
ಅಮೀರ್ ಖಾನ್ ಹೇಳಿಕೆಗೆ ಸೋನಂ ವಾಂಗ್ಚುಕ್ ತಿರುಗೇಟು
‘ಘಜಿನಿ’ ಉಡುಪಿನಲ್ಲಿದ್ದಾಗ ಮರೆವು ಬಂದಿರಬೇಕು; ಆಮಿರ್ ಖಾನ್ಗೆ ವಾಂಗ್ಚುಕ್ ಟಾಂಗ್
ತಮ್ಮನ್ನು ಈ ಹಿಂದೆ ಭೇಟಿಯಾಗಿಲ್ಲ ಎಂಬ ನಟ ಆಮಿರ್ ಖಾನ್ ಹೇಳಿಕೆಗೆ ಸೋನಂ ವಾಂಗ್ಚುಕ್ ತಿರುಗೇಟು ನೀಡಿದ್ದಾರೆ. ಆಮಿರ್ ಖಾನ್ ಹೇಳಿಕೆಯಿಂದ ತಮಗೆ ಆಶ್ಚರ್ಯವಾಗಿಲ್ಲ. ಭೇಟಿ ವೇಳೆ ನಾವು ವಿಚಾರಗಳ ಬಗ್ಗೆ ಚರ್ಚಿಸಿದ್ದೇವೆ ಎಂದಿದ್ದಾರೆ.
ನಟ ಆಮಿರ್ ಖಾನ್ ಮತ್ತು ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್ ನಡುವೆ 3 ಈಡಿಯಟ್ಸ್ ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ವಾಕ್ಸಮರ ಶುರುವಾಗಿದೆ. 3 ಈಡಿಯಟ್ಸ್ ಸಿನಿಮಾದ ರಾಂಚೋ ಪಾತ್ರ ಸೋನಂ ವಾಂಗ್ಚುಕ್ ಅವರ ಬದುಕಿನಿಂದ ಪ್ರೇರಿತವಾಗಿದೆ ಎಂಬ ಚರ್ಚೆ ಸಂಬಂಧಿಸಿದಂತೆ ನಟ ಆಮಿರ್ ಖಾನ್ ನೀಡಿದ್ದ ಹೇಳಿಕೆಯೊಂದು ಸೋನಂ ವಾಂಗ್ಚುಕ್ ಅಸಮಾಧಾನಕ್ಕೆ ಕಾರಣವಾಗಿದೆ.
ವಾಂಗ್ಚುಕ್ ಅವರನ್ನು ಈ ಹಿಂದೆ ಯಾವತ್ತೂ ಭೇಟಿಯಾಗಿಲ್ಲ ಎಂದು ಆಮಿರ್ ಖಾನ್ ಹೇಳಿದ್ದರು. ಇದಕ್ಕೆ ಸೋನಂ ವಾಂಗ್ಚುಕ್ ಅವರು ‘ಘಜಿನಿ’ ಚಿತ್ರದ ಪಾತ್ರವನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ್ದಾರೆ. ಆಮಿರ್ ಖಾನ್ ವಾಂಗ್ಚುಕ್ ಅವರನ್ನು ಭೇಟಿಯಾಗಿಲ್ಲ ಎಂದು ಹೇಳಿದ ಬಳಿಕ ಹಳೆಯ ವಿಡಿಯೊವೊಂದು ವೈರಲ್ ಆಗಿದ್ದು, ಅದರಲ್ಲಿಆಮಿರ್ ಖಾನ್ ಅವರು ವಾಂಗ್ಚುಕ್ ಅವರ ಭಾಷಣವನ್ನು ಆಲಿಸಿ ಚಪ್ಪಾಳೆ ತಟ್ಟುತ್ತಿರುವುದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.
