
ಆಫ್ರಿಕಾದಲ್ಲಿ ಎಬೋಲಾ ಆರ್ಭಟ: ಕರ್ನಾಟಕದಲ್ಲಿ ಹೈ ಅಲರ್ಟ್!
ಎಬೋಲಾ ಪೀಡಿತ ರಾಷ್ಟ್ರಗಳಿಂದ ಬೆಂಗಳೂರು ಮತ್ತು ಮಂಗಳೂರಿಗೆ ಆಗಮಿಸುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲು ಸೂಚಿಸಲಾಗಿದ್ದು, ವಿಮಾನ ನಿಲ್ದಾಣಗಳಲ್ಲೇ ತಪಾಸಣೆಯನ್ನು ಕಡ್ಡಾಯಗೊಳಿಸಲಾಗಿದೆ.
ಆಫ್ರಿಕಾ ಖಂಡದ ಕಾಂಗೋ ಮತ್ತು ಉಗಾಂಡಾ ದೇಶಗಳಲ್ಲಿ ತೀವ್ರವಾಗಿ ಹರಡುತ್ತಿರುವ ‘ಎಬೋಲಾ’ ವೈರಸ್ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಕರ್ನಾಟಕದಾದ್ಯಂತ ಹೈ ಅಲರ್ಟ್ ಘೋಷಿಸಿದೆ. ಭಾರತದಲ್ಲಿ ಇದುವರೆಗೆ ಯಾವುದೇ ಎಬೋಲಾ ಪ್ರಕರಣಗಳು ವರದಿಯಾಗಿಲ್ಲವಾದರೂ, ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರವು ಮಹತ್ವದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಎಬೋಲಾ ಪೀಡಿತ ರಾಷ್ಟ್ರಗಳಿಂದ ಬೆಂಗಳೂರು ಮತ್ತು ಮಂಗಳೂರಿಗೆ ಆಗಮಿಸುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲು ಸೂಚಿಸಲಾಗಿದ್ದು, ವಿಮಾನ ನಿಲ್ದಾಣಗಳಲ್ಲೇ ತಪಾಸಣೆಯನ್ನು ಕಡ್ಡಾಯಗೊಳಿಸಲಾಗಿದೆ.
21 ದಿನಗಳ ಕ್ವಾರಂಟೈನ್ ಕಡ್ಡಾಯ
ಆರೋಗ್ಯ ಇಲಾಖೆಯ ಹೊಸ ಮಾರ್ಗಸೂಚಿಯ ಪ್ರಕಾರ, ಎಬೋಲಾ ಪೀಡಿತ ದೇಶಗಳಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರು ಕಡ್ಡಾಯವಾಗಿ 21 ದಿನಗಳ ಕಾಲ ಆರೋಗ್ಯ ಇಲಾಖೆಯ ಮೇಲ್ವಿಚಾರಣೆಯಲ್ಲಿ ಕ್ವಾರಂಟೈನ್ಗೆ ಒಳಗಾಗಬೇಕಾಗುತ್ತದೆ. ಪ್ರಯಾಣಿಕರಲ್ಲಿ ರೋಗಲಕ್ಷಣಗಳು ಕಂಡುಬಂದಲ್ಲಿ, ತಕ್ಷಣವೇ ಹತ್ತಿರದ ಆಸ್ಪತ್ರೆಗೆ ವರದಿ ಮಾಡಿಕೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್
ರಾಜ್ಯದಲ್ಲಿ ಸೋಂಕು ಹರಡುವುದನ್ನು ತಡೆಯಲು ಮತ್ತು ತುರ್ತು ಚಿಕಿತ್ಸೆ ನೀಡಲು ಬೆಂಗಳೂರು ಹಾಗೂ ಮಂಗಳೂರಿನ ಪ್ರಮುಖ ಆಸ್ಪತ್ರೆಗಳನ್ನು ಕಾಯ್ದಿರಿಸಲಾಗಿದೆ. ಬೆಂಗಳೂರು ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ (RGICD)ಯನ್ನು ವಿಶೇಷ ಐಸೋಲೇಷನ್ ಕೇಂದ್ರವಾಗಿ ಮತ್ತು ಎಪಿಡೆಮಿಕ್ ಡಿಸೀಸ್ ಆಸ್ಪತ್ರೆಯನ್ನು ಕ್ವಾರಂಟೈನ್ ಕೇಂದ್ರವಾಗಿ ನಿಗದಿಪಡಿಸಲಾಗಿದೆ.
ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮತ್ತು ಶ್ರೀನಿವಾಸ್ ಪೋರ್ಟ್ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಚಿಕಿತ್ಸಾ ವ್ಯವಸ್ಥೆ ಹಾಗೂ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸುವಾಗ ಕಂಡುಬರುವ ಶಂಕಾಸ್ಪದ ಪ್ರಕರಣಗಳ ರಕ್ತದ ಮಾದರಿಗಳನ್ನು ಬೆಂಗಳೂರಿನ ಎನ್.ಐ.ವಿ (NIV) ಕೇಂದ್ರದ ಮೂಲಕ ಪುಣೆಯ ಮುಖ್ಯ ಪ್ರಯೋಗಾಲಯಕ್ಕೆ ಹೆಚ್ಚಿನ ಪರೀಕ್ಷೆಗಾಗಿ ರವಾನಿಸಲು ವ್ಯವಸ್ಥೆ ಮಾಡಲಾಗಿದೆ.
ಎಬೋಲಾ ಲಕ್ಷಣಗಳು?
ಎಬೋಲಾ ಕಾಯಿಲೆ ಪೀಡಿತರಲ್ಲಿ ತೀವ್ರ ಜ್ವರ, ಅತಿಯಾದ ತಲೆನೋವು, ಸ್ನಾಯು ನೋವು, ಗಂಟಲು ನೋವು, ವಾಂತಿ, ಅತಿಸಾರ (ಭೇದಿ), ಹೊಟ್ಟೆ ನೋವು, ಚರ್ಮದ ಮೇಲೆ ದದ್ದುಗಳು ಏಳುವ ಜತೆಗೆ ಕಣ್ಣುಗಳು ಕೆಂಪಾಗಲಿವೆ.
ಸೋಂಕಿತ ವ್ಯಕ್ತಿಯ ರಕ್ತ, ದೇಹದ ದ್ರವಗಳು ಅಥವಾ ಅಂಗಾಂಗಗಳ ನೇರ ಸಂಪರ್ಕಕ್ಕೆ ಬರುವುದರಿಂದ ರೋಗ ಹರಡುತ್ತದೆ. ಅಲ್ಲದೆ, ಸೋಂಕಿತರು ಬಳಸಿದ ಬಟ್ಟೆ, ಹಾಸಿಗೆ ಮತ್ತು ಸಿರಿಂಜ್‌ಗಳ ಮೂಲಕವೂ ಇದು ಹರಡಬಹುದು. ಹೀಗಾಗಿ, ರೋಗಿಯ ಆರೈಕೆ ಮಾಡುವ ಕುಟುಂಬಸ್ಥರು ಮತ್ತು ಆರೋಗ್ಯ ಸಿಬ್ಬಂದಿಗೆ ಸೋಂಕಿನ ಅಪಾಯ ಹೆಚ್ಚಿರುತ್ತದೆ.
ಸರ್ಕಾರದಿಂದ ಸಿದ್ಧತೆ
ತುರ್ತು ಪರಿಸ್ಥಿತಿ ಎದುರಿಸಲು ಆರೋಗ್ಯ ಇಲಾಖೆ ಸರ್ವಸನ್ನದ್ಧವಾಗಿದೆ. ರಾಜ್ಯಾದ್ಯಂತ ಈಗಾಗಲೇ ಆರ್.ಆರ್.ಟಿ ತಂಡಗಳನ್ನು ಸಕ್ರಿಯಗೊಳಿಸಲಾಗಿದೆ. ಗರಿಷ್ಠ ಸುರಕ್ಷತೆಗಾಗಿ ಪಿಪಿಇ ಕಿಟ್ಗಳು, ಪ್ರತ್ಯೇಕ ರೆಫರಲ್ ಆಂಬುಲೆನ್ಸ್ ವ್ಯವಸ್ಥೆ ಮತ್ತು ಅಗತ್ಯ ಔಷಧ ಸಂಗ್ರಹಿಸಲಾಗಿದೆ. ಎಬೋಲಾ ಶಂಕಿತರಿಗೆ ಚಿಕಿತ್ಸೆ ನೀಡುವ ವಿಧಾನ ಹಾಗೂ ಸೋಂಕು ನಿಯಂತ್ರಣದ ಕುರಿತು ಆರೋಗ್ಯ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.
ಸಾರ್ವಜನಿಕರಲ್ಲಿ ಆರೋಗ್ಯ ಇಲಾಖೆ ಮನವಿ
"ಸಾರ್ವಜನಿಕರು ಎಬೋಲಾ ಕುರಿತು ಅನಗತ್ಯವಾಗಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳನ್ನು ನಂಬದೇ, ಕೇವಲ ಸರ್ಕಾರದ ಅಧಿಕೃತ ಮಾಹಿತಿ ಮಾತ್ರ ಪರಿಗಣಿಸಬೇಕು. ವಿದೇಶದಿಂದ ಬಂದವರು ಜವಾಬ್ದಾರಿಯಿಂದ ವರ್ತಿಸಿ, ರೋಗಲಕ್ಷಣಗಳಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು" ಎಂದು ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿಗಳಲ್ಲಿ ತಿಳಿಸಿದೆ.

