
ಆಪ್ತ ಗೆಳೆಯ ವೈಶಾಕ್ ನಿಧನದ ಬಳಿಕ ಹರಿದಾಡುತ್ತಿರುವ ಅನಗತ್ಯ ಊಹಾಪೋಹಗಳ ವಿರುದ್ಧ ನಟಿ ಕೃಷಿ ತಾಪಂಡ ಮೌನ ಮುರಿದಿದ್ದಾರೆ.
ದಯವಿಟ್ಟು ವದಂತಿ ನಿಲ್ಲಿಸಿ: ವೈಶಾಕ್ ಆತ್ಮಹತ್ಯೆ ಬಗ್ಗೆ ಮೌನ ಮುರಿದ ನಟಿ ಕೃಷಿ
ಆಪ್ತ ಗೆಳೆಯ ವೈಶಾಕ್ ನಿಧನದ ಬಳಿಕ ಹರಿದಾಡುತ್ತಿರುವ ಅನಗತ್ಯ ಊಹಾಪೋಹಗಳ ವಿರುದ್ಧ ನಟಿ ಕೃಷಿ ತಾಪಂಡ ಮೌನ ಮುರಿದಿದ್ದು, ಶಾಂತಿಯಿಂದ ದುಃಖಿಸಲು ಬಿಡುವಂತೆ ಕೈಮುಗಿದು ಮನವಿ ಮಾಡಿದ್ದಾರೆ.
ನಟಿ ಕೃಷಿ ತಾಪಂಡ ತಮ್ಮ ಆಪ್ತ ಸ್ನೇಹಿತ ವೈಶಾಕ್ ಆತ್ಮಹತ್ಯೆ ಕುರಿತು ಕೊನೆಗೂ ಮೌನ ಮುರಿದಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸರಣಿ ಭಾವುಕ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಅವರು, ಮಾಧ್ಯಮಗಳು ಮತ್ತು ಸಾರ್ವಜನಿಕರ ಅನಗತ್ಯ ಊಹಾಪೋಹಗಳಿಂದ ತಮಗೆ ತೀವ್ರ ನೋವಾಗಿದೆ ಎಂದು ಹೇಳಿದ್ದಾರೆ. ಕುಟುಂಬದ ದುಃಖವನ್ನು ಗೌರವಿಸಿ, ಅನಗತ್ಯ ಚರ್ಚೆಗಳನ್ನು ನಿಲ್ಲಿಸುವಂತೆ ಕೈ ಮುಗಿದು ಮನವಿ ಮಾಡಿರುವ ನಟಿ, ತಮಗೆ ಶಾಂತಿಯಿಂದ ದುಃಖಿಸಲು ಬಿಡುವಂತೆ ಕೋರಿದ್ದಾರೆ. ತಮ್ಮ ಮನದ ಆಳದ ನೋವು ಹಾಗೂ ಸಾರ್ವಜನಿಕ ವಲಯದ ಒತ್ತಡದ ಬಗ್ಗೆ ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ.
ನಟಿ ಕೃಷಿ ತಾಪಂಡ ಅವರ ಆಪ್ತ ಗೆಳೆಯ ವೈಶಾಕ್ ಇತ್ತೀಚೆಗೆ ಕೃಷಿ ವಾಸವಿದ್ದ ಫ್ಲ್ಯಾಟ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದು ತೀವ್ರ ಶಾಕಿಂಗ್ ಎನಿಸಿದೆ. ಈ ಘಟನೆಯ ಬಗ್ಗೆ ಬರೆದುಕೊಂಡಿರುವ ಕೃಷಿ, ಇಂತಹದ್ದೊಂದು ಬರಹವನ್ನು ಬರೆಯಬೇಕಾಗಿ ಬರುತ್ತದೆ ಎಂದು ತಾವು ಎಂದಿಗೂ ಊಹಿಸಿರಲಿಲ್ಲ ಎಂದು ತಿಳಿಸಿದ್ದಾರೆ. ಈ ಸಮಯದಲ್ಲಿ ಯಾವುದೇ ಸಾರ್ವಜನಿಕ ಹೇಳಿಕೆ ನೀಡುವ ಮಾನಸಿಕ ಶಕ್ತಿ ತಮಗಿಲ್ಲದಿದ್ದರೂ, ಸುತ್ತಲೂ ಕೇಳಿಬರುತ್ತಿರುವ ನಿರಂತರ ಊಹಾಪೋಹಗಳು ಮತ್ತು ಪ್ರಶ್ನೆಗಳಿಂದಾಗಿ ಈ ಸ್ಪಷ್ಟನೆ ನೀಡುತ್ತಿರುವುದಾಗಿ ಹೇಳಿದ್ದಾರೆ. ತಮಗೆ ಅತ್ಯಂತ ಆಪ್ತರಾಗಿದ್ದ, ತಮ್ಮನ್ನು ರಕ್ಷಿಸುತ್ತಿದ್ದ ವ್ಯಕ್ತಿಯನ್ನು ಕಳೆದುಕೊಂಡ ನೋವಿನಲ್ಲಿ ತಾವು ಇರುವುದಾಗಿ ಮತ್ತು ಈ ನಷ್ಟದಿಂದ ಹೊರಬರಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ಮೃತರ ಕುಟುಂಬ ಮತ್ತು ಆಪ್ತರು ಈ ದೊಡ್ಡ ನಷ್ಟವನ್ನು ಅರಗಿಸಿಕೊಳ್ಳಲು ಹೆಣಗಾಡುತ್ತಿರುವಾಗ ನಿರಂತರವಾಗಿ ಕಥೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವು ಮಾಧ್ಯಮಗಳು ಗೌರವಯುತವಾಗಿ ನಡೆದುಕೊಂಡರೆ, ಇನ್ನು ಕೆಲವು ಕೇವಲ ರಿಯಾಕ್ಷನ್‌ಗಾಗಿ ಒತ್ತಾಯಿಸುತ್ತಿವೆ ಹಾಗೂ ತಾವು ಹೇಗಿದ್ದೀರಾ ಎಂದು ಕೇಳುವ ಬದಲು ರಿಯಾಕ್ಷನ್ ಏನು ಎಂದು ಕೇಳುತ್ತಿದ್ದಾರೆ ಎಂದು ಕೃಷಿ ಹೇಳಿದ್ದಾರೆ.
