
ಕೌಟುಂಬಿಕ ತಲ್ಲಣಗಳ ಸುತ್ತ ಸುತ್ತುವ ರೂಬಿಕ್ ಕ್ಯೂಬ್
ರೂಬಿಕ್ ಕ್ಯೂಬ್ ಚಿತ್ರ ಕೌಟುಂಬಿಕ ಸಮಸ್ಯೆಯ ಒಂದು ಎಳೆಯನ್ನು ಒಂದು ಕುಟುಂಬದ ರೆಸಾರ್ಟ್ ಪ್ರವಾಸದ ಮೂಲಕ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.
ವೇಗದ ಮತ್ತು ಒತ್ತಡದ ಜೀವನಕ್ಕೆ ಸಿಲುಕಿರುವ ಆದುನಿಕ ಸಮಾಜದಲ್ಲಿ ಕೌಟಿಂಬಿಕ ಜೀವನದಲ್ಲಿ ನೆಮ್ಮದಿ ಕಳೆದುಕೊಂಡು ಒಂಟಿತನ ಬಯಸುತ್ತಿರುವ ಯುವ ಸಮುದಾಯದ ವಾಸ್ತವ ಬದುಕಿನ ಎಳೆಯನ್ನು ಇಟ್ಟುಕೊಂಡು ಹಿರಿಯ ನಿರ್ದೇಶಕ ಪಿ. ಶೇಷಾದ್ರಿ, 'ರೂಬಿಕ್ ಕ್ಯೂಬ್' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ತಂದಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಕನ್ನಡ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡ ರೂಬಿಕ್ ಕ್ಯೂಬ್ ಚಿತ್ರ ಕೌಟುಂಬಿಕ ಸಮಸ್ಯೆಯ ಒಂದು ಎಳೆಯನ್ನು ಒಂದು ಕುಟುಂಬದ ರೆಸಾರ್ಟ್ ಪ್ರವಾಸದ ಮೂಲಕ ಪ್ರೇಕ್ಷರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗಂಡ ಹೆಂಡತಿ ನಡುವೆ ಸಣ್ಣ ಸಣ್ಣ ವಿಷಯಗಳ ಬಗ್ಗೆ ವಾಗ್ವಾದ ನಡೆಯುವುದು, ಇಬ್ಬರೂ ದುಡಿಯುವುದರಿಂದ ತಮ್ಮ ನಡೆಯನ್ನು ಬಲವಾಗಿ ಸಮರ್ಥಿಸಿಕೊಳ್ಳಲು ಹಠಕ್ಕೆ ಬೀಳುವುದು ಇದರಿಂದ ಸಂಸಾರದಲ್ಲಿ ನೆಮ್ಮದಿ ಕಳೆದುಕೊಂಡು ಪ್ರತ್ಯೇಕ ಜೀವನ ನಡೆಸುವ ಆಲೋಚನೆ ಮಾಡುವುದು ಸಾಮಾನ್ಯ ಸಂಗತಿಯಾಗಿದೆ.
ಕನ್ನಡ ಚಿತ್ರರಂಗದಲ್ಲಿ ಗಂಡ ಹೆಂಡತಿ ನಡುವೆ ಸಣ್ಣ ವಿಷಯಗಳೇ ಪ್ರತಿಷ್ಠೆಯಾಗಿ ಡಿವೋರ್ಸ್ ಪಡೆಯಲು ನಡೆಸುವ ಹೋರಾಟದ ಅನೇಕ ಚಿತ್ರಗಳು ಬಂದಿವೆ. ಆದರೆ, ನಿರ್ದೇಶಕ ಪಿ. ಶೇಷಾದ್ರಿಯವರು ಕಮರ್ಷಿಯಲ್ ಎಲಿಮೆಂಟ್ಸ್ ಇಲ್ಲದೆ ಸಂಸಾರದಲ್ಲಿನ ಪ್ರತಿಷ್ಟೆಯಿಂದ ಆಗುತ್ತಿರುವ ಕೌಟುಂಬಿಕ ವಿಘಟನೆಗಳ ಸೂಕ್ಷ್ಮ ವಿಷಯ ಒಂದು ಗಂಭೀರ ಸಮಸ್ಯೆ ಎನ್ನುವುದನ್ನು ಪರಿಣಾಮಕಾರಿಯಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ.
ಅಮೇರಿಕಾದಲ್ಲಿರುವ ಮಗಳು ಅಳಿಯ ಒಂದು ವಾರದ ವೆಕೇಷನ್ ಗೆ ಭಾರತಕ್ಕೆ ಬಂದು ಕೊಡಗಿನಲ್ಲಿ ತಂದೆ ತಾಯಿ ಜೊತೆಗೆ ರೆಸಾರ್ಟ್ ನಲ್ಲಿ ಕಳೆಯುವ ಯೋಜನೆ ಹಾಕುವುದರೊಂದಿಗೆ ಆರಂಭವಾಗುವ ಚಿತ್ರ ಅಲ್ಲಿ ಬಂದು ಇದ್ದು ವಾಪಸ್ ಹೋಗುವುದರೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ.
ಚಿತ್ರದ ಪ್ರಮುಖ ಪಾತ್ರದಲ್ಲಿ ಹಿರಿಯ ನಟ ದತ್ತಣ್ಣ, ವಿದ್ಯಾ ಮೂರ್ತಿ ಅಭಿನಯ ಮನಮುಟ್ಟುವಂತಿದೆ. ಗಂಡ ಹೆಂಡತಿ ದೂರಾದ ಮೇಲೆ ಅನುಭವಿಸುವ ನೋವು ವೇದನೆಗಳನ್ನು ಹಿರಿಯರ ಮೂಲಕ ಯುವ ಸಮುದಾಯಕ್ಕೆ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಪಿ. ಶೇಷಾದ್ರಿ.
