ಒಳ ಮೀಸಲಾತಿ | ರಾಜ್ಯ ಸರ್ಕಾರದ ಮುಂದಿದೆ ಕತ್ತಿಯಂಚಿನ ನಡಿಗೆ
x

ಒಳ ಮೀಸಲಾತಿ | ರಾಜ್ಯ ಸರ್ಕಾರದ ಮುಂದಿದೆ ಕತ್ತಿಯಂಚಿನ ನಡಿಗೆ

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನ್ಯಾಯಮೂರ್ತಿ ಬಿ.ಆ‌ರ್. ಗವಾಯಿ ಸೇರಿದಂತೆ ನಾಲ್ವರು ನ್ಯಾಯಮೂರ್ತಿಗಳು ಎಸ್ಸಿ ಸಮುದಾಯಗಳಲ್ಲಿನ ಕೆನೆಪದರವನ್ನು ಮೀಸಲಾತಿಯಿಂದ ಹೊರಗಿಡುವ ಬಗ್ಗೆಯೂ ಪ್ರಸ್ತಾಪ ಮಾಡಿದ್ದು, ಈ ಬಗ್ಗೆ ಸರ್ಕಾರಗಳು ಗಂಭೀರವಾಗಿ ಚಿಂತಿಸುವ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.


ಎಲ್ಲ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ಸುಪ್ರೀಂ ಕೊರ್ಟ್‌ನ ಏಳು ಜನ ನ್ಯಾಯಾಧೀಶರನ್ನೊಳಗೊಂಡ ಸಂವಿಧಾನಿಕ ಪೀಠ ಆದೇಶ ಮಾಡಿರುವುದು ಎಸ್ಸಿ ಸಮುದಾಯಗಳಲ್ಲಿನ ಕೆಲವು ವರ್ಗಗಳಿಗೆ ಖುಷಿ ತಂದಿದ್ದು, ಕೆಲವು ವರ್ಗಗಳಿಗೆ ಬೇಸರವುಂಟು ಮಾಡಿದೆ.

ವಿಶೇಷವಾಗಿ ಸ್ಪೃಶ್ಯ ಎಸ್ಸಿ ಸಮುದಾಯಗಳಿಗೆ ಸುಪ್ರೀಂ ಕೋರ್ಟ್‌ನ ಈ ಆದೇಶ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರಾಜ್ಯ ಸರ್ಕಾರಗಳಿಗೂ ಕೂಡ ಈ ಆದೇಶ ಪಾಲನೆ ಅಷ್ಟೇ ಕ್ಲಿಷ್ಟಕರವಾಗಿದ್ದು, ಯಾವುದೇ ರೀತಿ ಮೀಸಲಾತಿಯನ್ನು ವರ್ಗೀಕರಣ ಮಾಡಿದರೂ. ಒಂದು ವರ್ಗದ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಿದೆ.

ಸುಮಾರು ಮೂರು ದಶಕಗಳ ಒಳ ಮೀಸಲಾತಿ ಹೋರಾಟಕ್ಕೆ ಆಂಧ್ರದ ಚಿನ್ನಯ್ಯ ವರ್ಸಸ್ ಆಂಧ್ರಪ್ರದೇಶ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಏಳು ಜನ ನ್ಯಾಯಾಧೀಶರನ್ನೊಳಗೊಂಡ ಸಂವಿಧಾನಿಕ ಪೀಠ, ಮೀಸಲಾತಿ ಇದ್ದರೂ ಅದರ ಫಲ ದೊರೆಯದೇ ಅನ್ಯಾಯಕ್ಕೊಳಗಾಗುತ್ತಿರುವ ತುಳಿತಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ದೊರೆಯಬೇಕು ಎನ್ನುವ ದೃಷ್ಟಿಯಿಂದ ರಾಜ್ಯ ಸರ್ಕಾರಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರ ಕೊಟ್ಟಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನ ಸಮಾನತೆಯ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಐತಿಹಾಸಿ ಹೆಜ್ಜೆ ಇಟ್ಟಂತಾಗಿದೆ.

