
ವೆರೈಟಿ ಮ್ಯಾಗಜೀನ್ ಮುಖಪುಟದಲ್ಲಿ ಯಶ್ ಮಿಂಚುತ್ತಿದ್ದಾರೆ.
Actor Yash | ಬಾಲಿವುಡ್‌ನ ವೆರೈಟಿ ಮ್ಯಾಗಜೀನ್ ಮುಖಪುಟದಲ್ಲಿ ರಾಕಿಂಗ್ ಸ್ಟಾರ್ ಯಶ್
ವೆರೈಟಿ ಮ್ಯಾಗಜೀನ್ ಮುಖಪುಟದಲ್ಲಿ ಯಶ್ ಮಿಂಚುತ್ತಿದ್ದು, ಕೆಜಿಎಫ್ ಯಶಸ್ಸು ಹಾಗೂ ಟಾಕ್ಸಿಕ್ ಚಿತ್ರದ ಬಗ್ಗೆ ಲೇಖನ ಪ್ರಕಟವಾಗಿದೆ. ಇದು ಸ್ಯಾಂಡಲ್‌ವುಡ್‌ಗೆ ಹೆಮ್ಮೆಯ ವಿಷಯವಾಗಿದೆ.
ಕನ್ನಡ ಚಿತ್ರರಂಗದ ಗಡಿಯನ್ನು ದಾಟಿ ವಿಶ್ವಮಟ್ಟದಲ್ಲಿ ಅಬ್ಬರಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್, ಈಗ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿಶ್ವದ ಅತ್ಯಂತ ಪ್ರತಿಷ್ಠಿತ ಸಿನಿಮಾ ಮತ್ತು ಮನರಂಜನಾ ಪತ್ರಿಕೆಯಾದ 'ವೆರೈಟಿ' ತನ್ನ ಮುಖಪುಟದಲ್ಲಿ ಯಶ್ ಅವರ ಫೋಟೋ ಪ್ರಕಟಿಸುವ ಮೂಲಕ ಅವರಿಗೆ ಜಾಗತಿಕ ಗೌರವ ನೀಡಿದೆ.ಬಿಳಿ ಬಣ್ಣದ ಸೂಟ್ ಹಾಗೂ ಹ್ಯಾಟ್ ಧರಿಸಿ, ಐಷಾರಾಮಿ ಕಾರಿನ ಒಳಗೆ ಕುಳಿತಿರುವ ಯಶ್ ಅವರ ಸ್ಟೈಲಿಶ್ ಫೋಟೋ ಈಗ ಇಂಟರ್ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ.
ಸಾಮಾನ್ಯವಾಗಿ ಹಾಲಿವುಡ್‌ನ ದಿಗ್ಗಜ ನಟರು ಹಾಗೂ ವಿಶ್ವದ ಪ್ರಭಾವಿ ವ್ಯಕ್ತಿಗಳು ಮಾತ್ರ ಸ್ಥಾನ ಪಡೆಯುವ ಈ ಮ್ಯಾಗಜೀನ್‌ನಲ್ಲಿ ಯಶ್ ಮಿಂಚುತ್ತಿರುವುದು ಸ್ಯಾಂಡಲ್‌ವುಡ್‌ಗೆ ಭಾರೀ ಹೆಮ್ಮೆಯ ವಿಷಯವಾಗಿದೆ. ವಿಶೇಷ ಆವೃತ್ತಿಯಲ್ಲಿ ಯಶ್ ಅವರ ಕೆಜಿಎಫ್ ಸಿನಿಮಾದ ಯಶಸ್ಸು ಮತ್ತು ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' ಬಗ್ಗೆ ಸವಿಸ್ತಾರವಾದ ಲೇಖನವನ್ನು ಪ್ರಕಟಿಸಲಾಗಿದ್ದು, ಯಶ್ ಅವರು ಕೇವಲ ನಟನಾಗಿ ಮಾತ್ರವಲ್ಲದೆ ನಿರ್ಮಾಪಕರಾಗಿಯೂ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ರೀತಿಯನ್ನು ಶ್ಲಾಘಿಸಲಾಗಿದೆ.
