ಡಾ.ರಾಜ್‌ - ಪುನೀತ್ ಕಂಚಿನ ಪುತ್ಥಳಿ ಅನಾವರಣಗೊಳಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್
x

ವರನಟ ಡಾ.ರಾಜ್‌ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥವಾಗಿ ಅಭಿಮಾನಿಗಳು ನಿರ್ಮಿಸಿರುವ ಮೂರು ಅಡಿ ಎತ್ತರದ ಕಂಚಿನ ಪುತ್ಥಳಿ. 

ಡಾ.ರಾಜ್‌ - ಪುನೀತ್ ಕಂಚಿನ ಪುತ್ಥಳಿ ಅನಾವರಣಗೊಳಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

ಸುಮಾರು 15 ಲಕ್ಷ ರೂಪಾಯಿ ಸ್ವಂತ ಹಣವನ್ನು ಸಂಗ್ರಹಿಸಿದ ಅಭಿಮಾನಿಗಳು, ನೆಚ್ಚಿನ ನಟರ ಸ್ಮರಣೆಗಾಗಿ ಈ ಮಂದಿರ ಹಾಗೂ ಮೂರು ಅಡಿ ಎತ್ತರದ ಕಂಚಿನ ಪುತ್ಥಳಿಗಳನ್ನು ಪ್ರತಿಷ್ಠಾಪಿಸಿದ್ದಾರೆ.


Click the Play button to hear this message in audio format

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಚಾಮೇಗೌಡ ಏರಿಯಾದಲ್ಲಿ ವರನಟ ಡಾ.ರಾಜ್‌ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥವಾಗಿ ಅಭಿಮಾನಿಗಳು ನಿರ್ಮಿಸಿರುವ ದೇವಾಲಯ ಹಾಗೂ ಮೂರು ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಗುರುವಾರ ಅನಾವರಣಗೊಳಿಸಿದರು.

ಡಾ.ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಸದಸ್ಯರು ತಮ್ಮ ನೆಚ್ಚಿನ ನಟರ ಮೇಲಿನ ಭಕ್ತಿ ಹಾಗೂ ಗೌರವದಿಂದ ಸುಮಾರು 15 ಲಕ್ಷ ರೂಪಾಯಿಗಳನ್ನು ಸ್ವಂತವಾಗಿ ಸಂಗ್ರಹಿಸಿ ಈ ವಿಶಿಷ್ಟ ದೇವಾಲಯವನ್ನು ನಿರ್ಮಿಸಿದ್ದಾರೆ. ತಂದೆ-ಮಗ ಇಬ್ಬರೂ ಕನ್ನಡ ಚಿತ್ರರಂಗಕ್ಕೆ ನೀಡಿದ ಅದ್ವಿತೀಯ ಕೊಡುಗೆ ಹಾಗೂ ಕೋಟ್ಯಂತರ ಜನರ ಮನಗೆದ್ದ ಅವರ ವ್ಯಕ್ತಿತ್ವವನ್ನು ಸದಾ ಸ್ಮರಿಸುವ ಉದ್ದೇಶದಿಂದ ಈ ಕಾರ್ಯ ಕೈಗೊಳ್ಳಲಾಗಿದೆ.

ಲೋಕಾರ್ಪಣೆ ನೆರವೇರಿಸಿ ಮಾತನಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು, ಅಭಿಮಾನಿಗಳು ತಮ್ಮ ಕುಟುಂಬದ ಮೇಲೆ ತೋರಿಸುತ್ತಿರುವ ಅಪಾರ ಪ್ರೀತಿ ಮತ್ತು ವಿಶ್ವಾಸಕ್ಕೆ ತಾವು ಎಂದಿಗೂ ಚಿರಋಣಿಯಾಗಿರುವುದಾಗಿ ಭಾವುಕರಾಗಿ ನುಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರು, ಡಾ.ರಾಜ್ ಮತ್ತು ಪುನೀತ್ ಅವರ ನಟನಾ ಕೌಶಲ ಹಾಗೂ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು. ಸೂರ್ಯ-ಚಂದ್ರರಿರುವವರೆಗೂ ಈ ದೇವಾಲಯದಲ್ಲಿ ಪೂಜೆ ನಡೆಯಲಿದ್ದು, ಈ ಮಹಾನ್ ಕಲಾವಿದರ ನೆನಪು ಅಜರಾಮರವಾಗಿರಲಿದೆ ಎಂದು ಅವರು ತಿಳಿಸಿದರು.

