
'ಕೆಡಿ' ಚಿತ್ರದ ವಿವಾದಿತ ಹಾಡಿನ ಹಿನ್ನೆಲೆಯಲ್ಲಿ ನೋರಾ ಫತೇಹಿ ಮಹಿಳಾ ಆಯೋಗಕ್ಕೆ ಕ್ಷಮೆಯಾಚಿಸಿದ್ದಾರೆ.
ಕೆಡಿ ಚಿತ್ರದ ಹಾಡಿನ ವಿವಾದ| ಮಹಿಳಾ ಆಯೋಗದ ಮುಂದೆ ನೋರಾ ಫತೇಹಿ ಕ್ಷಮೆಯಾಚನೆ
'ಕೆಡಿ' ಚಿತ್ರದ ವಿವಾದಿತ ಹಾಡಿನ ಹಿನ್ನೆಲೆಯಲ್ಲಿ ನೋರಾ ಫತೇಹಿ ಮಹಿಳಾ ಆಯೋಗಕ್ಕೆ ಕ್ಷಮೆಯಾಚಿಸಿದ್ದಾರೆ. ಹಾಡನ್ನು ಚಿತ್ರದಿಂದ ತೆಗೆಯಲಾಗಿದ್ದು, ಅನಾಥ ಮಕ್ಕಳ ಶಿಕ್ಷಣಕ್ಕೆ ಅವರು ನೆರವು ಘೋಷಿಸಿದ್ದಾರೆ.
'ಕೆಡಿ: ಡೆವಿಲ್' ಚಿತ್ರದ 'ಸರ್ಸೆ ನಿನ್ನ ಸೆರಗು ಸರ್ಸೆ' ಹಾಡಿನ ಅಸಭ್ಯ ಸಾಹಿತ್ಯದ ಕುರಿತು ತೀವ್ರ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ, ನಟಿ ನೋರಾ ಫತೇಹಿ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾಗಿ ಕ್ಷಮೆಯಾಚಿಸಿದ್ದಾರೆ. ಈ ಹಾಡಿನಲ್ಲಿರುವ ಡಬಲ್ ಮೀನಿಂಗ್ ಸಾಹಿತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಆಯೋಗವು ನೋರಾ ಫತೇಹಿ, ಸಂಜಯ್ ದತ್ ಮತ್ತು ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿತ್ತು.
ಕಳೆದ ತಿಂಗಳೇ ಆಯೋಗದ ಮುಂದೆ ಹಾಜರಾಗಿದ್ದ ಸಂಜಯ್ ದತ್ ತಮ್ಮ ಕಡೆಯಿಂದ ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದರು. ಇದೀಗ ನೋರಾ ಫತೇಹಿ ಕೂಡ ಆಯೋಗದ ಮುಂದೆ ಹಾಜರಾಗಿ ಲಿಖಿತ ರೂಪದಲ್ಲಿ ಕ್ಷಮೆಯಾಚನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಯಾವುದೇ ಸಮುದಾಯ ಅಥವಾ ವ್ಯಕ್ತಿಗಳ ಭಾವನೆಗೆ ಧಕ್ಕೆ ತರುವ ಉದ್ದೇಶ ತಮಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಒಬ್ಬ ಕಲಾವಿದೆಯಾಗಿ ಸಮಾಜದ ಬಗ್ಗೆ ತಮಗೆ ಜವಾಬ್ದಾರಿ ಇದೆ ಎಂದು ಅವರು ಹೇಳಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆವಿಎನ್ ಪ್ರೊಡಕ್ಷನ್ಸ್‌ನ ಸುಪ್ರೀತ್ ಮಾತನಾಡಿ, ಆಯೋಗವು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಈಗಾಗಲೇ ಉತ್ತರ ನೀಡಲಾಗಿದೆ ಎಂದು ತಿಳಿಸಿದ್ದಾರೆ. ವಿವಾದಾತ್ಮಕ ಹಾಡನ್ನು