Lok Sabha Election Results 2024 | ರಾಷ್ಟ್ರೀಯ ಪಕ್ಷಗಳಿಗೆ ಸವಾಲೆಸೆದು ಠೇವಣಿ ಕಳೆದುಕೊಂಡ ಮೂವರು!
x

Lok Sabha Election Results 2024 | ರಾಷ್ಟ್ರೀಯ ಪಕ್ಷಗಳಿಗೆ ಸವಾಲೆಸೆದು ಠೇವಣಿ ಕಳೆದುಕೊಂಡ ಮೂವರು!


2024ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮೂವರು ಅಭ್ಯರ್ಥಿಗಳು ತಮ್ಮದೇ ಪಕ್ಷಗಳ ವಿರುದ್ಧ ಬಂಡಾಯ ಸಾರಿ ಪಕ್ಷೇತರರಾಗಿ ಅಖಾಡಕ್ಕೆ ಇಳಿದಿದ್ದರು. ಮೂವರೂ ರಾಜ್ಯದ ಗಮನ ಸೆಳೆದು, ಪಕ್ಷದ ನಾಯಕರಿಗೆ ಮತವಿಭಜನೆಯ ಭೀತಿ ಹುಟ್ಟುಹಾಕಿದ್ದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ವಿಜಯೇಂದ್ರ ವಿರುದ್ಧ ಬಂಡಾಯ ಸಾರಿದ್ದ ಹಿರಿಯ ನಾಯಕ, ಮಾಜಿ ಉಪಮುಖ್ಯಮಂತ್ರಿ ಕೆಎಸ್‌ ಈಶ್ವರಪ್ಪ ಅವರು ಹೀನಾಯ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದ್ದಾರೆ.

ಈಶ್ವರಪ್ಪ ತಮ್ಮ ಪುತ್ರ ಕಾಂತೇಶ್ ಅವರಿಗೆ ಹಾವೇರಿಯಿಂದ ಟಿಕೆಟ್‌ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದರು. ಆದರೆ ಪುತ್ರನಿಗೆ ಟಿಕೆಟ್‌ ತಪ್ಪಿದ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. ಆ ಬಳಿಕ ಯಡಿಯೂರಪ್ಪ ಪುತ್ರ ರಾಘವೇಂದ್ರ ಅವರನ್ನು ಸೋಲಿಸುವ ಪಣ ತೊಟ್ಟಿದ್ದರು.

ಚುನಾವಣಾ ಸಂದರ್ಭದಲ್ಲಿ ಈಶ್ವರಪ್ಪ ಅವರನ್ನು ಮನವೊಲಿಸಲು ಬಿಜೆಪಿ ನಾಯಕರು ಪ್ರಯತ್ನಿಸಿದಾಗಲೂ ಕಿವಿಗೊಡದೇ, ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು. ಆದರೆ, ಕೇವಲ 30ಸಾವಿರ ಮತಗಳನ್ನು ಪಡೆದಿರುವ ಈಶ್ವರಪ್ಪ, ಠೇವಣಿ ಉಳಿಸಿಕೊಳ್ಳಲೂ ವಿಫಲರಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ, ಹಾಲಿ ಸಂಸದ ಬಿವೈ ರಾಘವೇಂದ್ರ 7,54,380 ಮತ ಪಡೆದಿದ್ದು, ಸಮೀಪದ ಪ್ರತಿಸ್ಪರ್ಧಿ ಗೀತಾ ಶಿವರಾಜ್ ಕುಮಾರ್ ವಿರುದ್ಧ 2,31,706 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.

ವಿನಯ್‌ಕುಮಾರ್

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಕಾಂಗ್ರೆಸ್‌ನ ಯುವನಾಯಕ ವಿನಯ್ ಕುಮಾರ್ ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಕಾಂಗ್ರೆಸ್‌, ಪ್ರಭಾವಿ ನಾಯಕ ಶಾಮನೂರು ಶಿವಶಂಕರಪ್ಪ ಅವರ ಸೊಸೆ, ಸಂಪುಟ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಿತು.

