
ಶರ್ಮಿಳಾ ಮಾಂಡ್ರೆ ಅವರ ಆಪ್ತ ಗೆಳತಿ ಹಾಗೂ ಸ್ಯಾಂಡಲ್‌ವುಡ್‌ನ ’ಕ್ವೀನ್’ ರಮ್ಯಾ ಮದುವೆಯಲ್ಲಿ ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶರ್ಮಿಳಾ ಮಾಂಡ್ರೆ - ರಮ್ಯಾ ಭಾವುಕ ಪೋಸ್ಟ್
ನಟಿ ಶರ್ಮಿಳಾ ಮಾಂಡ್ರೆ ಜೈಪುರದಲ್ಲಿ ನಿರ್ಮಾಪಕ ಸುಧನ್ ಸುಂದರಂ ಅವರನ್ನು ವಿವಾಹವಾಗಿದ್ದಾರೆ. ಮದುವೆಯ ಬಳಿಕ ನಟಿ ರಮ್ಯಾ ಭಾವುಕ ಶುಭಾಶಯ ಸಂದೇಶ ಹಂಚಿಕೊಂಡಿದ್ದು, ಫೋಟೋಗಳು ವೈರಲ್ ಆಗಿವೆ.
ಸ್ಯಾಂಡಲ್‌ವುಡ್ ನಟಿ ಶರ್ಮಿಳಾ ಮಾಂಡ್ರೆ ಅವರು ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜುಲೈ 12ರಂದು ಜೈಪುರದಲ್ಲಿ ಕುಟುಂಬ ಸದಸ್ಯರು, ಆಪ್ತ ಸ್ನೇಹಿತರು ಹಾಗೂ ಚಿತ್ರರಂಗದ ಕೆಲವೇ ಗಣ್ಯರ ಸಮ್ಮುಖದಲ್ಲಿ ಸರಳ ಮತ್ತು ಖಾಸಗಿ ಸಮಾರಂಭದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ಕಾರ್ಯಕ್ರಮಗಳು ಸಾಂಪ್ರದಾಯಿಕ ದಕ್ಷಿಣ ಭಾರತೀಯ ವಿಧಿವಿಧಾನಗಳೊಂದಿಗೆ ನೆರವೇರಿದವು.
ಮದುವೆ ಬಳಿಕ ನಟಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದು, ಶರ್ಮಿಳಾ ಅವರೊಂದಿಗೆ ಇರುವ ದೀರ್ಘಕಾಲದ ಸ್ನೇಹವನ್ನು ನೆನಪಿಸಿಕೊಂಡಿದ್ದಾರೆ. "ನನ್ನ ಮುದ್ದಿನ ಚಾಂಪಿ ಮದುವೆಯಾಗಿದ್ದಾಳೆ. ಸಮಯ ಎಷ್ಟು ಬೇಗ ಕಳೆಯುತ್ತದೆ ಎನ್ನುವುದೇ ನಂಬಲಾಗುತ್ತಿಲ್ಲ" ಎಂದು ಅವರು ಬರೆದು, ಹೊಸ ದಾಂಪತ್ಯ ಜೀವನ ಪ್ರೀತಿ, ನಂಬಿಕೆ ಮತ್ತು ಜೊತೆಯಾಟದಿಂದ ತುಂಬಿರಲಿ ಎಂದು ಹಾರೈಸಿದ್ದಾರೆ.
ಲೆಬನೀಸ್-ಅಮೆರಿಕನ್ ಕವಿ ಖಲೀಲ್ ಜಿಬ್ರಾನ್ ಅವರ ಮಾತುಗಳನ್ನು ಉಲ್ಲೇಖಿಸಿದ ರಮ್ಯಾ, "ನೀನು ಯಾವಾಗಲೂ ಸುರಕ್ಷಿತವಾಗಿರುವ, ನಿನ್ನದೇ ಆದ ಸುಂದರ ಬದುಕನ್ನು ಕಟ್ಟಿಕೊಳ್ಳುವ, ನಿನ್ನನ್ನು ನೀನೇ ಸಂಪೂರ್ಣವಾಗಿ ವ್ಯಕ್ತಪಡಿಸಬಹುದಾದಂತಹ ವೈವಾಹಿಕ ಜೀವನವನ್ನು ಹೊಂದಲಿ" ಎಂದು ಶುಭ ಹಾರೈಸಿದ್ದಾರೆ. ಕೊನೆಯಲ್ಲಿ, "ನಾನು ಯಾವಾಗಲೂ ನಿನ್ನ ಸಖಿಯೇ ಆಗಿರುತ್ತೇನೆ" ಎಂಬ ಭಾವುಕ ಸಾಲುಗಳೊಂದಿಗೆ ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದ್ದಾರೆ.
ಶರ್ಮಿಳಾ ಮತ್ತು ಸುಧನ್ ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗದ ಹಲವು ಗಣ್ಯರು ನವದಂಪತಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಶರ್ಮಿಳಾ ಮಾಂಡ್ರೆ ಅವರು ಸಜನಿ, ನವಗ್ರಹ, ಮುಸ್ಸಂಜೆ ಮಾತು, ಕೃಷ್ಣ ಹಾಗೂ ಗಾಳಿಪಟ 2 ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿದ್ದು, ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸುಧನ್ ಸುಂದರಂ ದಕ್ಷಿಣ ಭಾರತದ ಹೆಸರಾಂತ ನಿರ್ಮಾಪಕರಲ್ಲಿ ಒಬ್ಬರಾಗಿದ್ದು, ಹಲವು ಪ್ರಶಂಸಿತ ಚಿತ್ರಗಳಿಗೆ ಬೆಂಬಲ ನೀಡಿದ್ದಾರೆ. ಈ ವರ್ಷದ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಇದೀಗ ವೈವಾಹಿಕ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದೆ.

