ಚುನಾವಣೆ ವಿಶೇಷ | ಇಬ್ಬರು ಮಾಜಿ ಸಿಎಂಗಳಿಗೆ ಅಗ್ನಿಪರೀಕ್ಷೆ, ಮಹಿಳೆಯರಿಬ್ಬರ ಮಧ್ಯೆ ಬಿಗ್ ಫೈಟ್
x

ಚುನಾವಣೆ ವಿಶೇಷ | ಇಬ್ಬರು ಮಾಜಿ ಸಿಎಂಗಳಿಗೆ ಅಗ್ನಿಪರೀಕ್ಷೆ, ಮಹಿಳೆಯರಿಬ್ಬರ ಮಧ್ಯೆ ಬಿಗ್ ಫೈಟ್


ರಾಜ್ಯದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, 14 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಉತ್ತರಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಕ್ಷೇತ್ರಗಳಿಗಾಗಿ ನಡೆಯುತ್ತಿರುವ ಚುನಾವಣೆಯು ಹಲವು ವಿಶೇಷತೆಗಳಿಂದ ಕೂಡಿದ್ದು, ಇಬ್ಬರು ಮಾಜಿ ಸಿಎಂಗಳಿಗೆ ಅಗ್ನಿಪರೀಕ್ಷೆಯಾದರೆ, ಒಂದು ಕ್ಷೇತ್ರದಲ್ಲಿ ಮಹಿಳೆಯರಿಬ್ಬರ ನಡುವೆ ಜಿದ್ದಾಜಿದ್ದಿನ ಫೈಟ್‌ ನಡೆಯುತ್ತಿದೆ. ಹಾಗೇ ಒಬ್ಬರು ಕೇಂದ್ರ ಸಚಿವರು ಕಣದಲ್ಲಿದ್ದರೆ, ಮತ್ತೆ ಕೆಲವು ಕ್ಷೇತ್ರಗಳಲ್ಲಿ ಹೊಸಬರು ಅಖಾಡಕ್ಕೆ ಇಳಿದಿದ್ದಾರೆ.

ಮಾಜಿ ಸಿಎಂಗಳಿಗೆ ಅಗ್ನಿಪರೀಕ್ಷೆ

ಹಾವೇರಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬೆಳಗಾವಿಯಿಂದ ಜಗದೀಶ್‌ ಶೆಟ್ಟರ್‌ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹರಸಹಾಸ ಪಡುತ್ತಿದ್ದಾರೆ. ಈ ಇಬ್ಬರು ಮಾಜಿ ಸಿಎಂಗಳಿಗೆ ಇಂದು ಅಗ್ನಿಪರೀಕ್ಷೆ ಎದುರಾಗಿದೆ. ಇವರ ರಾಜಕೀಯ ಭವಿಷ್ಯ ಏನಾಗಲಿದೆ ಎನ್ನುವ ಪ್ರಶ್ನೆಗೆ ಜೂನ್‌ 4ರಂದು ಉತ್ತರ ಸಿಗಲಿದೆ.

