Toxic| ಯಶ್ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ಮುಂದೂಡಿಕೆ: ಹೊಸ ದಿನಾಂಕ ಶೀಘ್ರದಲ್ಲಿ
x

ನಟ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದೆ.

Toxic| ಯಶ್ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ಮುಂದೂಡಿಕೆ: ಹೊಸ ದಿನಾಂಕ ಶೀಘ್ರದಲ್ಲಿ

ನಟ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದೆ. ಜಾಗತಿಕ ಗುಣಮಟ್ಟ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಹೊಸ ದಿನಾಂಕ ಶೀಘ್ರದಲ್ಲೇ ಪ್ರಕಟವಾಗಲಿದೆ.


Click the Play button to hear this message in audio format

ರಾಕಿಂಗ್‌ ಸ್ಟಾರ್‌ ನಟ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೌನ್ ಅಪ್ಸ್' ಚಿತ್ರದ ಬಿಡುಗಡೆ ದಿನಾಂಕ ಮತ್ತೆ ಮುಂದೂಡಲ್ಪಟ್ಟಿದೆ. ಈ ಹಿಂದೆ ಜೂನ್ 4 ರಂದು ವಿಶ್ವದಾದ್ಯಂತ ತೆರೆಗೆ ಬರಬೇಕಿದ್ದ ಈ ಚಿತ್ರವು ಈಗ ನಿಗದಿತ ಸಮಯಕ್ಕೆ ಬಿಡುಗಡೆಯಾಗುತ್ತಿಲ್ಲ ಎಂದು ಸ್ವತಃ ನಟ ಯಶ್ ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ.

ಚಿತ್ರದ ವಿಳಂಬದ ಬಗ್ಗೆ ಮನದಾಳದ ಮಾತನ್ನು ಹಂಚಿಕೊಂಡಿರುವ ಯಶ್, ನಾವು ಕೆಲವು ಸಿನಿಮಾಗಳನ್ನು ಮಾಡುತ್ತೇವೆ, ಆದರೆ ಇನ್ನೂ ಕೆಲವು ಸಿನಿಮಾಗಳು ನಾವು ಚಿತ್ರರಂಗವನ್ನು ಏಕೆ ಪ್ರೀತಿಸುತ್ತೇವೆ ಎಂಬುದನ್ನು ನೆನಪಿಸುತ್ತವೆ ಎಂದಿದ್ದಾರೆ. ಸಿನೆಮಾಕಾನ್‌ನಲ್ಲಿ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಜಾಗತಿಕ ಪ್ರತಿಕ್ರಿಯೆಯನ್ನು ಗಮನಿಸಿದರೆ, ಈ ಚಿತ್ರವು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಪೂರ್ಣ ಸಾಮರ್ಥ್ಯವನ್ನು ತಲುಪಲು ಹೆಚ್ಚಿನ ಸಮಯದ ಅಗತ್ಯವಿದೆ ಎಂಬುದು ಮನವರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವು ಈಗಾಗಲೇ ಎರಡನೇ ಬಾರಿಗೆ ಮುಂದೂಡಲ್ಪಟ್ಟಿದೆ. ಈ ಹಿಂದೆ ಮಾರ್ಚ್‌ 19ರಂದು ಬಿಡುಗಡೆಗೊಳ್ಳಬೇಕಾಗಿದ್ದ ಸಿನಿಮಾ ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿ ಹಾಗೂ ಚಿತ್ರದ ಅಂತರಾಷ್ಟ್ರೀಯ ಮಾರುಕಟ್ಟೆಯ ಹರವು ದೊಡ್ಡದಾಗಿರುವುದರಿಂದ ಸಿನಿಮಾವನ್ನು ಮುಂದೂಡಲಾಗಿತ್ತು. ಇದರೊಂದಿಗೆ ಚಿತ್ರದ ಸಿಜಿಐ ಕೆಲಸಗಳು ಬಾಕಿ ಇರುವುದು ಮತ್ತು ಕೆಲವು ದೃಶ್ಯಗಳ ಮರುಚಿತ್ರೀಕರಣದ ಅವಶ್ಯಕತೆ ಇರುವುದು ಕೂಡ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ. ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸುವುದಾಗಿ ಚಿತ್ರತಂಡ ಭರವಸೆ ನೀಡಿದ್ದು, ಕೆಜಿಎಫ್ 2 ನಂತರ ಯಶ್ ಅವರ ಈ ಹೊಸ ಅವತಾರವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಟಾಕ್ಸಿಕ್' ಚಿತ್ರವು 1940 ರಿಂದ 1970 ರ ಕಾಲಘಟ್ಟದ ನಡುವೆ ನಡೆಯುವ ಗ್ಯಾಂಗ್‌ಸ್ಟರ್ ಡ್ರಾಮಾ ಆಗಿದ್ದು, ವಿಶೇಷವೆಂದರೆ ಈ ಚಿತ್ರಕ್ಕೆ ಸ್ವತಃ ಯಶ್ ಅವರೇ ಸಹ-ಲೇಖಕರಾಗಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ದಕ್ಷಿಣದ ಸ್ಟಾರ್ ನಟಿ ನಯನತಾರಾ, ಹುಮಾ ಖುರೇಶಿ ಹಾಗೂ ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಹಿಂದೆ ಸಂದರ್ಶನದಲ್ಲಿ ಭಾಗವಹಿಸಿದ್ದ ಯಶ್‌ ಈ ಚಿತ್ರವು ಕೇವಲ ಸಾಮಾನ್ಯ ಗ್ಯಾಂಗ್‌ಸ್ಟರ್ ಕಥೆಯಲ್ಲ, ಬದಲಾಗಿ ಮಾನವ ಮನೋವಿಜ್ಞಾನದ ಆಳವಾದ ಪದರಗಳನ್ನು ಕೆದಕುವ ವಿಭಿನ್ನ ಪ್ರಯತ್ನ ಎಂದು ಅವರು ಹಾಲಿವುಡ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.

Read More
Next Story