
ಕರಾವಳಿ ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್
"ಕರಾವಳಿ ಸಿನಿಮಾ ಯಶಸ್ವಿಗೊಳಿಸಿ..." ವಿವಾದದ ಬೆನ್ನಲ್ಲೇ ನಟ ಪ್ರಜ್ವಲ್ ದೇವರಾಜ್ ಅಚ್ಚರಿಯ ಹೇಳಿಕೆ
ಚಿತ್ರದ ಟ್ರೈಲರ್ ಬಿಡುಗಡೆಯಾದ ಸಂದರ್ಭದಲ್ಲಿ, ಯಾವುದೇ ಪೂರ್ವ ಮಾಹಿತಿ ಅಥವಾ ಅನುಮತಿ ಇಲ್ಲದೆ ತಮ್ಮ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿಸಲಾಗಿತ್ತು ಎಂದು ನಟ ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ತೀವ್ರ ಕುತೂಹಲ ಮೂಡಿಸಿರುವ ‘ಕರಾವಳಿ’ ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ ಕೊನೆಗೂ ನಟ ಪ್ರಜ್ವಲ್ ದೇವರಾಜ್ ಮೌನ ಮುರಿದಿದ್ದಾರೆ. ನಿರ್ಮಾಣ ಸಂಸ್ಥೆ 'ಗುರುದತ್ ಗಣಿಗ ಫಿಲ್ಮ್ಸ್' ಹಾಗೂ ನಿರ್ದೇಶಕ ಗುರುದತ್ ಗಣಿಗ ಅವರು ಸಾರ್ವಜನಿಕವಾಗಿ ನೀಡುತ್ತಿರುವ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿರುವ ನಟ, ಚಿತ್ರತಂಡದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ವಿವಾದಕ್ಕೆ ಅಸಲಿ ಕಾರಣವೇನು?
ಚಿತ್ರದ ಟ್ರೈಲರ್ ಬಿಡುಗಡೆಯಾದ ಸಂದರ್ಭದಲ್ಲಿ, ಯಾವುದೇ ಪೂರ್ವ ಮಾಹಿತಿ ಅಥವಾ ಅನುಮತಿ ಇಲ್ಲದೆ ತಮ್ಮ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿಸಲಾಗಿತ್ತು ಎಂದು ನಟ ಬೇಸರ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಒಪ್ಪಂದದ ಪ್ರಕಾರ ತಮಗೆ ಸಿಗಬೇಕಾಗಿದ್ದ ಸಂಭಾವನೆಯೂ ಸಂಪೂರ್ಣವಾಗಿ ಪಾವತಿಯಾಗಿರಲಿಲ್ಲ. ಇದೇ ಕಾರಣಕ್ಕೆ ತಾವು ಟ್ರೈಲರ್ ಬಿಡುಗಡೆ ಕಾರ್ಯಕ್ರಮದಿಂದ ದೂರ ಉಳಿದಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
"ನನ್ನ ದೈಹಿಕ ರೂಪಾಂತರ (ಸಿಕ್ಸ್-ಪ್ಯಾಕ್ ಲುಕ್) ಕಾರಣದಿಂದಾಗಿ ನಾನು ಚಿತ್ರತಂಡದಿಂದ ದೂರಾಗಿದ್ದೇನೆ ಎನ್ನುತ್ತಿರುವ ಹೇಳಿಕೆಗಳು ಸುಳ್ಳು. ವಿವಾದಕ್ಕೆ ನನ್ನ ಲುಕ್ ಕಾರಣವಲ್ಲ. ಅನುಮತಿಯಿಲ್ಲದ ಡಬ್ಬಿಂಗ್ ಮತ್ತು ಸಂಭಾವನೆ ಬಾಕಿ ಉಳಿಸಿಕೊಂಡಿರುವುದೇ ಅಸಲಿ ಕಾರಣ." ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಡಬ್ಬಿಂಗ್ ಬೇಡ ಎಂದಿದ್ದೇ ನಿರ್ಮಾಣ ಸಂಸ್ಥೆ!
