
ಮಧುಬಾಲಾ ಜೀವನಾಧಾರಿತ ಚಿತ್ರದಲ್ಲಿ 'ಧುರಂಧರ್' ನಟಿ ಸಾರಾ ಅರ್ಜುನ್
ನಿರ್ಮಾಪಕ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಜಸ್ಮೀತ್ ಕೆ. ರೀನ್ ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಬಾಲಿವುಡ್‌ನ ಹಿರಿಯ ನಟಿ ಮಧುಬಾಲಾ ಅವರ ಬದುಕಿನ ಕಥೆ ಶೀಘ್ರದಲ್ಲೇ ಬೆಳ್ಳಿಪರದೆಯ ಮೇಲೆ ಮೂಡಿಬರಲಿದೆ. 'ಧುರಂಧರ್' ಚಿತ್ರದ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ಸಾರಾ ಅರ್ಜುನ್ ಅವರು ಈ ಬಹುನಿರೀಕ್ಷಿತ ಜೀವನಾಧಾರಿತ ಸಿನಿಮಾದಲ್ಲಿ ಮಧುಬಾಲಾ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಜಸ್ಮೀತ್ ಕೆ. ರೀನ್ ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಸೆಪ್ಟೆಂಬರ್‌ನಿಂದ ಚಿತ್ರೀಕರಣ ಆರಂಭ
ಮಧುಬಾಲಾ ಅವರ ವ್ಯಕ್ತಿತ್ವ, ಅವರ ವೃತ್ತಿಜೀವನದ ಏಳುಬೀಳುಗಳು ಹಾಗೂ ವೈಯಕ್ತಿಕ ನಡವಳಿಕೆಗಳನ್ನು ಈ ಸಿನಿಮಾ ವಿಸ್ತೃತವಾಗಿ ಕಟ್ಟಿಕೊಡಲಿದೆ. ಸದ್ಯ ಈ ಚಿತ್ರಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತಿದ್ದು, ಸಿನಿಮಾಕ್ಕಾಗಿ ಬಹುದೊಡ್ಡ ತಾರಾಗಣವನ್ನು ಒಗ್ಗೂಡಿಸಲಾಗುತ್ತಿದೆ. ಬರುವ ಸೆಪ್ಟೆಂಬರ್ ತಿಂಗಳಿನಿಂದಲೇ ಚಿತ್ರೀಕರಣ ಅಧಿಕೃತವಾಗಿ ಆರಂಭವಾಗಲಿದೆ. 1969ರ ಫೆಬ್ರವರಿ ೨೩ರಂದು ತಮ್ಮ 36ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಮಧುಬಾಲಾ ಅವರ ಅಪರೂಪದ ಬದುಕಿನ ಪುಟಗಳನ್ನು ತೆರೆದಿಡುವ ನಿಟ್ಟಿನಲ್ಲಿ ಚಿತ್ರತಂಡ ಕಾರ್ಯಪ್ರವೃತ್ತವಾಗಿದೆ.
'ಲವ್ & ವಾರ್' ಮುಕ್ತಾಯದ ಬಳಿಕ ಮಧುಬಾಲಾ ಸೆಟ್ ನಿರ್ಮಾಣ
ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ಪ್ರಸ್ತುತ ರಣಬೀರ್ ಕಪೂರ್, ಆಲಿಯಾ ಭಟ್ ಹಾಗೂ ವಿಕ್ಕಿ ಕೌಶಲ್ ಅಭಿನಯದ 'ಲವ್ & ವಾರ್' ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಆ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಸಾಗುತ್ತಿದ್ದು, ಅದು ಪೂರ್ಣಗೊಂಡ ತಕ್ಷಣವೇ ಅದೇ ಸೆಟ್ ಅನ್ನು ಮಧುಬಾಲಾ ಚಿತ್ರದ ಕಥೆಗೆ ತಕ್ಕಂತೆ ಮರುನಿರ್ಮಾಣ ಮಾಡಲಾಗುವುದು ಎಂದು ವರದಿಯಾಗಿದೆ. 'ಲವ್ & ವಾರ್' ಕೆಲಸಗಳು ಮುಗಿದ ಬೆನ್ನಲ್ಲೇ ಮಧುಬಾಲಾ ಬಯೋಪಿಕ್ ಚಿತ್ರೀಕರಣ ಭರದಿಂದ ಸಾಗಲಿದೆ.

