Bird flu confirmed in Hesarghat, more than 7 thousand chickens cull; High alert declared
x

ಸಾಂದರ್ಭಿಕ ಚಿತ್ರ

H5N1 Bird flu: ಬೆಂಗಳೂರು ಹೊರವಲಯದಲ್ಲಿ ಹಕ್ಕಿಜ್ವರ; 7 ಸಾವಿರ ಕೋಳಿ ಕಲ್ಲಿಂಗ್; 25,000 ಜನರ ಅರೋಗ್ಯದ ನಿಗಾ

ಬೆಂಗಳೂರು ಹೊರವಲಯದ ಹೆಸರಘಟ್ಟ ಪ್ರದೇಶದಲ್ಲಿ ರೋಗ ಪತ್ತೆಯಾದ ಬೆನ್ನಲ್ಲೇ ಪಶುಪಾಲನಾ ಇಲಾಖೆ 7,444 ಕೋಳಿಗಳು, 14 ಸಾವಿರ ಮೊಟ್ಟೆಗಳು ಮತ್ತು 2,250 ಕೆಜಿ ಕೋಳಿ ಆಹಾರವನ್ನು ನಾಶಪಡಿಸಿದೆ.


Click the Play button to hear this message in audio format

ರಾಜಧಾನಿ ಬೆಂಗಳೂರಿನ ಹೊರವಲಯದ ಹೆಸರಘಟ್ಟದಲ್ಲಿ ಹಕ್ಕಿಜ್ವರ (H5N1) ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಸೋಂಕಿತ ವಲಯದ ಸುತ್ತಮುತ್ತಲಿನ 17 ಗ್ರಾಮಗಳ ಸುಮಾರು 25,000ಕ್ಕೂ ಅಧಿಕ ಜನರ ಮೇಲೆ ಆರೋಗ್ಯ ಇಲಾಖೆ ಕಣ್ಣಿಟ್ಟಿದೆ. ಆಶಾ ಕಾರ್ಯಕರ್ತೆಯರು ಮುಂದಿನ 10 ದಿನಗಳ ಕಾಲ ಮನೆಮನೆಗೆ ಭೇಟಿ ನೀಡಿ ಜ್ವರದ ಲಕ್ಷಣಗಳ ಬಗ್ಗೆ ತಪಾಸಣೆ ನಡೆಸಲಿದ್ದಾರೆ. ಹೆಸರಘಟ್ಟ ಮತ್ತು ಸೊನ್ನೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಪಿಪಿಇ ಕಿಟ್, ಮಾಸ್ಕ್ ಮತ್ತು ಔಷಧಗಳನ್ನು ದಾಸ್ತಾನು ಮಾಡಲಾಗಿದೆ.

ಆದರೆ, ಈ ಬಗ್ಗೆ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ, ಮುನ್ನೆಚ್ಚರಿಕೆ ವಹಿಸುವುದು ಮುಖ್ಯ ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ. ಹೆಸರಘಟ್ಟದ ಮತ್ಕೂರು ಗ್ರಾಮದಲ್ಲಿರುವ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಏಪ್ರಿಲ್ 14 ರಂದು ಹಕ್ಕಿಗಳ ಸಾವು ವರದಿಯಾಗಿತ್ತು. ಭೋಪಾಲ್‌ನ NIHSAD ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ ವರದಿಯಲ್ಲಿ ಹಕ್ಕಿಜ್ವರ ಇರುವುದು ದೃಢಪಟ್ಟಿದೆ.

ಸೋಂಕಿತ ವಲಯ ಘೋಷಣೆ

ರೋಗ ಪತ್ತೆಯಾದ ಬೆನ್ನಲ್ಲೇ ಏಪ್ರಿಲ್ 15 ರಂದು ಪಶುಪಾಲನಾ ಇಲಾಖೆಯು 7,444 ಕೋಳಿಗಳು, 14 ಸಾವಿರಕ್ಕೂ ಹೆಚ್ಚು ಮೊಟ್ಟೆಗಳು ಮತ್ತು 2,250 ಕೆಜಿ ಕೋಳಿ ಆಹಾರವನ್ನು ವೈಜ್ಞಾನಿಕವಾಗಿ ನಾಶಪಡಿಸಿ ವಿಲೇವಾರಿ ಮಾಡಿದೆ. ಸೋಂಕು ಪತ್ತೆಯಾದ ಮತ್ಕೂರು ಗ್ರಾಮದ 3 ಕಿ.ಮೀ ವ್ಯಾಪ್ತಿಯನ್ನು 'ಸೋಂಕಿತ ವಲಯ' ಮತ್ತು 10 ಕಿ.ಮೀ ವ್ಯಾಪ್ತಿಯನ್ನು 'ಕಣ್ಗಾವಲು ವಲಯ' ಎಂದು ಘೋಷಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಭಾಗಿಯಾದ 10 ಸಿಬ್ಬಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿದ್ದು, ಅವರಿಗೆ ಒಸೆಲ್ಟಾಮಿವಿರ್ ಔಷಧ ನೀಡಿ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ.

