ನಟ ದೊಡ್ಡಣ್ಣ ಸಾವಿನ ವದಂತಿ; ಕಿಡಿಗೇಡಿಗಳ ವಿರುದ್ಧ ಸೈಬರ್ ದೂರು
x

ನಟ ದೊಡ್ಡಣ್ಣ ನಿಧನ ವದಂತಿ: ಸೈಬರ್ ಕ್ರೈಮ್ ಮೆಟ್ಟಿಲೇರಿದ ಹಿರಿಯ ನಟ

ನಟ ದೊಡ್ಡಣ್ಣ ಸಾವಿನ ವದಂತಿ; ಕಿಡಿಗೇಡಿಗಳ ವಿರುದ್ಧ ಸೈಬರ್ ದೂರು

ಕನ್ನಡದ ಹಿರಿಯ ನಟ ದೊಡ್ಡಣ್ಣ ಅವರ ನಿಧನದ ಸುಳ್ಳು ಸುದ್ದಿ ಹರಡಿದ ಕಿಡಿಗೇಡಿಗಳ ವಿರುದ್ಧ ಬೆಂಗಳೂರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ದಾಖಲಾಗಿದ್ದು, ಐಟಿ ಕಾಯ್ದೆಯಡಿ ತನಿಖೆ ಆರಂಭವಾಗಿದೆ.


Click the Play button to hear this message in audio format

ಕನ್ನಡ ಚಿತ್ರರಂಗದ ಹಿರಿಯ ಹಾಗೂ ಜನಪ್ರಿಯ ನಟ ದೊಡ್ಡಣ್ಣ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ನಿಧನದ ಸುಳ್ಳು ಸುದ್ದಿ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದೆ. ತಾವು ಬದುಕಿರುವಾಗಲೇ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಇಂತಹದ್ದೊಂದು ದುಷ್ಕೃತ್ಯ ಎಸಗಿರುವ ಕಿಡಿಗೇಡಿಗಳ ವಿರುದ್ಧ ಹಿರಿಯ ನಟ ದೊಡ್ಡಣ್ಣ ಅವರು ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.

ಏನಿದು ಘಟನೆ

ಕಳೆದ ಕೆಲವು ದಿನಗಳ ಹಿಂದೆ ಫೇಸ್‌ಬುಕ್‌ನ 'Public Friend' ಎಂಬ ಖಾತೆಯಲ್ಲಿ ನಟ ದೊಡ್ಡಣ್ಣ ಅವರು ನಿಧನರಾಗಿದ್ದಾರೆ ಎಂಬ ಸುಳ್ಳು ಶ್ರದ್ಧಾಂಜಲಿ ಪೋಸ್ಟ್ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲಾಗಿತ್ತು. ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ಪರಿಕರಗಳನ್ನು ಬಳಸಿ ಈ ಪೋಸ್ಟ್‌ಗಳನ್ನು ಅತ್ಯಂತ ನೈಜವಾಗಿ ಎಡಿಟ್ ಮಾಡಲಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಸ್ಯಾಂಡಲ್‌ವುಡ್ ಗಣ್ಯರು, ಅಭಿಮಾನಿಗಳು ಹಾಗೂ ದೊಡ್ಡಣ್ಣ ಅವರ ಕುಟುಂಬಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದರು.

ಈ ಸುಳ್ಳು ಸುದ್ದಿಯಿಂದ ಬೇಸತ್ತ 77 ವರ್ಷದ ಹಿರಿಯ ನಟ ದೊಡ್ಡಣ್ಣ ಅವರು ವಿಡಿಯೋ ಸಂದೇಶದ ಮೂಲಕ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. "ನಾನು ಬೆಳಗ್ಗೆ ನಿದ್ದೆಯಿಂದ ಏಳುವ ಮುನ್ನವೇ ಕೆಲವು ಬೇಜವಾಬ್ದಾರಿ ವ್ಯಕ್ತಿಗಳು ನಾನು ನಿಧನನಾಗಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ. ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಮತ್ತು ಸುರಕ್ಷಿತವಾಗಿದ್ದೇನೆ. ಇಂತಹ ಸುಳ್ಳು ಸುದ್ದಿಗಳನ್ನು ಯಾರೂ ನಂಬಬೇಡಿ" ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಇಡೀ ದಿನ ಆತಂಕದಿಂದ ಕರೆ ಮಾಡಿ ವಿಚಾರಿಸಿದ ಹಿತೈಷಿಗಳಿಗೆ ಧನ್ಯವಾದ ತಿಳಿಸಿದ್ದರು.

ನಟ ದೊಡ್ಡಣ್ಣ ಅವರು ನೀಡಿದ ದೂರಿನನ್ವಯ ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಕ್ರೈಮ್ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ (IT Act) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುಳ್ಳು ಸುದ್ದಿ ಹರಡಿದ ಫೇಸ್‌ಬುಕ್ ಪೇಜ್ ಹಾಗೂ ಅದರ ಹಿಂದಿರುವ ಕಿಡಿಗೇಡಿಗಳ IP ವಿಳಾಸವನ್ನು (IP Address) ಪತ್ತೆಹಚ್ಚಲು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸಿನಿಮಾ ರಂಗದ ಹಲವು ಗಣ್ಯರು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Read More
Next Story