
'ತ್ರಿಪುರಾ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇವ್ ಕೈಹಿಡಿದ ಟಗರು' ಖ್ಯಾತಿಯ ನಟಿ ತ್ರಿವೇಣಿ ರಾವ್
ಮಾಹಿತಿಗಳ ಪ್ರಕಾರ, ಜೂನ್ 19ರಂದು ನವದೆಹಲಿಯಲ್ಲಿ ಅತ್ಯಂತ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಈ ವಿವಾಹ ಜರುಗಿದೆ. ಮದುವೆಯನ್ನು ಅತ್ಯಂತ ಗೌಪ್ಯವಾಗಿ ಇಡಲಾಗಿದೆ.
ಸ್ಯಾಂಡಲ್ ವುಡ್ ನ ಹಿಟ್ ಚಿತ್ರ 'ಟಗರು'ವಿನಲ್ಲಿ 'ಸರೋಜ' ಪಾತ್ರದ ಮೂಲಕ ಕನ್ನಡಿಗರ ಗಮನ ಸೆಳೆದಿದ್ದ ನಟಿ ತ್ರಿವೇಣಿ ರಾವ್ ಅವರು ಹಸೆಮಣೆ ಏರಿದ್ದಾರೆ. ತ್ರಿಪುರಾದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಬಿಜೆಪಿ ಸಂಸದರಾಗಿರುವ 54 ವರ್ಷದ ಬಿಪ್ಲಬ್ ಕುಮಾರ್ ದೇವ್ ಅವರೊಂದಿಗೆ ತ್ರಿವೇಣಿ ರಾವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ಈ ವಿವಾಹದ ಸುದ್ದಿ ಹೊರಬಿದ್ದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಮಾಹಿತಿಗಳ ಪ್ರಕಾರ, ಜೂನ್ 19ರಂದು ನವದೆಹಲಿಯಲ್ಲಿ ಅತ್ಯಂತ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಈ ವಿವಾಹ ಜರುಗಿದೆ. ಮದುವೆಯನ್ನು ಅತ್ಯಂತ ಗೌಪ್ಯವಾಗಿ ಇಡಲಾಗಿದ್ದು, ಮಾಧ್ಯಮಗಳಿಗೆ ಅಥವಾ ಸಾರ್ವಜನಿಕರಿಗೆ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ. ಮದುವೆಯ ಯಾವುದೇ ಫೋಟೋಗಳು ಸಹ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಆದರೆ, ಮೂಲಗಳ ಪ್ರಕಾರ ನವದೆಹಲಿಯಲ್ಲಿ ಅತ್ಯಂತ ಖಾಸಗಿಯಾಗಿ ಇವರಿಬ್ಬರ ವಿವಾಹ ನೆರವೇರಿದೆ.
ಬಿಪ್ಲಬ್ ಕುಮಾರ್ ದೇವ್ ಅವರಿಗೆ ಇದು ಎರಡನೇ ವಿವಾಹ
ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇವ್ ಅವರಿಗೆ ಇದು ಎರಡನೇ ಮದುವೆ. ಈ ಹಿಂದೆ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಯಾಗಿದ್ದ ನೀತಿ ದೇವ್ ಅವರನ್ನು ವಿವಾಹವಾಗಿದ್ದರು. ಸುಮಾರು 20 ವರ್ಷಗಳ ಕಾಲ ಸುದೀರ್ಘ ದಾಂಪಟ್ಯ ಜೀವನ ನಡೆಸಿದ್ದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, 2022ರಿಂದಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕೆಲವು ತಿಂಗಳುಗಳ ಹಿಂದೆಯಷ್ಟೇ ಇವರು ಕಾನೂನುಬದ್ಧವಾಗಿ ವಿಚ್ಛೇದನ ಪಡೆದುಕೊಂಡಿದ್ದರು. ಡಿವೋರ್ಸ್ ಇತ್ಯರ್ಥಕ್ಕಾಗಿ ಬಿಪ್ಲಬ್ ಅವರು ತಮ್ಮ ಮೊದಲ ಪತ್ನಿಗೆ ಒಂದು ಕೋಟಿ ರೂಪಾಯಿ ನೀಡಿದ್ದರು ಎನ್ನಲಾಗಿದೆ. ಇದೀಗ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ಬೆನ್ನಲ್ಲೇ ಅವರು ಕನ್ನಡದ ನಟಿಯೊಂದಿಗೆ ಹೊಸ ಜೀವನ ಆರಂಭಿಸಿದ್ದಾರೆ.
