Cinema Review| ಶಾಖಾಹಾರಿ: ರೋಮಾಂಚನಗೊಳಿಸಲು ಹೆಣಗುವ ಸಂದೀಪ್ ಸುಂಕದ್ ಅವರ ಚಿತ್ರ!
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿರುವ ಸಿನಿಮಾ ʼಶಾಖಾಹಾರಿʼ ನುಂಗಲೂ ಆಗದ, ಜಗಿಯಲೂ ಸಾಧ್ಯವಾಗದ ಆಹಾರದಂತಿದೆ. ಬಿಡಿಸಲಾರದ ಸುರುಳಿಯಂತಿರುವ ಕಥಾ ಉಪ ಹಂದರಗಗಳು ಮತ್ತು ಅಸಹಜತೆಯಿಂದಾಗಿ ಸಿನಿಮಾ ಸೊರಗಿದಂತೆ ಕಂಡುಬರುತ್ತದೆ.
ಈ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾಗಿ, ಪ್ರಸ್ತುತ ಒಟಿಟಿ ಪ್ಲಾಟ್‌ಫಾರ್ಮ್ ಒಂದರಲ್ಲಿ ಲಭ್ಯವಿರುವ ಕನ್ನಡ ಚಲನಚಿತ್ರ ಶಾಖಾಹಾರಿ (ದಿ ವೆಜಿಟೇರಿಯನ್) ಸಿನೆಮಾದ ಹಿಂದಿನ ಪರಿಕಲ್ಪನೆ, ಅದರ ಆರಂಭಿಕ ವೈಚಿತ್ರ್ಯದ ಹೊರತಾಗಿಯೂ, ಅನನ್ಯ ಸಂಭಾವ್ಯತೆಯನ್ನು ಸಾದರಪಡಿಸುತ್ತದೆ. ಸಿನಿಮಾ ಸಣ್ಣ ಹಳ್ಳಿಯೊಂದರ ರೆಸ್ಟೋರೆಂಟ್ ಉಪಾಹಾರ ಗೃಹದ ಒಳಗೆ ನಿಗೂಢವಾಗಿ ಕಣ್ಮರೆಯಾಗುವವರನ್ನು ಒಳಗೊಂಡ ಅದ್ಭುತ ಥ್ರಿಲ್ಲರ್ ಆಗಿ ಅನಾವರಣಗೊಳ್ಳಬಹುದಾಗಿತ್ತು.
ಸಾಮಾನ್ಯವಾಗಿ ಸಂಭವಿಸುವಂತೆ, ಚಲನಚಿತ್ರದಲ್ಲಿ ಕುತೂಹಲಕಾರಿ ಪರಿಕಲ್ಪನೆಯೊಂದಕ್ಕೆ ಯಶಸ್ವಿಯಾಗಿ ಜೀವ ತುಂಬಲು ಒಂದು ನಿರ್ದಿಷ್ಟ ಮಟ್ಟದ ಪ್ರಾಯೋಗಿಕತೆ ಅಗತ್ಯವಿರುತ್ತದೆ. ಆದರೆ, ಕಲ್ಪನೆಯೊಂದಿಗೆ ಬಹಳ ವ್ಯಾಮೋಹಗೊಂಡಾಗ, ಅದನ್ನು ಸುಸಂಬದ್ಧ ಚಲನಚಿತ್ರವಾಗಿ ಪರಿವರ್ತಿಸಲು ಇದು ಸವಾಲಾಗಬಹುದು. ಇದು ನಿರ್ದೇಶಕ ಸಂದೀಪ್ ಸುಂಕದ್ ʻಶಾಖಾಹಾರಿʼಯಲ್ಲಿ ಎದುರಿಸಿರುವ ಸವಾಲು! ಥ್ರಿಲ್ಲರ್ಗಳಲ್ಲಿ ನಿರ್ದೇಶಕರಿಗೆ ನಿರ್ದಿಷ್ಟ ಮಟ್ಟದ ನಿರ್ಲಿಪ್ತತೆ ನಿರ್ಣಾಯಕವಾಗಿರುತ್ತದೆ; ಅವರು ನಿರ್ವಹಣೆಯಲ್ಲಿ ಪ್ರಾಯೋ ಗಿಕ ವಿಧಾನವನ್ನು ನಿರ್ವಹಿಸಬೇಕಾಗುತ್ತದೆ. ಹಾಗಾಗಿ , ಈ ಸಿನಿಮಾ ಇಲ್ಲಿ ಎಡವುತ್ತದೆ.