ವೈಶಾಕ್ ಸಾವಿನ ಸುತ್ತ ನಡೆಯುತ್ತಿರುವ ಅನಗತ್ಯ ಚರ್ಚೆಗಳನ್ನು ನಿಲ್ಲಿಸುವಂತೆ ಕೃಷಿ ಕೈಮುಗಿದು ಬೇಡಿಕೊಂಡಿದ್ದಾರೆ. ಇಲ್ಲಿ ಒಂದು ಕುಟುಂಬ ತನ್ನ ಮಗನನ್ನು ಮತ್ತು ಸ್ನೇಹಿತರು ತಮ್ಮ ಆಪ್ತನನ್ನು ಕಳೆದುಕೊಂಡಿದ್ದಾರೆ ಎಂದು ನೆನಪಿಸಿರುವ ಅವರು, ಪ್ರತಿಯೊಂದು ಅನಗತ್ಯ ಪ್ರಶ್ನೆ, ಊಹೆ ಮತ್ತು ವದಂತಿಗಳು ಇಲ್ಲಿ ಉಳಿದು ನೋವು ಅನುಭವಿಸುತ್ತಿರುವವರ ಮೇಲೆ ತೀವ್ರ ಪರಿಣಾಮ ಬೀರುತ್ತವೆ, ಆದ್ದರಿಂದ ನಮಗೆ ಶಾಂತಿಯಿಂದ ದುಃಖಿಸಲು ಬಿಡಿ ಎಂದು ವಿನಂತಿಸಿದ್ದಾರೆ.
ಯಾವುದೇ ಸತ್ಯ ತಿಳಿಯದೆ ಕೇವಲ ಉತ್ತರಗಳಿಗಾಗಿ ಹುಡುಕುತ್ತಿರುವವರಿಗೆ ಸಂದೇಶ ನೀಡಿರುವ ಅವರು, ಮತ್ತೊಂದೆಡೆ ತಮಗೆ ಸಂದೇಶ ಹಾಗೂ ಪ್ರಾರ್ಥನೆಗಳ ಮೂಲಕ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಸದ್ಯಕ್ಕೆ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಉತ್ತರಿಸುವ ಶಕ್ತಿ ತಮಗಿಲ್ಲದಿದ್ದರೂ, ಎಲ್ಲರ ಪ್ರೀತಿ ಮತ್ತು ಕಾಳಜಿಗೆ ತಾವು ಚಿರಋಣಿಯಾಗಿರುವುದಾಗಿ ತಿಳಿಸಿದ್ದಾರೆ. ತಮ್ಮ ಕೊನೆಯ ಪೋಸ್ಟ್‌ನಲ್ಲಿ ಅತ್ಯಂತ ಮಾರ್ಮಿಕವಾಗಿ ಬರೆದುಕೊಂಡಿರುವ ಕೃಷಿ ತಾಪಂಡ, ಯಾರಿಗಾದರೂ ಬದುಕಲು ಕಾರಣ ನೀಡಲು ಸಾಧ್ಯವಾಗದಿದ್ದರೆ ಕನಿಷ್ಠ ಅವರು ಭರವಸೆ ಕಳೆದುಕೊಳ್ಳುವಂತೆ ಮಾಡಬೇಡಿ ಎಂದು ವಿನಂತಿಸಿದ್ದು, ದಯವಿಟ್ಟು ಎಲ್ಲರೂ ದಯೆ ಮತ್ತು ಕರುಣೆಯನ್ನು ಆಯ್ಕೆ ಮಾಡಿಕೊಂಡು ಇದನ್ನು ಇಷ್ಟಕ್ಕೇ ನಿಲ್ಲಿಸುವಂತೆ ಕೈಮುಗಿದು ಪ್ರಾರ್ಥಿಸಿದ್ದಾರೆ.

