ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ನಟಿ ಶರ್ಮಿಳಾ ಮಾಂಡ್ರೆ
x

ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ನಟಿ ಶರ್ಮಿಳಾ ಮಾಂಡ್ರೆ

ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ 'ಪ್ಯಾಶನ್ ಸ್ಟುಡಿಯೋಸ್' (Passion Studios) ಸಂಸ್ಥಾಪಕರಾಗಿರುವ ಸುಧನ್ ಸುಂದರಂ, ತಮಿಳು ಚಿತ್ರರಂಗಕ್ಕೆ ಹಲವು ಗುಣಮಟ್ಟದ ಸಿನಿಮಾಗಳನ್ನು ನೀಡಿದ್ದಾರೆ.


Click the Play button to hear this message in audio format

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ತಮಿಳು ಚಿತ್ರರಂಗದ ಯಶಸ್ವಿ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ಶರ್ಮಿಳಾ ಅವರ ನಿಶ್ಚಿತಾರ್ಥ ಸಮಾರಂಭವು ಇತ್ತೀಚೆಗಷ್ಟೇ ಅತ್ಯಂತ ವೈಭವ ಹಾಗೂ ಸಾಂಪ್ರದಾಯಿಕವಾಗಿ ನೆರವೇರಿತು. ಆಪ್ತ ಕುಟುಂಬಸ್ಥರು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಈ ತಾರಾಜೋಡಿ ಉಂಗುರ ಬದಲಾಯಿಸಿಕೊಂಡು ಹೊಸ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ.


2007ರಲ್ಲಿ ತೆರೆಕಂಡ 'ಸಜನಿ' ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಶರ್ಮಿಳಾ ಮಾಂಡ್ರೆ, 'ಕೃಷ್ಣ', 'ನವಗ್ರಹ', 'ಆಕೆ', 'ಗಾಳಿಪಟ 2' ಹಾಗೂ ಇತ್ತೀಚಿನ 'ಡೆವಿಲ್' ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕೇವಲ ನಟಿಯಾಗಿ ಮಾತ್ರವಲ್ಲದೆ 'ಶರ್ಮಿಳಾ ಮಾಂಡ್ರೆ ಪ್ರೊಡಕ್ಷನ್ಸ್' ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕುವ ಮೂಲಕ ಯಶಸ್ವಿ ಉದ್ಯಮಿಯಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಕಂಟೆಂಟ್ ಆಧಾರಿತ ಹಾಗೂ ವಿಭಿನ್ನ ಕಥಾಹಂದರದ ಸಿನಿಮಾಗಳನ್ನು ನಿರ್ಮಿಸಿ ಚಿತ್ರರಂಗಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ.

ಕೋಲಿವುಡ್‌ನ ಯಶಸ್ವಿ ನಿರ್ಮಾಪಕ ಸುಧನ್ ಸುಂದರಂ

ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ 'ಪ್ಯಾಶನ್ ಸ್ಟುಡಿಯೋಸ್' (Passion Studios) ಸಂಸ್ಥಾಪಕರಾಗಿರುವ ಸುಧನ್ ಸುಂದರಂ, ತಮಿಳು ಚಿತ್ರರಂಗಕ್ಕೆ ಹಲವು ಗುಣಮಟ್ಟದ ಸಿನಿಮಾಗಳನ್ನು ನೀಡಿದ್ದಾರೆ. ಇವರು ನಿರ್ಮಿಸಿದ 'ಕಪ್ಪಲ್', 'ಸೀತಕಾತಿ', ರಾಷ್ಟ್ರಪ್ರಶಸ್ತಿ ವಿಜೇತ 'ಪಾರ್ಕಿಂಗ್' ಹಾಗೂ ವಿಜಯ್ ಸೇತುಪತಿ ಅಭಿನಯದ ಇತ್ತೀಚಿನ ಬ್ಲಾಕ್‌ಬಸ್ಟರ್ ಹಿಟ್ 'ಮಹಾರಾಜ' ಚಿತ್ರಗಳು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದಿವೆ.

ತಮ್ಮ ನಿಶ್ಚಿತಾರ್ಥದ ಕುರಿತು ಸಂತಸ ಹಂಚಿಕೊಂಡಿರುವ ನಟಿ ಶರ್ಮಿಳಾ ಮಾಂಡ್ರೆ, "ಇದು ನಮ್ಮ ಜೀವನದ ಅತ್ಯಂತ ಸುಂದರ ಹಾಗೂ ವಿಶೇಷವಾದ ಅಧ್ಯಾಯ" ಎಂದು ಬಣ್ಣಿಸಿದ್ದಾರೆ. ತಮ್ಮ ಈ ಹೊಸ ಪಯಣಕ್ಕೆ ಶುಭಕೋರಲು ಜೊತೆಯಾಗಿ ನಿಂತ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ನಿರ್ಮಾಪಕ ಸುಧನ್ ಸುಂದರಂ ಅವರು ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಕರುನಾಡಿನ ಪ್ರತಿಭೆ ಹಾಗೂ ತಮಿಳುನಾಡಿನ ಯಶಸ್ವಿ ನಿರ್ಮಾಪಕನ ಈ ಹೊಸ ಪಯಣಕ್ಕೆ ಉಭಯ ಚಿತ್ರರಂಗಗಳ ಗಣ್ಯರು ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

Read More
Next Story