
ಸಾಂದರ್ಭಿಕ ಚಿತ್ರ
ಹೊರ್ಮುಜ್ ಜಲಸಂಧಿ ದಾಟಿದ ಭಾರತದ 10 ಹಡಗುಗಳು: ವಿದೇಶಾಂಗ ಸಚಿವಾಲಯ
ಇತ್ತೀಚೆಗಷ್ಟೇ ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ಧ್ವಜ ಹೊಂದಿದ್ದ ತೈಲ ಟ್ಯಾಂಕರ್ ಸೇರಿದಂತೆ ಎರಡು ವಾಣಿಜ್ಯ ಹಡಗುಗಳ ಮೇಲೆ ಇರಾನ್ ನೌಕಾಪಡೆ ಗುಂಡಿನ ದಾಳಿ ನಡೆಸಿತ್ತು.
ಮಧ್ಯಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆ ಮತ್ತು ಇರಾನ್ ವಿಧಿಸಿರುವ ನೌಕಾ ನಿರ್ಬಂಧಗಳ ನಡುವೆಯೂ, ಭಾರತದ 10 ವಾಣಿಜ್ಯ ಹಡಗುಗಳು ಅತ್ಯಂತ ಆಯಕಟ್ಟಿನ 'ಹೊರ್ಮುಜ್ ಜಲಸಂಧಿ'ಯನ್ನು (Strait of Hormuz) ಸುರಕ್ಷಿತವಾಗಿ ದಾಟಿವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸೋಮವಾರ (ಏ.20) ಸ್ಪಷ್ಟಪಡಿಸಿದೆ.
ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ನಮ್ಮ ಹಡಗುಗಳು ಸುರಕ್ಷಿತವಾಗಿ ಹೊರಬರಲು ಇರಾನ್ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಇರಾನ್ ರಾಯಭಾರಿ ಹಾಗೂ ವಿದೇಶಾಂಗ ಕಾರ್ಯದರ್ಶಿಯೊಂದಿಗೆ ಸಭೆ ನಡೆಸಲಾಗಿದ್ದು, ಈ ವಿಷಯವನ್ನು ತಮ್ಮ ದೇಶದ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಇರಾನ್ ರಾಯಭಾರಿ ಭರವಸೆ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.
ಹಡಗುಗಳ ಮೇಲಿನ ದಾಳಿಗೆ ಖಂಡನೆ
ಇತ್ತೀಚೆಗಷ್ಟೇ ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ಧ್ವಜ ಹೊಂದಿದ್ದ ತೈಲ ಟ್ಯಾಂಕರ್ ಸೇರಿದಂತೆ ಎರಡು ವಾಣಿಜ್ಯ ಹಡಗುಗಳ ಮೇಲೆ ಇರಾನ್ ನೌಕಾಪಡೆ ಗುಂಡಿನ ದಾಳಿ ನಡೆಸಿತ್ತು. ಈ ಘಟನೆಯ ಬೆನ್ನಲ್ಲೇ ಭಾರತ ಸರ್ಕಾರವು ನವದೆಹಲಿಯಲ್ಲಿರುವ ಇರಾನ್ ರಾಯಭಾರಿಯನ್ನು ಕರೆಸಿ ತೀವ್ರ ರಾಜತಾಂತ್ರಿಕ ಆಕ್ಷೇಪ ವ್ಯಕ್ತಪಡಿಸಿತ್ತು.
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ, ವಿಶ್ವದ ಶೇ.20ರಷ್ಟು ತೈಲ ವ್ಯಾಪಾರ ಸಾಗುವ ಹೊರ್ಮುಜ್ ಜಲಸಂಧಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಈ ಮಾರ್ಗದಲ್ಲಿ ಭಾರತದ 15ಕ್ಕೂ ಹೆಚ್ಚು ಹಡಗುಗಳು (ಸುಮಾರು 500 ಸಿಬ್ಬಂದಿಯೊಂದಿಗೆ) ಸಿಲುಕಿಕೊಂಡಿವೆ ಎಂಬ ಆತಂಕದ ನಡುವೆಯೂ, ಇದೀಗ 10 ಹಡಗುಗಳು ಸುರಕ್ಷಿತವಾಗಿ ಜಲಸಂಧಿ ದಾಟಿರುವುದು ಕೊಂಚ ನಿರಾಳತೆ ತಂದಿದೆ. ಭಾರತದ ವಾಣಿಜ್ಯ ಹಡಗುಗಳ ಸುರಕ್ಷತೆಗಾಗಿ ಓಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದಲ್ಲಿ ಭಾರತೀಯ ನೌಕಾಪಡೆಯನ್ನು ನಿಯೋಜಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ದೃಢಪಡಿಸಿದೆ.

