
'ಟಾಕ್ಸಿಕ್' ಬಗ್ಗೆ ಹಾಲಿವುಡ್‌ನಲ್ಲಿ ಯಶ್ ಮಾತು
Yash| 'ಟಾಕ್ಸಿಕ್' ಬಗ್ಗೆ ಯಶ್ ಬಿಚ್ಚಿಟ್ಟ ಆ ಸತ್ಯ ಏನು? ಹಾಲಿವುಡ್‌ನಲ್ಲಿ ಸಂದರ್ಶನದಲ್ಲಿ ರಾಕಿ ಭಾಯ್ ಹೇಳಿದ್ದೇನು?
ಅಮೆರಿಕದ ಸಿನಿಮಕಾನ್‌ನಲ್ಲಿ ಯಶ್ 'ಟಾಕ್ಸಿಕ್' ಚಿತ್ರದ ಬಗ್ಗೆ ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ. ಮಾನವ ಮನೋವಿಜ್ಞಾನದ ಆಳವಾದ ಕಥೆ ಹೊಂದಿರುವ ಈ ಸಿನಿಮಾ ಜೂನ್ 4 ರಂದು ಬಿಡುಗಡೆಯಾಗಲಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಮೆರಿಕಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 'ಸಿನಿಮಾ ಕಾನ್' ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಯಶ್, ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಬಗ್ಗೆ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವು ಕೇವಲ ಸಾಮಾನ್ಯ ಗ್ಯಾಂಗ್‌ಸ್ಟರ್ ಕಥೆಯಲ್ಲ, ಬದಲಾಗಿ ಮಾನವ ಮನೋವಿಜ್ಞಾನದ ಆಳವಾದ ಪದರಗಳನ್ನು ಕೆದಕುವ ವಿಭಿನ್ನ ಪ್ರಯತ್ನ ಎಂದು ಅವರು ಹಾಲಿವುಡ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಚಿತ್ರದಲ್ಲಿನ ಪಾತ್ರಗಳು ಕಡು ಕಪ್ಪು ಛಾಯೆಯನ್ನು ಹೊಂದಿದ್ದು, ಅವುಗಳನ್ನು ಹಿಂದೆಂದೂ ಕಂಡಿರದ ರೀತಿಯಲ್ಲಿ ಅತ್ಯಂತ ವಿಶಿಷ್ಟವಾಗಿ ತೆರೆಯ ಮೇಲೆ ಪ್ರಸ್ತುತಪಡಿಸಲಾಗುತ್ತಿದೆ ಎಂದು ಯಶ್ ತಿಳಿಸಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಸಿನಿಮಾವು ಪ್ರೇಕ್ಷಕರ ಮೇಲೆ ಮಾನಸಿಕವಾಗಿ ದೊಡ್ಡ ಪ್ರಭಾವ ಬೀರಲಿದ್ದು, ಇದೊಂದು ಕಣ್ಣಿಗೆ ಹಬ್ಬದಂತಹ ದೃಶ್ಯಕಾವ್ಯವಾಗಲಿದೆ ಎಂಬ ಭರವಸೆಯನ್ನು ಅವರು ನೀಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟೀಸರ್ ಮತ್ತು ಪೋಸ್ಟರ್‌ಗಳು ಈಗಾಗಲೇ ವಿಶ್ವಾದ್ಯಂತ ಸಂಚಲನ ಮೂಡಿಸಿದ್ದು, ಚಿತ್ರವು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿರುವುದು ವಿಶೇಷವಾಗಿದೆ.
ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ತಾರಾ ಸುತಾರಿಯಾ ಅವರಂತಹ ದೊಡ್ಡ ತಾರಾಗಣವನ್ನು ಹೊಂದಿರುವ 'ಟಾಕ್ಸಿಕ್' ಚಿತ್ರವು ಜೂನ್ 4ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲು ಸಿದ್ಧವಾಗಿದೆ.
'ಟಾಕ್ಸಿಕ್' ಚಿತ್ರವು 1940 ರಿಂದ 1970 ರ ಕಾಲಘಟ್ಟದ ನಡುವೆ ನಡೆಯುವ ಗ್ಯಾಂಗ್‌ಸ್ಟರ್ ಡ್ರಾಮಾ ಆಗಿದ್ದು, ವಿಶೇಷವೆಂದರೆ ಈ ಚಿತ್ರಕ್ಕೆ ಸ್ವತಃ ಯಶ್ ಅವರೇ ಸಹ-ಲೇಖಕರಾಗಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ದಕ್ಷಿಣದ ಸ್ಟಾರ್ ನಟಿ ನಯನತಾರಾ, ಹುಮಾ ಖುರೇಶಿ ಹಾಗೂ ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿರುವ ಈ ಸಿನಿಮಾ, ಜಗತ್ತಿನಾದ್ಯಂತ ಹಲವಾರು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಸದ್ಯ ಅಮೆರಿಕದಲ್ಲಿ ಬೀಡು ಬಿಟ್ಟಿರುವ ಯಶ್, ಅಲ್ಲಿನ ಮೊದಲ ಹಂತದ ಮಾರ್ಕೆಟಿಂಗ್ ಪ್ರಕ್ರಿಯೆಗಳನ್ನು ಖುದ್ದಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

