Su From So| ಸು ಫ್ರಮ್ ಸೋ ಬೆನ್ನಲ್ಲೇ 44 ಸಿನಿಮಾಗಳಿಗೆ ನೋ ಎಂದ ಶನೀಲ್
x

53 ಸಿನಿಮಾಗಳ ಆಫರ್‌ ಬಂದರೂ ಕೇವಲ 9 ಚಿತ್ರಗಳನ್ನು ಮಾತ್ರ ಒಪ್ಪಿದ ಶನೀಲ್ ಗೌತಮ್

Su From So| ಸು ಫ್ರಮ್ ಸೋ ಬೆನ್ನಲ್ಲೇ 44 ಸಿನಿಮಾಗಳಿಗೆ ನೋ ಎಂದ ಶನೀಲ್

ಸು ಫ್ರಮ್ ಸೋ ಚಿತ್ರದ ಯಶಸ್ಸಿನ ನಂತರ ನಟ ಶನೀಲ್ ಗೌತಮ್ ಅವರಿಗೆ 53 ಸಿನಿಮಾಗಳ ಆಫರ್ ಬಂದಿದ್ದು, ಕೇವಲ 9 ಚಿತ್ರಗಳನ್ನು ಮಾತ್ರ ಒಪ್ಪಿಕೊಂಡಿರುವುದಾಗಿ ರವಿ ಅಣ್ಣ ಖ್ಯಾತಿಯ ಶನೀಲ್ ತಿಳಿಸಿದ್ದಾರೆ.


Click the Play button to hear this message in audio format

'ಸು ಫ್ರಮ್ ಸೋ' ಸಿನಿಮಾದ ಭರ್ಜರಿ ಯಶಸ್ಸಿನ ನಂತರ, ಚಿತ್ರದಲ್ಲಿ 'ರವಿ ಅಣ್ಣ' ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ನಟ ಶನೀಲ್ ಗೌತಮ್ ಅವರಿಗೆ ಸಿನಿಮಾಗಳ ಆಫರ್‌ಗಳ ಮಹಾಪೂರವೇ ಹರಿದುಬಂದಿದೆ. ಆದರೆ ಹಿಟ್ ಸಿನಿಮಾ ಸಿಕ್ಕ ತಕ್ಷಣ ಸಿಕ್ಕಸಿಕ್ಕ ಚಿತ್ರಗಳನ್ನು ಒಪ್ಪಿಕೊಳ್ಳದ ಶನೀಲ್, ಕಥೆಗಳ ಆಯ್ಕೆಯಲ್ಲಿ ಸಖತ್ ಚೂಸಿ ಆಗಿದ್ದಾರೆ.

ನಿರ್ದೇಶಕ ಜೆ.ಪಿ. ತುಮಿನಾಡ್ ಅವರ 'ಸು ಫ್ರಮ್ ಸೋ' ಚಿತ್ರದ ಶೂಟಿಂಗ್ ಮುಗಿಸಿದ ನಂತರ ಶನೀಲ್ ಗೌತಮ್ ಅವರು ಮತ್ತೆ ಪೂರ್ಣ ಪ್ರಮಾಣದಲ್ಲಿ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಬಿಡುಗಡೆಯಾದ ಮೊದಲ ಕೆಲವು ತಿಂಗಳುಗಳಲ್ಲಿ ತಮಗೆ 53ಕ್ಕೂ ಹೆಚ್ಚು ಸಿನಿಮಾಗಳ ಆಫರ್ ಬಂದಿದ್ದವು, ಆದರೆ ತಾವು ಕೇವಲ ಒಂಬತ್ತು ಚಿತ್ರಗಳನ್ನು ಮಾತ್ರ ಒಪ್ಪಿಕೊಂಡಿರುವುದಾಗಿ ಶನೀಲ್ ಬಹಿರಂಗಪಡಿಸಿದ್ದಾರೆ. 'ಸು ಫ್ರಮ್ ಸೋ' ಚಿತ್ರವು ತಮ್ಮ ಇಡೀ ತಂಡದ ಜೀವನವನ್ನೇ ಬದಲಾಯಿಸಿದೆ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.