ಟಿಕೆಟ್ ಕೈತಪ್ಪಿದ ಬಳಿಕ ವಿನಯ್‌ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರು. ಅವರ ಸ್ಪರ್ಧೆಯಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ತೊಡಕಾಗಬಹುದು ಎನ್ನುವ ಯೋಚನೆಯಿಂದ ಕೈ ನಾಯಕರು ಮನವೊಲಿಸಲು ಪ್ರಯತ್ನಿಸಿದರು. ಆದರೆ, ವಿನಯ್ ಕುಮಾರ್ ಸ್ಪರ್ಧೆಯಿಂದ ಹಿಂದೆ ಸರಿಯಲಿಲ್ಲ. ಆದರೆ, ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ಯಾವುದೇ ಅಡೆತಡೆಯಾಗಲಿಲ್ಲ ಎನ್ನುವುದು ಫಲಿತಾಂಶದ ಬಳಿಕ ಗೊತ್ತಾಗಿದೆ. ಜಿ.ಬಿ. ವಿನಯ್ ಕುಮಾರ್ ಕೇವಲ 42,907 ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

ಕಾಂಗ್ರೆಸ್‌ನ ಪ್ರಭಾ ಮಲ್ಲಿಕಾರ್ಜುನ್ 4,27,926 ಮತಗಳನ್ನು ಪಡೆದಿದ್ದಾರೆ. ಗಾಯತ್ರಿ ಸಿದ್ದೇಶ್ವರ 3,84,391 ಮತಗಳನ್ನು ಪಡೆದಿದ್ದಾರೆ.

ಚಿಕ್ಕೋಡಿಯಿಂದ ಶಂಭು ಕಲ್ಲೋಳ್ಕರ್

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳ್ಕರ್ ಅವರು ಕಾಂಗ್ರೆಸ್ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಪ್ರಭಾವಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರೀಯಾಂಕಾ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಲಾಯಿತು. ಇದರಿಂದ ಶಂಭು ಕಲ್ಲೋಳ್ಕರ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು.

ಶಂಭು ಕಲ್ಲೋಳ್ಕರ್ ಅವರು 2013ರಲ್ಲೂ ರಾಯಭಾಗ ವಿಧಾನಸಭಾ (ಮೀಸಲು) ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಮಹಾವೀರ ಮೋದಿ ಅವರಿಗೆ ಪಕ್ಷ ಆಗ ಮಣೆ ಹಾಕಿತ್ತು. ಆಗಲೂ ಬಂಡಾಯವೆದ್ದಿದ್ದ ಶಂಭು ಕಲ್ಲೋಳ್ಕರ್ ಸ್ವತಂತ್ರ ವಾಗಿ ಸ್ಪರ್ಧಿಸಿ 54,000ಕ್ಕಿಂತ ಅಧಿಕ ಮತಗಳನ್ನು ಪಡೆದು ಕೇವಲ 2631 ಮತಗಳ ಅಂತರದಿಂದ ಬಿಜೆಪಿಯ ದುರ್ಯೋಧನ ಐಹೊಳೆ ವಿರುದ್ಧ ಪರಾಭವಗೊಂಡಿದ್ದರು.

ದಲಿತ ಸಮುದಾಯಕ್ಕೆ ಸೇರಿರುವ ಕಲ್ಲೋಳ್ಕರ್ ಈ ಬಾರಿ ಮತ್ತೆ ಪಕ್ಷೇತರರಾಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಅವರ ಸ್ಪರ್ಧೆ ಕಾಂಗ್ರೆಸ್‌ಗೆ ಮುಳ್ಳಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಎಲ್ಲ ವಿಶ್ಲೇಷಣೆಗಳನ್ನು ಮೂಲೆಗೆ ತಳ್ಳಿ ಕಾಂಗ್ರೆಸ್‌ ಅಭ್ಯರ್ಥಿ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಪ್ರಿಯಾಂಕಾ ಜಾರಕಿಹೊಳಿ 7,13,461 ಮತ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ್‌ ಜೊಲ್ಲೆ 6,22,627 ಮತ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ಶಂಭು ಕಲ್ಲೋಳ್ಕರ್ 25,351 ಮತ ಪಡೆದು, ಠೇವಣಿ ಉಳಿಸಿಕೊಳ್ಳಲೂ ವಿಫಲರಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಪಕ್ಷೇತ್ರರರಾಗಿ ಸ್ಪರ್ಧೆ ಮಾಡುವ ಮೂಲಕ ರಾಜ್ಯದ ಗಮನ ಸೆಳೆದಿದ್ದ ಈ ಮೂವರೂ ಅಭ್ಯರ್ಥಿಗಳು ಪಕ್ಷದ ಅಭ್ಯರ್ಥಿಯ ಸೋಲು-ಗೆಲುವಿಗೆ ಕಾರಣವಾಗದೇ, ಪ್ರಬಲ ಸ್ಪರ್ಧೆಯನ್ನೂ ಒಡ್ಡದೇ ಕನಿಷ್ಠ ಠೇವಣಿ ಉಳಿಸಿಕೊಳ್ಳುವ ಮಟ್ಟಿನ ಪೈಪೋಟಿಯನ್ನೂ ನೀಡದೆ ಮುಖಭಂಗ ಅನುಭವಿಸಿದ್ದಾರೆ.

Read More
Next Story