Rani Chennamma| ಎಐ ತಂತ್ರಜ್ಞಾನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಶೌರ್ಯಗಾಥೆ
x

Rani Chennamma| ಎಐ ತಂತ್ರಜ್ಞಾನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಶೌರ್ಯಗಾಥೆ

ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನ ಜೀವನಗಾಥೆಯನ್ನು ತೆರೆಯ ಮೇಲೆ ತರಲಾಗುತ್ತಿದೆ.


Click the Play button to hear this message in audio format

ಸಿನಿಮಾ ಎಂಬ ಕ್ರಿಯೇಟಿವ್ ಮತ್ತು ಗ್ಲ್ಯಾಮರಸ್ ಜಗತ್ತಿಗೆ ದಿನೇ ದಿನೇ ಹೊಸ ತಂತ್ರಜ್ಞಾನದ ಆಗಮನವಾಗುತ್ತಿದ್ದು, ಇದೀಗ ಕನ್ನಡ ಚಿತ್ರರಂಗದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಸೃಜನಾತ್ಮಕವಾಗಿ ಬಳಸಿಕೊಂಡು 'ರಾಣಿ ಚೆನ್ನಮ್ಮ' ಎಂಬ ಸಿನಿಮಾವನ್ನು ನಿರ್ಮಿಸಲಾಗಿದೆ.

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಶಸ್ತ್ರಸಜ್ಜಿತ ಹೋರಾಟ ನಡೆಸಿದ ಭಾರತದ ಮೊದಲ ಮಹಿಳಾ ಆಡಳಿತಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಶೌರ್ಯಗಾಥೆಯನ್ನು ಈ ಚಿತ್ರವು ಒಳಗೊಂಡಿದ್ದು, ಇತ್ತೀಚೆಗಷ್ಟೇ ಇದರ ಟೀಸರ್ ಬಿಡುಗಡೆಯಾಗಿದೆ. ಕಿತ್ತೂರಿನ ಗರ್ವ, ಧೈರ್ಯ ಮತ್ತು ಸ್ವಾಭಿಮಾನದ ಪ್ರತೀಕವಾದ ಚೆನ್ನಮ್ಮನ ಜೀವನ ಚರಿತ್ರೆಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಪುನರ್ಜೀವಗೊಳಿಸುವ ಪ್ರಯತ್ನ ಇದಾಗಿದೆ.

'ಕಿತ್ತೂರಿನ ಗತ್ತು, ದೇಶಕ್ಕೆ ಗೊತ್ತು' ಎಂಬ ಅಡಿಬರಹದೊಂದಿಗೆ ಮೂಡಿಬರುತ್ತಿರುತ್ತದೆ . ಈ ಚಿತ್ರದ ಅತ್ಯಂತ ಗಮನಾರ್ಹ ಅಂಶವೆಂದರೆ ಪಾತ್ರಗಳ ರೂಪಕ, ದೃಶ್ಯ ವಿನ್ಯಾಸ ಮತ್ತು ರೋಚಕ ಯುದ್ಧದ ಸನ್ನಿವೇಶಗಳನ್ನು ಎಐ ತಂತ್ರಜ್ಞಾನದ ನೆರವಿನಿಂದ ಸೃಷ್ಟಿಸಲಾಗಿದೆ.

ಇದು ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಪ್ರಯೋಗವಾಗಿದ್ದು, ಭವಿಷ್ಯದ ಸಿನಿಮಾ ನಿರ್ಮಾಣಕ್ಕೆ ಹೊಸ ದಾರಿಯನ್ನು ತೋರಿಸಿಕೊಡುವ ಉದ್ದೇಶವನ್ನು ಹೊಂದಿದೆ. ವಿಶೇಷವಾಗಿ ದೃಶ್ಯ ವೈಭವಕ್ಕೆ ಎಐ ತಂತ್ರಜ್ಞಾನವನ್ನು ಬಳಸಿದ್ದರೂ, ಆಡಿಯೋ ಪ್ರೊಡಕ್ಷನ್ ಅನ್ನು ಸಂಪೂರ್ಣವಾಗಿ ಮಾನವ ಶ್ರಮದ ಮೂಲಕ ಮಾಡುವ ಮೂಲಕ ತಂತ್ರಜ್ಞಾನ ಮತ್ತು ಸೃಜನಶೀಲತೆಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ.

ಬಿಎಂಕೆ ಪ್ರೊಡಕ್ಷನ್ ಅಡಿಯಲ್ಲಿ ಲತಾ ಜೈಪ್ರಕಾಶ್ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಶ್ವೇತಾ ಶೆಟ್ಟಿ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರದ ತಾಂತ್ರಿಕ ವರ್ಗದಲ್ಲಿ ಸಂಜೀವ್ ರೆಡ್ಡಿ ಅವರ ಸಂಕಲನ, ಶ್ರೀಹರಿ ಅವರ ಸಂಗೀತ ಹಾಗೂ ಶಿವನಂಜೆಗೌಡ ಮತ್ತು ಡಾ. ವಿ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ. ಬ್ರಿಟಿಷ್ ಆಳ್ವಿಕೆಯ ವಿರುದ್ಧ ಧ್ವನಿ ಎತ್ತಿದ ವೀರವನಿತೆಯ ನಾಯಕತ್ವ ಮತ್ತು ಸ್ವಾತಂತ್ರ್ಯದ ಆಕಾಂಕ್ಷೆಯನ್ನು ಇಂದಿನ ಪೀಳಿಗೆಗೆ ತಲುಪಿಸುವ ಈ ಚಿತ್ರವು, ಹೊಸ ತಂತ್ರಜ್ಞಾನದ ಮೂಲಕ ಇತಿಹಾಸವನ್ನು ತೆರೆಯ ಮೇಲೆ ಜೀವಂತಗೊಳಿಸುತ್ತಿದೆ.

Read More
Next Story