
‘ಆಪ್ ಕಿ ಅದಾಲತ್’ನಲ್ಲಿ ಯಶ್
‘ಆಪ್ ಕಿ ಅದಾಲತ್’ನಲ್ಲಿ ಯಶ್; ಶಾರುಖ್ ಖಾನ್ ಬಗ್ಗೆ ಹೇಳಿದ್ದೇನು?
‘ಕೆಜಿಎಫ್’–‘ಜೀರೋ’ ಬಾಕ್ಸ್ ಆಫೀಸ್ ಕ್ಲ್ಯಾಶ್ ನೆನಪಿಸಿಕೊಂಡ ರಾಕಿಂಗ್ ಸ್ಟಾರ್ ಯಶ್, ತಾವು ಈಗಲೂ ಶಾರುಖ್ ಖಾನ್ ಅವರ ಅಭಿಮಾನಿ ಎಂದಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರು ಖ್ಯಾತ ನಿರೂಪಕ ರಜತ್ ಶರ್ಮಾ ನಡೆಸಿಕೊಡುವ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸಾಮಾನ್ಯವಾಗಿ ರಾಜಕೀಯ ನಾಯಕರ ಸಂದರ್ಶನಗಳಿಗೆ ಹೆಸರುವಾಸಿಯಾಗಿರುವ ಈ ಕಾರ್ಯಕ್ರಮದಲ್ಲಿ ಸಿನಿಮಾ ಕ್ಷೇತ್ರದ ಗಣ್ಯರೂ ಕೆಲವೊಮ್ಮೆ ಕಾಣಿಸಿಕೊಳ್ಳುತ್ತಾರೆ. ಇದೀಗ ಇದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವ ಯಶ್ ಅವರ ಮಾತುಗಳು ಅಭಿಮಾನಿಗಳ ಗಮನ ಸೆಳೆದಿವೆ.
ಕರ್ನಾಟಕದ ಸಿನಿಮಾ ರಂಗದಿಂದ ಈ ಕಾರ್ಯಕ್ರಮದ ವೇದಿಕೆ ಏರಿದ ಪ್ರಮುಖ ನಟರ ಪೈಕಿ ಯಶ್ ಮೊದಲಿಗರಾಗಿದ್ದಾರೆ. ಕಾರ್ಯಕ್ರಮದಲ್ಲಿ ತಮ್ಮ ಸಿನಿ ಪಯಣ, ಅಭಿಮಾನಿಗಳೊಂದಿಗಿನ ಒಡನಾಟ ಸೇರಿದಂತೆ ಹಲವು ವಿಚಾರಗಳ ಕುರಿತು ಅವರು ಮುಕ್ತವಾಗಿ ಮಾತನಾಡಿದ್ದಾರೆ. ಕಾರ್ಯಕ್ರಮದ ಪ್ರೋಮೋ ಈಗಾಗಲೇ ಕುತೂಹಲ ಮೂಡಿಸಿದೆ.
ಶಾರುಖ್ ಖಾನ್ ಜೊತೆಗಿನ ಸ್ಪರ್ಧೆ ನೆನಪಿಸಿಕೊಂಡ ಯಶ್
ಸದ್ಯ ಯಶ್ ಅವರು ತಮ್ಮ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲೂ ಚಿತ್ರದ ಕುರಿತು ಹಲವು ವಿಚಾರಗಳು ಚರ್ಚೆಯಾಗಿವೆ. 2018ರಲ್ಲಿ ಯಶ್ ಅಭಿನಯದ ‘ಕೆಜಿಎಫ್’ ಹಾಗೂ ಶಾರುಖ್ ಖಾನ್ ನಟನೆಯ ‘ಜೀರೋ’ ಸಿನಿಮಾಗಳು ಒಂದೇ ಅವಧಿಯಲ್ಲಿ ಬಿಡುಗಡೆಯಾಗಿದ್ದವು. ಆ ಸಮಯದಲ್ಲಿ ಶಾರುಖ್ ಖಾನ್ ಅವರ ಅಭಿಮಾನಿಯಾಗಿದ್ದೆ, ಈಗಲೂ ಅವರ ಮೇಲಿನ ಅಭಿಮಾನ ಮುಂದುವರಿದಿದೆ ಎಂದು ಯಶ್ ಹೇಳಿದ್ದಾರೆ.
