
ಸೆನ್ಸಾರ್ ಮಂಡಳಿಯ ಆಕ್ಷೇಪದ ಬೆನ್ನಲ್ಲೇ 'ಕೆಡಿ: ದಿ ಡೆವಿಲ್' ಚಿತ್ರದ ಟ್ರೈಲರ್ ಅನ್ನು ಯೂಟ್ಯೂಬ್‌ನಿಂದ ಹಿಂಪಡೆಯಲಾಗಿದೆ.
KD The Devil| : ಧ್ರುವ ಸರ್ಜಾ ನಟನೆಯ ‘ಕೆಡಿ’ ಟ್ರೈಲರ್ ಯೂಟ್ಯೂಬ್‌ನಿಂದ ಔಟ್
ಸೆನ್ಸಾರ್ ಮಂಡಳಿಯ ಆಕ್ಷೇಪದ ಬೆನ್ನಲ್ಲೇ 'ಕೆಡಿ: ದಿ ಡೆವಿಲ್' ಚಿತ್ರದ ಟ್ರೈಲರ್ ಅನ್ನು ಯೂಟ್ಯೂಬ್‌ನಿಂದ ಹಿಂಪಡೆಯಲಾಗಿದೆ. ಶೀಘ್ರದಲ್ಲೇ ಪರಿಷ್ಕೃತ ಟ್ರೈಲರ್ ಬಿಡುಗಡೆ ಮಾಡುವುದಾಗಿ ಕೆವಿಎನ್ ಸಂಸ್ಥೆ ತಿಳಿಸಿದೆ.
ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ 'ಕೆಡಿ: ದಿ ಡೆವಿಲ್' ಚಿತ್ರದ ಟ್ರೈಲರ್ ಬಿಡುಗಡೆಯಾದ ಕೇವಲ ಒಂದು ದಿನದಲ್ಲಿ ಯೂಟ್ಯೂಬ್‌ನಿಂದ ಕಣ್ಮರೆಯಾಗಿದ್ದು, ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯು, ಟ್ರೈಲರ್ ಪ್ರಮಾಣೀಕರಣ ಪ್ರಕ್ರಿಯೆಯ ಸಮಯದಲ್ಲಿ ಅಜಾಗರೂಕತೆಯಿಂದ ಕೆಲವು ಅನ್‌ಸೆನ್ಸಾರ್ಡ್ ದೃಶ್ಯಗಳು ಸೇರ್ಪಡೆಯಾಗಿದ್ದವು ಎಂದು ತಿಳಿಸಿದೆ. ಈ ತಾಂತ್ರಿಕ ತಪ್ಪಿನಿಂದಾಗಿ ಟ್ರೈಲರ್ ಅನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದ್ದು, ಸೆನ್ಸಾರ್ ಮಂಡಳಿಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರಿಷ್ಕರಿಸಿದ ಹೊಸ ಟ್ರೈಲರ್ ಅನ್ನು ಶೀಘ್ರದಲ್ಲೇ ಮರು-ಅಪ್‌ಲೋಡ್ ಮಾಡುವುದಾಗಿ ನಿರ್ಮಾಣ ಸಂಸ್ಥೆ ಭರವಸೆ ನೀಡಿದೆ.
ವಿವಾದದ ಸುಳಿಯಲ್ಲಿ ಕೆಡಿ
ಈ ಚಿತ್ರವು ಆರಂಭದಿಂದಲೂ ಒಂದಲ್ಲ ಒಂದು ವಿವಾದಗಳಿಂದ ಸುದ್ದಿಯಲ್ಲಿದೆ. ಮುಖ್ಯವಾಗಿ ಸಂಜಯ್ ದತ್ ಮತ್ತು ನೋರಾ ಫತೇಹಿ ಅವರ ಮೇಲೆ ಚಿತ್ರಿಸಲಾದ ಹಾಡಿನ ಸಾಹಿತ್ಯವು ಅಶ್ಲೀಲವಾಗಿದೆ ಎಂಬ ಕಾರಣಕ್ಕೆ ರಾಷ್ಟ್ರೀಯ ಮಹಿಳಾ ಆಯೋಗವು ನೋಟಿಸ್ ನೀಡಿತ್ತು. ಇದರಿಂದಾಗಿ ಆ ಹಾಡನ್ನು ಸಹ ಯೂಟ್ಯೂಬ್‌ನಿಂದ ತೆಗೆದುಹಾಕಿ, ಈಗ ಹೊಸ ಸಾಹಿತ್ಯದೊಂದಿಗೆ ಮರು-ಚಿತ್ರೀಕರಣ ಅಥವಾ ಡಬ್ಬಿಂಗ್ ಪ್ರಕ್ರಿಯೆ ನಡೆಸಲಾಗುತ್ತಿದೆ. ನಟಿ ನೋರಾ ಫತೇಹಿ ಅವರು ಕೂಡ ಹಾಡಿನ ಸಾಹಿತ್ಯದ ಅರ್ಥ ತಿಳಿಯದೆ ತಾವು ನರ್ತಿಸಿರುವುದಾಗಿ ಸ್ಪಷ್ಟನೆ ನೀಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಲೋಕಸಭೆಯಲ್ಲೂ ಚರ್ಚೆ
ಲೋಕಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದ್ದು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಹಾಡನ್ನು ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವಿಷಯಗಳು ಅತಿವೇಗದಲ್ಲಿ ಹರಡುವ ಯುಗದಲ್ಲಿ ಸಮಾಜದ ಹಿತಾಸಕ್ತಿಯನ್ನು ರಕ್ಷಿಸುವುದು ಅನಿವಾರ್ಯವಾಗಿದೆ. ವಿಶೇಷವಾಗಿ ಮಹಿಳೆಯರ ಮತ್ತು ವಂಚಿತ ವರ್ಗಗಳ ಗೌರವಕ್ಕೆ ಧಕ್ಕೆ ಬರುವಂತ ಯಾವುದೇ ವಿಷಯಗಳನ್ನು ತಡೆಯಲು ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ದವಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದರು.
ಚಿತ್ರದ ವಿಷಯಕ್ಕೆ ಬರುವುದಾದರೆ, ಇದು 1970ರ ಕಾಲಘಟ್ಟದ ಬೆಂಗಳೂರಿನ ರೌಡಿಸಂ ಕಥೆಯನ್ನು ಆಧರಿಸಿದೆ. ನಿರ್ದೇಶಕ ಪ್ರೇಮ್ ಅವರು ಈ ಚಿತ್ರಕ್ಕಾಗಿ ದೊಡ್ಡ ಮಟ್ಟದ ಸಂಶೋಧನೆ ನಡೆಸಿದ್ದು, ಧ್ರುವ ಸರ್ಜಾ ಅವರು 'ಕಾಳಿದಾಸ' ಎಂಬ ಮಾಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಶಿಲ್ಪಾ ಶೆಟ್ಟಿ ಅವರು ಬಹಳ ಕಾಲದ ನಂತರ ಕನ್ನಡಕ್ಕೆ ಮರಳುತ್ತಿದ್ದು, ಸುದೀಪ್ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾವು ಏಪ್ರಿಲ್ 30ರಂದು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

