ಬಿರಿಯಾನಿ ವಿವಾದ: ಪ್ರಣೀತ್ ಮೋರೆ ವಿರುದ್ಧ ಸಂಯುಕ್ತಾ ಹೆಗ್ಡೆ ಆಕ್ರೋಶ
x

ಪ್ರಣೀತ್ ಮೋರೆ ವಿರುದ್ಧ ನಟಿ ಸಂಯುಕ್ತಾ ಹೆಗ್ಡೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಬಿರಿಯಾನಿ ವಿವಾದ: ಪ್ರಣೀತ್ ಮೋರೆ ವಿರುದ್ಧ ಸಂಯುಕ್ತಾ ಹೆಗ್ಡೆ ಆಕ್ರೋಶ

ರೂ. 370ರ ಬಿರಿಯಾನಿ ವಿವಾದದ ಶೋನಲ್ಲಿ ಅತ್ಯಾಚಾರ ಸಂಸ್ಕೃತಿಯನ್ನು ಹಾಸ್ಯದ ಮೂಲಕ ಸಾಮಾನ್ಯೀಕರಿಸಿದ ಕಾಮೆಡಿಯನ್ ಪ್ರಣೀತ್ ಮೋರೆ ವಿರುದ್ಧ ನಟಿ ಸಂಯುಕ್ತಾ ಹೆಗ್ಡೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.


