
OTTಯಿಂದ ಬ್ಯಾನ್ ಆಗಿದ್ದ ಸತ್ಲುಜ್ ಚಿತ್ರಕ್ಕೆ ಬಿಗ್ ಶಾಕ್- ನಿಷೇಧ ತೆರವಿಗೆ ನೋ ಎಂದ ಕೇಂದ್ರ
ಪಂಜಾಬಿ ನಟ ದಿಲ್ಜಿತ್ ದೋಸಾಂಜ್ ನಟನೆಯ ವಿವಾದಾತ್ಮಕ 'ಸತ್ಲುಜ್' (Satluj) ಚಿತ್ರದ ಮೇಲಿನ ನಿಷೇಧ ಮುಂದುವರಿಯಲಿದೆ. ಜಸ್ವಂತ್ ಸಿಂಗ್ ಖಾಲ್ರಾ ಜೀವನಾಧಾರಿತ ಈ ಚಿತ್ರ ಭಾರತದ ಸಾರ್ವಭೌಮತೆಗೆ ಧಕ್ಕೆ ತರುತ್ತದೆ ಎಂದು ಕೇಂದ್ರ ಸಮಿತಿ ಹೇಳಿದೆ.
ಖ್ಯಾತ ಪಂಜಾಬಿ ನಟ ಹಾಗೂ ಗಾಯಕ ದಿಲ್ಜಿತ್ ದೋಸಾಂಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಭಾರೀ ವಿವಾದ ಸೃಷ್ಟಿಸಿರುವ 'ಸತ್ಲುಜ್' (Satluj) ಚಲನಚಿತ್ರದ ಮೇಲಿನ ನಿಷೇಧವನ್ನು ತೆರವುಗೊಳಿಸದಂತೆ ಕೇಂದ್ರ ಸರ್ಕಾರ ನೇಮಿಸಿದ್ದ ಉನ್ನತ ಮಟ್ಟದ ಸಮಿತಿಯು ಶಿಫಾರಸು ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆನ್‌ಲೈನ್ ಸ್ಟ್ರೀಮಿಂಗ್ (OTT) ವೇದಿಕೆಗಳ ಮೂಲಕ ಈ ಚಿತ್ರ ಸಾರ್ವಜನಿಕರಿಗೆ ಲಭ್ಯವಾಗುವುದರಿಂದ ಭಾರತದ ಸಾರ್ವಭೌಮತೆ ಮತ್ತು ಅಖಂಡತೆಗೆ ಧಕ್ಕೆ ಬರಬಹುದು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಚಿತ್ರದ ಕಥಾಹಂದರವೇನು?
ಹನಿ ಟ್ರೆಹನ್ ನಿರ್ದೇಶನದ ಈ ಚಿತ್ರವು ಪಂಜಾಬ್‌ನ ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನ ಆಧಾರಿತವಾಗಿದೆ. 1984 ರಿಂದ 1994ರ ಅವಧಿಯಲ್ಲಿ ಪಂಜಾಬ್‌ನಲ್ಲಿ ನಡೆದ ಉಗ್ರಗಾಮಿ ದಮನ ಕಾರ್ಯಾಚರಣೆಯ ವೇಳೆ, ಪಂಜಾಬ್ ಪೊಲೀಸರು ಸಾವಿರಾರು ಗುರುತು ಪತ್ತೆಯಾಗದ ಶವಗಳನ್ನು ಅಕ್ರಮವಾಗಿ ಸಂಸ್ಕಾರ ಮಾಡಿದ್ದ ಘಟನೆಯ ಕುರಿತು ಜಸ್ವಂತ್ ಸಿಂಗ್ ತನಿಖೆ ನಡೆಸಿದ್ದರು. ಇದಾದ ಬಳಿಕ 1995ರಲ್ಲಿ ಅವರನ್ನು ಪೊಲೀಸರು ಅಪಹರಿಸಿ, ಕೊಲೆ ಮಾಡಿದ್ದರು ಎನ್ನಲಾಗಿದೆ.
OTTಯಿಂದ ದಿಢೀರ್ ನಾಪತ್ತೆಯಾಗಿದ್ದ ಚಿತ್ರ
ಸೆನ್ಸಾರ್ ಮಂಡಳಿಯ (CBFC) ಕತ್ತರಿ ಪ್ರಯೋಗದಿಂದ ತಪ್ಪಿಸಿಕೊಳ್ಳಲು ಚಿತ್ರತಂಡ ಜುಲೈ 3 ರಂದು ಯಾವುದೇ ಪ್ರಚಾರವಿಲ್ಲದೆ 'ಝೀ5' (ZEE5) ಒಟಿಟಿ ವೇದಿಕೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಿತ್ತು. ಆದರೆ, ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ (ಜುಲೈ 5) ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 'ಸುರಕ್ಷತಾ ಕಾರಣ'ಗಳನ್ನು ನೀಡಿ ಚಿತ್ರವನ್ನು ದೇಶದಲ್ಲಿ ನಿರ್ಬಂಧಿಸಿತ್ತು.