ನಮ್ಮ ವರ್ಣಾಶ್ರಮ ಪದ್ಧತಿಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಕೇವಲ ನಾಲ್ಕು ವರ್ಗಗಳು ಇದ್ದರೆ, ನಮ್ಮ ಆಧುನಿಕ ಸಾಮಾಜಿಕ ಜಾತಿ ವ್ಯವಸ್ಥೆಯಲ್ಲಿ ಪ್ರತಿಯೊಂದು ವರ್ಗಗಳಲ್ಲಿಯೂ ಉಪ ಪಂಗಡಗಳು ಹುಟ್ಟಿಕೊಂಡು ಒಂದೇ ಸಮುದಾಯದ ಉಪ ಪಂಗಡಗಳಲ್ಲಿಯೇ ಮೇಲು ಕೀಳು ಎನ್ನುವ ಅಸಮಾನತೆ ನಿರಂತರವಾಗಿ ಮುಂದುವರೆದಿದ್ದು, ಅದು ಶಿಕ್ಷಣ ಪಡೆಯುವುದರಿಂದ ಹಿಡಿದು, ಸರ್ಕಾರಿ ನೌಕರಿ ಪಡೆಯುವುದು, ರಾಜಕೀಯ ಪ್ರಾತಿನಿಧ್ಯ ಪಡೆಯುವುದು, ಅಧಿಕಾರ ನಡೆಸುವುದು ಒಂದೊಂದು ಸಮುದಾಯಗಳು ತಮ್ಮ ಪ್ರಭಾವವನ್ನು ಬೀರುತ್ತ ಬಂದಿವೆ.

ರಾಜ್ಯದಲ್ಲಿರುವ ಸುಮಾರು 101 ಎಸ್ಸಿ ಸಮುದಾಯಗಳಲ್ಲಿ ಪ್ರಮುಖವಾಗಿ ಸ್ಪಶ್ಯ ಸಮುದಾಯಗಳಾದ ಲಂಬಾಣಿ, ಭೋವಿ ಸಮುದಾಯಗಳು ಹೆಚ್ಚಿನ ಪ್ರಮಾಣದಲ್ಲಿ ಮೀಸಲಾತಿಯ ಲಾಭ ಪಡೆಯುತ್ತಿವೆ ಎನ್ನುವ ಕಾರಣಕ್ಕೆ ಅಸ್ಪೃಶ್ಯ ಎಸ್ಸಿ ಸಮುದಾಯಗಳಾದ ಎಡಗೈ ಮತ್ತು ಬಲಗೈ ಸಮುದಾಯಗಳು ಸೇರಿದಂತೆ ಇನ್ನುಳಿದ ಎಸ್ಸಿ ಸಮುದಾಯಗಳಿಗೆ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ ಎಂಬ ಕೂಗು ಕೇಳಿ ಬಂದಿತ್ತು. ವಿಶೇಷವಾಗಿ ಎಸಿ ಎಡಗೈ ಸಮುದಾಯ ಒಳ ಮೀಸಲಾತಿಗಾಗಿ ನಿರಂತರ ಹೋರಾಟ ನಡೆಸುತ್ತ ಬಂದಿದ್ದು, ಈಗ ಒಳ ಮೀಸಲಾತಿ ಜಾರಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದು ಈ ಸಮುದಾಯದ ಸಂತೋಷವನ್ನು ಹೆಚ್ಚಿಸಿದೆ. ರಾಜ್ಯದಲ್ಲಿ ಪ್ರಸ್ತುತ ಎಸ್ಸಿ ಸಮುದಾಯಕ್ಕೆ ಶೇ 17 ರಷ್ಟು ಮೀಸಲಾತಿ ನೀಡಲಾಗುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರ ಎಸ್ಪಿ ಮೀಸಲಾತಿಯನ್ನು ಶೇ 15 ರಿಂದ 17 ಕೈ ಹೆಚ್ಚಿಸಿರುವುದರಿಂದ ಎಸ್ಪಿ ಸಮುದಾಯದ ಮೀಸಲಾತಿ ಪ್ರಮಾಣ ಶೇ 17 ಕ್ಕೆ ಏರಿದೆ.

ರಾಜ್ಯದಲ್ಲಿ ಒಳ ಮೀಸಲಾತಿ ವರ್ಗೀಕರಣವನ್ನು ಎರಡು ರೀತಿಯಲ್ಲಿ ಮಾಡಲಾಗಿದ್ದು, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಎಸ್ಸಿ ಸಮುದಾಯಕ್ಕೆ ಮೀಸಲಿದ್ದ ಶೇ 15 ರಲ್ಲಿ ನಾಲ್ಕು ವರ್ಗಗಳಾಗಿ ವಿಂಗಡಿಸಿ, ಎಸ್ಸಿ ಎಡಗೈ ಸಮುದಾಯಕ್ಕೆ ಶೇ 6% ಎಸ್ಸಿ ಬಲಗೈ ಸಮುದಾಯಕ್ಕೆ ಶೇ 5 % ಬೇಡ ಜಂಗಮ, ಆದಿ ದ್ರಾವಿಡ ಸಮುದಾಯಳಿಗೆ ಶೇ 3% ಹಾಗೂ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ1% ರಷ್ಟು ಮೀಸಲಾತಿ ನೀಡಬಹುದು ಎಂದು ವರ್ಗೀಕರಣ ಮಾಡಿದೆ.

ಇನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್ಸಿ ಸಮುದಾಯಕ್ಕೆ ಮೀಸಲಿದ್ದ ಶೇ 17% ರಲ್ಲಿ ಎಡಗೈ ಸಮುದಾಯಕ್ಕೆ ಶೇ 6%, ಬಲಗೈ ಸುಮದಾಯಕ್ಕೆ ಶೇ 5.5, ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೇ ಶೇ 4.5% ಹಾಗೂ ಇತರೇ ಎಸ್ಪಿ ಸಮುದಾಯಗಳಿಗೆ ಶೇ 1% ರಷ್ಟು ಮೀಸಲಾತಿ ನೀಡಬಹುದು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು.

ಈ ಎರಡೂ ಶಿಫಾರಸುಗಳಲ್ಲಿ ಪ್ರಮುಖವಾಗಿ ವ್ಯತ್ಯಾಸ ಇರುವುದು ಲಂಬಾಣಿ, ಭೋವಿ, ಕೊರಚ, ಕೊರಮ ಮತ್ತು ಭಜಂತ್ರಿ ಸಮುದಾಯಗಳಿಗೆ ಹಂಚಿಕೆ ಮಾಡಿರುವ ಮೀಸಲಾತಿಯಲ್ಲಿ. ಇಲ್ಲಿ ಗಮನಿಸಬೇಕಾದ ಅತ್ಯಂತ ಮಹತ್ವದ ವಿಷಯವೆಂದರೆ ಒಳ ಮೀಸಲಾತಿಯನ್ನೇ ವಿರೋಧಿಸುತ್ತಿದ್ದ ಈ ಸಮುದಾಯಗಳಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ 4.5 % ರಷ್ಟು ಮೀಸಲಾತಿ ಕಲ್ಪಿಸಲು ಶಿಫಾರಸು ಮಾಡಲಾಗಿತ್ತು. ಆದರೆ, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಈ ಸ್ಪೃಶ್ಯ ಸಮುದಾಯಗಳಿಗೆ ಶೇ 1% ರಷ್ಟು ಮಾತ್ರ ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ 4.5% ರಷ್ಟು ಮೀಸಲಾತಿ ನೀಡಿದ್ದನ್ನೇ ಪ್ರಭಲವಾಗಿ ವಿರೋಧಿಸಿದ್ದ ಈ ಸಮುದಾಯಗಳು ರಾಜ್ಯ ಸರ್ಕಾರದ ವಿರುದ್ಧ ಹೋರಾಟವನ್ನೇ ನಡೆಸಿದ್ದವು. ಸುಪ್ರೀಂ ಕೋರ್ಟ್ ಸಮುದಾಯಗಳ ಹಿಂದುಳಿದಿರುವಿಕೆ ಹಾಗೂ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರಗಳು ಒಳ ಮೀಸಲಾತಿಯನ್ನು ನೀಡಬೇಕು ಎಂದು ನಿರ್ದೇಶನ ನೀಡಿದೆ.

ವಿಳಂಬ ಧೋರಣೆ ಅನುಸರಿಸಬಾರದುಒಳ ಮೀಸಲಾತಿ ನೀಡುವ ವಿಚಾರ ದಲ್ಲಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೀಸಲಾತಿ ವರ್ಗೀಕರಣ ಮಾಡಿ ಶಿಫಾರಸು ಮಾಡಿದೆ. ಅದೇ ಮಾನದಂಡ ಅನುಸರಿಸಿ ಒಳಮೀಸಲಾತಿ ಜಾರಿಗೊಳಿಸಬೇಕು. ಅನಗತ್ಯ ವಿಳಂಬ ಧೋರಣೆ ಅನುಸರಿಸಬಾರದು.

- ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ

ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ಮಾಡಿರುವ ಒಳಮೀಸಲಾತಿ ವರ್ಗೀಕರಣವನ್ನು ವಿರೋಧಿಸಿದ್ದು, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಆಧಾರದಲ್ಲಿ ಮೀಸಲಾತಿ ವರ್ಗೀಕರಣ ಮಾಡುವ ಕಡೆಗೆ ಒಲವು ತೋರುವಂತೆ ಕಾಣಿಸುತ್ತಿದೆ. ಅಲ್ಲದೇ ಸಂವಿಧಾನದ 341ನೇ ವಿಧಿ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಆದರೆ, ಸುಪ್ರೀಂ ಕೋರ್ಟ್ ಆದೇಶದಿಂದ ಇದು ರಾಜ್ಯ ಸರ್ಕಾರಕ್ಕೆ ರಾಜಕೀಯವಾಗಿ ಅತ್ಯಂತ ಕ್ಲಿಷ್ಟಕರ ಹೆಜ್ಜೆಯಾಗಲಿದೆ. ಹಿಂದಿನ ಬಿಜೆಪಿ ಸರ್ಕಾರ ಒಳ ಮೀಸಲಾತಿಗೆ ಶಿಫಾರಸು ಮಾಡಿದ್ದರ ಪರಿಣಾಮ 2023ರ ವಿಧಾನಸಭೆ ಚುನಾವಣೆಯಲ್ಲಿ ಆ ಪಕ್ಷದ ಮೇಲೆ ಆಯಿತು ಎನ್ನುವ ಮಾತುಗಳು ಚುನಾವಣೆ ಫಲಿತಾಂಶದ ನಂತರ ಕೇಳಿಬಂದವು.

ಈಗಿನ ರಾಜ್ಯ ಸರ್ಕಾರ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯಂತೆ ಐದು ಸ್ಪೃಶ್ಯ ಸಮುದಾಯಗಳಿಗೆ ಮೀಸಲಾತಿ ನೀಡಲು ಮುಂದಾದರೆ, ರಾಜಕೀಯವಾಗಿ ಆ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಿದೆ. ಈಗಿರುವ ರಾಜಕೀಯ ವಾತಾವರಣದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದನ್ನು ಯಾವ ರೀತಿ ನಿಭಾಯಿಸುತ್ತದೆಯೋ ಎನ್ನುವುದು ಕುತೂಹಲದ ಸಂಗತಿ.

ಕೆನೆ ಪದರ ಕಂಟಕ

ಮೀಸಲಾತಿ ವ್ಯವಸ್ಥೆ ಇದ್ದರೂ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅನೇಕ ಎಸ್ಸಿ ಸಮುದಾಯಗಳಿಗೆ ಅದರ ಪ್ರಯೋಜನ ಸಿಗದೇ ಇರುವುದರ ಪರಿಣಾಮ ಅರಿತ ಸುಪ್ರೀಂ ಕೋರ್ಟ್‌ನ ಸಂವಿಧಾನಿಕ ಪೀಠ ಒಳ ಮೀಸಲಾತಿಯ ಅಗತ್ಯತೆಯನ್ನು ಒತ್ತಿ ಹೇಳಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನ್ಯಾಯಮೂರ್ತಿ ಬಿ.ಆ‌ರ್. ಗವಾಯಿ ಸೇರಿದಂತೆ ನಾಲ್ವರು ನ್ಯಾಯಮೂರ್ತಿಗಳು ಎಸ್ಸಿ ಸಮುದಾಯಗಳಲ್ಲಿನ ಕೆನೆಪದರವನ್ನು ಮೀಸಲಾತಿಯಿಂದ ಹೊರಗಿಡುವ ಬಗ್ಗೆಯೂ ಪ್ರಸ್ತಾಪ ಮಾಡಿದ್ದು, ಈ ಬಗ್ಗೆ ಸರ್ಕಾರಗಳು ಗಂಭೀರವಾಗಿ ಚಿಂತಿಸುವ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.

