
Bigg Boss Kannada Finale Live: ಬಿಗ್ ಬಾಸ್ 12 ವಿನ್ನರ್ ಗಿಲ್ಲಿ ನಟ: 37 ಕೋಟಿ ಮತಗಳ ದಾಖಲೆ
ಬಿಗ್ ಬಾಸ್ ಕನ್ನಡ ಸೀಸನ್ 12ರ ಮಹಾ ಸಂಗ್ರಾಮ ಅಂತ್ಯಕ್ಕೆ ಬಂದಿದೆ. 112 ದಿನಗಳ ಜರ್ನಿ ಮುಗಿಸಿ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಸೇರಿದಂತೆ ಟಾಪ್ ಸ್ಪರ್ಧಿಗಳಲ್ಲಿ ಯಾರು ವಿನ್ನರ್ ಪಟ್ಟ ಅಲಂಕರಿಸಲಿದ್ದಾರೆ? 37 ಕೋಟಿ ವೋಟ್ ಪಡೆದ ಆ ಲಕ್ಕಿ ವಿನ್ನರ್ ಯಾರು? ಸಂಪೂರ್ಣ ಲೈವ್ ಅಪ್‌ಡೇಟ್ಸ್ ಇಲ್ಲಿದೆ ನೋಡಿ.
ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಪ್ರಸಾರವಾಗುತ್ತಿದೆ. ಇಂದಿಗೆ 112 ದಿನಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಸೀಸನ್‌ನ ವಿನ್ನರ್ ಯಾರಾಗ್ತಾರೆ ಎಂಬ ಕುತೂಹಲ ಪ್ರಕ್ಷಕರಲ್ಲಿ ಮನೆ ಮಾಡಿದೆ. ಫಿನಾಲೆಗೆ ಗಿಲ್ಲಿ ನಟ, ಅಶ್ವಿನಿ ಗೌಡ, ಧನುಶ್, ಕಾವ್ಯಾ, ರಘು ಮತ್ತು ರಕ್ಷಿತಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿಯ ಸೀಸನ್‌ನಲ್ಲಿ ಮತದಾನವು ಹೊಸ ದಾಖಲೆ ಬರೆದಿದ್ದು, ಒಟ್ಟು 37 ಕೋಟಿಗೂ ಹೆಚ್ಚು ವೋಟ್‌ಗಳು ಹರಿದು ಬಂದಿವೆ ಎಂದು ಸುದೀಪ್ ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿನ ಹವಾ ಗಮನಿಸಿದರೆ ಗಿಲ್ಲಿ ನಟ ಅವರಿಗೆ ವಿನ್ನರ್ ಪಟ್ಟ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ವಿನ್ನರ್ ಆಗುವವರಿಗೆ 50 ಲಕ್ಷ ರೂಪಾಯಿ ನಗದು ಹಣದ ಜೊತೆಗೆ ಆಕರ್ಷಕ ಟ್ರೋಫಿ ಮತ್ತು ಒಂದು ಹೊಸ ಕಾರು ಬಹುಮಾನವಾಗಿ ಸಿಗಲಿದೆ.
Live Updates
- 18 Jan 2026 11:40 PM IST
ಗಿಲ್ಲಿಗೆ 50 ಲಕ್ಷ ನಗದು ಬಹುಮಾನ
ಗಿಲ್ಲಿ ನಟ ಬಿಗ್ ಬಾಸ್ ಕನ್ನಡ 12 ರ ವಿಜೇತರಾಗಿದ್ದಾರೆ. ವಿನ್ನರ್ ಆಗಿ ಟ್ರೋಫಿ, ₹50 ಲಕ್ಷ ನಗದು ಬಹುಮಾನ ಮತ್ತು ಹೊಸ ಎಸ್‌ಯುವಿಯನ್ನು ಪಡೆದುಕೊಂಡಿದ್ದಾರೆ.