ಜಗದೀಶ್‌ ಶೆಟ್ಟರ್‌ ಅವರು ಕಳೆದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಬಿಜೆಪಿ ಟಿಕೆಟ್‌ ನೀಡಲಿಲ್ಲ ಎನ್ನುವ ಕಾರಣಕ್ಕೆ ಸಿಡಿದೆದ್ದು ಕಾಂಗ್ರೆಸ್ ಸೇರಿದ್ದರು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಚಿಹ್ನೆಯ ಮೇಲೆ ಚುನಾವಣೆಗೆ ಸ್ಪರ್ಧಿಸಿದ್ದರು. 1994ರಿಂದ ತಾವೇ ಪ್ರತಿನಿಧಿಸುತ್ತಾ ಬಂದಿದ್ದ ತಮ್ಮ ಕ್ಷೇತ್ರದಲ್ಲೇ ತಮ್ಮದೇ ಶಿಷ್ಯ ಮಹೇಶ್‌ ತೆಂಗಿನಕಾಯಿ ವಿರುದ್ಧವೇ ಕಳೆದ 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡರು. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಶೆಟ್ಟರ್‌ ಅವರು ಮತ್ತೆ ತಮ್ಮ ಮಾತೃಪಕ್ಷ ಬಿಜೆಪಿಗೆ ವಾಪಸ್ಸಾದರು. ಧಾರವಾಡ ಲೋಕಸಭಾ ಟಿಕೆಟ್ ಮೇಲೆ ಕಣ್ಣಿಟ್ಟಿದ್ದರು ಆದರೆ ಜೋಶಿ ಅವರಿಂದಾಗಿ ಶೆಟ್ಟರ್‌ಗೆ ಟಿಕೆಟ್‌ ಕೈತಪ್ಪಿತು. ಸಧ್ಯ ಅವರಿಗೆ ಬೆಳಗಾವಿ ಟಿಕೆಟ್‌ ನೀಡಿದ್ದಾರೆ. ಗೆದ್ದರೆ ರಾಜಕೀಯದಲ್ಲಿ ಭವಿಷ್ಯ ಕಾಣಬಹುದು. ಇಲ್ಲವಾದರೆ, ರಾಜಕೀಯ ಅಸ್ತಿತ್ವಕ್ಕೇ ಸಂಚಕಾರ ಬರಬಹುದು ಎಂದು ಹೇಳಲಾಗುತ್ತಿದೆ.

ಬಿಜೆಪಿ ಅಧಿಕಾರವಧಿಯಲ್ಲಿ ಯಡಿಯೂರಪ್ಪ ನಂತರ ರಾಜ್ಯ ಬಿಜೆಪಿ ಸರ್ಕಾರವನ್ನು ಮುನ್ನಡೆಸಿದ ಬಸವರಾಜ​ ಬೊಮ್ಮಾಯಿ ಅವರು, 2023ರ ವಿಧಾನಸಭೆ ಚುನಾವಣೆಯ ಪರೀಕ್ಷೆಯಲ್ಲಿ ವಿಫಲರಾಗಿದ್ದರು. ಇದೀಗ ಅವರಿಗೆ ಲೋಕಸಭೆ ಚುನಾವಣೆಯ ಅಗ್ನಿ ಪರೀಕ್ಷೆ ಎದುರಾಗಿದೆ. ಈ ಪರೀಕ್ಷೆಯಲ್ಲಿ ಗೆದ್ದರೆ, ಕೇಂದ್ರದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೇರಿದರೆ ಸಚಿವರಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಸೋತರೆ ಶಾಸಕಾಗಿ ಉಳಿಯಲಿದ್ದಾರೆ.

ಕೇಂದ್ರ ಸಚಿವರಿಗೆ ಪ್ರತಿಷ್ಠೆ ಪ್ರಶ್ನೆ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಸೋಲಿಲ್ಲದ ಸರದಾರರಾಗಿ ಸತತ ನಾಲ್ಕು ಬಾರಿ ಗೆಲುವು ಸಾಧಿಸಿ, ಐದನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹಿಂದೆಂದಿಗಿಂತಲೂ ಈ ಬಾರಿ ಅವರು ಚುನಾವಣೆಯನ್ನು ಗಂಭೀರವಾಗಿ ತಗೆದುಕೊಂಡಿದ್ದಾರೆ. ಏಕೆಂದರೆ, ಅವರ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಸಮರ ಸಾರಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್‌ ಗ್ಯಾರಂಟಿಗಳು ಕ್ಷೇತ್ರದಲ್ಲಿ ಭಾರೀ ಸದ್ದು ಮಾಡಿವೆ. ಹಾಗಾಗಿ ಜೋಶಿ ಅವರಿಗೆ ಮೊದಲ ಬಾರಿಗೆ ಕಠಿಣ ಸವಾಲು ಎದುರಾಗಿದೆ.