ನಾನೇ ಸರಿ ಎನ್ನುವ ಪ್ರತಿಷ್ಠೆಗೆ ಬಿದ್ದು ದೂರಾಗಿ ಹಲವು ವರ್ಷಗಳ ನಂತರ ಮಗಳ ಮನವಿಗೆ ಸ್ಪಂದಿಗೆ ಸಂದಿಸುವ ಹಿರಿಯ ಜೀವಗಳಿಗೆ ತಮ್ಮ ಮಗಳ ಬಾಳು ಸಣ್ಣ ವಿಷಯಕ್ಕೆ, ಸಂಶಯಕ್ಕೆ, ಗೊಂದಲಕ್ಕೆ ಸಿಕ್ಕು ಹಾಳಾಗುತ್ತಿದೆ ಎನ್ನುವುದನ್ನು ತಿಳಿದು ಅವಳ ಬಾಳನ್ನು ಸರಿಪಡಿಸಲು ಕೌಟುಂಬಿಕ ಜೀವನದಲ್ಲಿ, ಗಂಡ ಹೆಂಡತಿ ಸುದೀರ್ಘ ದಾಂಪತ್ಯ ನಡೆಸಲು ಹೇಗೆ ನಡೆದುಕೊಳ್ಳಬೇಕು ಎನ್ನುವ ಬದುಕಿನ ಪಾಠವನ್ನು ತಮ್ಮ ಅನುಭವದ ಹಿನ್ನೆಲೆಯಲ್ಲಿ ಹೇಳುವ ಮೂಲಕ ಮಗಳ ಸಂಸಾರ ಸರಿಪಡಿಸಲು ಏನೆಲ್ಲ ಮಾರ್ಗ ಅನುಸರಿಸುತ್ತಾರೆ ಎನ್ನುವುದೇ ಚಿತ್ರದ ಒಟ್ಟು ಕಥೆ.
ಯುವ ಜೋಡಿಯಾಗಿ ದೇವ್ ದೇವಯ್ಯ ಹಾಗೂ ನಟಿ ರಾದ್ಯಾ ಚಿತ್ರದ ಕಥೆಗೆ ಜೀವ ತುಂಬಿದ್ದಾರೆ. ರಾದ್ಯಾ ಅವರ ನಗು, ಲವಲವಿಕೆ, ಗಂಡನ ಬಗ್ಗೆ ಹೆಂಡತಿಯ ಮನಸಲ್ಲಿ ಹುಟ್ಟುವ ಪ್ರಶ್ನೆಗಳು, ಸಂಶಯಗಳಿಗೆ ಜೀವ ತುಂಬಿದ್ದು, ಇಷ್ಟವಾಗುತ್ತಾರೆ. ದತ್ತಣ್ಣನ ಮರೆವು ಸಾಂದರ್ಭಿಕ ನಗುವುಂಟು ಮಾಡುತ್ತದೆ.
ಕೊಡಗಿನ ರೆಸಾರ್ಟ್ ನಲ್ಲಿ ಇಡೀ ಚಿತ್ರ ನಡೆಯುವುದರಿಂದ ಪ್ರಕೃತಿ ಸೌಂದರ್ಯವನ್ನು ರಮ್ಯವಾಗಿ ತೋರಿಸಿದ್ದು ಮನಸ್ಸಿಗೆ ಮುದ ನೀಡುತ್ತದೆ.
ಸಮಾಜದಲ್ಲಿ ಸಾಮಾನ್ಯವಾಗಿರುವ ಕಥೆಯನ್ನು ತಮ್ಮ ದೃಷ್ಟಿಕೋನದಲ್ಲಿ ಸಮಾಜದ ಮುಂದೆ ತೆರೆದಿಡುವ ಯತ್ನ ಮಾಡಿದ್ದಾರೆ. ಚಿತ್ರ ನಿಧಾನವಾಗಿ ಸಾಗುವುದರಿಂದ ಪ್ರೇಕ್ಷಕ ತಾಳ್ಮೆಯಿಂದ ಇರಬೇಕಾಗುವುದು ಅನಿವಾರ್ಯ, ಇದು ನಿಜ ಜೀವನಕ್ಕೂ ಅನ್ವಯಿಸುವುದರಿಂದ ಪ್ರೇಕ್ಷಕನಿಗೆ ಅನಿವಾರ್ಯ.
ಹಿರಿಯ ಪತ್ರಕರ್ತ ಮುರುಳಿಧರ ಖಜಾನೆ ಅವರು ಕೂಡಾ ಅಭಿನಯಿಸಿದ್ದಾರೆ. ನಿರ್ದೇಶಕ ಪಿ. ಶೇಷಾದ್ರಿಯವರು ರೂಬಿಕ್ ಮೂಲಕ ಸದ್ಯ ನಮ್ಮ ಸಮಾಜದ ದೊಡ್ಡ ಸವಾಲಾಗಿರುವ ಕೌಟುಂಬಿಕ ಜೀವನದ ತಲ್ಲಣಗಳ ಕುರಿತು ಹೇಳುವ ಪ್ರಯತ್ನ ಮಾಡಿದ್ದು, ಚಿತ್ರೋತ್ಸವದಲ್ಲಿ ಪ್ರೇಕ್ಷಕರ ಗಮನ ಸೆಳೆದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಯುವ ಸಮುದಾಯವನ್ನು ತಲುಪಿದಾಗ ನಿರ್ದೇಶಕರ ಪ್ರಯತ್ನಕ್ಕೆ ಯಶಸ್ಸು ಸಿಕ್ಕಂತಾಗುತ್ತದೆ.