ತಮಗೆ ಬಾಕಿ ಇದ್ದ ಸಂಭಾವನೆ ಪೂರ್ಣಗೊಂಡ ತಕ್ಷಣ ಡಬ್ಬಿಂಗ್ ಮಾಡಲು ಹಾಗೂ ಚಿತ್ರದ ಪ್ರಚಾರದಲ್ಲಿ ಭಾಗವಹಿಸಲು ಸಿದ್ಧರಿರುವುದಾಗಿ ತಿಳಿಸಿದ್ದೆ. ಟ್ರೈಲರ್ ಬಿಡುಗಡೆಯಾದ ಮರುದಿನ ಜಿಎಸ್‌ಟಿ ಹೊರತುಪಡಿಸಿ ಬಾಕಿ ಹಣ ಸಂದಾಯವಾಗಿತ್ತು. ಆದರೆ, ಆ ನಂತರ ನಿರ್ಮಾಣ ಸಂಸ್ಥೆಯು ನಟನ ಮ್ಯಾನೇಜರ್‌ಗೆ ಕರೆ ಮಾಡಿ, "ಇನ್ನು ಮುಂದೆ ನಿಮ್ಮ ಡಬ್ಬಿಂಗ್ ಸೇವೆ ಹಾಗೂ ಚಿತ್ರದ ಪ್ರಚಾರದಲ್ಲಿ ನಿಮ್ಮ ಭಾಗವಹಿಸುವಿಕೆ ಅಗತ್ಯವಿಲ್ಲ" ಎಂದು ತಿಳಿಸಿತ್ತು. ಹೀಗಾಗಿ ಪ್ರಚಾರದಿಂದ ದೂರ ಉಳಿದಿರುವುದು ಚಿತ್ರತಂಡದ ನಿರ್ಧಾರವೇ ಹೊರತು ತಮ್ಮದಲ್ಲ ಎಂದು ಅವರು ಹೇಳಿದ್ದಾರೆ.
ಧ್ವನಿ ಕುರಿತ ಹೇಳಿಕೆಗೆ ತೀವ್ರ ಬೇಸರ
"ನನ್ನ ಧ್ವನಿ ಈ ಪಾತ್ರಕ್ಕೆ ಸೂಕ್ತವಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದು ನನಗೆ ತೀವ್ರ ನೋವುಂಟು ಮಾಡಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ನಾನು ಗಳಿಸಿರುವ ವೃತ್ತಿಪರ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಇದಾಗಿದೆ" ಎಂದು ಅಸಮಾಧಾನ ಹೊರಹಾಕಿದ್ದಾರೆ.
ವಿವಾದಕ್ಕೆ ಇಲ್ಲೇ ಪೂರ್ಣವಿರಾಮ!
ವಿವಾದಕ್ಕೆ ಸಂಬಂಧಿಸಿದ ಚರ್ಚೆ ಮತ್ತು ವಾಗ್ವಾದಗಳಿಗೆ ತಾವು ಪೂರ್ಣವಿರಾಮ ಇಡುತ್ತಿರುವುದಾಗಿ ನಟ ಘೋಷಿಸಿದ್ದಾರೆ. ಇನ್ನು ಮುಂದೆ ಈ ವಿಷಯದ ಕುರಿತು ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡುವುದಿಲ್ಲ. ವೈಯಕ್ತಿಕ ಭಿನ್ನಾಭಿಪ್ರಾಯಗಳು ಚಿತ್ರದ ಮೇಲೆ ಪರಿಣಾಮ ಬೀರಬಾರದು. "ಕರಾವಳಿ" ಚಿತ್ರದ ಸಂಪೂರ್ಣ ತಂಡಕ್ಕೆ ಹಾರೈಸಿದ್ದಾರೆ. ಅಷ್ಟೇ ಅಲ್ಲದೆ, ಅಭಿಮಾನಿಗಳು ಹಾಗೂ ಕನ್ನಡ ಸಿನಿಪ್ರೇಕ್ಷಕರು ಚಿತ್ರಮಂದಿರಕ್ಕೆ ತೆರಳಿ ಸಿನಿಮಾವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ. ಕಷ್ಟದ ಸಮಯದಲ್ಲಿ ತಮಗೆ ಬೆಂಬಲ ನೀಡಿದ ಮಾಧ್ಯಮ ಹಾಗೂ ಅಭಿಮಾನಿಗಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

