
‘ಟಾಕ್ಸಿಕ್’ನ ಗಂಗಾ ಪಾತ್ರದ ಬಗ್ಗೆ ನಯನತಾರಾ ಮಾತನಾಡಿದ್ದಾರೆ.
‘ಟಾಕ್ಸಿಕ್’ ಗಂಗಾ ಪಾತ್ರದ ಬಗ್ಗೆ ನಯನತಾರಾ ಫಸ್ಟ್ ರಿಯಾಕ್ಷನ್
‘ಟಾಕ್ಸಿಕ್’ನ ಗಂಗಾ ಪಾತ್ರದ ಬಗ್ಗೆ ನಯನತಾರಾ ಮಾತನಾಡಿದ್ದು, ಗಂಗಾ ಪಾತ್ರ ನನ್ನ ಮೇಲೆ ಅಪಾರ ಪ್ರಭಾವ ಬೀರಿದೆ. ಆಕೆ ಧೈರ್ಯಶಾಲಿ ಎಂದು ಹೇಳಿದ್ದಾರೆ.
‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದಲ್ಲಿ ನಯನತಾರಾ ನಿರ್ವಹಿಸಿರುವ ಗಂಗಾ ಪಾತ್ರದ ಕುರಿತು ನಟಿ ಮನಬಿಚ್ಚಿ ಮಾತನಾಡಿದ್ದಾರೆ. ಗಂಗಾ ಕೇವಲ ಪ್ರಚಾರದ ಪೋಸ್ಟರ್‌ಗಳಲ್ಲಿ ಕಾಣಿಸುವಂತೆ ಧೈರ್ಯಶಾಲಿ ಮತ್ತು ಗಟ್ಟಿಮುಟ್ಟಾದ ಮಹಿಳೆಯಲ್ಲ. ಆಕೆಯ ವ್ಯಕ್ತಿತ್ವದ ಹಿಂದೆ ಸಾಕಷ್ಟು ಭಾವನೆಗಳು ಹಾಗೂ ಜೀವನಾನುಭವಗಳಿವೆ ಎಂದು ನಯನತಾರಾ ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಯನತಾರಾ, ಗಂಗಾ ಪಾತ್ರದೊಂದಿಗೆ ತಮಗೆ ವೈಯಕ್ತಿಕವಾಗಿ ನಂಟು ಬೆಳೆದಿತ್ತು ಎಂದು ತಿಳಿಸಿದ್ದಾರೆ. “ಗಂಗಾ ಪಾತ್ರ ನನ್ನ ಮೇಲೆ ಅಪಾರ ಪ್ರಭಾವ ಬೀರಿದೆ. ಹೌದು, ಆಕೆ ಧೈರ್ಯಶಾಲಿ ಮತ್ತು ಗಟ್ಟಿಯಾಗಿದ್ದಾಳೆ. ಪ್ರೋಮೋಗಳಲ್ಲಿ ತಕ್ಷಣ ಕಾಣಿಸುವುದು ಅದೇ. ಆದರೆ ಆಕೆಯಲ್ಲಿ ಅದಕ್ಕಿಂತಲೂ ಹೆಚ್ಚು ಇದೆ” ಎಂದು ಹೇಳಿದ್ದಾರೆ.
‘ಶಕ್ತಿ ಎಂದರೆ ಯಾವಾಗಲೂ ಅದನ್ನು ಪ್ರದರ್ಶಿಸುವುದಲ್ಲ’
ಗಂಗಾಳ ಶಕ್ತಿ ಆಕೆ ಸದಾ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳುವುದರಿಂದ ಬಂದಿಲ್ಲ. ಬದಲಾಗಿ ಆಕೆಯ ಜೀವನಾನುಭವಗಳು, ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಎದುರಿಸಿದ ಸವಾಲುಗಳು ಆಕೆಯನ್ನು ಗಟ್ಟಿಗೊಳಿಸಿವೆ ಎಂದು ನಯನತಾರಾ ವಿವರಿಸಿದ್ದಾರೆ.