- 18 Jan 2026 11:33 PM IST
ಬಿಗ್ ಬಾಸ್ 12 ವಿನ್ನರ್ ಗಿಲ್ಲಿ ನಟ: 37 ಕೋಟಿ ಮತಗಳ ದಾಖಲೆ ಬರೆದ ಗಿಲ್ಲಿ
ಬಿಗ್ ಬಾಸ್ ಕನ್ನಡ ಸೀಸನ್ 12ರ ರೋಚಕ ಹಣಾಹಣಿಯಲ್ಲಿ ಗಿಲ್ಲಿ ನಟ ಅವರು ಅಂತಿಮವಾಗಿ ವಿನ್ನರ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ನೂರಾರು ದಿನಗಳ ಕಠಿಣ ಪರಿಶ್ರಮ, ಮನರಂಜನೆ ಮತ್ತು ಅದ್ಭುತ ಆಟದ ಮೂಲಕ ಕೋಟ್ಯಂತರ ಕನ್ನಡಿಗರ ಮನಗೆದ್ದಿದ್ದ ಗಿಲ್ಲಿ, ಅಂತಿಮವಾಗಿ ರಕ್ಷಿತಾ ಶೆಟ್ಟಿ ಅವರನ್ನು ಹಿಂದಿಕ್ಕಿ ಸೀಸನ್ 12ರ ರಾಜನಾಗಿ ಹೊರಹೊಮ್ಮಿದ್ದಾರೆ. ಕಿಚ್ಚ ಸುದೀಪ್ ಅವರು ಗಿಲ್ಲಿ ನಟ ಅವರ ಕೈ ಎತ್ತಿ ವಿಜೇತ ಎಂದು ಘೋಷಿಸಿದ ಕ್ಷಣ ಇಡೀ ವೇದಿಕೆಯಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ಈ ಬಾರಿಯ ಸೀಸನ್‌ನಲ್ಲಿ ಗಿಲ್ಲಿ ಅವರಿಗೆ ಬರೋಬ್ಬರಿ 37 ಕೋಟಿಗೂ ಹೆಚ್ಚು ಮತಗಳು ಲಭಿಸಿದ್ದು, ಇದು ಬಿಗ್ ಬಾಸ್ ಇತಿಹಾಸದಲ್ಲೇ ದೊಡ್ಡ ದಾಖಲೆಯಾಗಿದೆ. ವಿನ್ನರ್ ಆದ ಗಿಲ್ಲಿ ನಟ ಅವರಿಗೆ ಬಿಗ್ ಬಾಸ್ ಸಂಸ್ಥೆಯಿಂದ ಭವ್ಯವಾದ ಟ್ರೋಫಿ, 50 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಒಂದು ಐಷಾರಾಮಿ ಕಾರನ್ನು ನೀಡಲಾಗಿದೆ. ಇದರ ಜೊತೆಗೆ, ಮೊದಲೇ ಘೋಷಿಸಿದಂತೆ ಜೆಡಿಎಸ್ ಎಂಎಲ್‌ಸಿ ಟಿ.ಎ. ಶರವಣ ಅವರ ಕಡೆಯಿಂದ 20 ಲಕ್ಷ ರೂಪಾಯಿಗಳ ಹೆಚ್ಚುವರಿ ಮೊತ್ತವೂ ಗಿಲ್ಲಿ ಪಾಲಾಗಲಿದೆ. ಸಾಮಾನ್ಯ ಹಿನ್ನೆಲೆಯಿಂದ ಬಂದು ಬಿಗ್ ಬಾಸ್ ವೇದಿಕೆಯ ಮೇಲೆ ಇತಿಹಾಸ ಸೃಷ್ಟಿಸಿದ ಗಿಲ್ಲಿ ನಟ ಅವರ ಈ ಗೆಲುವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ.
- 18 Jan 2026 11:30 PM IST
ಮೊದಲ ರನ್ನರ್ ಅಪ್ ರಕ್ಷಿತಾ...
ಬಿಗ್ ಬಾಸ್ ಕನ್ನಡ ಸೀಸನ್ 12ರ ಮಹಾ ಸಮರದಲ್ಲಿ ರಕ್ಷಿತಾ ಶೆಟ್ಟಿ ಅವರು ಮೊದಲ ರನ್ನರ್ ಅಪ್ (1st Runner-up) ಸ್ಥಾನವನ್ನು ಅಲಂಕರಿಸಿದ್ದಾರೆ. ಇಡೀ ಸೀಸನ್‌ನಲ್ಲಿ ಒಬ್ಬ ಪ್ರಬಲ ಮಹಿಳಾ ಸ್ಪರ್ಧಿಯಾಗಿ ಕಠಿಣ ಪೈಪೋಟಿ ನೀಡಿದ್ದ ರಕ್ಷಿತಾ, ಅಂತಿಮವಾಗಿ ವಿನ್ನರ್ ಟ್ರೋಫಿಯ ಅತಿ ಹತ್ತಿರಕ್ಕೆ ಬಂದು ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. 112 ದಿನಗಳ ಕಾಲ ಮನೆಯಲ್ಲಿ ಅವರು ತೋರಿದ ಅದ್ಭುತ ಆಟ, ತಾಳ್ಮೆ ಮತ್ತು ವ್ಯಕ್ತಿತ್ವವನ್ನು ಮೆಚ್ಚಿದ ಕಿಚ್ಚ ಸುದೀಪ್ ಅವರು, ರಕ್ಷಿತಾ ಅವರ ಶ್ರಮಕ್ಕೆ ಮೆಚ್ಚುಗೆ ಸೂಚಿಸಿ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.