ಬಳಿಕ ಮಾಹಿತಿ ತಂತ್ರಜ್ಞಾನ (IT) ನಿಯಮಗಳು 2021ರ ಅಡಿಯಲ್ಲಿ ಚಿತ್ರದ ಬಗ್ಗೆ ವಿವರವಾದ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರವು ವಿವಿಧ ಇಲಾಖೆಗಳ ಪ್ರತಿನಿಧಿಗಳನ್ನೊಳಗೊಂಡ ಅಂತರ-ಇಲಾಖಾ ಸಮಿತಿಯನ್ನು (IDC) ರಚಿಸಿತ್ತು.
ಕೇಂದ್ರ ಸಮಿತಿಯ ಆಕ್ಷೇಪವೇನು?
ಮಾಹಿತಿ ಮತ್ತು ಪ್ರಸಾರ, ಗೃಹ ವ್ಯವಹಾರಗಳು, ಎಲೆಕ್ಟ್ರಾನಿಕ್ಸ್ ಮತ್ತು ಐಟಿ, ರಕ್ಷಣಾ ಹಾಗೂ ಕಾನೂನು ಸಚಿವಾಲಯಗಳ ಪ್ರತಿನಿಧಿಗಳನ್ನೊಳಗೊಂಡ ಈ ಸಮಿತಿಯು ಚಿತ್ರವನ್ನು ವೀಕ್ಷಿಸಿ ವರದಿ ನೀಡಿದೆ. "ಚಿತ್ರದ ನಿರೂಪಣೆಯು ಸಮತೋಲನದಿಂದ ಕೂಡಿಲ್ಲ. ಪಂಜಾಬ್‌ನಲ್ಲಿ ಉಗ್ರಗಾಮಿಗಳು ನಡೆಸಿದ ಕ್ರೌರ್ಯವನ್ನು ಈ ಚಿತ್ರವು ಮರೆಮಾಚಲು ಯತ್ನಿಸಿದೆ. ಕೇವಲ ಭದ್ರತಾ ಪಡೆಗಳು ನಡೆಸಿದ ಅತಿರೇಕದ ವರ್ತನೆಯನ್ನು ಮಾತ್ರ ಎತ್ತಿ ತೋರಿಸಲಾಗಿದೆ," ಎಂದು ಸಮಿತಿ ಆಕ್ಷೇಪಿಸಿದೆ.
ಹೀಗಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಚಿತ್ರವನ್ನು ನಿರ್ಬಂಧಿಸಿರುವುದು ಸಂಪೂರ್ಣವಾಗಿ ಸಮರ್ಥನೀಯವಾಗಿದೆ ಎಂದು ಸಮಿತಿ ಸ್ಪಷ್ಟಪಡಿಸಿದೆ. ಸೆಕ್ಷನ್ 69A ಅಡಿಯಲ್ಲಿ ದೇಶದ ಸಾರ್ವಭೌಮತೆ, ಅಖಂಡತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಆನ್‌ಲೈನ್ ಕಂಟೆಂಟ್‌ಗಳನ್ನು ನಿರ್ಬಂಧಿಸಲು ಸರ್ಕಾರಕ್ಕೆ ಅಧಿಕಾರವಿದೆ.
ರಾಜಕೀಯ ರಂಗು ಪಡೆದ ವಿವಾದ
ಈ ಚಿತ್ರದ ನಿಷೇಧವು ಪಂಜಾಬ್‌ನಲ್ಲಿ ಈಗ ರಾಜಕೀಯ ವಿವಾದವಾಗಿ ಮಾರ್ಪಟ್ಟಿದೆ. ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (SGPC) ಚಿತ್ರದ ಮೇಲಿನ ನಿಷೇಧವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದೆ. ಮತ್ತೊಂದೆಡೆ, ಶಿರೋಮಣಿ ಅಕಾಲಿದಳ (SAD) ಪಕ್ಷವು ಪಂಜಾಬ್‌ನಾದ್ಯಂತ ಈ ಚಿತ್ರವನ್ನು ಪ್ರದರ್ಶಿಸುವುದಾಗಿ ಘೋಷಿಸಿದೆ.