ಕಥಾವಸ್ತು ನೇರವಾಗಿದೆ. ಪೊಲೀಸ್ ಠಾಣೆಯಿಂದ ತಪ್ಪಿಸಿಕೊಳ್ಳುವ ಕೊಲೆ ಆರೋಪಿಯು , ತನ್ನ ಸಣ್ಣ ಉಪಾಹಾರ ಗೃಹವನ್ನು ಅಂಗಡಿಯನ್ನು ಅಡಗುತಾಣವಾಗಿ ಬಳಸಿದಾಗ, ಅದರ ಮಾಲಿಕನಾಗಿರುವ ಬಾಣಸಿಗ (ರಂಗಾಯಣ ರಘು) ಸಂದಿಗ್ಧಕ್ಕೆ ಸಿಲುಕುತ್ತಾನೆ. ಪ್ರಕರಣದ ತನಿಖೆಯ ಉಸ್ತುವಾರಿ ಹೊತ್ತಿರುವ ಸಬ್ ಇನ್ಸ್ಪೆಕ್ಟರ್ (ಗೋಪಾಲಕೃಷ್ಣ ದೇಶಪಾಂಡೆ) ಕೂಡ ತನ್ನದೇ ಆದ ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅವರ ಪತ್ನಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುತ್ತಾಳೆ . ಸಬ್ ಇನ್ಸ್‌ಪೆಕ್ಟರ್ ತಾನು ಬಯಸುತ್ತಿರುವ ತನ್ನೂರಿನ ಠಾಣೆಗೆ ವರ್ಗಾವಣೆಯಾಗುವುದು ಈ ಕೊಲೆ ಪ್ರಕರಣವನ್ನು ಅವರು ಭೇದಿಸುವುದನ್ನೇ ಅವಲಂಬಿತವಾಗಿರುತ್ತದೆ.
ಒಂದು ಚಲನಚಿತ್ರವು ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳಬೇಕೆಂದರೆ, ವಿಶೇಷವಾಗಿ, ಕಥೆಯನ್ನು ಹೇಳಲು ಥ್ರಿಲ್ಲರ್ ಪ್ರಕಾರವನ್ನು ಬಳಸುವಾಗ, ನಿರ್ದೇಶಕ ಆದಷ್ಟು ಕಡಿಮೆ ಕಲಾವಿದರಿಗೆ ಸೀಮಿತಗೊಳಿಸಬೇಕು ಮತ್ತು ನಿರೂಪಣೆ ಮೇಲೆ ತೀಕ್ಷ್ಣವಾದ ಲಕ್ಷ್ಯವನ್ನು ಹೊಂದಿರಬೇಕು. ಆದ್ದರಿಂದ, ಸಿನಿಮಾದಲ್ಲಿನ ಕೆಲವು ಉಪ ಕಥಾ ವಸ್ತುಗಳನ್ನು ತೆಗೆದುಹಾಕಬಹುದಿತ್ತು. ಏಕೆಂದರೆ, ಇವು ನಿಮ್ಮನ್ನು ಯಾವ ದಿಕ್ಕಿನಲ್ಲಿ ಸೆಳದೊಯ್ಯುತ್ತದೆ ಎಂಬ ಆಶ್ಚರ್ಯಕ್ಕೆ ಕಾರಣವಾಗಬಹುದು ಮತ್ತು ವೀಕ್ಷಕರನ್ನು ಮುಖ್ಯ ಕಥಾನಕದಿಂದ ಬೇರೆಡೆಗೆ ಸೆಳೆದು ಚಲನಚಿತ್ರದ ಪರಿಣಾಮವನ್ನು ಕುಂಠಿತಗೊ ಳಿಸಬಹುದು. ನಿರ್ದೇಶಕರು ಪ್ರಾಯಶಃ ಅವುಗಳನ್ನು ರೂಪಕಗಳಂತೆ ಬಳಸಲು ಬಯಸಿದ್ದರೇನೋ; ಆದರೆ, ಅದು ಸಂಭವಿಸಲು ಚಿತ್ರಕಥೆ ಬರೆಯುವವರು ದೃಶ್ಯಗಳನ್ನು ಪರಿಣಾಮಕಾರಿಯಾಗಿ ರೂಪಿಸಲು ಹೆಚ್ಚುಒತ್ತು ಕೊಡಬೇಕಾಗುತ್ತದೆ.
