ತಮಿಳು ನಿರ್ಮಾಪಕ ಸುಧನ್ ಜೊತೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ ಫಿಕ್ಸ್
x

ನಿರ್ಮಾಪಕ ಸುಧನ್ ಸುಂದರಂ ಜೊತೆ ಸ್ಯಾಂಡಲ್‌ವುಡ್ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಜೂನ್ 25 ರಂದು ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.

ತಮಿಳು ನಿರ್ಮಾಪಕ ಸುಧನ್ ಜೊತೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ ಫಿಕ್ಸ್

ತಮಿಳಿನ 'ಮಹಾರಾಜ' ಚಿತ್ರದ ಪ್ರಸಿದ್ಧ ನಿರ್ಮಾಪಕ ಸುಧನ್ ಸುಂದರಂ ಜೊತೆ ಸ್ಯಾಂಡಲ್‌ವುಡ್ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಜೂನ್ 25 ರಂದು ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.


Click the Play button to hear this message in audio format

ನಟಿ ಶರ್ಮಿಳಾ ಮಾಂಡ್ರೆ ತಮ್ಮ ವೈಯಕ್ತಿಕ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ಶರ್ಮಿಳಾ ಮಾಂಡ್ರೆ ಅವರ ನಿಶ್ಚಿತಾರ್ಥ ನಿಶ್ಚಯವಾಗಿದ್ದು, ಮುಂದಿನ ವಾರ ಬೆಂಗಳೂರಿನಲ್ಲಿ ಖಾಸಗಿ ಸಮಾರಂಭ ನಡೆಯಲಿದೆ. ಈ ಕುರಿತು ಸ್ವತಃ ಶರ್ಮಿಳಾ ಮಾಂಡ್ರೆ ಅವರೇ ಮಾಹಿತಿ ಹಂಚಿಕೊಂಡಿದ್ದು, "ನಾವು ಕಳೆದ ಕೆಲವು ಸಮಯದಿಂದ ಒಬ್ಬರನ್ನೊಬ್ಬರು ತಿಳಿದುಕೊಂಡಿದ್ದು, ಈಗ ಜೀವನದ ಮುಂದಿನ ಹೆಜ್ಜೆ ಇಡಲು ಸಿದ್ಧರಾಗಿದ್ದೇವೆ" ಎಂದು ದೃಢಪಡಿಸಿದ್ದಾರೆ.

ಮುಂದಿನ ವಾರ ಬೆಂಗಳೂರಿನಲ್ಲಿ ನಡೆಯಲಿರುವ ಈ ನಿಶ್ಚಿತಾರ್ಥದ ಕಾರ್ಯಕ್ರಮವು ತೀರಾ ಸರಳವಾಗಿರಲಿದ್ದು, ಕೇವಲ ಆಪ್ತ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಮದುವೆಯ ಇತರೆ ವಿವರಗಳನ್ನು ಇನ್ನೂ ಅಂತಿಮಗೊಳಿಸಬೇಕಿದೆ ಎಂದು ನಟಿ ತಿಳಿಸಿದ್ದಾರೆ. ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಸುಧನ್ ಸುಂದರಂ, ಇತ್ತೀಚೆಗೆ ವಿಜಯ್ ಸೇತುಪತಿ ನಟನೆಯ ಸೂಪರ್ ಹಿಟ್ 'ಮಹಾರಾಜ' ಚಿತ್ರ ಸೇರಿದಂತೆ ಹಲವು ಪ್ರಮುಖ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ಸುಪರಿಚಿತ ಮುಖವಾಗಿರುವ ಶರ್ಮಿಳಾ ಮಾಂಡ್ರೆ, 2007ರಲ್ಲಿ ಬಿಡುಗಡೆಯಾದ 'ಸಜ್ನಿ' ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. ಆ ಬಳಿಕ ದರ್ಶನ್ ಅಭಿನಯದ 'ನವಗ್ರಹ', 'ಕೃಷ್ಣನ್ ಲವ್ ಸ್ಟೋರಿ' ಹಾಗೂ 'ಗಾಳಿಪಟ 2' ನಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ನಟನೆಯ ಜೊತೆಗೆ ಶರ್ಮಿಳಾ ಮಾಂಡ್ರೆ ಅವರು ಚಿತ್ರ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದು, ಹಲವು ಸಾಮಾಜಿಕ ಕಾರ್ಯಗಳಲ್ಲೂ ಗುರುತಿಸಿಕೊಂಡಿದ್ದಾರೆ. ಸದ್ಯ ಶರ್ಮಿಳಾ ಮತ್ತು ಸುಧನ್ ಅವರ ನಿಶ್ಚಿತಾರ್ಥದ ಸುದ್ದಿ ಹೊರಬೀಳುತ್ತಿದ್ದಂತೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

Read More
Next Story