- 18 Jan 2026 11:22 PM IST
ಅಶ್ವಿನಿ ಗೌಡ ಜರ್ನಿ ಅಂತ್ಯ- ಸೀಸನ್ 12ರ ಎರಡನೇ ರನ್ನರ್ ಅಪ್
ಬಿಗ್ ಬಾಸ್ ಕನ್ನಡ ಸೀಸನ್ 12ರ ಕುತೂಹಲಕಾರಿ ಫಿನಾಲೆಯ ಅಂತಿಮ ಹಂತದಲ್ಲಿ ಅಶ್ವಿನಿ ಗೌಡ ಅವರು ಈ ಸೀಸನ್‌ನ ಎರಡನೇ ರನ್ನರ್ ಅಪ್ (2nd Runner-up) ಆಗಿ ಹೊರಹೊಮ್ಮಿದ್ದಾರೆ. ಟಾಪ್ 3 ಹಂತದವರೆಗೆ ಅತ್ಯಂತ ಯಶಸ್ವಿಯಾಗಿ ಮತ್ತು ಪ್ರಬಲವಾಗಿ ಆಟವಾಡಿದ್ದ ಅಶ್ವಿನಿ, ಅಂತಿಮವಾಗಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ವೇದಿಕೆಯ ಮೇಲೆ ಕಿಚ್ಚ ಸುದೀಪ್ ಅವರು ಅಶ್ವಿನಿ ಅವರ ಹೆಸರನ್ನು ಘೋಷಿಸಿದಾಗ, ಅವರು ಬಹಳ ಸಂಯಮದಿಂದ ಪ್ರೇಕ್ಷಕರಿಗೆ ಕೈಮುಗಿದು ಧನ್ಯವಾದ ಅರ್ಪಿಸಿದರು.
- 18 Jan 2026 11:16 PM IST
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು: ಟಾಪ್ 3 ಸ್ಪರ್ಧಿಗಳನ್ನು ವೇದಿಕೆಗೆ ಕರೆತಂದ ಕಿಚ್ಚ
ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಯ ಇತಿಹಾಸದಲ್ಲೇ ಅತ್ಯಂತ ವಿಶೇಷವೆನಿಸುವ ಕ್ಷಣವೊಂದು ಇಂದು ಘಟಿಸಿತು. ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರೇ ನೇರವಾಗಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿ ಅಂತಿಮ ಹಂತದಲ್ಲಿದ್ದ ಮೂವರು ಸ್ಪರ್ಧಿಗಳನ್ನು ಮುಖ್ಯ ವೇದಿಕೆಗೆ ಕರೆತಂದರು. ಸಾಮಾನ್ಯವಾಗಿ ಪ್ರತಿ ಸೀಸನ್‌ನಲ್ಲಿ ಹೊರಗಿನಿಂದಲೇ ಸ್ಪರ್ಧಿಗಳನ್ನು ಬರಮಾಡಿಕೊಳ್ಳುತ್ತಿದ್ದ ಸುದೀಪ್ ಅವರು, ಈ ಬಾರಿ ಖುದ್ದಾಗಿ ಮನೆಯೊಳಗೆ ಹೆಜ್ಜೆ ಇಟ್ಟಾಗ ರಕ್ಷಿತಾ, ಗಿಲ್ಲಿ ಮತ್ತು ಅಶ್ವಿನಿ ಅವರ ಆಶ್ಚರ್ಯ ಹಾಗೂ ಸಂತೋಷಕ್ಕೆ ಪಾರವೇ ಇರಲಿಲ್ಲ.
