆ.

ಯಾವಾಗ ನಡೆದಿತ್ತು ಹತ್ಯೆ?

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ 86 ವರ್ಷದ ಅಲಿ ಖಮೇನಿ ಹತ್ಯೆಗೀಡಾಗಿದ್ದರು. ಅವರ ಸಾವಿನ ನಂತರ ಮಾರ್ಚ್ 4 ರಿಂದ ಮೂರು ದಿನಗಳ ಕಾಲ ಟೆಹ್ರಾನ್ ಮತ್ತು ಮಶಾಡ್‌ನಲ್ಲಿ ಬೃಹತ್ ಮಟ್ಟದ ಸರ್ಕಾರಿ ಅಂತ್ಯಕ್ರಿಯೆ ನಡೆಸಲು ಇರಾನ್ ನಿರ್ಧರಿಸಿತ್ತು. ಆದರೆ, ಅಮೆರಿಕ-ಇಸ್ರೇಲ್ ಪಡೆಗಳು ಇರಾನ್‌ನಾದ್ಯಂತ ತಮ್ಮ ವೈಮಾನಿಕ ದಾಳಿಯನ್ನು ತೀವ್ರಗೊಳಿಸಿದ್ದರಿಂದ ಕೊನೆಯ ಕ್ಷಣದಲ್ಲಿ ಭದ್ರತಾ ಕಾರಣಗಳಿಗಾಗಿ ಅಂತ್ಯಕ್ರಿಯೆಯನ್ನು ದಿಢೀರ್ ಮುಂದೂಡಲಾಗಿತ್ತು.

ಅಂತ್ಯಕ್ರಿಯೆ ವಿಳಂಬಕ್ಕೆ ಪ್ರಮುಖ ಕಾರಣಗಳೇನು?

ಹತ್ಯೆಯಾದ ನಾಯಕನ ಅಂತಿಮ ದರ್ಶನ ಪಡೆಯಲು ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದೆ. ಇಷ್ಟೊಂದು ಬೃಹತ್ ಜನಸ್ತೋಮ ಸೇರುವ ಜಾಗವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಮತ್ತು ಅಮೆರಿಕ ಪಡೆಗಳು ಮತ್ತೊಮ್ಮೆ ವೈಮಾನಿಕ ದಾಳಿ ನಡೆಸಬಹುದು ಎಂಬ ಭೀತಿಯಿಂದ ಅಂತ್ಯಕ್ರಿಯೆ ವಿಳಂಬವಾಗುತ್ತಿದೆ.

ಅಂತ್ಯಕ್ರಿಯೆಯ ನೆಪದಲ್ಲಿ ಸೇರುವ ದೊಡ್ಡ ಗುಂಪು ಸರ್ಕಾರಿ ವಿರೋಧಿ ಪ್ರತಿಭಟನೆಗಳಾಗಿ (ದಂಗೆ) ಬದಲಾಗಬಹುದು ಎಂಬ ಆತಂಕವೂ ಇರಾನ್ ಸರ್ಕಾರಕ್ಕಿದೆ. ಇದೇ ಜನವರಿಯಲ್ಲಿ ನಡೆದ ಪ್ರತಿಭಟನೆಗಳ ಹತ್ತಿಕ್ಕುವಿಕೆಯ ವೇಳೆ ಅನೇಕರು ಬಲಿಯಾಗಿದ್ದರು. ಹೀಗಾಗಿ ದೊಡ್ಡ ಮಟ್ಟದ ಜನಸಮೂಹವನ್ನು ನಿಯಂತ್ರಿಸುವುದು ಕಷ್ಟ ಎಂಬುದು ಆಡಳಿತದ ಲೆಕ್ಕಾಚಾರ.

ಫೌಂಡೇಶನ್ ಫಾರ್ ಡಿಫೆನ್ಸ್ ಆಫ್ ಡೆಮಾಕ್ರಸೀಸ್ (FDD) ನ ವಿಶ್ಲೇಷಕರ ಪ್ರಕಾರ, "ಹೊಸ ಸುಪ್ರೀಂ ಲೀಡರ್ ಆಗಿರುವ ಮೊಜ್ತಬಾ ಖಮೇನಿಗೆ ತನ್ನ ತಂದೆಯ ಮೃತದೇಹವನ್ನು ಸಾರ್ವಜನಿಕವಾಗಿ ಹೂಳಲು ಆತ್ಮವಿಶ್ವಾಸವಿಲ್ಲ. ಪ್ರಸ್ತುತ ಇರಾನ್ ಆಡಳಿತವು ತುಂಬಾ ದುರ್ಬಲಗೊಂಡಿದ್ದು, ಭಯದ ನೆರಳಿನಲ್ಲಿದೆ" ಎಂದು ಹೇಳಿದ್ದಾರೆ.

ಮಶಾಡ್‌ ನಗರದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ

ಸದ್ಯದ ಮಾಹಿತಿಯ ಪ್ರಕಾರ, ಖಮೇನಿ ಅವರ ಹುಟ್ಟೂರಾದ ಮತ್ತು ಈಶಾನ್ಯ ಇರಾನ್‌ನಲ್ಲಿರುವ ಪವಿತ್ರ ನಗರ 'ಮಶಾಡ್' (Mashhad) ಅನ್ನು ಸಂಭಾವ್ಯ ಅಂತ್ಯಕ್ರಿಯೆಯ ಸ್ಥಳವಾಗಿ ಪರಿಗಣಿಸಲಾಗುತ್ತಿದೆ. ಅಲ್ಲಿರುವ ಪವಿತ್ರ 'ಇಮಾಮ್ ರೆಜಾ' ಪುಣ್ಯಕ್ಷೇತ್ರದ ಬಳಿ, ಬಿಗಿ ಭದ್ರತೆಯಲ್ಲಿ ಮೃತದೇಹವನ್ನು ಮಣ್ಣು ಮಾಡುವ ಬಗ್ಗೆ ಇರಾನ್ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ ಎನ್ನಲಾಗಿದೆ.

ಏಪ್ರಿಲ್ 8ರಂದು ಅಮೆರಿಕ ಮತ್ತು ಇರಾನ್ ನಡುವೆ ಸಹಿ ಹಾಕಲಾಗಿದ್ದ 'ತಾತ್ಕಾಲಿಕ ಕದನ ವಿರಾಮ' (Truce) ಒಪ್ಪಂದವು ಏಪ್ರಿಲ್ 22ರಂದು ಕೊನೆಗೊಳ್ಳಲಿದೆ. ಈ ಒಪ್ಪಂದದ ಅನಿಶ್ಚಿತತೆಯ ನಡುವೆಯೇ, ಅಲಿ ಖಮೇನಿ ಅವರ ಅಂತ್ಯಕ್ರಿಯೆ ಯಾವಾಗ ನಡೆಯಲಿದೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

Read More
Next Story