ಅಂದಿನ ಸಂದರ್ಭವನ್ನು ನೆನಪಿಸಿಕೊಂಡ ಯಶ್, ಶಾರುಖ್ ಅವರ ಚಿತ್ರ ದೊಡ್ಡ ಮಟ್ಟದ ಸಿನಿಮಾವಾಗಿದ್ದರೆ, ‘ಕೆಜಿಎಫ್’ ತಮ್ಮ ಪಾಲಿಗೆ ಹೋಲಿಸಿದರೆ ಸಣ್ಣ ಸಿನಿಮಾ ಆಗಿತ್ತು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಇದೇ ವೇಳೆ ರಜತ್ ಶರ್ಮ ಅವರು ‘ಕೆಜಿಎಫ್’ ಚಿತ್ರ ಗಳಿಕೆಯಲ್ಲಿ ಗಮನಾರ್ಹ ಯಶಸ್ಸು ಕಂಡಿದ್ದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
‘ನನ್ನ ಸೀನಿಯರ್‌ಗಿಂತ ದೊಡ್ಡವನಾದಾಗ ಅಂಗಡಿ ಬಂದ್’
ಚಿತ್ರರಂಗದಲ್ಲಿ ಹಿರಿಯ ನಟರ ಬಗ್ಗೆ ಯಶ್ ಹೊಂದಿರುವ ಗೌರವವೂ ಕಾರ್ಯಕ್ರಮದಲ್ಲಿ ವ್ಯಕ್ತವಾಗಿದೆ. ತಮ್ಮ ಸೀನಿಯರ್‌ಗಿಂತ ತಾವು ದೊಡ್ಡವರು ಎಂದು ಭಾವಿಸುವ ದಿನವೇ ತಮ್ಮ ‘ಅಂಗಡಿ ಬಂದ್’ ಆಗುತ್ತದೆ ಹಾಸ್ಯಮಯವಾಗಿ ಹೇಳಿರುವ ಯಶ್ ಅವರ ಮಾತುಗಳು ಗಮನ ಸೆಳೆದಿವೆ.
ಅಭಿಮಾನಿಗಳ ಸೆಲ್ಫಿ ಬಗ್ಗೆ ಯಶ್ ಮಾತು
ಅಭಿಮಾನಿಗಳೊಂದಿಗೆ ಫೋಟೋ ಹಾಗೂ ಸೆಲ್ಫಿ ತೆಗೆಸಿಕೊಳ್ಳುವ ವಿಚಾರದಲ್ಲೂ ಯಶ್ ತಮ್ಮ ನಿಲುವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಯೊಬ್ಬರೊಂದಿಗೆ ತೆಗೆಸಿಕೊಳ್ಳುವ ಫೋಟೋ ಅವರ ಪಾಲಿಗೆ ದೀರ್ಘಕಾಲ ಉಳಿಯುವ ನೆನಪಾಗಬಹುದು. ಆದ್ದರಿಂದ ಸಮಯವಿದ್ದಾಗ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ತಾನು ಯಾವತ್ತೂ ಸಿದ್ಧ ಎಂದು ಯಶ್ ಹೇಳಿದ್ದಾರೆ.
‘ಟಾಕ್ಸಿಕ್’ ಬಳಿಕ ‘ರಾಮಾಯಣ’ದ ಮಾತು?
ಯಶ್ ಸದ್ಯ ‘ಟಾಕ್ಸಿಕ್’ ಸಿನಿಮಾದತ್ತ ಸಂಪೂರ್ಣ ಗಮನ ಹರಿಸಿದ್ದಾರೆ. ಆಗಸ್ಟ್ 26ರಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ಪ್ರಚಾರದ ಭಾಗವಾಗಿಯೇ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದೇ ವೇಳೆ ಯಶ್ ಅವರ ಮುಂದಿನ ಬಹು ನಿರೀಕ್ಷಿತ ಪ್ರಾಜೆಕ್ಟ್ ‘ರಾಮಾಯಣ’ದ ಬಗ್ಗೆಯೂ ‘ಆಪ್ ಕಿ ಅದಾಲತ್’ನಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ಕಾರ್ಯಕ್ರಮ ಸಂಪೂರ್ಣ ಪ್ರಸಾರವಾದ ಬಳಿಕ ಯಶ್ ಯಾವೆಲ್ಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎಂಬುದು ಇನ್ನಷ್ಟು ಸ್ಪಷ್ಟವಾಗಲಿದೆ.
ಶನಿವಾರ ಪ್ರಸಾರ
‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಯಶ್ ಭಾಗವಹಿಸಿರುವ ವಿಶೇಷ ಸಂಚಿಕೆ ಶನಿವಾರ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋ ಯಶ್ ಅಭಿಮಾನಿಗಳಲ್ಲಿ ಕಾರ್ಯಕ್ರಮದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