ಮನೆಯ ಒಳಗಿನ ಪ್ರತಿಯೊಂದು ಮೂಲೆಯನ್ನು ಕಿಚ್ಚನಿಗೆ ತೋರಿಸುತ್ತಾ ಸ್ಪರ್ಧಿಗಳು ಸಂಭ್ರಮಿಸಿದರು. ಸುದೀಪ್ ಅವರು ಮೂವರೊಂದಿಗೆ ಕುಳಿತು ಹರಟುತ್ತಾ, ಅವರ ನೂರಕ್ಕೂ ಹೆಚ್ಚು ದಿನಗಳ ಕಠಿಣ ಪರಿಶ್ರಮ ಮತ್ತು ಸಾಧನೆಗೆ ಅಭಿನಂದನೆ ಸಲ್ಲಿಸಿದರು.
- 18 Jan 2026 10:47 PM IST
ಬಿಗ್ ಬಾಸ್ ಇತಿಹಾಸದಲ್ಲಿ ದಾಖಲೆ ಬರೆದ ಕಿಚ್ಚ
2012 ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ಆರಂಭವಾದ ದಿನದಿಂದಲೂ ಕಿಚ್ಚ ಸುದೀಪ್ ಅವರು ನಿರಂತರವಾಗಿ ಈ ಬೃಹತ್ ರಿಯಾಲಿಟಿ ಶೋ ಅನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಹಿಂದಿ, ತಮಿಳು ಅಥವಾ ತೆಲುಗಿನಂತಹ ಇತರ ಭಾಷೆಗಳ ಬಿಗ್ ಬಾಸ್ ಕಾರ್ಯಕ್ರಮಗಳಲ್ಲಿ ಕಾಲಕಾಲಕ್ಕೆ ನಿರೂಪಕರು ಬದಲಾಗುತ್ತಲೇ ಬಂದಿದ್ದರೂ, ಕನ್ನಡದಲ್ಲಿ ಮಾತ್ರ ಕಿಚ್ಚ ಸುದೀಪ್ ಅವರ ಅನಿವಾರ್ಯತೆ ಮತ್ತು ಜನಪ್ರಿಯತೆ ಕುಗ್ಗಿಲ್ಲ. ಭಾರತೀಯ ಕಿರುತೆರೆ ಇತಿಹಾಸದಲ್ಲೇ ಇಷ್ಟು ಸುದೀರ್ಘ ಕಾಲ ಬಿಗ್ ಬಾಸ್‌ನಂತಹ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಟ್ಟ ಏಕೈಕ ನಿರೂಪಕ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಅವರು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
- 18 Jan 2026 10:25 PM IST
ಟಾಪ್ 3ಸ್ಪರ್ಧಿಗಳ ವಿಟಿ ಪ್ರದರ್ಶನ
ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಯ ಅತ್ಯಂತ ಮಹತ್ವದ ಘಟ್ಟವಾಗಿ ಟಾಪ್ 3 ಸ್ಪರ್ಧಿಗಳಾದ ರಕ್ಷಿತಾ ಶೆಟ್ಟಿ, ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರ ನೂರಕ್ಕೂ ಹೆಚ್ಚು ದಿನಗಳ ರೋಚಕ ಪಯಣದ ವಿಟಿ (Video Tale) ಪ್ರದರ್ಶನವಾಯಿತು. ಈ ಸ್ಮರಣೀಯ ಕ್ಷಣಗಳು ಇಡೀ ವೇದಿಕೆಯನ್ನು ಭಾವುಕಗೊಳಿಸಿತು.
- 18 Jan 2026 10:05 PM IST
ಗಿಲ್ಲಿ ನಟ ಗೆದ್ದರೆ 20 ಲಕ್ಷ ರೂ. ಬಹುಮಾನ:ಬಂಪರ್ ಆಫರ್ ನೀಡಿದ ಎಂಎಲ್‌ಸಿ ಟಿ.ಎ. ಶರವಣ!
ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ಕಳೆಗಟ್ಟಿರುವ ಬೆನ್ನಲ್ಲೇ, ಪ್ರಬಲ ಸ್ಪರ್ಧಿ ಗಿಲ್ಲಿ ನಟನಿಗೆ ರಾಜಕೀಯ ವಲಯದಿಂದ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗಿದೆ. ಈ ಬಾರಿ ಗಿಲ್ಲಿ ನಟನ ಕ್ರೇಜ್ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸುತ್ತಿರುವ ನಡುವೆ, ಜೆಡಿಎಸ್ ಎಂಎಲ್‌ಸಿ ಟಿ.ಎ. ಶರವಣ ಅವರು ಅಚ್ಚರಿಯ ಘೋಷಣೆಯೊಂದನ್ನು ಮಾಡಿದ್ದಾರೆ. ಒಂದು ವೇಳೆ ಬಿಗ್ ಬಾಸ್ ಸೀಸನ್ 12ರ ವಿನ್ನರ್ ಪಟ್ಟವನ್ನು ಗಿಲ್ಲಿ ನಟ ಅಲಂಕರಿಸಿದರೆ, ತಮ್ಮ ವೈಯಕ್ತಿಕ ಕಡೆಯಿಂದ 20 ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡುವುದಾಗಿ ಅವರು ತಿಳಿಸಿದ್ದಾರೆ.
- 18 Jan 2026 9:54 PM IST
ಬಿಗ್ ಬಾಸ್ ವೇದಿಕೆ ಮೇಲೆ ಕಾವ್ಯ ಪೋಷಕರು ಭಾವುಕ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 4ನೇ ಸ್ಥಾನ ಪಡೆದು ಕಾವ್ಯ ಶೈವ ವೇದಿಕೆಗೆ ಆಗಮಿಸಿದಾಗ ಅತ್ಯಂತ ಭಾವುಕ ಕ್ಷಣಗಳು ಸೃಷ್ಟಿಯಾದವು. ಮಗಳ ಸುದೀರ್ಘ ಪಯಣ ಮತ್ತು ಅವಳು ಟಾಪ್ 4 ಹಂತದವರೆಗೆ ತಲುಪಿದ ಸಾಧನೆಯನ್ನು ಕಂಡು ಅವಳ ಪೋಷಕರ ಕಣ್ಣಾಲಿಗಳು ತುಂಬಿ ಬಂದವು. ವೇದಿಕೆಯ ಮೇಲೆ ಮಗಳನ್ನು ಕಂಡ ತಕ್ಷಣ ಹೆಮ್ಮೆಯಿಂದ ಅಪ್ಪಿಕೊಂಡ ಪೋಷಕರು, ಈ 112 ದಿನಗಳ ಜರ್ನಿಯಲ್ಲಿ ಕಾವ್ಯ ತೋರಿದ ಧೈರ್ಯ ಮತ್ತು ಸಂಯಮದ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದರು.
- 18 Jan 2026 9:52 PM IST
ಮನೆ ಒಳಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಎಂಟ್ರಿ
ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಮೊದಲು ವೇದಿಕೆಯ ಮೇಲೆ ಕಿಚ್ಚ ಸುದೀಪ್ ಅವರ ಜೊತೆ ಕಾಣಿಸಿಕೊಂಡು, ನಂತರ ನೇರವಾಗಿ ಬಿಗ್ ಬಾಸ್ ಮನೆಯೊಳಗೆ ಸರ್ಪ್ರೈಸ್ ಎಂಟ್ರಿ ಕೊಟ್ಟರು. ರವಿ ಸರ್ ಅವರನ್ನು ಕಂಡ ತಕ್ಷಣವೇ ಮನೆಯಲ್ಲಿದ್ದ ಟಾಪ್ 4 ಸ್ಪರ್ಧಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ.
ಮನೆಯೊಳಗೆ ಹೋದ ರವಿಚಂದ್ರನ್ ಅವರು ಸ್ಪರ್ಧಿಗಳ ಜೊತೆ ಆತ್ಮೀಯವಾಗಿ ಸಮಯ ಕಳೆದು, ಅವರ 112 ದಿನಗಳ ಸುದೀರ್ಘ ಪಯಣದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಈ ಸುಂದರ ಕ್ಷಣಗಳ ಬೆನ್ನಲ್ಲೇ ಎಲಿಮಿನೇಷನ್ ಪ್ರಕ್ರಿಯೆ ಕೂಡ ನಡೆಯಿತು. ರವಿಚಂದ್ರನ್ ಅವರು ಮನೆಯೊಳಗೆ ನೀಡಿದ ವಿಶೇಷ ಟಾಸ್ಕ್ ಮತ್ತು ವೋಟಿಂಗ್ ಆಧಾರದ ಮೇಲೆ ಕಾವ್ಯ ಶೈವ ಅವರ ಪಯಣ ಇಲ್ಲಿಗೆ ಅಂತ್ಯವಾಯಿತು.