ಸದ್ಯ ಅವರು ಒಪ್ಪಿಕೊಂಡಿರುವ ಚಿತ್ರವೊಂದರ ಚಿತ್ರೀಕರಣ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭರದಿಂದ ಸಾಗುತ್ತಿದೆ. ಉದಯ್ ಮೆಹ್ತಾ ಅವರ ಕಥೆಯಾಧಾರಿತ ಈ ಚಿತ್ರಕ್ಕೆ ಚಂದ್ರಮೋಹನ್ ನಿರ್ದೇಶನ ಮಾಡುತ್ತಿದ್ದು, ಶನೀಲ್ ಗೌತಮ್ ಅವರು ಚಂದ್ರಮೋಹನ್ ಜೊತೆಗೂಡಿ ಈ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಬರವಣಿಗೆ ಆರಂಭಿಸಿ, ಜನವರಿಯಲ್ಲಿ ಇದನ್ನು ಪೂರ್ಣಗೊಳಿಸಲಾಗಿದೆ. ಈ ಚಿತ್ರವು ಕೂಡ ಯಾವುದೇ ಅನಗತ್ಯ ಅಬ್ಬರಗಳಿಲ್ಲದೆ, ಅತ್ಯಂತ ಸರಳ ಹಾಗೂ ನೈಜತೆಯಿಂದ ಕೂಡಿದ ಕೌಟುಂಬಿಕ ಮನರಂಜನಾ ಕಥಾಹಂದರವನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ತಮ್ಮ ಪಾತ್ರದ ಯಶಸ್ಸಿನ ಬಗ್ಗೆ ಮಾತನಾಡಿರುವ ಶನೀಲ್, 'ರವಿ ಅಣ್ಣ'ನ ಪಾತ್ರ ಜನಸಾಮಾನ್ಯರಿಗೆ ಅತ್ಯಂತ ಹತ್ತಿರವಾಗಿದ್ದರಿಂದ ಇಷ್ಟೊಂದು ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಕ್ಕಿದೆ. ಇಂತಹ ಪ್ರೀತಿಯನ್ನು ನಮ್ಮ ತಂಡದಲ್ಲಿ ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಪ್ರತಿ ಸಿನಿಮಾದಲ್ಲೂ ಅದೇ ಪಾತ್ರವನ್ನು ಪುನರಾವರ್ತಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಕೇವಲ ಕಮರ್ಷಿಯಲ್ ಮಾಸ್ ಹೀರೋ ಆಗುವ ಬದಲು, ಜನಸಾಮಾನ್ಯರನ್ನು ಪ್ರತಿನಿಧಿಸುವಂತಹ ಭಾವನಾತ್ಮಕ ಪಾತ್ರಗಳನ್ನೇ ಮಾಡಲು ಇಷ್ಟಪಡುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚಿತ್ರ ತಯಾರಕರು ಸಿನಿಮಾಗಳ ಬಜೆಟ್ ಮತ್ತು ಸ್ಕೇಲ್ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಆದರೆ ಸಿನಿಮಾಗೆ ಭವ್ಯತೆಗಿಂತ ಅದರ 'ಆತ್ಮ' ಮುಖ್ಯವಾಗಿರುತ್ತದೆ. ಪ್ರೇಕ್ಷಕರು ಚಿತ್ರದ ಪಾತ್ರಗಳಲ್ಲಿ ತಮ್ಮ ಸುತ್ತಮುತ್ತಲಿನವರನ್ನು ಅಥವಾ ತಮ್ಮನ್ನೇ ಕಂಡುಕೊಂಡಾಗ ಸಿನಿಮಾ ಯಶಸ್ವಿಯಾಗುತ್ತದೆ. ಕಥೆಯ ಆ ಜೀವಂತಿಕೆಯನ್ನು ಉಳಿಸಿಕೊಳ್ಳುವುದೇ ಸಿನಿಮಾದ ಯಶಸ್ಸಿನ ಅಸಲಿ ರಹಸ್ಯ ಎಂದು ಶನೀಲ್ ಗೌತಮ್ ಅಭಿಪ್ರಾಯಪಟ್ಟಿದ್ದಾರೆ.

Read More
Next Story