“ದುರ್ಬಲತೆ, ಭಾವನೆ ಮತ್ತು ಶಕ್ತಿಯನ್ನು ಒಂದೇ ಸಮಯದಲ್ಲಿ ಹೊಂದಿರುವ ಮಹಿಳಾ ಪಾತ್ರಗಳು ನನಗೆ ಯಾವಾಗಲೂ ಇಷ್ಟ. ಹಲವು ರೀತಿಯಲ್ಲಿ ನಾನು ಕೂಡ ಅಂತಹ ಪಾತ್ರಗಳೊಂದಿಗೆ ನನ್ನನ್ನು ಗುರುತಿಸಿಕೊಳ್ಳುತ್ತೇನೆ. ಜೀವನ ನಮಗೆ ಕಲಿಸುವುದೇನೆಂದರೆ, ಶಕ್ತಿ ಎಂದರೆ ಯಾವಾಗಲೂ ಅದನ್ನು ಘೋಷಿಸಬೇಕೆಂದೇನಿಲ್ಲ” ಎಂದು ನಯನತಾರಾ ಹೇಳಿದ್ದಾರೆ.
ಗೀತು ಮೋಹನ್‌ದಾಸ್ ಕಥೆ ಕೇಳಿ ಬದಲಾದ ನಿರ್ಧಾರ
‘ಟಾಕ್ಸಿಕ್’ ಸಿನಿಮಾಗೆ ಸಹಿ ಹಾಕುವ ಬಗ್ಗೆ ಆರಂಭದಲ್ಲಿ ನಯನತಾರಾ ಅವರಿಗೆ ಸ್ವಲ್ಪ ಹಿಂಜರಿಕೆ ಇತ್ತು. ನಿರ್ದೇಶಕಿ ಗೀತು ಮೋಹನ್‌ದಾಸ್ ಅವರೊಂದಿಗೆ ನಯನತಾರಾಗೆ ಹಿಂದಿನಿಂದಲೂ ಉತ್ತಮ ಒಡನಾಟವಿದ್ದರೂ, ಸಿನಿಮಾದಲ್ಲಿ ನಟಿಸುವ ನಿರ್ಧಾರವನ್ನು ಕಥೆಯ ನಿರೂಪಣೆಯೇ ಬದಲಿಸಿತು. ಗೀತು ಕಥೆಯನ್ನು ವಿವರಿಸಿದ ಬಳಿಕ ಪಾತ್ರದ ಬಗ್ಗೆ ನಯನತಾರಾಗೆ ವಿಶ್ವಾಸ ಮೂಡಿ ಸಿನಿಮಾಗೆ ಒಪ್ಪಿಕೊಂಡಿದ್ದರು.
ಆಗಸ್ಟ್ 26ರಂದು ತೆರೆಗೆ ಬಂದ ‘ಟಾಕ್ಸಿಕ್’
ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಆಗಸ್ಟ್ 26ರಂದು ಬಿಡುಗಡೆಯಾಗಿದೆ. ಯಶ್ ಚಿತ್ರದಲ್ಲಿ ರಾಯ ಮತ್ತು ಟಿಕೆಟ್ ಎಂಬ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ನಯನತಾರಾ ಗಂಗಾ ಪಾತ್ರದಲ್ಲಿ ನಟಿಸಿದ್ದಾರೆ. ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಗೋವಾ ವಿಮೋಚನೆಗೂ ಮುನ್ನದ ಕಾಲಘಟ್ಟವನ್ನು ಹಿನ್ನೆಲೆಯಾಗಿಟ್ಟುಕೊಂಡಿರುವ ಚಿತ್ರವು ಅಪರಾಧ ಜಗತ್ತು, ಅಧಿಕಾರದ ಹೋರಾಟ ಮತ್ತು ಬದಲಾಗುವ ನಿಷ್ಠೆಗಳ ಸುತ್ತ ಕಥೆಯನ್ನು ಕಟ್ಟಿಕೊಡುತ್ತದೆ. ಸಿನಿಮಾ ಬಿಡುಗಡೆಯಾದ ಬಳಿಕ ಬಾಕ್ಸ್ ಆಫೀಸ್‌ನಲ್ಲಿ ಗಮನ ಸೆಳೆದಿದ್ದರೂ, ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳೂ ವ್ಯಕ್ತವಾಗುತ್ತಿವೆ.

