
ನಟಿ ಶುಭಾ ಪೂಂಜಾ
ವಿಚ್ಛೇದನದ ವದಂತಿ ಬೆನ್ನಲ್ಲೇ ಮೌನ ಮುರಿದ ನಟಿ ಶುಭಾ ಪೂಂಜಾ; ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿದ್ದೇನು?
2022ರಲ್ಲಿ ತಮ್ಮ ದೀರ್ಘಕಾಲದ ಗೆಳೆಯ ಸುಮಂತ್ ಬಿಲ್ಲವ್ ಅವರನ್ನು ಮದುವೆಯಾಗಿದ್ದ ಶುಭಾ ಪೂಂಜಾ, ಇತ್ತೀಚೆಗೆ ಪತಿ ಜೊತೆಗಿನ ಎಲ್ಲಾ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಗಳಿಂದ ಡಿಲೀಟ್ ಮಾಡಿದ್ದರು.
ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಎಂದೇ ಹೆಸರಾಗಿದ್ದ 'ಮೊಗ್ಗಿನ ಮನಸ್ಸು' ಖ್ಯಾತಿಯ ನಟಿ ಶುಭಾ ಪೂಂಜಾ ಹಾಗೂ ಉದ್ಯಮಿ ಸುಮಂತ್ ಬಿಲ್ಲವ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಜೋಡಿ ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿದ್ದ ಬೆನ್ನಲ್ಲೇ, ನಟಿ ಶುಭಾ ಪೂಂಜಾ ಅವರು ಕೊನೆಗೂ ಈ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ನಟಿ, ಹರಿದಾಡುತ್ತಿರುವ ಸುದ್ದಿಗಳ ನಡುವೆಯೇ ಮಾಧ್ಯಮ ಮಿತ್ರರಲ್ಲಿ ಮತ್ತು ತಮ್ಮ ಅಭಿಮಾನಿಗಳಲ್ಲಿ ಒಂದು ಪ್ರಮುಖ ಮನವಿ ಮಾಡಿದ್ದಾರೆ.
ಪತಿಯ ಫೋಟೋ ಡಿಲೀಟ್; ಹೆಚ್ಚಾದ ಅನುಮಾನ!
2022ರಲ್ಲಿ ತಮ್ಮ ದೀರ್ಘಕಾಲದ ಗೆಳೆಯ ಸುಮಂತ್ ಬಿಲ್ಲವ್ ಅವರನ್ನು ಮದುವೆಯಾಗಿದ್ದ ಶುಭಾ ಪೂಂಜಾ, ಇತ್ತೀಚೆಗೆ ಪತಿ ಜೊತೆಗಿನ ಎಲ್ಲಾ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಗಳಿಂದ ಡಿಲೀಟ್ ಮಾಡಿದ್ದರು. ಇದು ಇಬ್ಬರ ನಡುವಿನ ಭಿನ್ನಾಭಿಪ್ರಾಯ ಹಾಗೂ ವಿಚ್ಛೇದನದ ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು. ಆದರೆ ವಿಚ್ಛೇದನ ಪಡೆಯುತ್ತಿರುವುದರ ಬಗ್ಗೆ ನೇರವಾಗಿ 'ಹೌದು' ಅಥವಾ 'ಅಲ್ಲ' ಎಂದು ಹೇಳದ ಶುಭಾ, ಪ್ರಸ್ತುತ ಪರಿಸ್ಥಿತಿಯಲ್ಲಿ ತಮಗೆ 'ಖಾಸಗಿತನ' ನೀಡುವಂತೆ ವಿನಂತಿಸಿದ್ದಾರೆ.
ನಟಿ ಶುಭಾ ಪೂಂಜಾ ಹಾಗೂ ಪತಿ ಸುಮಂತ್ ಬಿಲ್ಲವ್
ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಏನಿದೆ?
"ನನ್ನ ಆತ್ಮೀಯ ಮಾಧ್ಯಮ ಮಿತ್ರರೇ, ನನ್ನ ಇಡೀ ಚಿತ್ರಜೀವನದ ಪಯಣದಲ್ಲಿ ನೀವು ನನಗೆ ಅಪಾರವಾದ ಬೆಂಬಲ, ಪ್ರೋತ್ಸಾಹ ಮತ್ತು ಪ್ರೀತಿಯನ್ನು ನೀಡಿದ್ದೀರಿ. ಅದಕ್ಕಾಗಿ ನಾನು ನಿಮಗೆ ಯಾವಾಗಲೂ ಆಭಾರಿಯಾಗಿರುತ್ತೇನೆ. ಇಂದು ನನ್ನದೊಂದು ಸಣ್ಣ ವಿನಂತಿ ಇದೆ. ದಯವಿಟ್ಟು ನನಗೆ, ಸುಮಂತ್‌ಗೆ ಹಾಗೂ ನಮ್ಮ ಕುಟುಂಬದವರಿಗೆ ನಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಕೊಂಚ ಪ್ರೈವೆಸಿ ನೀಡಿ ಎಂದು ನಾನು ನಿಮ್ಮಲ್ಲಿ ವಿನಮ್ರವಾಗಿ ಕೇಳಿಕೊಳ್ಳುತ್ತೇನೆ. ಈ ಕಠಿಣ ಸಮಯದಲ್ಲಿ ನಿಮ್ಮ ತಿಳುವಳಿಕೆ ಮತ್ತು ಗೌರವ ನಮಗೆ ಅತ್ಯಂತ ಮುಖ್ಯವಾಗಿದೆ." ಎಂದು ಬರೆದುಕೊಂಡಿದ್ದಾರೆ.
'ಸರಿಯಾದ ಸಮಯ ಬಂದಾಗ ನಾನೇ ಹೇಳ್ತೀನಿ'
ಮುಂದುವರಿದು ಬರೆದುಕೊಂಡಿರುವ ನಟಿ, "ಸರಿಯಾದ ಸಮಯ ಬಂದಾಗ, ನಾನೇ ವೈಯಕ್ತಿಕವಾಗಿ ನಿಮ್ಮೆಲ್ಲರೊಂದಿಗೆ ಯಾವುದೇ ಮಾಹಿತಿ ಇದ್ದರೂ ಹಂಚಿಕೊಳ್ಳುತ್ತೇನೆ. ನಿಮ್ಮ ನಿರಂತರ ಪ್ರೀತಿ, ಬೆಂಬಲ ಮತ್ತು ದಯೆಗೆ ಮತ್ತೊಮ್ಮೆ ಧನ್ಯವಾದಗಳು" ಎಂದು ಕೃತಜ್ಞತೆ ಸಲ್ಲಿಸುವ ಮೂಲಕ ಸದ್ಯಕ್ಕೆ ಹರಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆಯಲು ಯತ್ನಿಸಿದ್ದಾರೆ.