ಅಗರ್ತಲಾದಲ್ಲಿ ಅದ್ದೂರಿ ಆರತಕ್ಷತೆ
ದೆಹಲಿಯಲ್ಲಿ ಅತ್ಯಂತ ಸರಳ ಹಾಗೂ ಗುಟ್ಟಾಗಿ ಮದುವೆಯಾಗಿರುವ ಈ ನವಜೋಡಿಯ ಆರತಕ್ಷತೆ ಕಾರ್ಯಕ್ರಮವನ್ನು ತ್ರಿಪುರಾದಲ್ಲಿ ಹಮ್ಮಿಕೊಳ್ಳಲಾಗಿದೆ. ಜೂನ್ 24ರಂದು ಅಗರ್ತಲಾದ ಪ್ರತಿಷ್ಠಿತ ಹೊಟೇಲ್ ಪೋಲೋ ಟವರ್ಸ್‌ನಲ್ಲಿ ಆರತಕ್ಷತೆ ನಡೆಯಲಿದ್ದು, ರಾಜಕೀಯ ಗಣ್ಯರು ಹಾಗೂ ಆಪ್ತರು ಭಾಗಿಯಾಗುವ ನಿರೀಕ್ಷೆಯಿದೆ. ಈ ಆರತಕ್ಷತೆ ಸಮಾರಂಭದಲ್ಲಿ ನವದಂಪತಿಗಳು ಅಧಿಕೃತವಾಗಿ ಎಲ್ಲರ ಮುಂದೆ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಇತ್ತೀಚಿನ ದಿನಗಳಲ್ಲಿ ನಟಿ ತ್ರಿವೇಣಿ ರಾವ್ ಅವರು ಚಿತ್ರರಂಗದಿಂದ ಹಾಗೂ ಸಾಮಾಜಿಕ ಜಾಲತಾಣಗಳಿಂದಲೂ ಅಂತರ ಕಾಯ್ದುಕೊಂಡಿದ್ದರು. ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆಯಾಗಲಿ, ಹೊಸ ಸಿನಿಮಾಗಳ ಬಗ್ಗೆಯಾಗಲಿ ಅವರು ಎಲ್ಲಿಯೂ ಯಾವುದೇ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ. ಇದೀಗ ಏಕಾಏಕಿ ರಾಷ್ಟ್ರಮಟ್ಟದ ರಾಜಕಾರಣಿಯೊಬ್ಬರೊಂದಿಗೆ ಅವರು ಸಪ್ತಪದಿ ತುಳಿದಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಚಿತ್ರರಂಗದ ನಂಟು ಇಲ್ಲದ, ಬೇರೆಯೇ ರಾಜ್ಯದ ರಾಜಕೀಯ ನಾಯಕ ಬಿಪ್ಲಬ್ ಕುಮಾರ್ ದೇವ್ ಹಾಗೂ ಬೆಂಗಳೂರಿನ ತ್ರಿವೇಣಿ ರಾವ್ ಅವರಿಗೆ ಹೇಗೆ ಪರಿಚಯವಾಯಿತು, ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದ್ದು ಹೇಗೆ ಎಂಬ ಪ್ರಶ್ನೆಗಳು ಸದ್ಯ ಎಲ್ಲರಲ್ಲೂ ಮೂಡಿದ್ದು, ಈ ಬಗ್ಗೆ ದಂಪತಿಗಳೇ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಬೇಕಿದೆ.