ಅಪ್ಪು ನೆನಪಿಗಾಗಿ 'ಪಿಆರ್‌ಕೆ ಸ್ಟಾರ್ ಫ್ಯಾನ್‌ಡಮ್' ಆ್ಯಪ್

ಪುನೀತ್ ರಾಜ್‌ಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು 'PRK' ಎಂಬ ನೂತನ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಅಪ್ಲಿಕೇಶನ್ ಕೇವಲ ಮನರಂಜನೆಯ ಸಾಧನವಾಗಿರದೆ, ಪುನೀತ್ ಅವರ ಜೀವನದ ಮೌಲ್ಯಗಳು, ಸಾಮಾಜಿಕ ಕಳಕಳಿ ಮತ್ತು ಅವರು ಸದಾ ಬಯಸುತ್ತಿದ್ದ ತಾಂತ್ರಿಕ ನಾವೀನ್ಯತೆಗಳನ್ನು ಅಭಿಮಾನಿಗಳಿಗೆ ತಲುಪಿಸುವ ಡಿಜಿಟಲ್ ವೇದಿಕೆಯಾಗಿದೆ.

ಈ ಅಪ್ಲಿಕೇಶನ್‌ನಲ್ಲಿ 'ಅಪ್ಪು' ವಿಭಾಗವು ಅವರ ಅಪರೂಪದ ಫೋಟೋಗಳು ಮತ್ತು ವಿಡಿಯೋಗಳನ್ನು ಒಳಗೊಂಡಿದ್ದರೆ, ಮಕ್ಕಳಿಗಾಗಿ 'ಚೋಟಾ ಅಪ್ಪು' ಎಂಬ ಶೈಕ್ಷಣಿಕ ಮತ್ತು ಮನರಂಜನಾತ್ಮಕ ವಿಭಾಗವನ್ನು ನೀಡಲಾಗಿದೆ. ವಿಶೇಷವೆಂದರೆ, ಎಐ ತಂತ್ರಜ್ಞಾನವನ್ನು ಬಳಸಿ ರೂಪಿಸಲಾದ ಫಿಟ್ನೆಸ್ ವಿಭಾಗವು ಅಭಿಮಾನಿಗಳು ಪುನೀತ್ ಅವರೊಂದಿಗೆ ವರ್ಚುವಲ್ ಆಗಿ ವರ್ಕೌಟ್ ಮಾಡಲು ಅವಕಾಶ ಕಲ್ಪಿಸುತ್ತದೆ. ಇದರೊಂದಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಾಡ್‌ಕಾಸ್ಟ್ ಸರಣಿಯು ಅಪ್ಪು ಅವರ ಜೀವನದ ಕಾಣದ ಪುಟಗಳನ್ನು ಅಭಿಮಾನಿಗಳ ಮುಂದೆ ತೆರೆದಿಡುತ್ತದೆ. ಸ್ಯಾಂಡಲ್‌ವುಡ್ ಅಪ್‌ಡೇಟ್ಸ್ ಮತ್ತು ಚಿತ್ರರಂಗದಲ್ಲಿ ಕೆಲಸ ಮಾಡಲು ಬಯಸುವವರಿಗಾಗಿ ಉದ್ಯೋಗಾವಕಾಶಗಳ ಮಾಹಿತಿಯೂ ಇಲ್ಲಿ ಲಭ್ಯವಿದೆ. ಅಪ್ಲಿಕೇಶನ್‌ನ ಪರಿಚಯಾತ್ಮಕ ವಿಡಿಯೋಗೆ ನಟ ಕಿಚ್ಚ ಸುದೀಪ್ ಧ್ವನಿ ನೀಡಿರುವುದು ಮತ್ತೊಂದು ವಿಶೇಷವಾಗಿದೆ. ಪ್ರಸ್ತುತ ಈ ಆ್ಯಪ್ ಆಂಡ್ರಾಯ್ಡ್ ಮತ್ತು ಐಒಎಸ್ ವೇದಿಕೆಗಳಲ್ಲಿ ಲಭ್ಯವಿದೆ.

Read More
Next Story