
'ಕಿರಿಕ್ ಪಾರ್ಟಿ' ಮೂಲಕ ರಕ್ಷಿತ್ ಶೆಟ್ಟಿ ಅವರಿಂದ ಚಿತ್ರರಂಗಕ್ಕೆ ಪರಿಚಯಿಸಲ್ಪಟ್ಟ ರಶ್ಮಿಕಾ, ನಂತರ ರಕ್ಷಿತ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ರಶ್ಮಿಕಾ ಮದುವೆ ಆಮಂತ್ರಣ ರಕ್ಷಿತ್ ಶೆಟ್ಟಿ ಅವರಿಗೂ ಬರುತ್ತಾ?
ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಅವರ ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಬೆನ್ನಲ್ಲೇ , ರಕ್ಷಿತ್ ಗೆಳೆಯ, ನಟ ಪ್ರಮೋದ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.
ಸ್ಯಾಂಡಲ್ವುಡ್ನಿಂದ ಟಾಲಿವುಡ್ನರೆಗೆ ಈಗ ಒಂದೇ ಸುದ್ದಿ ಸದ್ದು ಮಾಡುತ್ತಿದೆ. ಅದೇ 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಅವರ ಮದುವೆ.
ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಮದುವೆಯ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದ್ದು, ಈ ಬಗ್ಗೆ ರಕ್ಷಿತ್ ಶೆಟ್ಟಿ ಅವರ ಆಪ್ತ ಗೆಳೆಯ ಹಾಗೂ ನಟ ಪ್ರಮೋದ್ ಶೆಟ್ಟಿ ನೀಡಿರುವ ಪ್ರತಿಕ್ರಿಯೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಸಿನಿಮಾ ಪ್ರಚಾರವೊಂದರಲ್ಲಿ ಭಾಗವಹಿಸಿದ್ದ ಪ್ರಮೋದ್ ಶೆಟ್ಟಿಗೆ ರಶ್ಮಿಕಾ ಮದುವೆಯ ಬಗ್ಗೆ ಪ್ರಶ್ನೆ ಎದುರಾಯಿತು. ಇದಕ್ಕೆ ನಗುತ್ತಲೇ ಉತ್ತರಿಸಿದ ಅವರು, "ನನಗೆ ಮದುವೆಯ ಆಮಂತ್ರಣ ಪತ್ರಿಕೆ ಬಂದಿಲ್ಲ. ಒಂದು ವೇಳೆ ಬಂದರೆ ಖಂಡಿತ ಹೋಗುತ್ತೇನೆ. ಆದರೆ ನಮಗೆ ರಶ್ಮಿಕಾ ಆಮಂತ್ರಣ ನೀಡುವುದಿಲ್ಲ ಎಂಬುದು ನಮಗೆ ಮಾತ್ರವಲ್ಲ, ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದರಲ್ಲಿ ಹೊಸತೇನಿದೆ?" ಎಂದು ನೇರವಾಗಿಯೇ ತಿಳಿಸಿದ್ದಾರೆ. ಆ ಮೂಲಕ ರಶ್ಮಿಕಾ ಅವರನ್ನು ತಮ್ಮ ಸಿನಿಮಾದ ಮೂಲಕ ಲಾಂಚ್ ಮಾಡಿದ ರಕ್ಷಿತ್ ಶೆಟ್ಟಿ ಅವರಿಗೂ ಮದುವೆ ಆಮಂತ್ರಣ ಸಿಗುವುದಿಲ್ಲ ಎಂಬುದನ್ನು ಪರೋಕ್ಷವಾಗಿ ಪ್ರಮೋದ್ ಹೇಳಿದ್ದಾರೆ.