ಮೀಸಲಾತಿ ಮತ್ತು ಸಾಮಾಜಿಕ ಸಮಾನತೆ ಇವೆರಡು ಒಂದೇ ಗುರಿ ಮಟ್ಟಲು ವಿರುದ್ಧ ದಿಕ್ಕಿನಲ್ಲಿ ಸಾಗುವ ವಾಹಕಗಳಾಗಿವೆ. ಸಮಾಜದಲ್ಲಿ ಸಮಾನತೆ ತರುವ ನಿಟ್ಟಿನಲ್ಲಿಯೇ ತುಳಿತಕ್ಕೊಳಗಾದ ಸಮುದಾಯಗಳಿಗೆ ಮೀಸಲಾತಿ ನೀಡುವ ಮೂಲಕ ಸಮಾನತೆಯ ಸಮಾಜ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಆದರೆ, ಮೀಸಲಾತಿ ವ್ಯವಸ್ಥೆ ಇರುವವರೆಗೂ ಸಮಾಜದಲ್ಲಿ ಸಮಾನತೆ ತರುವುದು ಕಷ್ಟ ಎನ್ನುವ ಮನಸ್ಥಿತಿ ಸಮಾಜದಲ್ಲಿ ನಿರಂತರವಾಗಿ ಬೆಳೆಯುತ್ತ ಹೋಗುತ್ತಿದೆ.

ಇದರ ಸೂಕ್ಷ್ಮವನ್ನು ಅರಿತಿರುವ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು, ವಿಶ್ವಗುರು ಬಸವಣ್ಣ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕನಸಿನ ಸಮ ಸಮಾಜ ನಿರ್ಮಾಣವಾಗಬೇಕೆಂದರೆ ಹಾಗೂ ಮೀಸಲಾತಿಯ ಪ್ರಯೋಜನ ಕಟ್ಟ ಕಡೆಯ ವ್ಯಕ್ತಿಗೂ ದೊರೆಯಬೇಕೆಂದರೆ ಮೀಸಲಾತಿಯ ಲಾಭ ಪಡೆದ ಒಂದು ತಲೆಮಾರು ಈ ವ್ಯವಸ್ಥೆಯಿಂದ ಹೊರ ಬಂದಾಗ ಮಾತ್ರ ಅದು ಸಾಧ್ಯವಾಗಲಿದೆ ಎನ್ನುವುದನ್ನು ಒತ್ತಿ ಹೇಳಿದ್ದಾರೆ.

ಒಳಮೀಸಲಾತಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವ ಮಾನದಂಡ ಅನುಸರಿಸುತ್ತದೆ ಎನ್ನುವುದನ್ನು ಸಾರ್ವಜನಿಕರ ಅವಗಾಹನೆಗೆ ಇಡಬೇಕು. ಅಲ್ಲದೇ, ಎಸ್ಸಿ ಪಟ್ಟಿಯಲ್ಲಿರುವ ಸಮುದಾಯಗಳ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ವರ್ಗೀಕರಣ ಮಾಡಬೇಕು. ಎಸ್ಸಿ ಸಮುದಾಯಗಳೂ ಈ ವಿಚಾರದಲ್ಲಿ ಗೊಂದಲಕ್ಕೆ ಎಡೆ ಮಾಡಿಕೊಡದೇ ಒಗ್ಗಟ್ಟು ಪ್ರದರ್ಶಿಸಬೇಕಿದೆ.

- ಮಾವಳ್ಳಿ ಶಂಕರ, ದಲಿತ ಸಂಘರ್ಷ ಸಮಿತಿ, (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕರು.

ಕೆನೆ ಪದರ ವಿಚಾರದಲ್ಲಿ ಬಹುತೇಕ ಎಸ್ಸಿ ಸಮುದಾಯಗಳ ನಾಯಕರು ಬಹಿರಂಗವಾಗಿ ವಿರೋಧ ಮಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಸ್ಪಷ್ಟ ನೀತಿ ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರವೂ ಕೂಡ ಕೆನೆ ಪದರ ವಿಚಾರದಲ್ಲಿ ಮೃದು ಧೋರಣೆ ಅನುಸರಿಸುತ್ತಿದ್ದು, ಕೆನೆ ಪದರ ಕೈ ಬಿಡುವ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ.