ಈ ಸವಾಲಿನ ಸಂದರ್ಭದಲ್ಲಿ ಅವರು ಗೆಲುವು ಕಂಡರೆ, ವರ್ಚಸ್ಸು ಹೆಚ್ಚುತ್ತದೆ. ಒಂದುವೇಳೆ ಸೋತರೆ ಮುಖಭಂಗವಾಗುವುದು ನಿಶ್ಚಿತ. ಏಕೆಂದರೆ ಕಾಂಗ್ರೆಸ್‌ ನ ಅಭ್ಯರ್ಥಿ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಹೊಸಬರ ವಿರುದ್ಧ ಸೋತರೆ ಅವಮಾನಕರ ಸಂಗತಿಯಾಗಲಿದೆ. ಹಾಗಾಗಿ ಈ ಚುನಾವಣೆ ಅವರಿಗೆ ಪ್ರತಿಷ್ಠೆಯ ಕಣವಾಗಿದೆ.

ದಾವಣಗೆರೆಯಲ್ಲಿ ಮಹಿಳಾಮಣಿಯರ ನಡುವೆ ಬಿಗ್‌ ಫೈಟ್

ಈ ಬಾರಿಯೂ ದಾವಣಗೆರೆಯಲ್ಲಿ ಸಿದ್ದೇಶ್ವರ್ & ಶಾಮನೂರು ಕುಟುಂಬದ ರಾಜಕೀಯ ಸಮರ ಮುಂದುವರಿದಿದೆ. ಆದರೆ ಈ ಬಾರಿ ಅದೇ ಕುಟುಂಬದಿಂದ ಮಹಿಳಾ ಮಣಿಗಳಿಬ್ಬರು ಅದೃಷ್ಟ ಪರೀಕ್ಷೆಗಿಳಿದಿದಾರೆ. ಬಿಜೆಪಿಯಿಂದ ಸಂಸದ ಸಿದ್ದೇಶ್ವರ್ ಪತ್ನಿ ಗಾಯತ್ರಿ, ಕಾಂಗ್ರೆಸ್‌ನಿಂದ ಸಚಿವ ಮಲ್ಲಿಕಾರ್ಜುನ್‌ ಪತ್ನಿ ಡಾ. ಪ್ರಭಾ ಚುನಾವಣಾ ಅಖಾಡಕ್ಕೆ ಮೊದಲ ಬಾರಿ ಧುಮುಕಿದ್ದಾರೆ.

ಮಹಿಳೆಯರು ಕರ್ನಾಟಕದಿಂದ ಗೆದ್ದು ಪಾರ್ಲಿಮೆಂಟ್‌ಗೆ ಹೋಗಿದ್ದು ತುಂಬಾ ವಿರಳ. 1996ರಿಂದಲೇ ನೋಡಿದ್ರೆ ಈವರೆಗೂ ಶೇ 5ರಷ್ಟು ಮಹಿಳೆಯರು ಸಂಸತ್‌ ಪ್ರವೇಶಿಸಿದ್ದಾರೆ. ಈಗ ದಾವಣಗೆರೆಯಿಂದ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳೆರಡೂ ಮಹಿಳೆಯರಿಗೆ ಟಿಕೆಟ್‌ ಕೊಟ್ಟಿರುವುದರಿಂದ ರಾಜ್ಯದಿಂದ ಈ ಬಾರಿ ಕನಿಷ್ಟ ಒಬ್ಬ ಮಹಿಳೆಯಾದರೂ ಸಂಸತ್‌ ಪ್ರವೇಶಿಸುವು ನಿಶ್ಚಯವಾದಂತಿದೆ.