ಇದೀಗ ಪ್ರಖರ್ ಗುಪ್ತಾ ಅವರ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಸೋನಂ ವಾಂಗ್ಚುಕ್, “ಅವರು ನಾವು ಭೇಟಿಯಾಗಿಯೇ ಇಲ್ಲ ಎಂದಾಗ, ಕೆಲವು ವಿಡಿಯೊಗಳು ಹೊರಬಂದವು. ಅದರಲ್ಲಿ ಅವರು ‘ಘಜಿನಿ’ ಉಡುಪಿನಲ್ಲಿ ನನ್ನ ಭಾಷಣ ನೋಡುತ್ತಿದ್ದರು. ಬಹುಶಃ ಘಜಿನಿ ಉಡುಪಿನಲ್ಲಿದ್ದ ಕಾರಣ ಅಲ್ಪಾವಧಿಯ ಮರೆವು ಉಂಟಾಗಿರಬಹುದು. 15 ನಿಮಿಷಗಳ ಕಾಲ ಮರೆತಿರಬಹುದು. ಹಾಗಾಗಿ ನನಗೆ ಆಶ್ಚರ್ಯವಾಗಿಲ್ಲ. ಇಲ್ಲದಿದ್ದರೆ ನಾವು ಸಾಕಷ್ಟು ವಿವರವಾಗಿ ಭೇಟಿಯಾಗಿ ಚರ್ಚಿಸಿದ್ದೇವೆ,” ಎಂದು ವಾಂಗ್ಚುಕ್ ಹೇಳಿದ್ದಾರೆ.
‘3 ಈಡಿಯಟ್ಸ್ಗೂ ಮುನ್ನ ವಾಂಗ್ಚುಕ್ ಬಗ್ಗೆ ಗೊತ್ತಿರಲಿಲ್ಲ’ ಎಂದಿದ್ದ ಆಮಿರ್
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಯೊಬ್ಬರು ವಿದ್ಯಾರ್ಥಿಗಳ ಪರ ಶಾಂತಿಯುತವಾಗಿ ಹೋರಾಡುತ್ತಿರುವ ಸೋನಂ ವಾಂಗ್ಚುಕ್ ಅವರಿಗೆ ಬೆಂಬಲ ನೀಡುವಂತೆ ಆಮಿರ್ ಖಾನ್ ಅವರನ್ನು ಕೇಳಿದ್ದರು. ‘3 ಈಡಿಯಟ್ಸ್’ ಚಿತ್ರದ ರಾಂಚೋ ಪಾತ್ರ ವಾಂಗ್ಚುಕ್ ಅವರಿಂದ ಪ್ರೇರಿತವಾಗಿದೆ ಎಂಬ ಜನಪ್ರಿಯ ಅಭಿಪ್ರಾಯವನ್ನೂ ಅವರು ಉಲ್ಲೇಖಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಆಮಿರ್ ಖಾನ್, ‘3 ಈಡಿಯಟ್ಸ್’ ಸಿನಿಮಾ ಮಾಡುವ ಸಮಯದಲ್ಲಿ ತಮಗೆ ಸೋನಂ ವಾಂಗ್ಚುಕ್ ಅವರ ಬಗ್ಗೆ ತಿಳಿದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ನಿರ್ದೇಶಕ ರಾಜಕುಮಾರ್ ಹಿರಾನಿ, ಬರಹಗಾರ ಅಭಿಜಾತ್ ಜೋಶಿ ಹಾಗೂ ತಮಗೂ ವಾಂಗ್ಚುಕ್ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಅವರು ಹೇಳಿದ್ದರು.
ಅದೇ ವೇಳೆ, ಸೋನಂ ವಾಂಗ್ಚುಕ್ ಮಾಡುತ್ತಿರುವ ಕೆಲಸ ಉತ್ತಮವಾಗಿದ್ದು, ಅವರನ್ನು ಗೌರವಿಸಲು ‘3 ಈಡಿಯಟ್ಸ್’ ಚಿತ್ರದ ಪಾತ್ರದೊಂದಿಗೆ ಸಂಬಂಧ ಕಲ್ಪಿಸುವ ಅಗತ್ಯವಿಲ್ಲ ಎಂದೂ ಅಮೀರ್ ಖಾನ್ ತಿಳಿಸಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಹಳೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದವು.

