
ಖ್ಯಾತ ಕನ್ನಡ ಚಿತ್ರನಿರ್ದೇಶಕ ಮತ್ತು ನಟ ಜೆಪಿ ತುಮಿನಾಡ್ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ರಶ್ಮಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಸು ಫ್ರಮ್ ಸೋ' ಜೆಪಿ ತುಮಿನಾಡ್
'ಸು ಫ್ರಮ್ ಸೋ' ಖ್ಯಾತಿಯ ನಟ-ನಿರ್ದೇಶಕ ಜೆಪಿ ತುಮಿನಾಡ್ ಇಂದು ಮಂಗಳೂರಿನಲ್ಲಿ ರಶ್ಮಿಕಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
'ಸು ಫ್ರಮ್ ಸೋ' ಖ್ಯಾತಿಯ ನಿರ್ದೇಶಕ ಮತ್ತು ನಟ ಜೆಪಿ ತುಮಿನಾಡ್ ಅವರು ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರಿನಲ್ಲಿ ನಡೆದ ಸರಳ ಹಾಗೂ ಸುಂದರ ಸಮಾರಂಭದಲ್ಲಿ ಅವರು ತಮ್ಮ ಬಹುಕಾಲದ ಗೆಳತಿ ರಶ್ಮಿಕಾ ಅವರೊಂದಿಗೆ ವಿವಾಹವಾದರು.
ಕಳೆದ ಮೂರು ದಿನಗಳಿಂದ ಮಂಗಳೂರಿನಲ್ಲಿ ಮದುವೆಯ ಸಂಭ್ರಮ ಮನೆ ಮಾಡಿತ್ತು. ಅರಿಶಿನ ಶಾಸ್ತ್ರ ಹಾಗೂ ಮೆಹೆಂದಿ ಕಾರ್ಯಕ್ರಮಗಳ ನಂತರ, ಬುಧವಾರ (ಮೇ 6) ಬೆಳಿಗ್ಗೆ ನಡೆದ ಧಾರೆ ಮುಹೂರ್ತದಲ್ಲಿ ರಶ್ಮಿಕಾ ಅವರ ಕೊರಳಿಗೆ ಜೆಪಿ ತುಮಿನಾಡ್ ಮಾಂಗಲ್ಯಧಾರಣೆ ಮಾಡಿದರು. ತುಳುನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ಈ ವಿವಾಹ ಮಹೋತ್ಸವಕ್ಕೆ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಸಾಕ್ಷಿಯಾದರು. ಚಿತ್ರರಂಗದ ಪ್ರಮುಖರಾದ ಪ್ರಕಾಶ್ ತೂಮಿನಾಡ್, ಪುಷ್ಪರಾಜ್ ಬೋಳಾರ್ ಸೇರಿದಂತೆ ಹಲವರು ಮದುವೆಯಲ್ಲಿ ಪಾಲ್ಗೊಂಡು ನವಜೋಡಿಗೆ ಶುಭ ಹಾರೈಸಿದರು.
ಬಣ್ಣ ಹಚ್ಚುವ ಮೊದಲು ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಜೆಪಿ ತುಮಿನಾಡ್ ಅವರು, 'ಒಂದು ಮೊಟ್ಟೆಯ ಕಥೆ', 'ಗರುಡ ಗಮನ ವೃಷಭ ವಾಹನ' ಹಾಗೂ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾಗಳ ಮೂಲಕ ನಟರಾಗಿ ಗುರುತಿಸಿಕೊಂಡಿದ್ದರು. ಕಳೆದ ವರ್ಷ ತೆರೆಕಂಡು ಭರ್ಜರಿ ಯಶಸ್ಸು ಕಂಡ 'ಸೂ ಫ್ರಮ್ ಸೋ' ಚಿತ್ರದ ಮೂಲಕ ಅವರು ಸ್ಟಾರ್ ನಿರ್ದೇಶಕರಾಗಿ ಹೊರಹೊಮ್ಮಿದರು. ಪ್ರಸ್ತುತ ಜೆಪಿ ಹಾಗೂ ರಶ್ಮಿಕಾ ಅವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಈ ಜೋಡಿಗೆ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.