ಉದಾಹರಣೆಗೆ, ಮಧ್ಯವಯಸ್ಸಿನ ಬಾಣಸಿಗ ಬಸ್ಸಿನಲ್ಲಿ ಹೋಗುವ ಮಹಿಳೆಯೊಬ್ಬರನ್ನು ನೋಡಲು ಪ್ರತಿದಿನ ಕಾಯುತ್ತಾನೆ. ಆದರೆ, ಆಕೆ ಬಾಣಸಿಗನನ್ನು ಮದುವೆಯಾಗಲು ಬಯಸಿದ್ದಳು ಮತ್ತು ಆಕೆಯ ಪೋಷಕರ ವಿರೋಧದಿಂದ ಸಾಧ್ಯವಾಗಲಿಲ್ಲ ಎನ್ನುವುದು ಆನಂತರ ನಮಗೆ ಗೊತ್ತಾಗುತ್ತದೆ. ಚಿತ್ರದ ಅಂತ್ಯದಲ್ಲಿಆಕೆ ಬದಲಾದ ಸನ್ನಿವೇಶಗಳಿಂದಾಗಿ ಸಂಬಂಧವನ್ನು ಪುನರುಜ್ಜೀವನಗೊಳಿಸಲು ಉಪಾಹಾರ ಗೃಹದೆಡೆಗೆ ನೋಡುತ್ತಾಳೆ. ಆದರೆ, ಗ್ರಾಹಕರ ನಿರಂತರ ಆಗಮನದಿಂದ, ಅವರಿಬ್ಬರಿಗೆ ಮಾತನಾಡಲು ಅವಕಾಶವಾಗುವುದಿಲ್ಲ. ಈ ದೃಶ್ಯವನ್ನು ಇನ್ನಷ್ಟು ಸೂಕ್ಷ್ಮವಾಗಿ ನಿರ್ವಹಿಸಬಹುದಿತ್ತು. ಆದರೆ, ರಂಗಾಯಣ ರಘು ಭಾವನೆಗಳನ್ನು ಹೊರಹಾಕಲು ಹೆಣಗಾಡುತ್ತಾರೆ. ಇದು ಪ್ರೇಕ್ಷಕರಲ್ಲಿ ಅನುಭೂತಿ ಮೂಡಿಸುವ ಬದಲು ಕಿರಿಕಿರಿಗೆ ಕಾರಣವಾಗುತ್ತದೆ.
ಪರಿಷ್ಕರಣೆಯ ಸ್ಪರ್ಶ ಬೇಕಿತ್ತು: ಸಿನಿಮಾದ ಪ್ರಧಾನ ಭೂಮಿಕೆಯಲ್ಲಿರುವ ಕಲಾವಿದ ರಂಗಾಯಣ ರಘು, ಕಳಪೆ ಸ್ಕ್ರಿಪ್ಟ್ ಅಥವಾ ತಮ್ಮ ಆಸಕ್ತಿಯ ಕೊರತೆ ಯಿಂದಾಗಿ ತಮ್ಮ ಪಾತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅವರ ಪಾತ್ರವು ಗ್ರಾಹಕರೊಂದಿಗೆ ಸದಾ ಸಿಡಿಮಿಡಿಗೊಳ್ಳುವ ವ್ಯಕ್ತಿಯಂತೆ ಹಾಗೂ ಅವರ ವರ್ತನೆಗೆ ಕಾರಣವೇನು ಎಂದು ವೀಕ್ಷಕರು ಅಚ್ಚರಿಪಡುವಂತಾಗುತ್ತದೆ. ಆಶ್ಚರ್ಯಕರ ವಿಷಯವೆಂದರೆ, ಸತತ ದುರಂತಗಳು ಆತ ನೊಂದುಕೊಳ್ಳುವಂತೆ ಮಾಡುವ ಬದಲು ಆತನ ನೊಂದ ಬದುಕಿಗೆ ಚೈತನ್ಯ ನೀಡಿದಂತೆ ಕಾಣುತ್ತದೆ. ಒಬ್ಬ ಗ್ರಾಹಕ ಹೊರತುಪಡಿಸಿ, ಉಳಿದವರು ಮಾಂಸ ಸುಡುವ ವಾಸನೆಯನ್ನುಗ್ರಹಿಸದೆ ಇರುವುದು ದಿಗ್ಭ್ರಮೆಗೊಳಿಸುತ್ತದೆ. ಇದು ಸಿನಿಮಾದ ಓಘವನ್ನು ಕಡಿಸುತ್ತದೆ ಮತ್ತು, ಚಲನಚಿತ್ರದ ಚಿತ್ರಕಥೆಯ ದುರ್ಬಲ ಅಡಿಪಾಯವನ್ನು ಎತ್ತಿತೋರಿಸುತ್ತದೆ.