ಆದರೆ, ಈ ವಿಚಾರದಲ್ಲಿ ರಾಜ್ಯ ಸರ್ಕಾರಗಳಿಗೆ ತೀರ್ಮಾನ ತೆಗೆದುಕೊಳ್ಳುವ ಅವಕಾಶ ಇರುವುದರಿಂದ ರಾಜ್ಯ ಸರ್ಕಾರಗಳಿಗೆ ಇದು ಒಂದು ಬಿಸಿ ತುಪ್ಪವೇ ಆಗಿದೆ. ಈಗಿನ ರಾಜಕೀಯ ಪಕ್ಷಗಳ ಮನಸ್ಥಿತಿಯನ್ನು ನೋಡಿದಾಗ ಯಾರೂ ಈ ವಿಚಾರದಲ್ಲಿ ಮೈಮೇಲೆ ಎಳೆದುಕೊಳ್ಳುವ ಧೈರ್ಯ ಮಾಡುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ದಲಿತರಲ್ಲಿಯೇ ಧ್ವನಿ ಇಲ್ಲದವರು, ನಿರಂತರ ಅವಕಾಶ ವಂಚಿತರಾಗುತ್ತಿರುವವರು ತಮ್ಮದೇ ಸಮುದಾಯದ ಬಲಿಷ್ಠರ ವಿರುದ್ದ ಹೋರಾಟಕ್ಕಿಳಿಯುವ ಸಂದರ್ಭ ಬರಬಹುದು. ಆದರೆ, ಒಳ ಮೀಸಲಾತಿಯಿಂದಾದರೂ ಅವಕಾಶ ವಂಚಿತರಿಗೆ ಅವಕಾಶಗಳು ದೊರೆತು ಅವರನ್ನೂ ಮುಖ್ಯವಾಹಿನಿಗೆ ತರುವ ಕೆಲಸವನ್ನು ಸರ್ಕಾರದ ಜೊತೆಗೆ ಸಮಾನತೆ ಬಯಸುವ ಅದೇ ಸಮುದಾಯಗಳ ಸಂಘಟನೆಗಳು, ರಾಜಕೀಯ ನಾಯಕರುಗಳು ಮಾಡಬೇಕಿದೆ.

ಸ್ವಾತಂತ್ರ್ಯ ಬಂದಾಗಿನಿಂದಲೂ ಮೀಸಲಾತಿಯ ಪ್ರಯೋಜವನ್ನು ಕೆಲವೇ ಕೆಲವು ಸಮುದಾಯಗಳು ಹಾಗೂ ಪ್ರಭಾವಿಗಳು ಪಡೆದುಕೊಳ್ಳುತ್ತಿರುವುದರಿಂದ ಕಟ್ಟ ಕಡೆಯ ದಲಿತರಿಗೆ ಇನ್ನು ಅದರ ಪ್ರಯೋಜನ ದೊರೆಯದಂತಾಗಿದ್ದು, ನಿರೀಕ್ಷಿತ ಮಟ್ಟದಲ್ಲಿ ಎಸ್ಸಿ ಸಮುದಾಯವನ್ನು ಸಮಾನತೆಯ ದಾರಿಗೆ ತರಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಮ ಸಮಾಜದ ನಿರ್ಮಾಣದ ಕಡೆಗೆ ಸಾಗಬೇಕೆಂದರೆ ಸುಪ್ರೀಂ ಕೋರ್ಟ್‌ ಈ ಆಲೋಚನೆಯನ್ನು ಎಲ್ಲರೂ ಪ್ರಗತಿಪರವಾಗಿ ನೋಡಬೇಕಿದೆ. ಯಾವುದೇ ವ್ಯಕ್ತಿ ಅಥವಾ ಸಮಾಜಕ್ಕಾಗಲಿ ನಮಗೆ ಸಿಗುವ ಅವಕಾಶವನ್ನು ಇನ್ನೊಬ್ಬರಿಗೆ ಬಿಟ್ಟುಕೊಡುವುದು ಎಂದಾಗ ನೋವಾಗುವುದು ಸಹಜ. ಆದರೆ, ಸಮಾಜದಲ್ಲಿ ನಮ್ಮ ಆತ್ಮಗೌರವ ಹೆಚ್ಚಿಸಿಕೊಂಡು ನಮ್ಮದೇ ಸಮುದಾಯದವರನ್ನು ಕೈಹಿಡಿದು ಮೇಲೆತ್ತುವ ಮೂಲಕ ಮುಖ್ಯವಾಹಿನಿಗೆ ಕರೆದುಕೊಂಡು ಹೋಗುವುದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ನಾವು ಕೊಡುವ ದೊಡ್ಡ ಗೌರವ. ಈ ಮೂಲಕ ಜಾತಿ ವ್ಯವಸ್ಥೆಯ ಬೇರುಗಳನ್ನು ಕಿತ್ತು ಹಾಕುವ ಕಾರ್ಯ ಮಾಡಿದರೆ, ಜಾತ್ಯತೀತ ರಾಷ್ಟ್ರ ಎನ್ನುವ ಪದಕ್ಕೆ ಅರ್ಥ ಬರಲಿದೆ.

Read More
Next Story