Click the Play button to hear this message in audio format

ರೂ. 370ರ ಬಿರಿಯಾನಿ ವಿವಾದಕ್ಕೆ ಸಂಬಂಧಿಸಿದಂತೆ ಸ್ಟ್ಯಾಂಡಪ್ ಕಾಮೆಡಿಯನ್ ಪ್ರಣೀತ್ ಮೋರೆ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶದ ಮಹಾಪೂರವೇ ಹರಿಯುತ್ತಿದ್ದು, ಇದೀಗ ಕನ್ನಡದ ನಟಿ ಸಂಯುಕ್ತಾ ಹೆಗ್ಡೆ ಕೂಡ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಣೀತ್ ಮೋರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಎರಡನೇ ಕ್ಷಮಾಪಣಾ ವಿಡಿಯೋವನ್ನು ನಟಿ ಸಂಯುಕ್ತಾ ಹೆಗ್ಡೆ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಅಲ್ಲದೆ, ಇಂತಹ ಘಟನೆಗಳನ್ನು ಹಾಸ್ಯದ ಹೆಸರಿನಲ್ಲಿ ಪ್ರೋತ್ಸಾಹಿಸುವುದು ದೇಶದಲ್ಲಿ ಅತ್ಯಾಚಾರ ಸಂಸ್ಕೃತಿಯನ್ನು ಸಾಮಾನ್ಯವಾಗಿಸುವ ದುಷ್ಟ ಆಲೋಚನೆಯಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಪ್ರಣೀತ್ ಮೋರೆ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ನ ಕಮೆಂಟ್ ಬಾಕ್ಸ್‌ನಲ್ಲಿ ನೇರವಾಗಿ ಪ್ರತಿಕ್ರಿಯಿಸಿರುವ ಸಂಯುಕ್ತಾ ಹೆಗ್ಡೆ, ಮೊದಲು ಟೆಲಿಪ್ರಾಂಪ್ಟರ್ ನೋಡಿ ಓದುವುದನ್ನು ನಿಲ್ಲಿಸಿ ಎಂದು ಕಿಡಿಕಾರಿದ್ದಾರೆ. ನೀವು ಯಾವುದೋ ಭರದಲ್ಲಿ ಮಾತನಾಡಿದ್ದಲ್ಲ, ಬದಲಿಗೆ ನಿಮ್ಮ ನಿಜವಾದ ವ್ಯಕ್ತಿತ್ವವೇ ಹಾಗಿದೆ ಎಂದು ಅವರು ಚಾಟಿ ಬೀಸಿದ್ದಾರೆ. ವೇದಿಕೆಯ ಮೇಲೆ ಆ ವ್ಯಕ್ತಿ ಹೇಳಿದ ಮಾತಿಗೆ ನೀವು ಬಿದ್ದು ಬಿದ್ದು ನಕ್ಕ ರೀತಿ ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಇಂತಹ ವಿಕೃತ ಆಲೋಚನೆಗಳನ್ನು ಸರಿ ಎಂದು ನಂಬುವಂತೆ ನಮ್ಮ ದೇಶದ ಬಹುಪಾಲು ಜನರ ಮನಸ್ಥಿತಿಯನ್ನು ರೂಪಿಸಲಾಗುತ್ತಿದೆ, ಆದರೆ ಇದು ಖಂಡಿತಾ ಸರಿಯಲ್ಲ ಮತ್ತು ನಿಮ್ಮ ಈ ನಕಲಿ ಕ್ಷಮೆಯಾಚನೆಗೆ ಯಾವುದೇ ಅರ್ಥವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮಿಡಿ ಎನ್ನುವುದು ಎಲ್ಲರಿಗೂ ನಗು ತರಿಸುವಂತಿರಬೇಕು, ಆದರೆ ಅತ್ಯಾಚಾರದಂತಹ ಗಂಭೀರ ವಿಷಯಗಳನ್ನು ಹಾಸ್ಯದ ಮೂಲಕ ಸಾಮಾನ್ಯೀಕರಿಸಲು ಹೊರಟರೆ ಅದನ್ನು ಎಂದಿಗೂ ಹಾಸ್ಯ ಎನ್ನಲು ಸಾಧ್ಯವಿಲ್ಲ ಎಂದು ಸಂಯುಕ್ತಾ ಹೆಗ್ಡೆ ಸ್ಪಷ್ಟಪಡಿಸಿದ್ದಾರೆ. ಇಂತಹ ವಿಕೃತ ಮಾತುಗಳನ್ನು ಕಾಮೆಡಿ ಎಂದು ಮಾರಾಟ ಮಾಡಲು ಪ್ರಯತ್ನಿಸಬೇಡಿ ಮತ್ತು ಜನರಿಂದ ಉತ್ತಮ ಪ್ರತಿಕ್ರಿಯೆಯನ್ನು ನಿರೀಕ್ಷಿಸಬೇಡಿ ಎಂದು ಅವರು ಎಚ್ಚರಿಸಿದ್ದಾರೆ. ಪ್ರತಿ ಗಂಟೆಗೆ ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗುವ ನಮ್ಮ ದೇಶದಲ್ಲಿ ಇಂತಹ ವಿಷಯಗಳು ಖಂಡಿತವಾಗಿಯೂ ಹಾಸ್ಯವಾಗಲು ಸಾಧ್ಯವಿಲ್ಲ. ಕೇವಲ ಪ್ರಣೀತ್ ಮಾತ್ರವಲ್ಲದೆ, ಆ ಸಭೆಯಲ್ಲಿದ್ದ ಪ್ರತಿಯೊಬ್ಬ ವ್ಯಕ್ತಿಯೂ ಈ ತಪ್ಪಿನಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ಈ ವಿವಾದಕ್ಕೆ ಕಾರಣವಾಗಿದ್ದು ಪ್ರಣೀತ್ ಮೋರೆ ಅವರ ಶೋನಲ್ಲಿ ಭಾಗವಹಿಸಿದ್ದ ಹಿಮಾಂಶು ಜಾಂಗ್ರಾ ಎಂಬ ಯುವಕನ ಮಾತುಗಳು. ತಾನು ಯುವತಿಯೊಬ್ಬಳ ಜೊತೆ ಡೇಟ್‌ಗೆ ಹೋಗಿದ್ದಾಗ ರೂ. 370 ನೀಡಿ ಚಿಕನ್ ಬಿರಿಯಾನಿ ಕೊಡಿಸಿದ್ದಾಗಿ ಆತ ವೇದಿಕೆಯ ಮೇಲೆ ಹೇಳಿಕೊಂಡಿದ್ದ. ಅಷ್ಟು ಹಣ ಖರ್ಚು ಮಾಡಿರುವುದರಿಂದ ಅದಕ್ಕೆ ಪ್ರತಿಯಾಗಿ ತನಗೆ ಯುವತಿಯಿಂದ ಏನಾದರೂ ಸಿಗಬೇಕು ಎಂಬ ಅರ್ಥದಲ್ಲಿ ಆತ ಮಾತನಾಡಿದ್ದ. ಈ ವಿಕೃತ ಮಾತನ್ನು ತಡೆಯುವ ಬದಲು ಕಾಮೆಡಿಯನ್ ಪ್ರಣೀತ್ ಮೋರೆ ಜೋರಾಗಿ ನಕ್ಕು, ಆತನಿಗೆ ಮತ್ತಷ್ಟು ಮಾತನಾಡಲು ವೇದಿಕೆ ಕಲ್ಪಿಸಿಕೊಟ್ಟಿದ್ದರು. ಈ ವಿಡಿಯೋ ತುಣುಕು ವೈರಲ್ ಆಗುತ್ತಿದ್ದಂತೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ನಟಿ ಸಂಯುಕ್ತಾ ಹೆಗ್ಡೆ ಅವರ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

Read More
Next Story