ಚಿತ್ರದಿಂದ ಈಗಾಗಲೇ ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಅದು ಇನ್ನು ಮುಂದೆ ಸಿನಿಮಾದ ಭಾಗವಾಗಿರುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ತಮ್ಮ ತಪ್ಪಿನ ಪ್ರಾಯಶ್ಚಿತ್ತವಾಗಿ ನೋರಾ ಫತೇಹಿ ಅವರು ಮಹತ್ವದ ನಿರ್ಧಾರವೊಂದನ್ನು ಘೋಷಿಸಿದ್ದಾರೆ. ಕೆಲ ಅನಾಥ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಾಯೋಜಕತ್ವ ನೀಡುವ ಮೂಲಕ ಸಮಾಜಕ್ಕೆ ಮರಳಿ ಏನನ್ನಾದರೂ ನೀಡಲು ತಾವು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ. ಈ ಮೂಲಕ 'ಸರ್ಸೆ ನಿನ್ನ' ಹಾಡಿನ ವಿವಾದಕ್ಕೆ ಸದ್ಯಕ್ಕೆ ತೆರೆ ಬಿದ್ದಂತಾಗಿದೆ.
ಏನಿದು ವಿವಾದ?
ಈ ಹಾಡಿನ ಪ್ರಮುಖ ವಿವಾದಕ್ಕೆ ಕಾರಣವಾಗಿರುವುದು ಅದರ ಅಸಭ್ಯ ಹಾಗೂ ದ್ವಂದ್ವಾರ್ಥದ ಸಾಹಿತ್ಯ. ಹಾಡಿನ ಆರಂಭದಲ್ಲಿ ಲೈಂಗಿಕ ಕ್ರಿಯೆಯನ್ನು ಬಿಂಬಿಸುವಂತಹ ಪದಗಳನ್ನು ಬಳಸಿ, ನಂತರ ಅದನ್ನು ಮದ್ಯದ ಬಾಟಲಿಗೆ ಹೋಲಿಸಿರುವುದು ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿತ್ತು. ಕೇವಲ ಕನ್ನಡ ಮಾತ್ರವಲ್ಲದೆ, ಈ ಹಾಡಿನ ಹಿಂದಿ ಆವೃತ್ತಿಯಾದ 'ಸರ್ಕೆ ಚುನರ್ ತೇರಿ' ಮತ್ತಷ್ಟು ವಿವಾದಕ್ಕೆ ನಾಂದಿ ಹಾಡಿತ್ತು. ಹಿಂದಿಯಲ್ಲಿ ಚೂಸೇಗಾ ಮತ್ತು ಚಾಟೇಗಾ ನಂತಹ ಅತ್ಯಂತ ಕೀಳುಮಟ್ಟದ ಸಾಹಿತ್ಯದಿಂದ ಕೂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಒಳಗಾಗಿತ್ತು.
ಇನ್ನು ದೃಶ್ಯಾವಳಿಗಳ ವಿಚಾರಕ್ಕೆ ಬಂದರೆ, ಖ್ಯಾತ ನಟಿ ನೋರಾ ಫತೇಹಿ ಅವರ ನೃತ್ಯ ಮತ್ತು ಸಂಜಯ್ ದತ್ ಅವರ ಉಪಸ್ಥಿತಿಯಿದ್ದರೂ, ನೃತ್ಯ ಸಂಯೋಜನೆಯು ಅತಿಯಾದ ಪ್ರಚೋದನಾತ್ಮಕತೆಯಿಂದ ಕೂಡಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ವಿವಾದದ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಈ ಕುರಿತು ಗಂಭೀರವಾಗಿ ಪರಿಗಣಿಸಿದ್ದು, ನಿರ್ದೇಶಕ ಪ್ರೇಮ್, ನಟ ಸಂಜಯ್ ದತ್ ಮತ್ತು ನೋರಾ ಫತೇಹಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು.