ರಕ್ಷಿತ್ ಶೆಟ್ಟಿ ಚಾಕ್ಲೇಟ್ ತಿನ್ನುವ ಮಗುವಲ್ಲ
ಇದೇ ವೇಳೆ ರಕ್ಷಿತ್ ಶೆಟ್ಟಿ ಅವರ ಬಗ್ಗೆಯೂ ಕೇಳಲಾದ ಪ್ರಶ್ನೆಗೆ ಪ್ರಮೋದ್ ಖಾರವಾಗಿಯೇ ಉತ್ತರಿಸಿದರು. "ರಕ್ಷಿತ್ ಶೆಟ್ಟಿ ಚಾಕ್ಲೇಟ್ ತಿನ್ನುವ ಮಗುವಲ್ಲ, ಹಳೆಯ ವಿಚಾರಗಳನ್ನು ನೆನೆದು ಕುಳಿತುಕೊಳ್ಳಲು. ಅದೆಲ್ಲಾ ಯಾವ ಕಾಲದಲ್ಲೋ ಮುಗಿದುಹೋದ ಅಧ್ಯಾಯ. ಈಗ ರಕ್ಷಿತ್ ತನ್ನ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಫೀನಿಕ್ಸ್ನಂತೆ ಮತ್ತೆ ಎದ್ದು ಬರುತ್ತಾರೆ. ಸಿನಿಮಾ ಕೆಲಸಗಳಿಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುವುದು ಅವರ ಶೈಲಿ" ಎಂದು ಗೆಳೆಯನ ಪರವಾಗಿ ಬ್ಯಾಟ್ ಬೀಸಿದರು.
ಸದ್ಯ ಹರಿದಾಡುತ್ತಿರುವ ಆಮಂತ್ರಣ ಪತ್ರಿಕೆಯ ಪ್ರಕಾರ, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ವಿವಾಹವು ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಖಾಸಗಿಯಾಗಿ ನಡೆಯಲಿದೆ. ತದನಂತರ ಮಾರ್ಚ್ 4 ರಂದು ಹೈದರಾಬಾದ್ನ ತಾಜ್ ಕೃಷ್ಣ ಹೋಟೆಲ್ನಲ್ಲಿ ಅದ್ಧೂರಿ ರಿಸೆಪ್ಷನ್ ಹಮ್ಮಿಕೊಳ್ಳಲಾಗಿದೆ ಎನ್ನಲಾಗಿದೆ.
'ಕಿರಿಕ್ ಪಾರ್ಟಿ' ಮೂಲಕ ರಕ್ಷಿತ್ ಶೆಟ್ಟಿ ಅವರಿಂದ ಚಿತ್ರರಂಗಕ್ಕೆ ಪರಿಚಯಿಸಲ್ಪಟ್ಟ ರಶ್ಮಿಕಾ, ನಂತರ ರಕ್ಷಿತ್ ಅವರೊಂದಿಗೆ ಪ್ರೇಮಾಂಕುರವಾಗಿ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದ ಆ ಸಂಬಂಧ ಮುರಿದುಬಿದ್ದಿತ್ತು. ಇದೀಗ 'ಗೀತಾ ಗೋವಿಂದಂ' ಖ್ಯಾತಿಯ ವಿಜಯ್ ದೇವರಕೊಂಡ ಜೊತೆ ಅವರು ಹೊಸ ಜೀವನ ಆರಂಭಿಸಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹೊಸ ಸಂಚಲನ ಮೂಡಿಸಿದೆ.
ಮೊಬೈಲ್ ಫೋನ್ ಮತ್ತು ಸೆಲೆಬ್ರಿಟಿಗಳಿಗೆ ಪ್ರವೇಶವಿಲ್ಲ
ಮದುವೆಯ ಗೌಪ್ಯತೆಯನ್ನು ಕಾಪಾಡಲು ವಿಜಯ್ ಮತ್ತು ರಶ್ಮಿಕಾ ದಂಪತಿ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಮದುವೆಯ ಯಾವುದೇ ಫೋಟೋ ಅಥವಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗದಂತೆ ತಡೆಯಲು ಸಮಾರಂಭದಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೆ, ಮದುವೆಯ ಚಿತ್ರೀಕರಣ ಮಾಡುವ ತಂಡದವರ ಜೊತೆಗೂ ಕೂಡ ಗೌಪ್ಯತಾ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲಾಗಿದೆ.
ಈ ಖಾಸಗಿ ಸಮಾರಂಭಕ್ಕೆ ಯಾವುದೇ ಚಿತ್ರರಂಗದ ಸಹೋದ್ಯೋಗಿಗಳನ್ನು ಅಥವಾ ಸೆಲೆಬ್ರಿಟಿಗಳನ್ನು ಆಹ್ವಾನಿಸಿಲ್ಲ. ಕೇವಲ ಕುಟುಂಬದವರು ಮತ್ತು ಅತ್ಯಂತ ಆಪ್ತ ಸ್ನೇಹಿತರಿಗೆ ಮಾತ್ರ ಈ ಸಂಭ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