ಅಖಾಡದಲ್ಲಿ ಹೊಸಮುಖಗಳೇ ಹೆಚ್ಚು

ಬಿಜೆಪಿಯು ರಾಜ್ಯದಲ್ಲಿ 15 ಹಾಲಿ ಸಂಸದರಿಗೆ ಈ ಬಾರಿ ಟಿಕೆಟ್‌ ನಿರಾಕರಿಸಿದೆ. ಉತ್ತರ ಕನ್ನಡದ ಅನಂತಕುಮಾರ್‌ ಹೆಗಡೆ, ಬೆಳಗಾವಿಯ ಮಂಗಳಾ ಅಂಗಡಿ, ಕೊಪ್ಪಳದ ಕರಡಿ ಸಂಗಣ್ಣ, ಬಳ್ಳಾರಿಯ ವೈ ದೇವೆಂದ್ರಪ್ಪಗೆ ಟಿಕೆಟ್ ಸಿಕ್ಕಿಲ್ಲ. ಹಾವೇರಿಯ ಶಿವಕುಮಾರ್‌ ಉದಾಸಿ ತಾವೇ ಕಣದಿಂದ ಹಿಂದೆ ಸರಿದಿದ್ದಾರೆ.

ಇಂದು ಮತದಾನ ನಡೆಯಲಿರುವ 14ರಲ್ಲಿ 10 ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಪೈಕಿ ಒಬ್ಬರಾದ್ರೂ ಚುನಾವಣಾ ರಾಜಕಾರಣಕ್ಕೇ ಹೊಸಬರಾದವರು ಅಖಾಡಕ್ಕಿಳಿದಿದ್ದಾರೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಕಲಬುರ್ಗಿ, ಬೀದರ್, ರಾಯಚೂರು, ಕೊಪ್ಪಳ, ಹಾವೇರಿ, ದಾವಣಗೆರೆಯಲ್ಲಿ ಕಾಂಗ್ರೆಸ್‌ ಅಥವಾ ಬಿಜೆಪಿಯಿಂದ ಒಬ್ಬರಾದ್ರೂ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಲು ಸೆಣೆಸಾಡುತ್ತಿದ್ದಾರೆ.

ಕಾಂಗ್ರೆಸ್‌ ಪಕ್ಷದಿಂದ 12 ಅಭ್ಯರ್ಥಿಗಳು ಮೊದಲ ಬಾರಿಗೆ ಲೋಕಸಭಾ ಚುನಾವಣೆ ಎದುರಿಸುತ್ತಿದ್ದಾರೆ. ಆ ಪೈಕಿ ಏಳು ಮಂದಿ ಚುನಾವಣಾ ರಾಜಕಾರಣಕ್ಕೇ ಹೊಸಬರು ಎನ್ನುವುದು ವಿಶೇಷ. ಮೊದಲ ಬಾರಿಗೆ ಅವರು ಚುನಾವಣಾ ಕಣಕ್ಕೆ ಧುಮುಕಿದ್ದಾರೆ.

ಮೊದಲ ಬಾರಿಗೆ ಚುನಾವಣಾ ರಾಜಕಾರಣಕ್ಕೆ ಇಳಿದವರು

ಪ್ರಿಯಾಂಕಾ ಜಾರಕಿಹೊಳಿ (ಚಿಕ್ಕೋಡಿ), ಮೃಣಾಲ್‌ ಹೆಬ್ಬಾಳ್ಕರ್‌ (ಬೆಳಗಾವಿ), ಸಂಯುಕ್ತಾ ಪಾಟೀಲ್‌ (ಬಾಗಲಕೋಟೆ), ರಾಧಾಕೃಷ್ಣ ದೊಡ್ಡಮನಿ (ಕಲಬುರಗಿ), ಸಾಗರ್‌ ಖಂಡ್ರೆ (ಬೀದರ್), ಜಿ. ಕುಮಾರ್‌ ನಾಯಕ (ರಾಯಚೂರು)‌, ಡಾ. ಪ್ರಭಾ ಮಲ್ಲಿಕಾರ್ಜುನ (ದಾವಣಗೆರೆ). ಈ ಏಳು ಮಂದಿ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಅವರಿಗೆ ಈ ಮೊದಲು ಯಾವುದೇ ಚುನಾವಣೆ ಎದುರಿಸಿದ ಅನುಭವವಿಲ್ಲ.

