Kiccha Sudeep| ನಮ್ಮವರ ವಿರುದ್ಧವೇ ಇಷ್ಟು ಕಠಿಣವಾಗಿ ವರ್ತಿಸುವುದು ಸರಿಯೇ? ಪ್ರೇಮ್ ಪರ ಬ್ಯಾಟ್ ಬೀಸಿದ ಕಿಚ್ಚ ಸುದೀಪ್
x

ಪ್ರೇಮ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ನೆನಪಿಸಿಕೊಂಡು, ನಮ್ಮವರ ಬಗ್ಗೆ ಸ್ವಲ್ಪ ಮೃದು ಧೋರಣೆ ತಳೆಯೋಣ ಎಂದು ಸುದೀಪ್ ಮನವಿ ಮಾಡಿದ್ದಾರೆ.

Kiccha Sudeep| ನಮ್ಮವರ ವಿರುದ್ಧವೇ ಇಷ್ಟು ಕಠಿಣವಾಗಿ ವರ್ತಿಸುವುದು ಸರಿಯೇ? ಪ್ರೇಮ್ ಪರ ಬ್ಯಾಟ್ ಬೀಸಿದ ಕಿಚ್ಚ ಸುದೀಪ್

ಕೆಡಿ ಚಿತ್ರದ ಹಾಡಿನ ವಿವಾದದ ಬಗ್ಗೆ ಸುದೀಪ್ ಭಾವುಕರಾಗಿ ಮಾತನಾಡಿದ್ದಾರೆ. ನಮ್ಮವರ ಬಗ್ಗೆ ಇಷ್ಟು ಕಠಿಣವಾಗಿ ವರ್ತಿಸುವುದು ಸರಿಯೇ ಎಂದು ಪ್ರಶ್ನಿಸಿ ಪ್ರೇಮ್ ಪರ ಬ್ಯಾಟ್ ಬೀಸಿದ್ದಾರೆ.


Click the Play button to hear this message in audio format

ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ 'ಕೆಡಿ: ದಿ ಡೆವಿಲ್' ಚಿತ್ರದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡಿನ ಸುತ್ತ ಎದ್ದಿರುವ ವಿವಾದದ ಕುರಿತು ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ ಕೊನೆಗೂ ಮೌನ ಮುರಿದಿದ್ದಾರೆ. ಈ ಹಾಡಿನ ವಿಚಾರವಾಗಿ ನಿರ್ದೇಶಕ ಪ್ರೇಮ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಎದುರಿಸುತ್ತಿರುವ ಟೀಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುದೀಪ್, ಕನ್ನಡಿಗರು ತಮ್ಮವರ ಬಗ್ಗೆ ತೋರುತ್ತಿರುವ ಅತಿಯಾದ ಆಕ್ರೋಶದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಸೋಮವಾರ ನಡೆದ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ಪ್ರೇಮ್ ಅವರ ಹಿಂದಿನ ಸಾಧನೆಗಳನ್ನು ಸ್ಮರಿಸಿದರು. ಪ್ರೇಮ್ ಈ ಹಿಂದೆ ತಾಯಿ ಮತ್ತು ಭಾವನೆಗಳ ಕುರಿತಾದ ಎಂತಹ ಅದ್ಭುತ ಹಾಡುಗಳನ್ನು ನೀಡಿದ್ದಾರೆ ಎಂಬುದನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು. ಆ ಹಾಡುಗಳನ್ನು ನಾವೆಲ್ಲರೂ ಅದೆಷ್ಟೋ ಬಾರಿ ಲೂಪ್‌ನಲ್ಲಿ ಕೇಳಿದ್ದೇವೆ. ಅಂತಹ ಒಬ್ಬ ನಿರ್ದೇಶಕನ ಬಗ್ಗೆ ಹೊರಗಿನವರು ಏನಾದರೂ ಮಾತನಾಡಿದರೆ ನಾವು ತಲೆಕೆಡಿಸಿಕೊಳ್ಳಬೇಕಿಲ್ಲ, ಆದರೆ ನಮ್ಮವರೇ ಈ ರೀತಿ ವರ್ತಿಸುವುದು ನೋವುಂಟು ಮಾಡುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸೋಷಿಯಲ್ ಮೀಡಿಯಾದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಸ್ವಾತಂತ್ರ್ಯವಿದೆ ಎಂಬುದನ್ನು ಒಪ್ಪಿಕೊಂಡ ಸುದೀಪ್, ಟೀಕೆಯ ಹೆಸರಿನಲ್ಲಿ ಒಬ್ಬ ವ್ಯಕ್ತಿಯನ್ನು ತೀರಾ ಕೀಳಾಗಿ ಕಾಣುವುದು ಸರಿಯಲ್ಲ ಎಂದರು. "ನಾನು ಈ ಹಾಡಿನಲ್ಲಿ ಅವರು ತಪ್ಪು ಮಾಡಿದ್ದಾರೆ ಎಂದು ಹೇಳುತ್ತಿಲ್ಲ, ಆದರೆ ಕೆಲವೊಮ್ಮೆ ಕೆಲವು ಪ್ರಯತ್ನಗಳು ಅಂದುಕೊಂಡಂತೆ ಯಶಸ್ವಿಯಾಗುವುದಿಲ್ಲ, ಅಷ್ಟಕ್ಕೇ ಒಬ್ಬ ವ್ಯಕ್ತಿಯನ್ನು ಕುಗ್ಗಿಸುವುದು ಎಷ್ಟು ಸರಿ? ನಮ್ಮವರ ಮೇಲೆ ನಾವೇ ಇಷ್ಟು ಕಠಿಣವಾಗಿರಬೇಕಾ?" ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದರು. ಇದು ಕೇವಲ ಸಲಹೆಯಲ್ಲ, ಬದಲಾಗಿ ಒಬ್ಬ ಕಲಾವಿದನಾಗಿ ಕನ್ನಡಿಗರಲ್ಲಿ ನಾನು ಮಾಡುತ್ತಿರುವ ವಿನಂತಿ ಎಂದು ಹೇಳುವ ಮೂಲಕ ಕನ್ನಡಿಗರು ಚಿತ್ರತಂಡಕ್ಕೆ ಬೆಂಬಲ ನೀಡಬೇಕೆಂದು ಸುದೀಪ್ ಮನವಿ ಮಾಡಿದರು.

ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ 'ಕೆಡಿ' ಚಿತ್ರದ ವಿಶೇಷ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ದೊಡ್ಡ ಮಟ್ಟದ ವಿವಾದಕ್ಕೆ ನಾಂದಿ ಹಾಡಿತ್ತು. ನೋರಾ ಫತೇಹಿ ಮತ್ತು ಸಂಜಯ್ ದತ್ ಕಾಣಿಸಿಕೊಂಡಿರುವ ಈ ಹಾಡಿನ ವಿರುದ್ಧ ಸಾರ್ವಜನಿಕರು ಮತ್ತು ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಹಾಡಿನ ಸಾಹಿತ್ಯದಲ್ಲಿ ಬಳಕೆಯಾಗಿರುವ ಪದಗಳು ತೀರಾ ಕೆಳಮಟ್ಟದವಾಗಿದ್ದು, ದ್ವಂದ್ವಾರ್ಥದಿಂದ ಕೂಡಿದೆ ಎಂಬುದು ಪ್ರಮುಖ ದೂರು. ಇದು ಕೇವಲ ಮನರಂಜನೆಯಲ್ಲ, ಬದಲಾಗಿ ಅಶ್ಲೀಲತೆಯ ಪರಮಾವಧಿ ಎಂದು ನೆಟ್ಟಿಗರು ಕಿಡಿಕಾರಿದ್ದರು. ಹಾಡಿನಲ್ಲಿ ಹೆಣ್ಣನ್ನು ತೀರಾ ಕೆಳಮಟ್ಟದಲ್ಲಿ ಬಿಂಬಿಸಲಾಗಿದೆ ಮತ್ತು ಚಿತ್ರೀಕರಣದ ರೀತಿ ಅಸಭ್ಯವಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

ವಿವಾದ ತಾರಕಕ್ಕೇರಿದ ಬೆನ್ನಲ್ಲೇ ರಾಷ್ಟ್ರೀಯ ಮಹಿಳಾ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿತು. ಈ ಹಿನ್ನೆಲೆಯಲ್ಲಿ ನಟ ಸಂಜಯ್ ದತ್ ಆಯೋಗದ ಮುಂದೆ ಹಾಜರಾಗಿ, ತಮಗೆ ಸಾಹಿತ್ಯದ ಬಗ್ಗೆ ತಿಳಿದಿರಲಿಲ್ಲ ಎಂದು ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದರು.

Read More
Next Story