
'ತಬಾಹಿ' ಹಾಡಿನ ಟೀಕೆಗಳಿಗೆ ಮೌನ ಮುರಿದ ನಟ ಯಶ್; ರಾಯ ಹೇಳಿದ್ದೇನು?
'ಟಾಕ್ಸಿಕ್' ಸಿನಿಮಾದ ಈ ಹಾಡಿನಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಹಾಗೂ ಯಶ್ ಒಟ್ಟಾಗಿ ಅಭಿನಯಿಸಿದ್ದು, ಇವರಿಬ್ಬರ ನಡುವಿನ ಕೆಮಿಸ್ಟ್ರಿ ಹಾಗೂ ದೃಶ್ಯಗಳ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದವು
ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ 'ತಬಾಹಿ' ಹಾಡಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ವ್ಯಾಪಕ ಟೀಕೆ ಹಾಗೂ ಟ್ರೋಲ್‌ಗಳ ಬಗ್ಗೆ ನಟ ಯಶ್ ಕೊನೆಗೂ ಮೌನ ಮುರಿದಿದ್ದಾರೆ. ಹಾಡಿನಲ್ಲಿ ಅಶ್ಲೀಲತೆಯಿದೆ ಎಂಬ ಆರೋಪಗಳನ್ನು ತಳ್ಳಿಹಾಕಿರುವ ಅವರು, ಸಿನಿಮಾದಲ್ಲಿ ಎಲ್ಲಿಯೂ ಸಭ್ಯತೆಯ ಗಡಿ ದಾಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್ ಅವರಿಗೆ, ತಬಾಹಿ ಹಾಡಿನ ದೃಶ್ಯಗಳನ್ನು ಕೆಲವರು ಕಾಂಡೋಮ್ ಜಾಹೀರಾತಿಗೆ ಹೋಲಿಸುತ್ತಿರುವ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ತಮಾಷೆಯಾಗಿಯೇ ಪ್ರತಿಕ್ರಿಯಿಸಿದ ಯಶ್, ಒಂದು ವೇಳೆ ನಾನು ಕಾಂಡೋಮ್ ಜಾಹೀರಾತಿನಲ್ಲಿ ನಟಿಸುವುದಾದರೆ ಅದನ್ನು ಹಣಕ್ಕಾಗಿ ಮಾಡುತ್ತೇನೆಯೇ ಹೊರತು, ಎಂದಿಗೂ ಉಚಿತವಾಗಿ ಮಾಡುವುದಿಲ್ಲ ಎಂದು ಹೇಳುವ ಮೂಲಕ ಟೀಕಾಕಾರರಿಗೆ ನೇರ ಉತ್ತರ ನೀಡಿದ್ದಾರೆ.
ಅಶ್ಲೀಲತೆ ತಪ್ಪು, ಮಿತಿ ಅರಿತಿದ್ದೇವೆ
ಹಾಡಿನಲ್ಲಿನ ದೃಶ್ಯಗಳ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಸಿನಿಮಾದಲ್ಲಿ ಅಶ್ಲೀಲತೆಯ ಗಡಿಯನ್ನು ಎಲ್ಲಿಯೂ ದಾಟಿಲ್ಲ. ಅಶ್ಲೀಲತೆ ಎಂಬುದು ತಪ್ಪು. ಹಾಡನ್ನು ಸರಿಯಾಗಿ ಗಮನಿಸಿದರೆ ಅದರಲ್ಲಿ ಯಾವುದೇ ಚುಂಬನದ ದೃಶ್ಯಗಳಿಲ್ಲ ಎಂಬುದು ಅರ್ಥವಾಗುತ್ತದೆ. ಪ್ರತಿಯೊಂದಕ್ಕೂ ಒಂದು ಮಿತಿ ಇದೆ ಮತ್ತು ಆ ಮಿತಿಯನ್ನು ನಾವು ಸ್ಪಷ್ಟವಾಗಿ ಅರಿತುಕೊಂಡಿದ್ದೇವೆ ಎಂದು ಹೇಳಿದ್ದಾರೆ. ನೋಡುಗರಿಗೆ ಸಿನಿಮಾ ಆಕರ್ಷಕವಾಗಿ ಕಾಣಬೇಕು ಎಂಬುದಷ್ಟೇ ಚಿತ್ರತಂಡದ ಪ್ರಮುಖ ಗುರಿಯಾಗಿದ್ದು, ಟಾಕ್ಸಿಕ್ ಸಂಪೂರ್ಣವಾಗಿ ಇಂದಿನ ಯುವ ಪೀಳಿಗೆಯನ್ನು (ಜೆನ್–ಜೀ) ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿಸಿರುವ ಸಿನಿಮಾ ಎಂದು ಯಶ್ ವಿವರಿಸಿದ್ದಾರೆ.
ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದ ಹಾಡು
ಬಿಡುಗಡೆಗೆ ಸಿದ್ಧವಾಗಿರುವ 'ಟಾಕ್ಸಿಕ್' ಸಿನಿಮಾದ ಈ ಹಾಡಿನಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಹಾಗೂ ಯಶ್ ಒಟ್ಟಾಗಿ ಅಭಿನಯಿಸಿದ್ದಾರೆ. ಈ ಹಾಡು ಬಿಡುಗಡೆಯಾದಾಗಿನಿಂದಲೂ ಇವರಿಬ್ಬರ ನಡುವಿನ ಕೆಮಿಸ್ಟ್ರಿ ಹಾಗೂ ದೃಶ್ಯಗಳ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದವು. ಕೆಲವು ದೃಶ್ಯಗಳು ಸಭ್ಯತೆ ಮೀರಿದೆ ಎಂದು ಒಂದು ವರ್ಗ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿತ್ತು. ಇದೀಗ ನಾಯಕ ನಟನೇ ನೇರವಾಗಿ ಈ ಎಲ್ಲಾ ಗೊಂದಲಗಳಿಗೆ ಸ್ಪಷ್ಟನೆ ನೀಡಿದ್ದಾರೆ.