ಪ್ರಾಯಶಃ ಅಷ್ಟೇನೂ ಗಟ್ಟಿಯಲ್ಲದ ನಿರೂಪಣೆಯನ್ನೂ ಚೆನ್ನಾಗಿ ನಿಭಾಯಿಸಿದ್ದು, ತೊಂದರೆಗೊಳಗಾದ ಆದರೆ, ಸದಾ ಬಾಣಸಿಗನಿಗೆ ಕಿರಿಕಿರಿ ಮಾಡುತ್ತಲೇ ಇರುವ ಪಾತ್ರ (ಸುಜಯ್ ಶಾಸ್ತ್ರಿ) . ಆ ಕಲಾವಿದನ ಪಾತ್ರ ಚಿಕ್ಕದಾದರೂ ಅವರ ಪ್ರತಿಭೆ ಗಮನ ಸೆಳೆಯುತ್ತದೆ.
ಬ್ರಿಟಿಷ್ ಸಿನಿಮಾ ನಿರ್ದೇಶಕ ಆಲ್ಫ್ರೆಡ್ ಹಿಚ್ಕಾಕ್ ಸಂದರ್ಶನವೊಂದರಲ್ಲಿ ಫ್ರೆಂಚ್ ಸಿನಿಮಾ ತಯಾರಕ ಹಾಗೂ ಕಲಾವಿದ ಫ್ರಾಂಕೋಯಿಸ್ ಟ್ರೂಫೌಟ್ಗೆ ಹೇಳಿದಂತೆ, ʻಸಸ್ಪೆನ್ಸ್ ಸನಿಮಾ ಎಂದರೆ ಪ್ರೇಕ್ಷಕರಿಗೆ ಭಯಾನಕ ಘಟನೆ ಯೊಂದು ನಡೆಯಲಿದೆ ಎಂದು ಗೊತ್ತಿರುವಂತೆ ಮಾಡಬೇಕು ಮತ್ತು ಆನಂತರ ಅವರಲ್ಲಿ ಇನ್ನಷ್ಟು ಆತಂಕ ಸೃಷ್ಟಿಸುವಂತಹ ದೃಶ್ಯಗಳನ್ನು ಪೋಣಿಸಿ ಒತ್ತಡದಲ್ಲೇ ತೂಗಾಡಿಸುವಂತಿರಬೇಕು.ʼ ಕಲಹ ಅಥವಾ ಕಪಾಳಮೋಕ್ಷ ಮಾಡುವ ದೃಶ್ಯಗಳೇ ಪುನರಾವರ್ತನೆಗೊಳ್ಳುತ್ತಿದೆ ಎಂದಾದರೆ, ಒಬ್ಬ ನಿರ್ದೇಶಕನಿಗೆ ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಕಟ್ಟಿಕೊಡಲು ಅವುಗಳನ್ನು ರಂಗಪರಿಕರವಾಗಿ ಬಳಸುವುದಕ್ಕಿಂತ ಹೆಚ್ಚು ಬುದ್ಧಿವಂತಿಕೆಯನ್ನು ನಿರ್ದೇಶಕರು ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ನಿಮಗೆ ಗೊತ್ತಾಗಿ ಬಿಡುತ್ತದೆ. ಈ ಸಿನಿಮಾ ಭಯಾನಕತೆಯನ್ನು ಒಳಗೊಂಡ ಉತ್ತಮ ಥ್ರಿಲ್ಲರ್ ಆಗುವ ಎಲ್ಲಾ ಸಾಧ್ಯತೆಗಳನ್ನು ಹೊಂದಿತ್ತು. ಆದರೆ, ಸಿನಿಮಾ ಬಿಡುಗಡೆಗೆ ಮುನ್ನ ಹೆಚ್ಚಿನ ಪರಿಷ್ಕರಣೆ ಅಗತ್ಯವಿತ್ತು.