ಸಾರ್ವಜನಿಕರಿಗೆ ಸಲಹೆ

"ಈವರೆಗೆ ಯಾವುದೇ ಮನುಷ್ಯರಲ್ಲಿ ಈ ರೋಗದ ಲಕ್ಷಣಗಳು ಕಂಡುಬಂದಿಲ್ಲ. ಸಾರ್ವಜನಿಕರು ಅನಾರೋಗ್ಯ ಪೀಡಿತ ಅಥವಾ ಸತ್ತ ಹಕ್ಕಿಗಳ ಸಂಪರ್ಕಕ್ಕೆ ಬರಬಾರದು. ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಸರಿಯಾಗಿ ಬೇಯಿಸಿ ಸೇವಿಸುವುದು ಸುರಕ್ಷಿತ." ಯಾವುದೇ ರೀತಿಯ ಅನುಮಾನಾಸ್ಪದ ಪ್ರಕರಣಗಳು ಕಂಡುಬಂದರೆ ಕೂಡಲೇ ಪಶುಸಂಗೋಪನೆ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ಕೋರಲಾಗಿದೆ.

ಯಾವೆಲ್ಲಾ ಮಾರ್ಗದಿಂದ ರೋಗ ಹರಡುತ್ತದೆ ?

ಹಕ್ಕಿಜ್ವರವು ಸೋಂಕಿತ ಪಕ್ಷಿಗಳು ಅಥವಾ ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ಪಕ್ಷಿಗಳ ಲಾಲಾರಸ, ಮಲ ಅಥವಾ ಉಸಿರಾಟದ ದ್ರವಗಳ ನೇರ ಸಂಪರ್ಕಕ್ಕೆ ಬಂದಾಗ, ಸೋಂಕಿತ ಪ್ರಾಣಿಗಳ ಆವಾಸಸ್ಥಾನಗಳಲ್ಲಿರುವ ಧೂಳು ಅಥವಾ ಸಣ್ಣ ಹನಿಗಳನ್ನು ಉಸಿರಾಡುವುದರಿಂದ, ವೈರಸ್ ಇರುವ ಮೇಲ್ಮೈಗಳನ್ನು ಮುಟ್ಟಿ, ನಂತರ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಿಕೊಳ್ಳುವುದರಿಂದ. ಸೋಂಕಿತ ಪ್ರಾಣಿಗಳ ಹಸಿ ಹಾಲು ಅಥವಾ ಸರಿಯಾಗಿ ಬೇಯಿಸದ ಮಾಂಸದ ಸೇವನೆಯಿಂದಲೂ ಈ ರೋಗ ಬರುತ್ತದೆ. ಆದರೆ ಈ ರೋಗ ಮನುಷ್ಯರಿಂದ ಮನುಷ್ಯರಿಗೆ ಹರಡುವುದು ಅತ್ಯಂತ ವಿರಳ.

ರೋಗ ಲಕ್ಷಣಗಳು

ಸೋಂಕು ತಗುಲಿದ 2 ರಿಂದ 8 ದಿನಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ಪ್ರಮುಖವಾಗಿ ವಿಪರೀತ ಜ್ವರ ಕಾಣಿಸಿಕೊಳ್ಳುತ್ತದೆ. ಕೆಮ್ಮು, ಗಂಟಲು ನೋವು ಮತ್ತು ಉಸಿರಾಟಕ್ಕೆ ಕಷ್ಟವಾಗುತ್ತದೆ. ಕಣ್ಣು ಕೆಂಪಾಗುತ್ತದೆ. ದೇಹಕ್ಕೆ ವಿಪರೀತ ನೋವು ಮತ್ತು ತೀವ್ರ ಸುಸ್ತಾಗುತ್ತದೆ. ತಲೆನೋವು, ಅತಿಸಾರ, ವಾಂತಿ ಅಥವಾ ಹೊಟ್ಟೆ ನೋವು ಉಂಟಾಗುತ್ತದೆ.

Read More
Next Story