
ಅಮೆರಿಕಾದ ಕಾಮಿಕ್-ಕಾನ್ 2026 ರಲ್ಲಿ ರಾಕಿಂಗ್ ಸ್ಟಾರ್ ಯಶ್ ಗ್ರ್ಯಾಂಡ್ ಎಂಟ್ರಿ
ಕಾಮಿಕ್-ಕಾನ್ 2026 ರಂಗಿನಲ್ಲಿ ಯಶ್ ಅಬ್ಬರ: 'ಡ್ಯಾಡಿಸ್ ಹೋಮ್' ಎಂದ ಫ್ಯಾನ್ಸ್
'ಟಾಕ್ಸಿಕ್' ಚಿತ್ರದಲ್ಲಿ ಯಶ್ ಅವರು ನಿರ್ವಹಿಸುತ್ತಿರುವ 'ರಾಯ' ಎಂಬ ಪಾತ್ರವು ಹೇಳುವ 'ಡ್ಯಾಡಿಸ್ ಹೋಮ್' ಸಂಭಾಷಣೆ ಈಗ ವಿದೇಶದಲ್ಲೂ ಹವಾ ಸೃಷ್ಟಿಸಿದೆ.
ರಾಕಿಂಗ್ ಸ್ಟಾರ್ ಯಶ್ ಅವರ ಕ್ರೇಜ್ ದಿನದಿಂದ ದಿನಕ್ಕೆ ಗಡಿಗಳನ್ನು ದಾಟಿ ಬೆಳೆಯುತ್ತಲೇ ಇದೆ. ಇತ್ತೀಚೆಗೆ ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಜಾಗತಿಕ ಮಟ್ಟದ 'ಕಾಮಿಕ್-ಕಾನ್ - 2026' ಕಾರ್ಯಕ್ರಮದಲ್ಲಿ ಯಶ್ ಅವರ ಉಪಸ್ಥಿತಿ ದೊಡ್ಡ ಮಟ್ಟದ ಸದ್ದನ್ನೇ ಮಾಡಿದೆ. 'ರಾಮಾಯಣ' ಸಿನಿಮಾದ ವಿಶೇಷ ಪ್ರಚಾರಕ್ಕಾಗಿ ಹಾಗೂ ಅದರ ಟ್ರೈಲರ್ ಪ್ರದರ್ಶನದ ಸಲುವಾಗಿ ಯಶ್ ಅವರು ಚಿತ್ರತಂಡದೊಂದಿಗೆ ಅಲ್ಲಿಗೆ ಭೇಟಿ ನೀಡಿದ್ದರು.
ವೇದಿಕೆಯ ಮೇಲೆ 'ರಾಮಾಯಣ' ಚಿತ್ರದ ನಾಯಕ ರಣಬೀರ್ ಕಪೂರ್, ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿದ್ದರೂ, ಸಭಾಂಗಣದಲ್ಲಿದ್ದ ಭಾರತೀಯ ಅಭಿಮಾನಿಗಳು ಯಶ್ ಅವರನ್ನು ಕಂಡೊಡನೆ ಅತ್ಯಂತ ಉತ್ಸಾಹದಿಂದ ಕೇಕೆ ಹಾಕಲು ಪ್ರಾರಂಭಿಸಿದರು. ಆಂಕರ್ ಅವರು 'ಕೆಜಿಎಫ್' ಸರಣಿಯ ಬೃಹತ್ ಯಶಸ್ಸನ್ನು ನೆನಪಿಸಿಕೊಂಡು ಯಶ್ ಅವರನ್ನು ಗೌರವದಿಂದ ವೇದಿಕೆಗೆ ಆಹ್ವಾನಿಸಿದಾಗ, ರಣಬೀರ್ ಕಪೂರ್ ಸೇರಿದಂತೆ ಸಂಪೂರ್ಣ ಚಿತ್ರತಂಡವೇ ಎದ್ದು ನಿಂತು ಅವರಿಗೆ ಗೌರವ ಸಲ್ಲಿಸಿತು.
ವಿಶೇಷವೆಂದರೆ, ರಾಮಾಯಣ ಚಿತ್ರದ ಪ್ರಚಾರದ ನಡುವೆಯೂ ಅಭಿಮಾನಿಗಳು ಯಶ್ ಅವರ ಮುಂಬರುವ 'ಟಾಕ್ಸಿಕ್' ಸಿನಿಮಾದ 'ಡ್ಯಾಡಿಸ್ ಹೋಮ್' ಎಂಬ ಖ್ಯಾತ ಡೈಲಾಗ್ ಅನ್ನು ಕೂಗಿ ತಮ್ಮ ನೆಚ್ಚಿನ ನಟನ ಮೇಲಿರುವ ಅಭಿಮಾನವನ್ನು ವ್ಯಕ್ತಪಡಿಸಿದರು. 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಅವರು ನಿರ್ವಹಿಸುತ್ತಿರುವ 'ರಾಯ' ಎಂಬ ಶಕ್ತಿಯುತ ಪಾತ್ರವು ಹೇಳುವ ಈ ಸಂಭಾಷಣೆ ಈಗ ವಿದೇಶದಲ್ಲೂ ಹವಾ ಸೃಷ್ಟಿಸಿದೆ. 'ಕೆಜಿಎಫ್' ನೀಡಿದ ಖದರ್ ಅನ್ನು ಹಾಗೆಯೇ ಉಳಿಸಿಕೊಂಡು ಮುನ್ನಡೆಯುತ್ತಿರುವ ರಾಕಿ ಭಾಯ್, ಅಂತಾರಾಷ್ಟ್ರೀಯ ವೇದಿಕೆಯಲ್ಲೂ ತಮ್ಮ ನೈಜ ನಾಯಕತ್ವ ಹಾಗೂ ಮಾಸ್ ಕ್ರೇಜ್ ಅನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