ವೆರೈಟಿ ಮ್ಯಾಗಝೀನ್ ಬಗ್ಗೆ
ಇದನ್ನು 1905ರಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಸೈಮ್ ಸಿಲ್ವರ್‌ಮ್ಯಾನ್ ಅವರು ಸ್ಥಾಪಿಸಿದರು. ಅಂದರೆ ಇದು ಸುಮಾರು 120 ವರ್ಷಗಳ ಇತಿಹಾಸವನ್ನು ಹೊಂದಿದೆ. ಮೊದಲಿಗೆ ಇದು ಕೇವಲ ರಂಗಭೂಮಿ ಮತ್ತು 'ವಾಡೆವಿಲ್' ಎಂಬ ಕಲಾ ಪ್ರಕಾರಗಳ ಬಗ್ಗೆ ವರದಿ ಮಾಡುತ್ತಿತ್ತು. ಸಿನಿಮಾ ಉದ್ಯಮದಲ್ಲಿ ಇದನ್ನು ಬೈಬಲ್ ಆಫ್ ದ ಎಂಟರ್ಟೈನ್‌ಮೆಂಟ್ ಇಂಡಸ್ಟ್ರಿಎಂದು ಕರೆಯಲಾಗುತ್ತದೆ. ಹಾಲಿವುಡ್‌ನಿಂದ ಹಿಡಿದು ಜಾಗತಿಕ ಚಿತ್ರರಂಗದ ಪ್ರತಿಯೊಬ್ಬ ಪ್ರಭಾವಿ ವ್ಯಕ್ತಿಯೂ ಈ ಪತ್ರಿಕೆಯನ್ನು ತಪ್ಪದೇ ಓದುತ್ತಾರೆ.ಇದು ಕೇವಲ ಸುದ್ದಿಯನ್ನಷ್ಟೇ ನೀಡದೆ, ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ, ವಿಮರ್ಶೆ ಮತ್ತು ವ್ಯವಹಾರದ ಆಳವಾದ ವಿಶ್ಲೇಷಣೆಗಳನ್ನು ನೀಡುತ್ತದೆ.
ಮತ್ತೊಂದೆಡೆ ಯಶ್ ಅಭಿನಯದ 'ರಾಮಾಯಣ' ಚಿತ್ರದ ಚಿತ್ರೀಕರಣವು ಮುಂಬೈನ ಫಿಲ್ಮ್ ಸಿಟಿಯಲ್ಲಿ ಅದ್ದೂರಿಯಾಗಿ ಸಾಗುತ್ತಿದೆ. ಈ ಸಿನಿಮಾದಲ್ಲಿ ರಾವಣನ ಪಾತ್ರಕ್ಕೆ ಜೀವ ತುಂಬುತ್ತಿರುವ ಯಶ್ ಅವರ ಎಂಟ್ರಿ ಸನ್ನಿವೇಶಗಳು ಅತ್ಯಂತ ಅದ್ಭುತವಾಗಿ ಮೂಡಿಬರುತ್ತಿವೆ ಎಂದು ಹೇಳಲಾಗುತ್ತಿದೆ. ವಿಶೇಷವಾಗಿ ಸೀತಾ ಸ್ವಯಂವರದ ದೃಶ್ಯಕ್ಕಾಗಿ ಚಿತ್ರತಂಡವು ಮಿಥಿಲಾ ಸಾಮ್ರಾಜ್ಯದ ಭವ್ಯ ಸೆಟ್ ನಿರ್ಮಿಸಿದ್ದು, ನೂರಾರು ಕಲಾವಿದರ ನಡುವೆ ಯಶ್ ತಮ್ಮ ಅದ್ಭುತ ನಟನೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಒಟ್ಟಾರೆಯಾಗಿ ವೆರೈಟಿ ಮ್ಯಾಗಜೀನ್ ಗೌರವ ಮತ್ತು ರಾಮಾಯಣದಂತಹ ಬೃಹತ್ ಸಿನಿಮಾಗಳ ಮೂಲಕ ಯಶ್ ಅವರು ಕನ್ನಡದ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ.

