
ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಚಿತ್ರಗಳಾದ 'ಟಾಕ್ಸಿಕ್' ಮತ್ತು 'ಕೆಜಿಎಫ್ 3' ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
KGF 3 Update| ಕೆಜಿಎಫ್ 3 ಯಾವಾಗ? ಟಾಕ್ಸಿಕ್ ಕಥೆ ಏನು? ಬಿಗ್ ಅಪ್ಡೇಟ್ಸ್ ಕೊಟ್ಟ ಯಶ್
ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಚಿತ್ರಗಳಾದ 'ಟಾಕ್ಸಿಕ್' ಮತ್ತು 'ಕೆಜಿಎಫ್ 3' ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದು, ಕೆಜಿಎಫ್ 3 ಸರಿಯಾದ ಸ್ಕ್ರಿಪ್ಟ್ ಸಿದ್ಧವಾದಾಗ ಮಾತ್ರ ಶುರುವಾಗಲಿದೆ ಎಂದು ತಿಳಿಸಿದ್ದಾರೆ.
ಸ್ಯಾಂಡಲ್‌ವುಡ್ ನಟ ಯಶ್ ಅವರು ತಮ್ಮ ಬಹುನಿರೀಕ್ಷಿತ ಚಿತ್ರಗಳಾದ 'ಕೆಜಿಎಫ್ 3' ಮತ್ತು 'ಟಾಕ್ಸಿಕ್' ಬಗ್ಗೆ ಅಮೆರಿಕದ ಸಿನಿಮಕಾನ್ 2026ರಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಕೆಜಿಎಫ್ ಸರಣಿಯ ಮೂರನೇ ಭಾಗದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮನೆಮಾಡಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಕೆಜಿಎಫ್ 3 ಖಂಡಿತವಾಗಿಯೂ ಸೆಟ್ಟೇರಲಿದೆ ಆದರೆ ಅದಕ್ಕೆ ಇನ್ನೂ ಸಮಯ ಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ತಾವು 'ಟಾಕ್ಸಿಕ್' ಮತ್ತು 'ರಾಮಾಯಣ' ಚಿತ್ರಗಳಲ್ಲಿ ಬ್ಯುಸಿಯಾಗಿರುವುದರಿಂದ, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ತಾವು ಚರ್ಚೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಕೇವಲ ಹಣ ಅಥವಾ ಹೆಸರಿಗಾಗಿ ಚಿತ್ರ ಮಾಡದೆ, ಒಂದು ಪರಿಪೂರ್ಣವಾದ ಕಥೆ ಸಿಕ್ಕಾಗ ಮಾತ್ರ ಕೆಜಿಎಫ್ 3 ಕೆಲಸ ಆರಂಭಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮ ಮುಂದಿನ ಚಿತ್ರ 'ಟಾಕ್ಸಿಕ್' ಬಗ್ಗೆಯೂ ಯಶ್ ಮಾತನಾಡಿದ್ದು, ಇದು ತಂದೆ ಮತ್ತು ಮಗನ ನಡುವಿನ ಸೇಡಿನ ಕಥೆಯಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಈ ಚಿತ್ರವು ಸ್ವಾತಂತ್ರ್ಯಾನಂತರದ ಕಾಲಘಟ್ಟದಲ್ಲಿ, ಅಂದರೆ ಬ್ರಿಟಿಷರು ಭಾರತ ಬಿಟ್ಟು ಹೋದರೂ ಗೋವಾ ಇನ್ನೂ ಪೋರ್ಚುಗೀಸರ ವಶದಲ್ಲಿದ್ದ ಸಮಯದ ಹಿನ್ನೆಲೆಯನ್ನು ಹೊಂದಿದೆ. ಅಲ್ಲಿನ ರಹಸ್ಯಗಳು, ಗ್ಯಾಂಗ್‌ಸ್ಟರ್ ಸಾಮ್ರಾಜ್ಯ, ದುರಾಸೆ ಮತ್ತು ರಾಜಕೀಯದ ಜೊತೆಗೆ ಭಾವನಾತ್ಮಕ ಪ್ರೇಮಕಥೆಯೂ ಈ ಚಿತ್ರದಲ್ಲಿದೆ ಎಂದು ಅವರು ವಿವರಿಸಿದ್ದಾರೆ.
ಜೂನ್ 4 ರಂದು ಈ ಚಿತ್ರವು ವಿಶ್ವದಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಲಿದ್ದು, ಇಂಗ್ಲಿಷ್ ಸೇರಿದಂತೆ ಭಾರತದ ಪ್ರಮುಖ ಭಾಷೆಗಳಲ್ಲಿ ಅಭಿಮಾನಿಗಳ ಮುಂದೆ ಬರಲಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಮತ್ತಷ್ಟು ರೋಚಕ ಅಪ್‌ಡೇಟ್‌ಗಳನ್ನು ನೀಡುವುದಾಗಿ ಯಶ್ ಭರವಸೆ ನೀಡಿದ್ದು, ಪ್ರಸ್ತುತ ಈ ಸುದ್ದಿ ಗಾಂಧಿನಗರದಿಂದ ಹಾಲಿವುಡ್‌ವರೆಗೂ ಭಾರಿ ಸದ್ದು ಮಾಡುತ್ತಿದೆ.
'ಟಾಕ್ಸಿಕ್' ಚಿತ್ರವು 1940 ರಿಂದ 1970 ರ ಕಾಲಘಟ್ಟದ ನಡುವೆ ನಡೆಯುವ ಗ್ಯಾಂಗ್‌ಸ್ಟರ್ ಡ್ರಾಮಾ ಆಗಿದ್ದು, ವಿಶೇಷವೆಂದರೆ ಈ ಚಿತ್ರಕ್ಕೆ ಸ್ವತಃ ಯಶ್ ಅವರೇ ಸಹ-ಲೇಖಕರಾಗಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ದಕ್ಷಿಣದ ಸ್ಟಾರ್ ನಟಿ ನಯನತಾರಾ, ಹುಮಾ ಖುರೇಶಿ ಹಾಗೂ ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಹಿಂದೆ ಸಂದರ್ಶನದಲ್ಲಿ ಭಾಗವಹಿಸಿದ್ದ ಯಶ್ ಈ ಚಿತ್ರವು ಕೇವಲ ಸಾಮಾನ್ಯ ಗ್ಯಾಂಗ್‌ಸ್ಟರ್ ಕಥೆಯಲ್ಲ, ಬದಲಾಗಿ ಮಾನವ ಮನೋವಿಜ್ಞಾನದ ಆಳವಾದ ಪದರಗಳನ್ನು ಕೆದಕುವ ವಿಭಿನ್ನ ಪ್ರಯತ್ನ ಎಂದು ಅವರು ಹಾಲಿವುಡ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.