ಮೊದಲ ಬಾರಿಗೆ ಲೋಕಸಭಾ ಚುನಾವಣೆ ಎದುರಿಸುತ್ತಿರುವವರು

ಕಾಂಗ್ರೆಸ್‌ನ ಐವರು ಅಭ್ಯರ್ಥಿಗಳು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಅನುಭವ ಹೊಂದಿದ್ದರೂ, ಇದೇ ಮಾದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.

ರಾಜು ಅಲಗೂರ - 2014ರಲ್ಲಿ ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ಸಾಬೂನು ಮಾರ್ಜಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಪಡೆದಿದ್ದರು.

ಇ. ತುಕಾರಾಂ - 2023ರ ರಾಜ್ಯ ವಿಧಾಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಗೆಲುವು ಸಾಧಿಸಿದ್ದರು. ಸದ್ಯ ಹಾಲಿ ಶಾಸಕರಾಗಿದ್ದು ಈ ಬಾರಿಯ ಬಳ್ಳಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.

ಆನಂದ ಗಡ್ಡದೇವರಮಠ - 2013ರಲ್ಲಿ ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯಬೇಕೆಂದಿದ್ದರು. ಆದರೆ, ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಟೀಕೆಟ್ ಸಿಕ್ಕಿದ್ದರಿಂದ ಆನಂದಸ್ವಾಮಿ ಗಡ್ಡದೇವರಮಠ ಅವರು ಬಂಡೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು, ಸೋಲು ಕಂಡಿದ್ದರು.

ವಿನೋದ್‌ ಅಸೂಟಿ - 2019ರ ವಿಧಾನಸಭಾ ಚುನಾವಣೆಯಲ್ಲಿ ಶಂಕರ್ ಪಾಟೀಲ್ ಮುನೇನಕೊಪ್ಪ ವಿರುದ್ಧ ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಕಂಡಿದ್ದರು.

ಡಾ. ಅಂಜಲಿ ನಿಂಬಾಳ್ಕರ್‌ - 2018ರ ವಿಧಾನಸಭಾ ಚುನಾವಣೆಯಲ್ಲಿ ಖಾನಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಣಕ್ಕಿಳಿದಿದ್ದ ಅಂಜಲಿ ನಿಂಬಾಳ್ಕರ್ ಅವರು ಬಿಜೆಪಿ ಅಭ್ಯರ್ಥಿ ವಿಠಲ ಹಲಗೇಕರ ವಿರುದ್ಧ ಸೋಲುಂಡಿದ್ದರು.

ಇಬ್ಬರು ಅನುಭವಿ ಅಭ್ಯರ್ಥಿಗಳು

ಈ ಬಾರಿ ಕಾಂಗ್ರೆಸ್‌ನಿಂದ ಕಣಕ್ಕಿಳಿದವರ ಪೈಕಿ ಇಬ್ಬರು ಈ ಹಿಂದೆ ಲೋಕಸಭಾ ಚುನಾವಣೆಯನ್ನು ಎದುರಿಸಿದ ಅನುಭವಿಗಳಿದ್ದಾರೆ.

ಗೀತಾ ಶಿವರಾಜಕುಮಾರ್‌ - ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅನುಭವ ಇದೆ. ಅವರು 2014ರ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಆಗ ಮಧು ಬಂಗಾರಪ್ಪ ಅವರು ಜೆಡಿಎಸ್‌ನಲ್ಲಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಗೀತಾ ಶಿವರಾಜ್‌ ಕುಮಾರ್‌ ಅವರು ಸೋಲು ಕಂಡಿದ್ದರು.

ರಾಜಶೇಖರ್‌ ಹಿಟ್ನಾಳ - ಕೊಪ್ಪಳ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಾಜಶೇಖರ ಹಿಟ್ನಾಳ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಕರಡಿ ಸಂಗಣ್ಣ ಎದುರು ಕಣಕ್ಕಿಳಿದು ಸೋಲು ಕಂಡಿದ್ದರು. ಈಗ ಎರಡನೇ ಬಾರಿಗೆ ಸ್ಪರ್ಧೆಯಲ್ಲಿದ್ದಾರೆ.

Read More
Next Story